Asianet Suvarna News Asianet Suvarna News

ಚಾಮರಾಜನಗರ: ಈ ಗ್ರಾಮದಲ್ಲಿ 9 ಸಮುದಾಯಗಳಿಗೆ ಸ್ಮಶಾನವೇ ಇಲ್ಲ, ಅಂತ್ಯಕ್ರಿಯೆಗೆ ಪರದಾಟ..!

ಗ್ರಾಮದ ಸುತ್ತಮುತ್ತ ಸರ್ಕಾರಿ ಭೂಮಿ ಇದ್ದು ಅದನ್ನು ಗುರುತಿಸಿ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡಿಕೊಡಬೇಕು ಎಂಬುದು ಬೇಡಿಕೆಯಾಗಿದೆ. ಆದರೆ ಈ ಬೇಡಿಕೆಗೆ ಯಾವ ಅಧಿಕಾರಿಯೂ ಸ್ಪಂದಿಸದೆ ಸ್ಮಶಾನ ಬೇಕು ಎಂಬ ಗ್ರಾಮಸ್ಥರ ಕೂಗು ಅರಣ್ಯರೋಧನವಾಗಿದೆ. 

People Faces Funeral Problems For No Land to Cemetery in Chamarajanagara  grg
Author
First Published Aug 22, 2023, 8:57 PM IST

ವರದಿ: ಪುಟ್ಟರಾಜು. ಆರ್. ಸಿ, ಏಷಿಯಾನೆಟ್  ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ(ಆ.22):  ಅದೊಂದು ಹೋಬಳಿ ಕೇಂದ್ರ. ಅಲ್ಲಿರುವ ವಿವಿಧ ಸಮುದಾಯಗಳಿಗೆ ಸೇರಿದ  9 ಸಮುದಾಯಗಳಿಗೆ ಸ್ಮಶಾನವೇ ಇಲ್ಲ. ಗ್ರಾಮದ ವ್ಯಾಪ್ತಿಯಲ್ಲಿ  ಸರ್ಕಾರಿ ಜಾಗವಿದ್ದರೂ ಸ್ಥಳ ಗುರುತು ಮಾಡದ ಅಧಿಕಾರಿಗಳು, ಇದರಿಂದಾಗಿ ಗ್ರಾಮಸ್ಥರು ಸ್ಮಶಾನವೇ ಇಲ್ಲದೆ ಮೃತರ ಅಂತ್ಯಕ್ರಿಯೆಗೆ ಪರದಾಡುವಂತಾಗಿದೆ. 

ಇದು ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ಕೇವಲ 10-12 ಕಿಲೋಮೀಟರ್ ದೂರದಲ್ಲಿರುವ ಹರದನಹಳ್ಳಿ.  ಹೋಬಳಿ ಕೇಂದ್ರವೂ ಆಗಿರುವ ಇಲ್ಲಿ ಹಲವಾರು ಸಮುದಾಯಗಳಿದ್ದು ಕೆಲವರಿಗೆ ಮಾತ್ರ ಸ್ಮಶಾನ ಇದೆ. ಆದರೆ ಲಿಂಗಾಯತರು, ವಿಶ್ವಕರ್ಮ, ಗಾಣಿಗ ಸೇರಿದಂತೆ ಒಂಭತ್ತು ಸಮುದಾಯಗಳಿಗೆ ಸ್ಮಶಾನವೇ ಇಲ್ಲ. ಮೃತರ ಅಂತ್ಯಕ್ರಿಯೆಗೆ ಸ್ಥಳವೇ ಇಲ್ಲದಂತಾಗಿದ್ದು ಗ್ರಾಮಸ್ಥರು ಪರದಾಡುತ್ತಿದ್ದಾರೆ. ಗ್ರಾಮದಲ್ಲಿ ಸರ್ಕಾರಿ ಜಾಗವಿದ್ದರೂ ಅಧಿಕಾರಿಗಳು ಸ್ಮಶಾನಕ್ಕೆ ಸ್ಥಳ ಗುರುತು ಮಾಡಿಲ್ಲ  ಹಾಗಾಗಿ ಸ್ವಂತ ಜಮೀನು ಇದ್ದವರು ತಮ್ಮ ಜಮೀನುಗಳಲ್ಲೇ ಅಂತ್ಯಕ್ರಿಯೆ ಮಾಡುತ್ತಾರೆ ಆದರೆ ಸ್ವಂತ ಜಮೀನು ಇಲ್ಲದವರು ಹೊರವಲಯದಲ್ಲಿರುವ ದೇವಯ್ಯನಕಟ್ಟೆ ಎಂಬ ಸಾರ್ವಜನಿಕ ಜಾಗದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿಕೊಂಡು ಬರುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ದೇವಯ್ಯನಕಟ್ಟೆ ಪಕ್ಕದಲ್ಲೇ ಇರುವ ಮರಗದ ಕೆರೆ ತುಂಬುತ್ತಿದ್ದು ಸುತ್ತಮುತ್ತ ಅಂತರ್ಜಲ ವೃದ್ಧಿಯಾಗಿದೆ. ಇದರ ಪರಿಣಾಮ ದೇವಯ್ಯನ ಕಟ್ಟೆಯಲ್ಲೂ ನೀರು ಜಿನುಗುತ್ತಿದೆ. ಸಮಾದಿಗೆಂದು ಗುಂಡಿ ತೋಡಿದರೆ ನೀರು ತುಂಬಿಕೊಳ್ಳುತ್ತಿದೆ. ಹಾಗಾಗಿ ಮೃತರನ್ನು ಕೆಸರಿನಲ್ಲೇ ಹೂಳಬೇಕಾದ ದುಸ್ಥಿತಿ ತಲೆದೋರಿದೆ. ಅಲ್ಲದೆ ಇಡೀ ಪ್ರದೇಶ ಕೆಸರುಮಯವಾಗಿದ್ದು ಈ ಸ್ಥಳಕ್ಕೆ ಹೆಣ ಹೊತ್ತು ಕೊಂಡು ಹೋಗಲು ಭಾರೀ ಪ್ರಯಾಸಪಡಬೇಕಾಗಿದೆ. 

ಚಾಮರಾಜನಗರ: ಮಹದೇಶ್ವರ ಬೆಟ್ಟದಲ್ಲಿ ಕಾಡಾನೆ ದಾಳಿಗೆ ಮಾದಪ್ಪನ ಭಕ್ತ ಬಲಿ

ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನ ವಾಗಿಲ್ಲ. ಕೊನೆಗೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇನ್ನು ಇಪ್ಪತ್ತು ದಿನಗಳ ಒಳಗೆ ಸಮಸ್ಯೆ ಪರಿಹರಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ ಆದರೆ ಎರಡು ವಾರ ಕಳೆದರು ಸ್ಮಶಾನಕ್ಕೆ ಸರ್ಕಾರಿ ಭೂಮಿ ಮಂಜೂರು ಮಾಡುವ ಯಾವು ಲಕ್ಷಣವೂ ಕಾಣುತ್ತಿಲ್ಲ ಎನ್ನುವ ಗ್ರಾಮಸ್ಥರು ನಮಗು ಕೇಳಿ ಕೇಳಿ ರೋಸಿ ಹೋಗಿದೆ ಮುಂದೆ ಯಾರಾದರು ಮೃತಪಟ್ಟರೆ ಜಿಲ್ಲಾಧಿಕಾರಿ ಕಚೇರಿಗೆ ಹೆಣ ತೆಗೆದುಕೊಂಡು ಹೋಗ್ತೀವೆ ಎಂದು ಎಚ್ಚರಿಕೆ ನೀಡಿದ್ದಾರೆ. 

ಗ್ರಾಮದ ಸುತ್ತಮುತ್ತ ಸರ್ಕಾರಿ ಭೂಮಿ ಇದ್ದು ಅದನ್ನು ಗುರುತಿಸಿ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡಿಕೊಡಬೇಕು ಎಂಬುದು ಬೇಡಿಕೆಯಾಗಿದೆ. ಆದರೆ ಈ ಬೇಡಿಕೆಗೆ ಯಾವ ಅಧಿಕಾರಿಯೂ ಸ್ಪಂದಿಸದೆ ಸ್ಮಶಾನ ಬೇಕು ಎಂಬ ಗ್ರಾಮಸ್ಥರ ಕೂಗು ಅರಣ್ಯರೋಧನವಾಗಿದೆ. 

Follow Us:
Download App:
  • android
  • ios