ಶಿವಾನಂದ ಗೊಂಬಿ

ಹುಬ್ಬಳ್ಳಿ(ಮೇ.13):  ಇಲ್ಲಿಯ ಕಾರ್ಮಿಕ ರಾಜ್ಯ ಆಸ್ಪತ್ರೆ (ಇಎಸ್‌ಐ) ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತರ ವಾರ್ಡ್‌ಲ್ಲಿ ಕೆಲಸ ಮಾಡಲು ಸಿಬ್ಬಂದಿಯೇ ಇಲ್ಲ. ಹೊರಗುತ್ತಿಗೆದಾರ ಕೆಲಸಗಾರರು ತಮ್ಮ ಬೇಡಿಕೆ ಈಡೇರಿಸುವವರೆಗೂ ಕೋವಿಡ್‌ ವಾರ್ಡ್‌ಗಳಲ್ಲಿ ಕೆಲಸ ಮಾಡಲು ತಯಾರಿಲ್ಲ. ಕಾಯಂ ನೌಕರರು ಸಾಕಾಗುವಷ್ಟಿಲ್ಲ. ಇದು ಸೋಂಕಿತರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.

50 ಹಾಸಿಗೆಯುಳ್ಳ ಆಸ್ಪತ್ರೆಯಿದು. ಅದರಲ್ಲಿ 30 ಬೆಡ್‌ಗಳನ್ನು ಕೋವಿಡ್‌ ಸೋಂಕಿತರಿಗಾಗಿ ಮೀಸಲಿಡಲಾಗಿದೆ. ಈ ಆಸ್ಪತ್ರೆಯಲ್ಲಿ 22 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಸೇರಿದಂತೆ ಒಟ್ಟು 30 ಜನ ವೈದ್ಯರಿರಬೇಕು. ಸದ್ಯ 15 ಜನ ಮಾತ್ರ ಇದ್ದಾರೆ. ಈ 15ರಲ್ಲಿ ನಾಲ್ವರು ವೈದ್ಯರು ಎರವಲು ಸೇವೆಗೆಂದು ಕಾರವಾರಕ್ಕೆ ತೆರಳಿದ್ದಾರೆ. ಇನ್ನುಳಿದ 11ರಲ್ಲಿ ನಾಲ್ಕೈದು ಜನ ಆಡಳಿತ ವಿಭಾಗದ ಕೆಲಸ ನಿರ್ವಹಿಸುತ್ತಿದ್ದಾರೆ. ಉಳಿದ ಆರೇಳು ಜನರಲ್ಲೇ ಕೋವಿಡ್‌ ಹಾಗೂ ನಾನ್‌ ಕೋವಿಡ್‌ ವಿಭಾಗವನ್ನು ನಿರ್ವಹಿಸಬೇಕಾದ ಪರಿಸ್ಥಿತಿ ಇದೆ. ಒಬ್ಬೊಬ್ಬರು ಎರಡೆರಡು ಶಿಫ್ಟ್‌ ನಿರ್ವಹಿಸುತ್ತಿದ್ದಾರೆ.

"

ಇನ್ನೂ 25 ಜನ ದಾದಿಯರಿರಬೇಕು. ಆದರೆ ಇರುವುದು 23 ಜನ ಮಾತ್ರ. 23ರಲ್ಲಿ ಐವರು ದಾವಣಗೆರೆ ಸೇರಿದಂತೆ ವಿವಿಧೆಡೆ ಎರವಲು ಸೇವೆಗೆ ತೆರಳಿದ್ದಾರೆ. ಇನ್ನುಳಿದ 18ರಲ್ಲಿ ನಾಲ್ಕೈದು ಜನರು ವಯಸ್ಸಾದ ಹಿನ್ನೆಲೆ ಹಾಗೂ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ವಾರ್ಡ್‌ಲ್ಲಿ ಕೆಲಸ ನಿರ್ವಹಿಸಲಾಗದು. ಉಳಿದ 13 ಜನರನ್ನೇ ಕೋವಿಡ್‌ ವಾರ್ಡ್‌ಲ್ಲಿ ಬಳಕೆ ಮಾಡಿಕೊಳ್ಳಬೇಕಿದೆ.

ಒಂದು ಸಾವಿರ ‘ಆಶಾ’ಗಳಿಗೆ ಸೋಂಕು, ಐವರ ಸಾವು: ಸಂಕಷ್ಟದಲ್ಲಿ ಕೊರೋನಾ ವಾರಿಯರ್ಸ್‌

ಕೆಲಸಕ್ಕೆ ನಕಾರ:

ವೈದ್ಯರು ಹಾಗೂ ದಾದಿಯರ ಸಮಸ್ಯೆಯನ್ನು ಹೇಗಾದರೂ ನಿಭಾಯಿಸಬಹುದು. ಆದರೆ ಸಮಸ್ಯೆ ಎದುರಾಗಿರುವುದು ಡಿ. ಗ್ರೂಪ್‌ ನೌಕರರದ್ದೆ. ಸ್ವಚ್ಛತಾ ಕರ್ಮಚಾರಿ, ಟೆಕ್ನಿಷಿಯನ್‌, ಆಕ್ಸಿಜನ್‌ ರೂಮ್‌ ಬಾಯ್‌, ವಾರ್ಡ್‌ಬಾಯ್‌, ಅಟೆಂಡರ್‌ ಸಮಸ್ಯೆ ಎದುರಾಗಿದೆ. ಇಲ್ಲಿ ಅಟೆಂಡರ್‌ ಸೇರಿದಂತೆ ಡಿ ಗ್ರೂಪ್‌ ನೌಕರರು ಬರೋಬ್ಬರಿ 20ಕ್ಕೂ ಹೆಚ್ಚು ಜನ ಬೇಕು. ಆದರೆ ಕಾಯಂ ಆಗಿರುವವರು ಬರೀ ನಾಲ್ವರಷ್ಟೇ. ಉಳಿದವರು 15 ಜನರು ಹೊರಗುತ್ತಿಗೆ ನೌಕರರಿದ್ದಾರೆ. ಹೊರಗುತ್ತಿಗೆ ನೌಕರರಿಗೆ ಕಳೆದ ವರ್ಷ ಕೋವಿಡ್‌ನಲ್ಲಿ ಕೆಲಸ ಮಾಡಿದ್ದಕ್ಕೆ ‘ರಿಸ್ಕ್‌ ಅಲೌನ್ಸ್‌’ ಈವರೆಗೂ ಕೊಟ್ಟಿಲ್ಲವಂತೆ. ಪ್ರತಿ ತಿಂಗಳು ಒಬ್ಬೊಬ್ಬರಿಗೆ 10 ಸಾವಿರ ರು. ಕೊಡುತ್ತೇವೆ ಎಂದು ಭರವಸೆ ನೀಡಿದ್ದರಂತೆ. ಆಗ ನಾಲ್ಕು ತಿಂಗಳು ಕೋವಿಡ್‌ ಅವಧಿಯಲ್ಲಿ ಕೆಲಸ ನಿರ್ವಹಿಸಲಾಗಿದೆ. ಆಗಿನ ದುಡ್ಡು ಈವರೆಗೂ ಕೊಟ್ಟಿಲ್ಲವಂತೆ.

ಅತ್ತ ಇವರು ಕೆಲಸಕ್ಕೆ ಬರುತ್ತಿಲ್ಲ. ಇನ್ನೂ ಈಗಿರುವ ನಾಲ್ವರು ಕಾಯಂ ನೌಕರರಷ್ಟೇ ಎಷ್ಟುದಿನ ಕೆಲಸ ಮಾಡಬೇಕು. ರಜೆ ಕೂಡ ನೀಡಿಲ್ಲ. ಕೋವಿಡ್‌ ವಾರ್ಡ್‌ಲ್ಲಿ ಕೆಲಸ ಮಾಡಿದ ನಂತರ ಕ್ವಾರಂಟೈನ್‌ಗೆ ಕಳುಹಿಸಬೇಕು. ಅದಕ್ಕೂ ಅವಕಾಶ ಸಿಗುತ್ತಿಲ್ಲ. ಇದೆಲ್ಲದರ ಪರಿಣಾಮ ಸೋಂಕಿತರ ಮೇಲಾಗಿದೆ. ಸೋಂಕಿತರಿಗೆ ಸರಿಯಾದ ಸೌಲಭ್ಯ ಸಿಗದಂತಾಗಿದೆ.

ಇಲ್ಲಿನ ಸಮಸ್ಯೆ ಬಗ್ಗೆಯೂ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ಇನ್ನಾದರೂ ಗುತ್ತಿಗೆ ಆಧಾರದಲ್ಲಿರುವ ಡಿ ಗ್ರೂಪ್‌ ನೌಕರರ ಸಮಸ್ಯೆ ಬಗೆಹರಿಸಬೇಕು. ಸೋಂಕಿತರಿಗೆ ಸರಿಯಾದ ಆರೈಕೆ ಸಿಗುವಂತೆ ನೋಡಿಕೊಳ್ಳಬೇಕಿದೆ. ಇದರೊಂದಿಗೆ ಎರವಲಾಗಿರುವ ತೆರಳಿರುವ ವೈದ್ಯರು, ದಾದಿಯರನ್ನು ವಾಪಸ್‌ ಕರೆಯಿಸಬೇಕು. ತಾತ್ಕಾಲಿಕವಾಗಿ ಕೆಲ ತಜ್ಞ ವೈದ್ಯರನ್ನು ನೇಮಿಸಿಕೊಳ್ಳಬೇಕು ಎಂಬ ಆಗ್ರಹ ಆಸ್ಪತ್ರೆ ಆಡಳಿತ ಮಂಡಳಿಯದು.

ಗುತ್ತಿಗೆ ನೌಕರರು ಕೋವಿಡ್‌ ವಾರ್ಡ್‌ಲ್ಲಿ ಕೆಲಸ ಮಾಡಲು ಒಪ್ಪುತ್ತಿಲ್ಲ. ಕಳೆದ ವರ್ಷದ ‘ರಿಸ್ಕ್‌ ಅಲೌನ್ಸ್‌’ ಕೊಡಬೇಕು. ಸೇವಾ ಭದ್ರತೆ ಕಲ್ಪಿಸಬೇಕು ಅಂದಾಗ ಮಾತ್ರ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಇದು ಸಮಸ್ಯೆಯಾಗಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ ಎಂದು ಇಎಸ್‌ಐ ಆಸ್ಪತ್ರೆ ಅಧೀಕ್ಷಕ ಡಾ. ಸುರೇಶ.ಕೆ.ಎಚ್‌ ತಿಳಿಸಿದ್ದಾರೆ. 

ನಮಗೆ ಸೇವಾ ಭದ್ರತೆಯೂ ಇಲ್ಲ. ಕಳೆದ ವರ್ಷದ ಅಲೌನ್ಸ್‌ ಕೊಟ್ಟಿಲ್ಲ. ಕೇಳಿದರೆ ತಾಂತ್ರಿಕ ತೊಂದರೆ ಎನ್ನುತ್ತಾರೆ. ಅದನ್ನು ಕೊಡುವವರೆಗೂ ನಾವು ಕೋವಿಡ್‌ ವಾರ್ಡ್‌ಲ್ಲಿ ಕೆಲಸ ಮಾಡಲ್ಲ. ನಮಗೆ ಏನಾದರೂ ಆದರೆ ಜವಾಬ್ದಾರಿ ಯಾರು? ಎಂದು ಗುತ್ತಿಗೆ ನೌಕರ ವಿನೋದ ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona