ಹುಬ್ಬಳ್ಳಿ(ಜು.19): ಮಹಾನಗರದಲ್ಲಿ ಬೆಳಗ್ಗೆಯ ವೇಳೆ ಲಾಕ್‌ಡೌನ್‌ ಹೆಸರಿಗೆ ಮಾತ್ರ ಎಂಬಂತಾಗಿದ್ದು, ಎಲ್ಲ ಬಗೆಯ ಅಂಗಡಿ ಮುಂಗುಟ್ಟುಗಳು ತೆರೆದುಕೊಳ್ಳುತ್ತಿವೆ. ಹಳೆ ಹುಬ್ಬಳ್ಳಿ ಭಾಗದಲ್ಲಿ ಜನಜಂಗುಳಿಯೂ ಹೆಚ್ಚಾಗುತ್ತಿದ್ದು, ಮಧ್ಯಾಹ್ನದ ಬಳಿಕ ಬಂದಾಗುತ್ತಿವೆ.

ಕಳೆದ ಬುಧವಾರದಿಂದ ಜಾರಿಯಾಗಿರುವ 10 ದಿನಗಳ ಲಾಕ್‌ಡೌನ್‌ ದಿನಕಳೆದಂತೆ ಉದ್ದೇಶ ಮರೆಯುತ್ತಿದೆ. ಅದರಲ್ಲೂ ಮಧ್ಯಾಹ್ನ 2ಗಂಟೆವರೆಗೂ ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವಿಕೆ ಎಲ್ಲವೂ ನಾಮ್‌ ಕೇ ವಾಸ್ತೆ ಎಂಬಂತಾಗಿದೆ. ಗೋಕುಲ ರಸ್ತೆ, ಹಳೆ ಹುಬ್ಬಳ್ಳಿ, ಕೊಪ್ಪಿಕರ ರಸ್ತೆ ಸೇರಿದಂತೆ ಎಲ್ಲೆಡೆ ಜನಸಂಚಾರವಿರುತ್ತಿದೆ. ಬಟ್ಟೆ, ಪಾತ್ರೆ, ಎಲೆಕ್ಟ್ರಾನಿಕ್‌, ಮೂಲ ಸೌಲಭ್ಯವಲ್ಲದಿದ್ದರೂ ಕೆಲ ಅಂಗಡಿಗಳು ತೆರೆದು ವ್ಯಾಪಾರ ನಡೆಸುತ್ತಿರುವುದು ಕಂಡುಬರುತ್ತಿದೆ. ಹೀಗಾಗಿ ಲಾಕ್‌ಡೌನ್‌ ಅರ್ಥ ಕಳೆದುಕೊಂಡಿದೆ ಎನ್ನಬಹುದು.

ಧಾರವಾಡ: ಕೊರೋನಾ ವರದಿ ವಿಳಂಬ ಸಂಪರ್ಕಿತರಲ್ಲಿ ಹೆಚ್ಚಿದ ಆತಂಕ

ಸೂಕ್ಷ್ಮ ಪ್ರದೇಶಗಳಲ್ಲಿ ಮಾತ್ರ ಪೊಲೀಸರು ಜನಸಂದಣಿ ಸೇರದಂತೆ ಕ್ರಮ ಕೈಗೊಳ್ಳುತ್ತಿದ್ದಾರೆ. ನಗರದಲ್ಲಿ ಸೋಂಕಿತ ಪೊಲೀಸರ ಸಂಖ್ಯೆ 45 ದಾಟಿರುವುದರಿಂದ ಅವರಲ್ಲೂ ಒಂದು ರೀತಿಯ ಆತಂಕ ಮೂಡಿದೆ. ಮಧ್ಯಾಹ್ನದ ಬಳಿಕ ಗಸ್ತುವಾಹನದ ಮೂಲಕ ಬಂದ್‌ ಮಾಡುವಂತೆ ಸೂಚಿಸಲಾಗುತ್ತಿದೆ. 12 ಗಂಟೆಗೆ ಬಂದ್‌ ಆಗಬೇಕಾದ ಅಂಗಡಿ ಮುಂಗಟ್ಟುಗಳು 3 ಗಂಟೆವರೆಗೂ ತೆರೆದುಕೊಂಡಿರುವುದು ಕಂಡುಬರುತ್ತಿದೆ. ಕದ್ದುಮುಚ್ಚಿಯೂ ವ್ಯಾಪಾರ ನಡೆಸಲಾಗುತ್ತಿದೆ.