ಬದುಕು ಅಸನಾಗಲು ರೈತಸಂಘಟನೆ ಹೋರಾಟ ಅತಿಮುಖ್ಯ ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು.

ಭಾರತೀನಗರ (ಅ.03):ರೈತರ ಬದುಕು ಅಸನಾಗಲು ರೈತಸಂಘಟನೆ ಹೋರಾಟ ಅತಿಮುಖ್ಯ ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು.

ಅಣ್ಣೂರು ಗ್ರಾಮದಲ್ಲಿ ರೈತಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ರೈತರು ಸಂಕಷ್ಟಕ್ಕೆ ಸಿಲುಕುವ ಮೊದಲೇ ಎಚ್ಚೆತ್ತುಕೊಂಡು ರೈತರ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಬೇಕಾಗಿದೆ ಎಂದರು.

ರೈತಸಂಘದಲ್ಲಿ ದುಡಿಯುವಂತಹ ಕಾರ್ಯಕರ್ತರು ಯಾವುದೇ ಸ್ವಾರ್ಥಗಳನ್ನು ಇಟ್ಟುಕೊಳ್ಳಬಾರದು. ರೈತರ (Farmers ) ಬದುಕಿಗಾಗಿ ಹೋರಾಟ ನಡೆಸಬೇಕು. ಅಂತಹವರಿಗೆ ಮಾತ್ರ ರೈತ ಸಂಘ ಮನ್ನಣೆ ನೀಡುತ್ತದೆ. ಇಲ್ಲದಿದ್ದರೆ ಸಂಘದಿಂದ ಉಚ್ಚಾಟನೆಗೊಳಿಸಲಾಗುವುದು ಎಂದರು.

ರಾಜ್ಯರೈತ ಸಂಘದ ಮುಖಂಡ ಪ್ರಸನ್ನ ಎನ್‌.ಗೌಡ ಮಾತನಾಡಿ, ರೈತರು ಕಬ್ಬು (Sugar Cane) ಬೆಳೆದು ನಷ್ಟಕೊಳಗಾಗುತ್ತಿದ್ದಾರೆ. ಟನ್‌ ಕಬ್ಬಿಗೆ 5700 ರು. ರೈತರಿಗೆ ಖರ್ಚು ಬೀಳುತ್ತಿದೆ. ಸರ್ಕಾರವನ್ನು ಒತ್ತಾಯಿಸಿದರೆ ಯಾವುದೇ ಪ್ರತಿಫಲ ಸಿಗುತ್ತಿಲ್ಲ. ಇದಕ್ಕೆಲ್ಲಾ ನಮ್ಮ ಜನಪ್ರತಿನಿಧಿಗಳೇ ಕಾರಣರಾಗಿದ್ದಾರೆ. ಕನಿಷ್ಠ ಟನ್‌ ಕಬ್ಬಿಗೆ 4500 ರು. ನಿಗಧಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕೆಆರ್‌ಎಸ್‌ ಅಣೆಕಟ್ಟೆಸುತ್ತ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಇದನ್ನು ತಡೆಯಲು ಮುಂದಾಗಬೇಕು. ರೈತರ ಅಭಿವೃದ್ಧಿ, ಕೈಗಾರಿಕಾ ಪ್ರದೇಶ ಅಭಿವೃದ್ಧಿ ಹಾಗೂ ಇನ್ನಿತರೆ ಉದ್ದೇಶಗಳ ಅಭಿವೃದ್ಧಿಗಾಗಿ ರೈತಸಂಘ ಹೋರಾಟ ಅತಿ ಮುಖ್ಯವಾಗಿದೆ ಎಂದರು.

ಜಲಜೀವನ್‌ ಮೀಷನ್‌ ಯೋಜನೆಯಡಿ ಮೀಟರ್‌ ಅಳವಡಿಕೆ ಮತ್ತು ರೈತರ ಬೋರ್‌ ವೆಲ್‌ಗೆ (Borewell) ಮೀಟರ್‌ ಅಳವಡಿಕೆಗೆ ಬಂದರೆ ಅಧಿಕಾರಿಗಳನ್ನು ಕಂಬಕ್ಕೆ ಕಟ್ಟಿಹಾಕಿ ಮೀಟರ್‌ ಅಳವಡಿಕೆಗೆ ಅವಕಾಶಕೊಡಬೇಡಿ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ರೈತ ಸಂಘದ ಮುಖಂಡ ಎಸ್‌.ಸಿ.ಮಧುಚಂದನ್‌ ಮಾತನಾಡಿ, ರೈತರ ಬೇಡಿಕೆಗಳ ಈಡೇರಿಕೆಗಾಗಿ ಅ.5ರಂದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಜಿಲ್ಲೆಯ 5 ಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ರೈತರು ಆಗಮಿಸಿ ಬೆಂಬಲ ನೀಡಬೇಕು ಎಂದು ಕೋರಿದರು.

ಕಾರ್ಯಕ್ರಮಕ್ಕೂ ಮೊದಲು ಕೆ.ಎಂ.ದೊಡ್ಡಿಯ ಮದ್ದೂರು-ಮಳವಳ್ಳಿ ಹೆದ್ದಾರಿಯಿಂದ ಎತ್ತಿನಗಾಡಿಯ ಮೂಲಕ ರೈತಮುಖಂಡರನ್ನು ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ ಗ್ರಾಮಕ್ಕೆ ಬರಮಾಡಿಕೊಂಡರು. ಗ್ರಾಮದ ಮುಖ್ಯದ್ವಾರದಲ್ಲಿ ಗ್ರಾಮಘಟಕದ ನಾಮಫಲಕ ಅನಾವರಣಗೊಳಿಸಿದರು.

ಕಾರ್ಯಕ್ರಮದ ವೇಳೆ ಮಕ್ಕಳ ತಜ್ಞ ಡಾ.ಮೋಹನ್‌ ಬಾಬು ಮತ್ತು ದರ್ಶನ್‌ ಪುಟ್ಟಣ್ಣಯ್ಯ ಅವರನ್ನು ಅಭಿನಂದಿಸಿ ಗೌರವಿಸಿದರು. ವೇದಿಕೆಯಲ್ಲಿ ರೈತಸಂಘದ ತಾಲೂಕು ಅಧ್ಯಕ್ಷ ಜಿ.ಕೆ.ರಾಮಕೃಷ್ಣ, ಕಾರ್ಯಾಧ್ಯಕ್ಷ ಜೆ.ಡಂ.ವೀರಸಂಗಯ್ಯ, ಎಸ್‌.ಬಿ.ಪುಟ್ಟಸ್ವಾಮಿ, ಯಧುಶೈಲಸಂಪತ್ತು, ಜಿ.ಎಸ್‌.ಲಿಂಗಪ್ಪಾಜಿ, ಜಿ.ಎಂ.ಶಂಕರ್‌, ವರದರಾಜು, ಎಸ್‌.ಕೆ.ರವಿಕುಮಾರ್‌, ಮರಿಸ್ವಾಮಿ, ಪಟೇಲ್ಬೋರೇಗೌಡ, ಕೃಷ್ಣಪ್ಪ, ಶಿವರಾಜು, ರಾಜೇಶ್‌, ಧನಂಜಯ, ಶಂಕರ್‌, ಚನ್ನಪ್ಪ ಸೇರಿದಂತೆ ಅಣ್ಣೂರು ಗ್ರಾಮಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಅ.10 ರಂದು ರೈತ ಸಂಘದಿಂದ ಪ್ರತಿಭಟನೆ :

ಕೇಂದ್ರ ಸರ್ಕಾರ ವಿದ್ಯುತ್‌ ಖಾಸಗೀಕರಣ ಮಾಡಲು ಸಂಸತ್ತಿನ ಉಪಸಮಿತಿಯ ಮುಂದೆ ಮಂಡಿಸಿರುವ ವಿದ್ಯುತ್‌ ಖಾಸಗೀಕರಣ ಬಿಲ್‌ನ್ನು ಕೂಡಲೇ ವಾಪಸ್‌ ಪಡೆಯಬೇಕು. ರೈತರಿಗೆ ಮಾರಕವಾಗಿರುವ ಎಪಿಎಂಸಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಇದೇ ಅಕ್ಟೋಬರ್‌ 10ರಂದು ರಾಜ್ಯದ ಎಲ್ಲಾ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿಯೂ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.

ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಮಂಡಿಸಿರುವ ವಿದ್ಯುತ್‌ ಖಾಸಗಿ ಬಿಲ್‌ (Bill) ಏನಾದರೂ ಜಾರಿಗೆ ಬಂದರೆ, ಇಡೀ ದೇಶದಲ್ಲಿ ಆಹಾರ (Food) ಸ್ವಾವಲಂಬನೆ ಹಾಳಾಗುವುದಲ್ಲದೆ, ರೈತರು, ಬಡವರು ವಿದ್ಯುತ್‌ ಬಿಲ್‌ ಭರಿಸಲಾಗದೆ ಬೀದಿಗೆ ಬೀಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಹಾಗಾಗಿ ಪ್ರಥಮ ಹಂತವಾಗಿ ಈ ಹೋರಾಟವನ್ನು ರೈತ ಸಂಘ ಹಮ್ಮಿಕೊಂಡಿದೆ ಎಂದರು.