ಹಾಸನ: ಅತ್ತೆ-ಸೊಸೆ ಜಗಳದಲ್ಲಿ ಅಮಾಯಕ ವ್ಯಕ್ತಿ ಬಲಿ, ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ತಾಯಿ ಮತ್ತು ಹೆಂಡತಿಯ ಗಲಾಟೆಯಿಂದ ಮನನೊಂದು ಕರುಣಾಕರ್ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ತಾಯಿ ಕಾವೇರಮ್ಮ ಮಗನ ಕಳೆದುಕೊಂಡಿದ್ದಾರೆ, ಹೆಂಡತಿ ಸೌಜನ್ಯ ಪತಿ ಕಳೆದುಕೊಂಡಿದ್ದಾಳೆ, ಮಕ್ಕಳಾದ ಶ್ರೇಯಸ್, ಸಮೃದ್ ತಂದೆ ಕಳೆದುಕೊಂಡು ಅನಾಥರಾಗಿದ್ದಾರೆ.
ವರದಿ- ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ
ಹಾಸನ(ನ.21): ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಮಾತಿದೆ. ಆದ್ರೆ ಅತ್ತೆ -ಸೊಸೆ ಜಗಳದಲ್ಲಿ ಅಮಾಯಕ ವ್ಯಕ್ತಿ ಬಲಿಯಾಗಿದ್ದಾನೆ. ಏನೂ ಅರಿಯದ 2 ಮಕ್ಕಳು ಅನಾಥರಾಗಿದ್ದಾರೆ. ಈ ಘಟನೆ ನಡೆದಿರೋದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಾಚಿಹಳ್ಳಿಯಲ್ಲಿ.
ಕಾಫಿ ಬೆಳೆಗಾರನಾಗಿದ್ದ 43 ವರ್ಷದ ಕರುಣಾಕರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೋಳ ಮರಿಬ್ಯಾಡ ಅನ್ನೋ ಮಾತಿನಂತೆ ಹೆಂಡತಿ ಮತ್ತು ಹೆತ್ತಮ್ಮನ ನಡುವೆ ಜಗಳ ನಡೆಯುತ್ತಿದ್ದರೂ ಇಬ್ಬರನ್ನೂ ಸಮಾಧಾನಪಡಿಸಿ, ಹೆತ್ತಮ್ಮನ ತಮ್ಮ ಮನೆಯಲ್ಲಿಟ್ಟುಕೊಂಡು ಜೀವನ ನಡೆಸಿಕೊಂಡು ಹೋಗುತ್ತಿದ್ದನು. ಆದರೆ ಕಳೆದ ವಾರ ತಾಯಿ ಕಾವೇರಮ್ಮ ಮತ್ತು ಪತ್ನಿ ಸೌಜನ್ಯ ನಡುವೆ ಜಗಳ ನಡೆದು ಅತಿರೇಖಕ್ಕೆ ಹೋಗಿತ್ತು.
ಉಡುಪಿ: ನಿಶ್ಚಿತಾರ್ಥದ ನಂತರ ಆತ್ಮಹತ್ಯೆಗೆ ಶರಣಾದ ಕೀರ್ತನಾ ಶೆಟ್ಟಿ
ನಿಮ್ಮ ಜೊತೆ ನಾನೂ ಇರೋದೆ ಇಲ್ಲ ಅಂತ ಹೆತ್ತ ತಾಯಿ ಕಾವೇರಮ್ಮ ಮಗನ ಮನೆಯಿಂದ ತನ್ನ ತವರೂರು ಮನೆಗೆ ಹೋಗಿದ್ದರು. ಹೆತ್ತಮ್ಮ ಮನೆ ಬಿಟ್ಟು ಹೋಗಿದ್ದರಿಂದ ಕರುಣಾಕರ್ ಮತ್ತು ಸೌಜನ್ಯ ನಡುವೆ ಗಲಾಟೆ ನಡೆಯುತ್ತಿತ್ತು. ನಿನ್ನೆ ರಾತ್ರಿ ಗ್ರಾಮದ ಹಿರಿಯರು ಕರುಣಾಕರ್ ಮನೆಗೆ ಬಂದು ತಾಯಿ ಮನೆಯಿಂದಾಚೆ ಹೋಗಿದ್ದಾರಲ್ಲ, ಹೆಂಡತಿಗೆ ಬುದ್ದಿ ಹೇಳು ಎಲ್ಲರೂ ಚೆನ್ನಾಗಿ ಬಾಳಿ ಅಂತ ಮಾತುಕತೆ ಬಾಳಿ ಅಂತ ಬುದ್ದಿವಾದ ಹೇಳಿದ್ದರು. ಗ್ರಾಮಸ್ಥರು ಬುದ್ದಿ ಹೇಳಿದ್ದರಿಂದ ಮತ್ತಷ್ಟು ಕೆರಳಿದ ಕರುಣಾಕರ್ ಪತ್ನಿ ಸೌಜನ್ಯ ರಾತ್ರಿ ಜಗಳ ಮಾಡಿದ್ದಳು. ಬೆಳಗ್ಗೆ ಎದ್ದ ಮೇಲೂ ಜಗಳ ಶುರು ಮಾಡಿದ್ದಳು, ಹೆತ್ತಮ್ಮನ ಮನೆಗೆ ವಾಪಸ್ ಕರೆಸಿಕೊಳ್ಳಲು ಮಗ ಮುಂದಾದರೆ, ಪತ್ನಿ ಸೌಜನ್ಯ ವಿರೋಧ ವ್ಯಕ್ತಪಡಿಸಿದ್ದಾಳಂತೆ. ಪತ್ನಿಯೂ ಮಾತು ಕೇಳುತ್ತಿಲ್ಲ, ಹೆತ್ತಮ್ಮನೂ ಸಮಾಧಾನ ಆಗದೇ ಮನೆ ಬಿಟ್ಟು ಹೋಗಿರುವುದರಿಂದ ದಿಕ್ಕುತೋಚದಂತಾದ ಕರುಣಾಕರ್ ತನ್ನ ರೂಂನಲ್ಲಿ ಸಿಂಗಲ್ ಬ್ಯಾರಲ್ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅತ್ತೆ- ಸೊಸೆ ಜಗಳದಲ್ಲಿ ಕರುಣಾಕರ್ ಬಲಿಯಾಗಿರುವುದು ದುರಂತವೇ ಸರಿ.
ತಾಯಿ ಮತ್ತು ಹೆಂಡತಿಯ ಗಲಾಟೆಯಿಂದ ಮನನೊಂದು ಕರುಣಾಕರ್ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ತಾಯಿ ಕಾವೇರಮ್ಮ ಮಗನ ಕಳೆದುಕೊಂಡಿದ್ದಾರೆ, ಹೆಂಡತಿ ಸೌಜನ್ಯ ಪತಿ ಕಳೆದುಕೊಂಡಿದ್ದಾಳೆ, ಮಕ್ಕಳಾದ ಶ್ರೇಯಸ್, ಸಮೃದ್ ತಂದೆ ಕಳೆದುಕೊಂಡು ಅನಾಥರಾಗಿದ್ದಾರೆ.
ಅತ್ತೆ- ಸೊಸೆ ಜಗಳ ಕುಟುಂಬದ ಆಧಾರಸ್ಥಂಬವಾಗಿದ್ದ ಕರುಣಾಕರನ ಬಲಿ ಪಡೆದಿದೆ. ಇಡೀ ಊರಿನಲ್ಲಿ ಒಳ್ಳೆಯ ಹೆಸರು ಹೊಂದಿದ್ದ ಕರುಣಾಕರ , ಹೆಂಡತಿ, ಹೆತ್ತಮನ ಗಲಾಟೆಯಿಂದ ಬೇಸತ್ತು ಜೀವವನ್ನೆ ಕಳೆದುಕೊಂಡು ಜೀವನ ಮುಗಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ಅಪಾರ ನೋವುಂಟು ಮಾಡಿದೆ.