ಕಬ್ಬನ ದರ ನಿಗದಿಗಾಗಿ ಜಾನುವಾರುಗಳೊಂದಿಗೆ ಸರ್ಕಾರದ ವಿರುದ್ಧ ರೈತರ ಆಕ್ರೋಶ

ಶ್ರೀರಂಗಪಟ್ಟಣ(ಅ.06): ಕಬ್ಬಿನ ದರ ನಿಗದಿ ಮಾಡಲು ಸರ್ಕಾರ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ರೈತರು ಹಾಗೂ ದಲಿತ ಸಂಘರ್ಷ ಸಮಿತಿ ಸದಸ್ಯರು ಜನ ಜಾನುವಾರುಗಳೊಂದಿಗೆ ರಸ್ತೆಗಿಳಿದು ಉಗ್ರ ಪ್ರತಿಭಟನೆ ನಡೆಸಿದರು.
ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯ ಕಿರಂಗೂರು ವೃತ್ತದ ಬನ್ನಿ ಮಂಟಪದ ಬಳಿ ಎತ್ತಿನ ಗಾಡಿ, ಟ್ರ್ಯಾಕ್ಟರ್‌, ಲಾರಿ ಸೇರಿದಂತೆ ನೂರಾರು ದನಕರು, ಆಡು, ನಾಯಿಗಳನ್ನು ಹೆದ್ದಾರಿಯಲ್ಲಿ ಕಟ್ಟಿದ ರೈತರು ಬೆಳಗ್ಗೆಯಿಂದಲೆ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

15 ದಿನಗಳ ಗಡುವು:

ಪ್ರತಿಭಟನಾ ಸ್ಥಳಕ್ಕೆ ಎಸ್ಪಿ ಯತೀಶ್‌ ಭೇಟಿ ನೀಡಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯರ ಗಮನಕ್ಕೆ ತಂದಾಗ ಅಧ್ಯಕ್ಷರೊಂದಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿ ಇನ್ನು 15 ದಿನಗಳ ಒಳಗೆ ಬೇಡಿಕೆ ಈಡೇರಿಸುವುದಾಗಿ ಹೇಳಿದ ನಂತರ 15 ದಿನಗಳ ಗಡುವು ನೀಡಿದ ರೈತ ಮುಖಂಡರು ಒಂದು ವೇಳೆ ಸೂಕ್ತ ಬೆಲೆ ನಿಗಧಿ ಮಾಡದಿದ್ದರೆ ಮತ್ತೆ ಉಗ್ರ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಸಿ ಪ್ರತಿಭಟನೆ ಕೈ ಬಿಟ್ಟರು.

ಬದುಕು ಹಸನಾಗಲು ಹೋರಾಟ ಅತಿ ಮುಖ್ಯ: ದರ್ಶನ್‌ ಪುಟ್ಟಣ್ಣಯ್ಯ

ಸಂಚಾರಕ್ಕೆ ತೊಂದರೆ ಪ್ರಯಾಣಿಕರ ಪರದಾಟ:

ಮೈಸೂರು ದಸರಾ ಅಂಗವಾಗಿ ದೇಶ, ವಿದೇಶ ಹಾಗೂ ಇತರೆ ರಾಜ್ಯಗಳಿಂದ ಸಾವಿರಾರು ವಾಹನಗಳಲ್ಲಿ ಪ್ರವಾಸಿಗರು ಮೈಸೂರಿಗೆ ಆಗಮಿಸಲು ಹೆದ್ದಾರಿಗಳ ಮೂಲಕ ಬಂದ ವೇಳೆ ರೈತರು ಜಿಲ್ಲೆಯ ನಾಲ್ಕೂ ಮೂಲೆಗಳಲ್ಲಿ ಹೆದ್ದಾರಿ ತಡೆ ಮಾಡಿದ್ದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿ ಪ್ರವಾಸಿಗರು ತೊಂದರೆಗೊಳಗಾದರು.

ಈ ಮಧ್ಯೆ ರೋಗಿಗಳ ಸಾಗಿಸುವ ಆ್ಯಂಬುಲೆನ್ಸ್‌ ವಾಹನಗಳು ಬಂದಾಗ ರಸ್ತೆ ತಡೆ ಮಾಡಿದ್ದರಿಂದ ಪರದಾಡುವಂತಾಗಿತ್ತು. ನಂತರ ತಡವಾಗಿಯಾದರೂ ಆ್ಯಂಬುಲೆನ್ಸ್‌ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಪಟ್ಟಣದ ಗಂಜಾಂ- ನಿಮಿಷಾಂಬ ರಸ್ತೆ, ಲೋಕಪಾವನಿಯಿಂದ - ಕರೀಘಟ್ಟರಸ್ತೆ, ಕೆಆರ್‌ಎಸ್‌- ಪಂಪ್‌ಹೌಸ್‌, ಕೆಆರ್‌ಎಸ್‌ - ಪಾಂಡವಪುರ ರಸ್ತೆ, ಕೆ.ಆರ್‌.ಪೇಟೆ- ಪಾಂಡವಪುರ ಸ್ಟೇಷನ್‌ ರಸ್ತೆಗಳನ್ನು ರೈತರು ತಡೆದು ಪ್ರತಿಭಟನೆ ಮಾಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆಂಪೂಗೌಡ, ದಿ.ಪುಟ್ಟಣ್ಣಯ್ಯರ ಪತ್ನಿ ಸುನೀತಾ ಪುಟ್ಟಣ್ಣಯ್ಯ, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ಕೃಷ್ಣೇಗೌಡ, ಕಡತನಾಳು ಬಾಲಕೃಷ್ಣ, ಚಿಕ್ಕಾಡೆ ಹರೀಶ್‌, ವಿಜಯಕುಮಾರ್‌, ಎಚ್‌.ಎಲ್‌.ಪ್ರಕಾಶ್‌, ಬಿ.ಎಸ್‌.ರಮೇಶ್‌, ಡಿಎಸ್‌ಎಸ್‌ ಮುಖಂಡ ಕುಬೇರಪ್ಪ, ದೊಡ್ಡಪಾಳ್ಯ ಜಯರಾಮು, ಶಂಕರೇಗೌಡ, ಚಂದ್ರು, ಪಾಂಡು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.