ಕಲಬುರಗಿ: ಬರಿದಾಗಿದೆ ಭೀಮೆಯ ಒಡಲು, ನದಿ ತೀರದಲ್ಲಿ ಹಾಹಾಕಾರ..!

ಭೀಮಾನದಿ ಈ ಬಾರಿ ಚಲಿಗಾಲದ ಆರಂಭದಲ್ಲೇ ಬತ್ತುತ್ತ ಸಾಗಿದ್ದು ಇದೀಗ ಹನಿ ನಿರೂ ಇಲ್ಲದಂತೆ ಬಣಗುಡುತ್ತಿದೆ, ಭೀಮಾ ನದಿ ತೀರದಲ್ಲೆಲ್ಲಾ ಬರೀ ಮರಳ ಹಾಸಿಗೆಯೇ ಗೋಚರಿಸುತ್ತಿದೆ. ಅಫಜಲ್ಪುರ ತಾಲೂಕಿನ ಶೇಷಗಿರಿವಾಡಿಯಿಂದ ಕಲಬುರಗಿಯನ್ನು ಪ್ರವೇಶಿಸುವ ಭೀಮಾನದಿ ಆರಂಭದಲ್ಲೇ ಬತ್ತಿ ಬರಿದಾಗಿದೆ.

People Faces Drinking Water Problem in the Bank of Bhima River in Karnataka grg

ಶೇಷಮೂರ್ತಿ ಅವಧಾನಿ

ಕಲಬುರಗಿ(ಫೆ.16):  ಕಲಬುರಗಿ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳ ಜನ- ಜಾನುವಾರುಗಳ ಜೀವನಾಡಿ ಭೀಮಾನದಿ ಸಂಪೂರ್ಣ ಬತ್ತಿ ಹೋಗಿದೆ!. ಇದರಿಂದಾಗಿ ಭೀಮೆಯ ನೀರನ್ನೇ ಅವಲಂಬಿಸಿರುವ, ನದಿ ತೀರದ ಇಕ್ಕೆಲಗಳಲ್ಲಿರುವ, ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ, ಹಾಗೂ ಮುಂಬೈ ಕರ್ನಾಟಕದ ವಿಜಯಪುರ ಜಿಲ್ಲೆಯ 10 ತಾಲೂಕಿನ 165 ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ ಕಾಡತೊಡಗಿದೆ. ಭೀಮಾ ನದಿ ದಡದ ಇಕ್ಕೆಲಗಳಲ್ಲಿರುವ ಫಲವತ್ತಾದ ಹೊಲಗದ್ದೆಗಳಲ್ಲಿ ಬೆಳೆದಿರುವ ಸಾವಿರಾರು ಎಕರೆ ಕಬ್ಬು, ನಿಂಬೆ, ದ್ರಾಕ್ಷಿ, ಬಾಳೆ ಫಸಲು ಸಹ ನೀರಿನ ಕೊರತೆಯಿಂದಾಗಿ ಒಣಗುತ್ತಿದೆ.

ಭೀಮಾನದಿ ಈ ಬಾರಿ ಚಲಿಗಾಲದ ಆರಂಭದಲ್ಲೇ ಬತ್ತುತ್ತ ಸಾಗಿದ್ದು ಇದೀಗ ಹನಿ ನಿರೂ ಇಲ್ಲದಂತೆ ಬಣಗುಡುತ್ತಿದೆ, ಭೀಮಾ ನದಿ ತೀರದಲ್ಲೆಲ್ಲಾ ಬರೀ ಮರಳ ಹಾಸಿಗೆಯೇ ಗೋಚರಿಸುತ್ತಿದೆ. ಅಫಜಲ್ಪುರ ತಾಲೂಕಿನ ಶೇಷಗಿರಿವಾಡಿಯಿಂದ ಕಲಬುರಗಿಯನ್ನು ಪ್ರವೇಶಿಸುವ ಭೀಮಾನದಿ ಆರಂಭದಲ್ಲೇ ಬತ್ತಿ ಬರಿದಾಗಿದೆ. ಇದರಿಂದಾಗಿ ಅಫಜಲ್ಪುರ ತಾಲಕಿನ ಸೊನ್ನ ಬಳಿ ಇರುವ ಭೀಮಾ ಏತ ನೀರಾವರಿ ಯೋಜನೆಯ ಅಣೆಕಟ್ಟೆಯಲ್ಲಿಯೂ ನೀರು ತಳ ಸೇರಿದೆ. 7 ಲಕ್ಷಕ್ಕೂ ಹೆಚ್ಚಿನ ಜನವಸತಿ ಇರುವ ಕಲಬುರಗಿ ಮಹಾನಗರ ನೀರು ಸರಬರಾಜಿಗೆ ಭೀಮಾ ನದಿಯೇ ಮೂಲ.

ಕಲಬುರಗಿ ನೀರಿನ ಸಮಸ್ಯೆ ನೀಗಿಸಲು ಮಹಾರಾಷ್ಟ್ರ ಜೊತೆ ಚರ್ಚೆ: ಪ್ರಿಯಾಂಕ್‌ ಖರ್ಗೆ

ಇಲ್ಲಿನ ಸರಡಗಿ ಬಾಂದಾರಲ್ಲಿ ನೀರು ಸಂಗ್ರಹ ತಗ್ಗುತ್ತಿದೆ. ಮೂಲಗಳ ಪ್ರಕಾರ ಅಲ್ಲೀಗ 1 ಟಿಎಸಿ ಆಸುಪಾಸು ನೀರಿನ ಸಂಗ್ರಹವಿದ್ದು ಇದು 15ರಿಂದ 20 ದಿನ ನೀರು ಪೂರೈಕೆಗೆ ಸಾಕಾಗಲಿದೆಯಷ್ಟೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಮುಂದಿನ 2 ತಿಂಗಳಲ್ಲಿ ಕಲಬುರಗಿ ಮಹಾನಗರಕ್ಕೂ ನೀರಿನ ತತ್ವಾರ ಕಾಡೋದು ನಿಶ್ಚಿತ.

ಮಹಾರಾಷ್ಟ್ರಕ್ಕೆ ಆಗ್ರಹಿಸುವ ಅಗತ್ಯವಿದೆ:

ಪ್ರತಿ ಬಾರಿ ಮಳೆ ಕೊರತೆ, ಬರ ಕಾಡಿದಾಗೆಲ್ಲಾ ಭೀಮಾ ತೀರದ ಮೂರು ಜಿಲ್ಲೆಗಳ ಜನ, ಜಾನುವಾರು ಹಾಗೂ ರೈತರು ಕಂಗಾಲಾಗುತ್ತಾರೆ. ರೈತರ ಬೆಳೆಗಳು ನೀರಿಲ್ಲದೆ ಒಣಗುತ್ತವೆ, ಕೋಟ್ಯಂತರ ರುಪಾಯಿ ಹಾನಿ ಅನುಭವಿಸುವ ರೈತರ ಬದುಕೇ ಮೂರಾಬಟ್ಟೆಯಾದರೂ ಕೇಳೋರಿಲ್ಲದಂತಾಗಿದೆ. ನ್ಯಾಯಮೂರ್ತಿ ಬಚಾವತ್ ಅಧ್ಯಕ್ಷತೆಯ ಕೃಷ್ಣಾ ಜಲವಿವಾದ ನ್ಯಾಯಾಧಿಕರಣ ಭೀಮಾ ನದಿಯ ನೀರು ಹಂಚಿಕೆಯ ಎಲ್ಲ ನಿಯಮಗಳನ್ನು ಉಲ್ಲಂಘನೆ ಮಾಡಿರುವ ನೆರೆಯ ಮಹಾರಾಷ್ಟ್ರ, ಅಕ್ರಮ ಬ್ಯಾರೇಜ್‌ ಮತ್ತು ನೀರಾವರಿ ಯೋಜನೆಗಳನ್ನು ಮಾಡಿಕೊಂಡು ಅಧಿಕ ನೀರು ಬಳಸಿಕೊಳ್ಳುತ್ತಿದೆ, ಇದಲ್ಲದೆ ಭೀಮಾ ನದಿಯ ಮೂಲ ಪ್ರವಾಹವನ್ನೇ ತನ್ನಲಿರುವ ಸೀನಾ ನದಿಗೆ ತಿರುಗಿಸಿಕೊಂಡಿರುವ ಪರಿಣಾಮ ರಾಜ್ಯದಲ್ಲಿ ಭೀಮಾ ನದಿ ಬತ್ತಿ ಹೋಗುತ್ತಿದೆ. ಆದ್ದರಿಂದ ನದಿ ಹುಟ್ಟಿಕೊಂಡಿರುವ ಮಹಾರಾಷ್ಟ್ರದಿಂದ ನದಿ ತೀರದ ಕೆಳಗಡೆ ಇರುವಂತಹ ಭೀಮಾ ನದಿಗೆ ಕಾನೂನಾತ್ಮಕವಾಗಿ ಹರಿದು ಬರಬೇಕಿರುವ ನೀರಿನ ಪಾಲನ್ನು ಪಡೆಯುವ ನಿಟ್ಟಿನಲ್ಲಿ ನೆರೆಯ ಮಹಾರಾಷ್ಟ್ರ ಸರ್ಕಾರದ ಮೇಲೆ ರಾಜ್ಯಯ ಸರ್ಕಾರ ಒತ್ತಡ ಹೇರುವ ಕೆಲಸವಾಗಬೇಕಿದೆ ಎಂದು ಭೀಮಾ ತೀರದ ಜನತೆಯ ಆಗ್ರಹವಾಗಿದೆ.

ನದಿಯೊಡಲನ್ನೇ ಬಗೆಯುತ್ತಿದ್ದಾರೆ ಜನ!

ಭೀಮಾ ತೀರದಲ್ಲಿರುವ ಗ್ರಾಮಗಳ ಜನ ದಾಹ ನೀಗಿಸಿಕೊಳ್ಳಲು, ತಮ್ಮ ಕೃಷಿ ಬೆಳೆಗಳಿಗೆ ನೀರು ಹರಿಸಲು ಭೀಮೆಯ ಒಡಲನ್ನೇ ಬಗೆಯಲಾರಂಭಿಸಿದ್ದಾರೆ. ಅಫಜಲ್ಪೂರ ತಾಲೂಕಿನ ಮಣ್ಣೂರಲ್ಲಿ ಊರ ಮುಂದೆಯೇ ಇರುವ ಹೊಳಿ ಯಲ್ಲಮ್ಮ ಮಂದಿರದ ಆಸುಪಾಸಲ್ಲಿ ಮರಳನ್ನೆಲ್ಲ ಬಗೆದು ಕಂದಕ ಹುಟ್ಟುಹಾಕಿ ಅಲ್ಲಿ ನೀರಿನ ಸಂಗ್ರಹವಿರುವಂತೆ ಮಾಡಿದ್ದಾರೆ. ಕೆಲವರು ಪಂಪ್‌ಸೆಟ್‌ ಬಳಸಿ ಬಳಕೆಗೆ, ಹೊಲಗದ್ದೆಗೆ, ಜಾನುವಾರುಗಳಿಗೆ ಇಲ್ಲಿಂದಲೇ ನೀರನ್ನೇ ಬಳಸುತ್ತಿದ್ದಾರೆ. ಮಣ್ಣೂರು ಗ್ರಾಮದ ಭಈಮಾ ತೀರದಲ್ಲೀಗ ಎಲ್ಲಿ ನೋಡಿದರಲ್ಲಿ ದೈತ್ಯಾಕಾರದ ಕಂದಕಗಳೇ ಕಾಣುತ್ತಿವೆ. ವಿಜಯಪುರ ಜಿಲ್ಲೆಯ ಅಗರಖೇಡ್‌, ಚಿಕ್ಕಮಣ್ಣೂರ, ಭೂಯ್ಯಾರ್‌, ಯಾದಗಿರಿ ಜಿಲ್ಲೆಯ ಹಲವೆಡೆ ಇದೇ ರೀತಿಯ ಕಂದಕಗಳು ಭೀಮೆಯ ಒಡಲಲ್ಲಿ ಹುಟ್ಟಿಕೊಳ್ಳುತ್ತಿವೆ.

Latest Videos
Follow Us:
Download App:
  • android
  • ios