ಮಹಾ ಚುನಾವಣೆ: ಗಡಿ ಕ್ಯಾತೆಗೆ ಬೈ, ಕನ್ನಡಿಗರಿಗೆ ಜೈ, ಎಂಇಎಸ್‌ಗೆ ಭಾರೀ ಮುಖಭಂಗ!
ಇದೇ ವರ್ಷ ಕರ್ನಾಟಕ ಸರ್ಕಾರ ಗಡಿಭಾಗ ಜತ್ ತಾಲೂಕಿನ ಗುಡ್ಡಾಪುರದಲ್ಲಿ ಆಯೋಹಿಸಿದ್ದ ಪ್ರಥಮ ಗಡಿನಾಡು ಉತ್ಸವ ಯಶಸ್ವಿಗೊಂಡಿತ್ತು. ಜತ್ ಕ್ಷೇತ್ರದ ಶಾಸಕ ವಿಕ್ರಮಸಿಂಗ್ ಸಾವಂತ ಸಮಾರಂಭದ ಅಧ್ಯಕ್ಷತೆ ವಹಿಸಿ ಕನ್ನಡ ಶಾಲು, ಧ್ವಜ ಹಾಕಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ್ದು ಹೆಚ್ಚುತ್ತಿರುವ ಕನ್ನಡಿಗರ ಪ್ರಾಬಲ್ಯಕ್ಕೆ ಸಾಕ್ಷಿಯಾಗಿತ್ತು.
ಸಿ.ಎ. ಇಟ್ಟಾಳಮಠ
ಅಥಣಿ(ನ.21): ದೇಶದ ಗಮನ ಸೆಳೆದಿರುವ ನೆರೆಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬುಧವಾರ ಮುಕ್ತಾಯವಾಗಿದೆ. ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ನಾನಾ ಕಸರತ್ತು ನಡೆಸಿದವು. ಈ ಬಾರಿಯ ಚುನಾವಣೆಯ ವಿಶೇಷತೆ ಎಂದರೆ ಪ್ರತಿ ಬಾರಿ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಪ್ರಮುಖ ಪ್ರಚಾರದ ವಿಷಯ ವಸ್ತುವಾಗಿರುತ್ತಿತ್ತು. ಇದೇ ಪ್ರಥಮ ಬಾರಿಗೆ ಯಾವೊಬ್ಬ ಮುಖಂಡರೂ ಗಡಿ ವಿಷಯದ ಬಗ್ಗೆ ಚಕಾರ ಎತ್ತದಿರುವುದು ಕರ್ನಾಟಕದ ವಿರುದ್ಧ ಕಿತಾಪತಿ ಮಾಡುತ್ತಲೇ ಇರುವ ಎಂಇಎಸ್ ನಾಯಕರಿಗೆ ತೀವ್ರ ಮುಖಭಂಗ ತಂದಿದೆ.
ಚುನಾವಣೆಗೂ ಮೊದಲು ಬೆಳಗಾವಿಯ ಎಂಇಎಸ್ ಮುಖಂಡರ ನಿಯೋಗ ಮಹಾರಾಷ್ಟ್ರದ ಪ್ರಮುಖ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಗಳ ಪ್ರಣಾಳಿಕೆಯಲ್ಲಿ ಗಡಿವಿವಾದ ಪ್ರಸ್ತಾಪಿಸಲು ಮನವಿ ಮಾಡಿದ್ದರು. ಆದರೆ, ಪ್ರಣಾಳಿಕೆಯಲ್ಲಿ ದೂರದ ಮಾತು. ಕನಿಷ್ಠ ಪ್ರಚಾರದ ವೇಳೆಯೂ ಯಾವುದೇ ಪಕ್ಷದ ಮುಖಂಡರು ಗಡಿತಂಟೆಯ ವಿಷಯ ಪ್ರಸ್ತಾಪಿಸದಿರುವುದು, ಪ್ರಚಾರದಲ್ಲಿ ಕನ್ನಡ, ಕನ್ನಡಿಗರಿಗೆ ಮಹತ್ವ ನೀಡಿರುವುದು ಎಂಇಎಸ್ ಪಾಲಿಗೆ ಮರಣಶಾಸನ ಎಂದೇ ಬಣ್ಣಿಸಲಾಗುತ್ತಿದೆ.
Belagavi: ಕರಾಳ ದಿನಕ್ಕೆ ಜನರೇ ಬಾರದೇ ಎಂಇಎಸ್‌ಗೆ ಭಾರೀ ಮುಖಭಂಗ
ಮತಯಂತ್ರದಲ್ಲಿ ಕನ್ನಡ ಬಳಕೆ:
ಗಡಿತಂಟೆ ವಿಷಯ ಪ್ರಸ್ತಾಪಿಸದಿರುವುದು ಒಂದು ಕಡೆಯಾದರೆ ಮತಯಂತ್ರದಲ್ಲಿ ಅಭ್ಯರ್ಥಿಗಳ ಹೆಸರನ್ನು ಮರಾಠಿ ಮತ್ತು ಕನ್ನಡ ಎರಡೂ ಭಾಷೆಯಲ್ಲಿ ಮುದ್ರಣ ಮಾಡಿದೆ. ಕನ್ನಡಿಗರ ಮತದಾರರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿರು ಪ್ರಮಾಣದಲ್ಲಿರುವ ಮತಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮರಾಠಿ ಜೊತೆಗೆ ಕನ್ನಡದಲ್ಲೂ ಕರಪತ್ರ ಮುದ್ರಿಸಿ ಹಂಚಿರುವುದು ಇತಿಹಾಸದಲ್ಲಿ ಇದೇ ಮೊದಲು. ಹೀಗಾಗಿ ಅಲ್ಲಿನ ಕನ್ನಡಿಗರಿಗೆ ಪಕ್ಷಗಳು ಎಷ್ಟು ಪ್ರಾಮುಖ್ಯತೆ ನೀಡಿವೆ ಎಂಬುದು ಗೊತ್ತಾಗುತ್ತದೆ.
ಗೆಲುವಿನಲ್ಲಿ ಕನ್ನಡಿಗರೇ ನಿರ್ಣಾಯಕ:
ಮಹಾರಾಷ್ಟ್ರದಲ್ಲಿ ಕನಿಷ್ಠ 50 ಲಕ್ಷದಿಂದ 60 ಲಕ್ಷ ಕನ್ನಡಿಗರು ವಾಸಿಸುತ್ತಿದ್ದಾರೆ. ಗಡಿಭಾಗವಾದ ಲಾತೂರ, ಮಂಗಳಖೋಡ, ಅಕ್ಕಲಕೋಟ, ಜತ್, ಪುಣೆಯ ಕೆಲವು ಪ್ರದೇಶ, ಮುಂಬೈ, ಮಿರಜ್, ಸಾಂಗಲಿ, ಕೊಲ್ಲಾಪುರ ವಿಧಾನಸಭೆ ಕ್ಷೇತ್ರಗಳಲ್ಲಿ ಶೇ.35ಕ್ಕೂ ಅಧಿಕ ಕನ್ನಡಭಾಷಿಕ ಮತದಾರರು ಇದ್ದಾರೆ. ಇವರಲ್ಲಿ ಬಹುಸಂಖ್ಯಾತ ವೀರಶೈವ- ಲಿಂಗಾಯತ ಸಮಾಜದವರು. ಇವರು ಆಯಾ ಮತಕ್ಷೇತ್ರದಲ್ಲಿ ನಿರ್ಣಾಯಕರಾಗಿದ್ದಾರೆ. ಇದನ್ನು ಅರಿತಿರುವ ಆಡಳಿತಾರೂಢ ಮಹಾಯತಿ ಹಾಗೂ ಪ್ರತಿಪಕ್ಷವಾದ ಮಹಾವಿಕಾಸ ಆಘಾಡಿ ಕೂಟಗಳು ಶತಾಯಗತಾಯ ಕನ್ನಡಿಗರನ್ನು ಸೆಳೆಯಲು ಹಲವು ರಣತಂತ್ರ ರೂಪಿಸಿದ್ದವು.
ಕನ್ನಡ ಮುಖಂಡರಿಗೆ ಮತಕ್ಷೇತ್ರಗಳ ಉಸ್ತುವಾರಿ:
ಮಹಾರಾಷ್ಟ್ರದ ಪ್ರಮುಖ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಅನೇಕ ಕ್ಷೇತ್ರಗಳ ಉಸ್ತುವಾರಿ ವಹಿಸಿ ತಮ್ಮ ಕೂಟಗಳ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ವಹಿಸಿದ್ದವು. ಮಹಾವಿಕಾಸ ಆಘಾಡಿ ಅಭ್ಯರ್ಥಿಗಳ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ, ಹೆಬ್ಬಾಳಕರ್, ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು, ಕಾಂಗ್ರೆಸ್ ಪದಾಧಿಕಾರಿಗಳು ಪ್ರಚಾರ ಸಭೆಗಳನ್ನು ನಡೆಸಿ ಮತಬೇಟೆ ನಡೆಸಿದರೆ, ಇತ್ತ ಮಹಾಯತಿ ಕೂಟದ ಅಭ್ಯರ್ಥಿಗಳ ಪರ ರಾಜ್ಯದ ಬಿಜೆಪಿ ಮುಖಂಡರಾದ ಸಿ.ಟಿ.ರವಿ, ಶಾಸಕ ಅಭಯ ಪಾಟೀಲ, ಮಾಜಿ ಶಾಸಕರಾದ ಸಂಜಯ ಪಾಟೀಲ, ಅನಿಲ ಬೆನಕೆ, ರಾಜ್ಯಸ ಭಾ ಸಂಸದ ಈರಣ್ಣ ಕಡಾಡಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರಿಗೆ ಕನ್ನಡಿಗರ ಮತಸೆಳೆ ಯುವ ಜವಾಬ್ದಾರಿ ವಹಿಸಿತ್ತು. ಗಡಿ ಜಿಲ್ಲೆಯಲ್ಲಿ ಕರ್ನಾಟಕ ನಾಯಕರು ಸ್ಥಳದಲ್ಲೇ ಬೀಡುಬಿಟ್ಟು ಕನ್ನಡಿಗರ ಮತ ಸೆಳೆಯಲು ಸರ್ವ ಪ್ರಯತ್ನ ನಡೆಸಿದರು.
ಬೆಳಗಾವಿ: ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ವಿಫಲ, ನಾಡದ್ರೋಹಿ ಎಂಇಎಸ್ ಪುಂಡರಿಗೆ ಮುಖಭಂಗ!
ಅಭಿವೃದ್ಧಿಯ ಭರವಸೆ:
ಮಹಾರಾಷ್ಟ್ರದ ಕನ್ನಡಿಗರ ಬಾಹುಳ್ಯದ ಗಡಿಪ್ರದೇಶದಲ್ಲಿ ಅನೇಕ ವರ್ಷಗಳಿಂದ ಅಭಿವೃದ್ಧಿ ಮರೀಚಿಕೆಯಾಗಿತ್ತು. ಇದರಿಂದ ರೋಸಿಹೋದ ಕನ್ನಡಭಾಷಿಕ ಬಾಹುಳ್ಯದ ಅನೇಕ ಗ್ರಾಮಗಳಲ್ಲಿ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಿ ಎಂದು ಹೋರಾಟಗಳು ನಡೆಸಿದ್ದವು. ಇದರಿಂದ ಎಚ್ಚೆತ್ತುಕೊಂಡಿರುವ ಗಡಿಭಾಗದ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಗಡಿಭಾಗದ ಹಳ್ಳಿಗಳ ಅಭಿವೃದ್ಧಿಗೆ ಒತ್ತು ನೀಡುವ ಭರಸವೆ ಭರಪೂರ ಭರವಸೆ ನೀಡಿದ್ದಾರೆ.
ಮಹಾ ನೆಲದಲ್ಲಿ ಮೊಳಗಿದ ಕನ್ನಡ ಕಹಳೆ
ಇದೇ ವರ್ಷ ಕರ್ನಾಟಕ ಸರ್ಕಾರ ಗಡಿಭಾಗ ಜತ್ ತಾಲೂಕಿನ ಗುಡ್ಡಾಪುರದಲ್ಲಿ ಆಯೋಹಿಸಿದ್ದ ಪ್ರಥಮ ಗಡಿನಾಡು ಉತ್ಸವ ಯಶಸ್ವಿಗೊಂಡಿತ್ತು. ಜತ್ ಕ್ಷೇತ್ರದ ಶಾಸಕ ವಿಕ್ರಮಸಿಂಗ್ ಸಾವಂತ ಸಮಾರಂಭದ ಅಧ್ಯಕ್ಷತೆ ವಹಿಸಿ ಕನ್ನಡ ಶಾಲು, ಧ್ವಜ ಹಾಕಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ್ದು ಹೆಚ್ಚುತ್ತಿರುವ ಕನ್ನಡಿಗರ ಪ್ರಾಬಲ್ಯಕ್ಕೆ ಸಾಕ್ಷಿಯಾಗಿತ್ತು. ಯಾವಾಗಲೂ ಗಡಿವಿವಾದ ಪ್ರಚಾರದ ವಿಷಯವಾಗುತ್ತಿದ್ದ ಮಹಾರಾಷ್ಟ್ರದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಕನ್ನಡ, ಕನ್ನಡಿಗರಿಗೆ ಪ್ರಾಮುಖ್ಯತೆ ಸಿಕ್ಕಿರುವುದು ಮಹಾರಾಷ್ಟ್ರದಲ್ಲಿ ಕನ್ನಡಿಗರ ಪ್ರಾಬಲ್ಯ ಹೆಚ್ಚುತ್ತಿರುವ ಸಂಕೇತವಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.