ಯಾದಗಿರಿ ನೂತನ ಎಸ್ಪಿಗೆ ಹಳೆ ಪ್ರಕರಣಗಳೇ ಹೊಸ ಸವಾಲು!
ಯಾದಗಿರಿ ಜಿಲ್ಲೆಯಲ್ಲಿ ಹದೆಗಟ್ಟು ಹೋಗಿರುವ ಕಾನೂನು-ಸುವ್ಯವಸ್ಥೆ, ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು, ಮಹಿಳೆಯರು-ಮಕ್ಕಳ ಮೇಲಿನ ಅತ್ಯಾಚಾರ, ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ದಂಧೆಗಳು, ಮುಂತಾದ ಕಾನೂನು ಬಾಹಿರ ಕೃತ್ಯಗಳ ಕಾರಣಗಳಿಂದಾಗಿ, ಖಾಕಿ ಪಡೆಯ ಮೇಲಿನ ಭರವಸೆಯನ್ನೇ ಕಳೆದುಕೊಂಡ ನಾಗರಿಕರಿಗೆ ಹೊಸ ಎಸ್ಪಿ ಭರವಸೆಯ ಬೆಳಕಾಗಲಿ ಅನ್ನೋ ಆಶಯ ಮೂಡಿಬರುತ್ತಿದೆ.
ಆನಂದ್ ಎಂ. ಸೌದಿ
ಯಾದಗಿರಿ(ನ.21): ಅಪರಾಧ ಪ್ರಕರಣಗಳನ್ನು ತಡೆಗಟ್ಟಬೇಕಾದ, ಶಾಂತಿ- ಸುವ್ಯವಸ್ಥೆ ನಡೆಯದಂತೆ ಕಾವಲಿರಬೇಕಾದ ಖಾಕಿಪಡೆಯ ಕೆಲವು ಅಧಿಕಾರಿಗಳೇ ಅಕ್ರಮಗಳಲ್ಲಿ ‘ಪಾಲು’ದಾರಿಕೆ ಹೊಂದಿದ್ದಾರೆಂಬ ಆರೋಪಗಳ ಹಿನ್ನೆಲೆಯಲ್ಲಿ, ಪೊಲೀಸ್ ವ್ಯವಸ್ಥೆ ಕುರಿತು ಜಿಲ್ಲೆಯ ಜನಮಾನಸದಲ್ಲಿ ತಳವೂರಿದ್ದ ಅಪನಂಬಿಕೆಯನ್ನು ಯಾದಗಿರಿ ಜಿಲ್ಲೆಗೆ ನೂತನ ಎಸ್ಪಿಯಾಗಿ ಬಂದಿರುವ ಯುವ ಐಪಿಎಸ್ ಅಧಿಕಾರಿ ಪ್ರಥ್ವಿಕ್ ಶಂಕರ್ ಹೋಗಲಾಡಿಸುವರೇ ?
ಮೊನ್ನೆ ಶನಿವಾರವಷ್ಟೇ ಯಾದಗಿರಿ ಜಿಲ್ಲೆಯ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಐಪಿಎಸ್ ಅಧಿಕಾರಿ ಪ್ರಥ್ವಿಕ್ ಶಂಕರ್ ಕುರಿತು ಇಂತಹುದ್ದೊಂದು ಪ್ರಶ್ನೆ ಇದೀಗ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಜಿಲ್ಲೆಯಲ್ಲಿ ಹದೆಗಟ್ಟು ಹೋಗಿರುವ ಕಾನೂನು-ಸುವ್ಯವಸ್ಥೆ, ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು, ಮಹಿಳೆಯರು-ಮಕ್ಕಳ ಮೇಲಿನ ಅತ್ಯಾಚಾರ, ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ದಂಧೆಗಳು, ಮುಂತಾದ ಕಾನೂನು ಬಾಹಿರ ಕೃತ್ಯಗಳ ಕಾರಣಗಳಿಂದಾಗಿ, ಖಾಕಿ ಪಡೆಯ ಮೇಲಿನ ಭರವಸೆಯನ್ನೇ ಕಳೆದುಕೊಂಡ ನಾಗರಿಕರಿಗೆ ಹೊಸ ಎಸ್ಪಿ ಭರವಸೆಯ ಬೆಳಕಾಗಲಿ ಅನ್ನೋ ಆಶಯ ಮೂಡಿಬರುತ್ತಿದೆ.
ಯಾದಗಿರಿ: ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ
ಹತ್ಯೆಗಳು, ಆತ್ಮಹತ್ಯೆಗಳು..?
ಜಿಲ್ಲೆಯಲ್ಲಿ ಈ ಹಿಂದೆ ಕೇಳಿಬಂದ ಕೆಲವೊಂದು ಹತ್ಯೆ ಪ್ರಕರಣಗಳನ್ನು ಅತ್ಮಹತ್ಯೆ ಅಥವಾ ಅಪಘಾತಗಳು ಎಂದು ಬಿಂಬಿಸಿ, ಪ್ರಕರಣಗಳ ಮುಚ್ಚಿ ಹಾಕುವ ಯತ್ನ ನಡೆಸಿದ್ದ ಬಗ್ಗೆ ನೂತನ ಎಸ್ಪಿ ಕಣ್ಣಾಡಿಸಬೇಕಿದೆ. ಹಳೆಯ ಪ್ರಕರಣಗಳೇ ಅವರಿಗೆ ಹೊಸ ಸವಾಲಾಗಿ ಮೂಡಿಸಿದಂತಿವೆ. ನೊಂದು ಬೆಂದವರಿಗೆ ನ್ಯಾಯ ಕೊಡಿಸಬೇಕಿದೆ ಅನ್ನೋದು ಸಂತ್ರಸ್ತ ಕುಟುಂಬಗಳ ಆಗ್ರಹವಾಗಿದೆ.
ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಹದನೂರಿನ ಟಿಪ್ಪು ಸುಲ್ತಾನ್ (23) ಎಂಬ ಯುವಕನ ಸಾವಿನ ಪ್ರಕರಣ (ಫೆ.11, 2023) ಅನುಮಾನಾಸ್ಪಾದವಾಗಿದೆ, ಬರ್ಬರ ಹತ್ಯೆ ಮಾಡಲಾಗಿದೆ ಎಂದು ದೂರಿದ್ದರೂ, ಇದು ಸಹಜ ಸಾವು ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಕುಟುಂಬಸ್ಥರು ಕಳೆದೊಂದು ವರ್ಷದಿಂದ ಪಡುತ್ತಿರುವ ಪಡಿಪಾಟಲಿಗೆ ಮುಕ್ತಿ ಸಿಗಬೇಕಿದೆ. ಪ್ರಕರಣದ ಮರು ತನಿಖೆಗೆ ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಪತ್ರ ಬಂದು ಐದು ತಿಂಗಳುಗಳು ಗತಿಸಿದರೂ, ಧೂಳು ಸೇರಿರುವ ಟಿಪ್ಪು ಸುಲ್ತಾನ್ ಪ್ರಕರಣಕ್ಕೆ ಮರುಜೀವ ಈಗಲಾದರೂ ಸಿಗಲಿ ಅನ್ನೋದು ತಂದೆ ಖಾದರ್‌ಬಾಷಾ ಆಶಯ.
ಹಾಗೆಯೇ, ಶಹಾಪುರ ತಾಲೂಕು ಶಖಾಪುರ ತಾಂಡಾದ ನಿವಾಸಿ, ಜೆಸ್ಕಾಂ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಪ್ರಕಾಶ ರಾಠೋಡ್ (29) ಎಂಬ ಯುವಕನ ಸಾವು (ಮೇ 7) ಸಹಜವಲ್ಲ, ಹತ್ಯೆ ಮಾಡಲಾಗಿದೆ ಎಂದು ಕುಟುಂಬಸ್ಥರು ಶಹಾಪುರದಲ್ಲಿ ಇದೇ ಜೂ.29 ರಂದು ಜಿಲ್ಲಾಧಿಕಾರಿ ಅವರು ನಡೆಸಿದ ಜನಸ್ಪಂದನದಲ್ಲಿ ಅಳಲು ದೂರು ನೀಡಿ, ತೋಡಿಕೊಂಡಿದ್ದರು.
ಶಹಾಪುರ ತಾಲೂಕಿನ ತಿಪ್ಪನಹಳ್ಳಿ ಗ್ರಾಮದ ಭಾಗಪ್ಪ (18) ಏ.16 ರಂದು ಕೊಲೆ ಮಾಡಲಾಗಿದ್ದರೂ, ಆತನಿಗೆ ಫಿಟ್ಸ್ ಕಾಯಿಲೆ ಬಂದು ಮೃತಪಟ್ಟಿದ್ದಾನೆಂದು ಮರೆ ಮಾಚಲಾಗುತ್ತಿದೆ ಎಂದು ದೂರಿ, ಕುಟುಂಬಸ್ಥರು ಹಾಗೂ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಜು.4 ರಂದು ಪ್ರತಿಭಟನೆ ನಡೆಸಲಾಗಿತ್ತು. ಜಿಲ್ಲೆಯಲ್ಲಿ ಅನುಮಾನಾಸ್ಪದ ಸಾವಿನ ಪ್ರಕರಣಗಳ ತನಿಖೆ ಹಳ್ಳ ಹಿಡಿಯುತ್ತಿವೆ. ಕೊಲೆಗಳು ನಡೆದರೂ ಅವುಗಳನ್ನು ಅಪಘಾತ ಅಥವಾ ಆತ್ಮಹತ್ಯೆ ಎಂದು ಬಿಂಬಿಸಿ ಕೈತೊಳೆದುಕೊಳ್ಳುವ ಸಂಚು ನಡೆದಿದೆ ಎಂಬ ಗಂಭೀರ ಆರೋಪಗಳು ಮೂಡಿದ್ದವು.
ಅಕ್ರಮ ಸಕ್ರಮ!:
ಶಹಾಪುರದಲ್ಲಿ ಅರಣ್ಯಾಧಿಕಾರಿ ಕೊಲೆ ಪ್ರಕರಣ ಮರೆಮಾಚಲು ಲಕ್ಷಾಂತರ ರುಪಾಯಿಗಳ ಒಪ್ಪಂದದ ಶಂಕೆ ಆರೋಪಗಳು, ಕೋಟ್ಯಂತರ ರುಪಾಯಿಗಳ ಪಡಿತರ ಅನ್ನಭಾಗ್ಯ ಅಕ್ಕಿ ಅಕ್ರಮದಲ್ಲಿ ಪ್ರಭಾವಿಗಳ ತಲೆ ಉಳಿಸಲು ಅಮಾಯಕರನ್ನು ಬಲಿಪಶು ಮಾಡಲಾಗುತ್ತಿದೆ ಎಂಬ ಆರೋಪ, ಅಕ್ಕಿ ಅಕ್ರಮದಲ್ಲಿ ಕೇಳಿಬಂದ ವ್ಯಕ್ತಿಗೆ ಡಿವೈಎಸ್ಪಿ ದರ್ಜೆಯ ಅಧಿಕಾರಿಗಳಿಂದಲೇ ಸನ್ಮಾನ, ಕೃಷ್ಣಾ-ಭೀಮಾ ನದಿಪಾತ್ರಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿ ಆರೋಪಿಗಳ ಹೆಡೆಮುರಿ ಕಟ್ಟಬೇಕಾದ ಅಧಿಕಾರಿಗಳೇ ಮಕ್ಕಳ ಬೆದರಿಸುವ ಮುಂತಾದ ಘಟನೆಗಳ ಬಗ್ಗೆ ಹೊಸ ಎಸ್ಪಿ ಕಣ್ಣಾಡಿಸಿದರೆ ಸಂತ್ರಸ್ತರಿಗೆ ನ್ಯಾಯ ಸಿಗಲು ಸಾಧ್ಯ ಅಂತಾರೆ ಜನರು ಎಂದು ಎಸ್ಪಿ ಪ್ರಥ್ವಿಕ್ ಶಂಕರ್ ತಿಳಿಸಿದ್ದಾರೆ.
ಯಾದಗಿರಿ ನಗರದ ರಸ್ತೆಗಳ ದುರಸ್ತಿಗೆ ದತ್ತು ಚಿಂತನೆ ಶುರು!
ಯಾದಗಿರಿ ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ 2018 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ, ಮೈಸೂರಿನ ಪ್ರಥ್ವಿಕ್ ಶಂಕರ್ ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ, ಬೀದರ್ ಜಿಲ್ಲೆ ಭಾಲ್ಕಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಎಂದು ಕಾರ್ಯನಿರ್ವಹಿಸಿದ್ದ ಪ್ರಥ್ವಿಕ್ ಶಂಕರ್, ಯಾದಗಿರಿಗೆ ಬರುವ ಮುನ್ನ ಅಪರಾಧ ತನಿಖಾ ದಳ (ಸಿಐಡಿ) ಎಸ್ಪಿಯೆಂದು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿದ್ದರು.
30 ವರ್ಷ ವಯಸ್ಸಿನ ಎಸ್ಪಿ ಪ್ರಥ್ವಿಕ್ ಶಂಕರ್, ಎಂ.ಎಸ್ಸಿ. (ಕೆಮಿಸ್ಟ್ರಿ) ಸ್ನಾತಕೋತ್ತರ ಪದವೀಧರರು. ಮೂಲತಃ ಮಂಡ್ಯ ಜಿಲ್ಲೆಯ ದೊಡ್ಡಯಾಚೇನಹಳ್ಳಿಯ ಪ್ರಥ್ವಿಕ್ ಶಂಕರ್, 2017 ರಲ್ಲಿ ನಡೆದ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ 211ಕ್ಕೆ ರ್‍ಯಾಂಕ್ ಪಡೆದು, ರಾಜ್ಯಕ್ಕೆ ಹೆಮ್ಮೆ ಮೂಡಿಸಿದ್ದವರು. ಯಾದಗಿರಿ ನಗರ ಠಾಣೆಯ ಪಿಎಸ್ಸೈ ಆಗಿದ್ದ ಪರಶುರಾಮ್ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದ್ದಾಗ, ಪ್ರಥ್ವಿಕ್ ಶಂಕರ್ ತಂಡದ ಮೇಲುಸ್ತುವಾರಿ ವಹಿಸಿದ್ದರು.