ಧಾರವಾಡ(ಮೇ.13):  ಲಾಕ್‌ಡೌನ್‌ ಹಾಗೂ ಅದರ ನಿಯಮಗಳ ಪಾಲನೆಗಿಂತ ಧಾರವಾಡದ ಜನತೆಗೆ ತಮ್ಮ -ತಮ್ಮ ಜನರನ್ನು ಉಳಿಸಿಕೊಳ್ಳುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸರಿಯಾದ ಸಮಯಕ್ಕೆ ಆಕ್ಸಿಜನ್‌ ಹಾಗೂ ತುರ್ತು ನಿಗಾ ಘಟಕದ ಬೆಡ್‌ ಸಿಗದೇ ಕೋವಿಡ್‌ ರೋಗಿಗಳು ಮೃತರಾಗುತ್ತಿದ್ದು, ಜನರ ಜೀವನವೇ ಲಾಕ್‌ ಆಗಿದೆ ಎಂಬ ಭಾಸವಾಗುತ್ತಿದೆ.

ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಖಾಸಗಿ ಆಸ್ಪತ್ರೆಗಳ ಎದುರು ಕೋವಿಡ್‌ ರೋಗಿಗಳ ಹಾಗೂ ಅವರ ಸಂಬಂಧಿಕರ ಕೂಗು ಎಂತವರ ಮನ ಮುಟ್ಟುವಂತಿದೆ. ಒಂದೊಂದು ಆಸ್ಪತ್ರೆಯಲ್ಲಿ ತಾಯಿ, ಮಗಳು, ಅಳಿಯ ಹೀಗೆ ಕುಟುಂಬ ಸಮೇತ ಕೋವಿಡ್‌ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದು, ಮನೆಯಲ್ಲಿ ಮಕ್ಕಳ ರೋದನ ಕೇಳುವಂತಿಲ್ಲ. ಪೊಲೀಸ್‌ ಹೆಡ್‌ ಕ್ವಾಟ್ರರ್ಸ್‌ನ ಕುಟುಂಬವೊಂದಕ್ಕೆ ದೊಡ್ಡ ಸಂಕಟ ಉಂಟಾಗಿದೆ. ಪತಿ-ಪತ್ನಿ ಇಬ್ಬರೂ ಕೋವಿಡ್‌ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಮನೆಯಲ್ಲಿ ಇಬ್ಬರೇ ಚಿಕ್ಕ ಮಕ್ಕಳು ಆರೇಳು ದಿನಗಳಿಂದ ಕಾಲ ಕಳೆಯುತ್ತಿದ್ದಾರೆ. ಸಂಬಂಧಿಕರ ಆಸರೆಯೂ ಇಲ್ಲದಾಗಿದೆ. ಇಂತಹ ಪ್ರಕರಣಗಳು ಸಾಕಷ್ಟಿವೆ.

"

ಕೊರೋನಾ ವೈರಸ್‌ ಪ್ರಭಾವ ಹೆಚ್ಚಾಗುತ್ತಿದ್ದಂತೆ ಏಪ್ರಿಲ್‌ ಆರಂಭದಲ್ಲಿ 600ಕ್ಕಿದ್ದ ಜಿಲ್ಲೆಯ ಸಾವಿನ ಗತಿ ಇದೀಗ 800 ಸಮೀಪಿಸುತ್ತಿದೆ. ಸುಮಾರು 40 ದಿನಗಳಲ್ಲಿ 200ಕ್ಕೂ ಹೆಚ್ಚು ಜನ ಕೋವಿಡ್‌ ಕಾರಣದಿಂದ ಸಾವಿಗೀಡಾಗಿದ್ದು ಎಲ್ಲರ ಮನದಲ್ಲಿ ಕೋವಿಡ್‌ ಭಯವೇ ತುಂಬಿಕೊಂಡಿದೆ. ರೋಗ ಲಕ್ಷಣಗಳು ಇರದಿರುವವರನ್ನು ಹೊರತುಪಡಿಸಿ ಆಸ್ಪತ್ರೆಯಲ್ಲಿದ್ದವರಿಗೆ ಕ್ಷಣ-ಕ್ಷಣದಲ್ಲೂ ಭಯ. ಯಾವಾಗ ಆಕ್ಸಿಜನ್‌ ಕಡಿಮೆಯಾಗಿ ಏನು ಅನಾಹುತ ಆಗಲಿದೆ ಎಂಬ ಆತಂಕ. ಈ ಮೊದಲು ಕೆಲವು ದಿನಗಳಿಗೆ ಗುಣಮುಖರಾಗುತ್ತಿದ್ದ ಕೋವಿಡ್‌ ರೋಗಿಗಳು ಆಸ್ಪತ್ರೆಯಲ್ಲಿ 15 ದಿನಗಳ ಕಾಲ ಹೆಚ್ಚು ನರಳುವಂತಾಗಿದೆ. ಬಹುತೇಕರಿಗೆ ಆಕ್ಸಿಜನ್‌ ಕೊರತೆಯೇ ಉರುಳಾಗುತ್ತಿದೆ. ವೈದ್ಯರು ಸಹ ಎಲ್ಲ ರೀತಿಯ ಪ್ರಯತ್ನ ನಡೆಸಿಯೂ ಜೀವ ಕಳೆದುಕೊಳ್ಳುವ ಅದೆಷ್ಟುಉದಾಹರಣೆ ನಮ್ಮ ಎದುರಿಗಿವೆ.

ಹುಬ್ಬಳ್ಳಿ: ಕೋವಿಡ್‌ ವಾರ್ಡ್‌ಲ್ಲಿ ಕೆಲಸಕ್ಕೆ ಸಿಬ್ಬಂದಿಯೇ ಇಲ್ಲ..!

ಲಸಿಕೆ ಹರಸಾಹಸ..

ಈ ಮಧ್ಯೆ ಕೋವಿಡ್‌ ರೋಗದಿಂದ ದೂರ ಉಳಿಯಲು ಲಸಿಕೆ ಪಡೆಯಲು ಹರಸಾಹಸ. ನೂರಾರು ಮೀಟರ್‌ ಗಟ್ಟಲೇ ನೂರಾರು ಜನರ ಪಾಳಿ. ಮಧ್ಯಾಹ್ನವರೆಗೂ ನಿಂತರೂ ಲಸಿಕೆ ಸಿಗಲಿದೆಯೋ ಅಥವಾ ಇಲ್ಲವೋ ಎಂಬ ಚಿಂತೆ. ವಯಸ್ಸಾದರೂ ಒಂಟಿಗಾಲಿನಲ್ಲಿ ನಿಂತು ಲಸಿಕೆ ಪಡೆಯಬೇಕೆಂಬ ಬಯಕೆ. ಜೊತೆಗೆ ಗ್ರಾಮೀಣ, ನಗರದ ಎನ್ನದೇ ಬಹುತೇಕರಿಗೆ ಜ್ವರ, ಕೆಮ್ಮಿನ ಲಕ್ಷಣಗಳು. ಇದು ಕೊರೋನಾ ಹೌದು ಅಲ್ಲವೋ ಎಂಬುದನ್ನು ತಿಳಿಯಲು ಪರೀಕ್ಷೆ ಮಾಡಿಸಲು ಮನಸ್ಸಿನಲ್ಲಿ ದುಗುಡ. ಜೊತೆಗೆ ಕೋವಿಡ್‌ ನೆಗೆಟಿವ್‌ ಇದ್ದರೂ ಅನಾರೋಗ್ಯವಿದ್ದರೆ ಚಿಕಿತ್ಸೆ ಸಿಗದೇ ಪರದಾಡಿದ ಹಲವು ಘಟನೆಗಳೂ ನಡೆದಿವೆ.

ಏನು ನಿಯಂತ್ರಣ..

ದಿನದಿಂದ ದಿನಕ್ಕೆ ಕೋವಿಡ್‌ ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತ ಸಹ ನಿಯಂತ್ರಣಕ್ಕೆ ತೀವ್ರ ರೀತಿಯ ಪ್ರಯತ್ನದಲ್ಲಿದೆ. ಆಕ್ಸಿಜನ್‌, ಬೆಡ್‌ ವ್ಯವಸ್ಥೆ ಮಾಡಿದರೂ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಬಕಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಜಿಲ್ಲಾಡಳಿತದ ಪ್ರಯತ್ನಕ್ಕಿಂತ ಕೋವಿಡ್‌ ಶಕ್ತಿಯೇ ಹೆಚ್ಚಾದಂತೆ ಕಾಣುತ್ತಿದ್ದು, ಕೋವಿಡ್‌ ನರಕ ಇನ್ನೂ ಎಷ್ಟುದಿನ ಎಂದು ಧಾರವಾಡದ ಜನತೆ ದೇವರಲ್ಲಿ ಮೊರೆ ಹೋಗಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona