ಧಾರವಾಡ: ಕೊರೋನಾ ವರದಿ ವಿಳಂಬ ಸಂಪರ್ಕಿತರಲ್ಲಿ ಹೆಚ್ಚಿದ ಆತಂಕ

ಹೆಚ್ಚಾಗುತ್ತಿದೆ ಕೋವಿಡ್‌ ಪರೀಕ್ಷೆ, ಕಡಿಮೆ ಬರುತ್ತಿವೆ ಫಲಿತಾಂಶ| ದಿನಕ್ಕೆ 500 ವರೆಗೆ ಫಲಿತಾಂಶ, 700ಕ್ಕೂ ಹೆಚ್ಚು ಜನರ ಪರೀಕ್ಷೆ| ಒಟ್ಟು 32735 ಪರೀಕ್ಷೆ, 29678 ವರದಿ ನೆಗೆಟಿವ್‌,2025 ವರದಿ ಬಾಕಿ|

People in Anxiety for Delay of Coronavirus Report in Dharwad District

ಧಾರವಾಡ(ಜು.18): ಕ್ಲಸ್ಟರ್‌ ಮಟ್ಟದಲ್ಲಿ ಹಬ್ಬುತ್ತಿರುವ ಕೋವಿಡ್‌ ಸೋಂಕು ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕವಾಗಿ ಹೆಚ್ಚುತ್ತಿದ್ದು, ಇದಕ್ಕೆ ಕೋವಿಡ್‌ ಪರೀಕ್ಷೆಯ ಫಲಿತಾಂಶ ವಿಳಂಬವಾಗುತ್ತಿರುವುದೂ ಪ್ರಮುಖ ಕಾರಣವಾಗಿದೆ.

ಹುಬ್ಬಳ್ಳಿಯ ಕಿಮ್ಸ್‌, ಧಾರವಾಡದ ಡಿಮಾನ್ಸ್‌, ಜಿಲ್ಲಾಸ್ಪತ್ರೆ ಸೇರಿದಂತೆ ಮೊಬೈಲ್‌ ವಾಹನಗಳಲ್ಲೂ ನಿತ್ಯ ನೂರಾರು ಜನ ಶಂಕಿತರ ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತಿದೆ. ಆದರೆ, ಕಿಮ್ಸ್‌ ಹೊರತು ಪಡಿಸಿದರೆ ಧಾರವಾಡದ ಡಿಮಾಸ್ಸ್‌ ಮಾತ್ರ ಕೋವಿಡ ಫಲಿತಾಂಶ ನೀಡುತ್ತಿದ್ದು, ಫಲಿತಾಂಶಕ್ಕಾಗಿ ಈ ಎರಡು ಕೇಂದ್ರಗಳಿಗೆ ದಿನನಿತ್ಯ ತೀವ್ರ ಒತ್ತಡವಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ ಎರಡು ಕೇಂದ್ರಗಳು ನಿತ್ಯ ಗರಿಷ್ಠ 500 ವರದಿಗಳನ್ನು ನೀಡಲಾಗುತ್ತಿವೆ. ಆದರೆ, ನಿತ್ಯ 700ಕ್ಕೂ ಹೆಚ್ಚು ಜನರ ಗಂಟಲು ದ್ರವ ಪರೀಕ್ಷೆ ಆಗುತ್ತಿದ್ದು ನಿತ್ಯವೂ 200ಕ್ಕೂ ಹೆಚ್ಚು ಜನರ ವರದಿ ಬಾಕಿ ಉಳಿಯುತ್ತಿದೆ. ಹೀಗಾಗಿಯೇ ಇವತ್ತಿನ ವರೆಗೆ ಇನ್ನೂ 2025 ಜನರ ಕೋವಿಡ್‌ ವರದಿ ಬರಬೇಕಿದೆ.

ಲಾಕ್‌ಡೌನ್‌ ಅಸ್ತ್ರಕ್ಕೆ ಮಣಿದ ಧಾರವಾಡಿಗರು: ಜನರ ಓಡಾಟ ಸಂಪೂರ್ಣ ಸ್ತಬ್ಧ..!

ಪ್ರಸ್ತುತ ಬೆಂಗಳೂರು ಬಿಟ್ಟರೆ ಧಾರವಾಡದಲ್ಲಿ ಅತೀ ಹೆಚ್ಚು ಕೋವಿಡ್‌ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಇದು ಉತ್ತಮ ಬೆಳವಣಿಗೆಯಾದರೂ ಫಲಿತಾಂಶ ತಡವಾಗುತ್ತಿರುವುದಬೇರೆ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಜಿಲ್ಲೆಯಲ್ಲಿ ಇಲ್ಲಿ ವರೆಗೆ 32735 ಜನರ ಪರೀಕ್ಷೆ ಮಾಡಲಾಗಿದ್ದು 29678 ಜನರ ವರದಿ ನೆಗೆಟಿವ್‌ ಬಂದಿದೆ. 1524 ಜನರಿಗೆ ಸೋಂಕು ಪತ್ತೆಯಾಗಿದೆ. 2025 ಜನರ ವರದಿ ಬಾಕಿ ಇದೆ. ಆರಂಭದಲ್ಲಿ 50 ರಿಂದ 100 ಸಂಖ್ಯೆಯಲ್ಲಿದ್ದ ಬಾಕಿ ವರದಿ ಇದೀಗ 2 ಸಾವಿರ ದಾಟಿದೆ. ವರದಿ ತಡವಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಟ್ಟವರು ಮನೆ ಮಂದಿ ಅಥವಾ ಹೊರಗಿನ ಜನರ ಸಂಪರ್ಕಕ್ಕೆ ಬರುತ್ತಿರುವುದೇ ಜಿಲ್ಲೆಯಲ್ಲಿ ಏಕಾಏಕಿ ಕೋವಿಡ್‌ ಪಾಸಿಟಿವ್‌ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವುದು ಸ್ಪಷ್ಟ.

ಧಾರವಾಡದ ಪ್ರತಿಷ್ಠಿತ ಬಟ್ಟೆವ್ಯಾಪಾರಸ್ಥರಿಗೆ ಕಳೆದ ಜು. 4ರಂದು ಸೋಂಕಿನ ಲಕ್ಷಣಗಳು ಕಂಡು ಬಂದಿದ್ದವು. ಜಿಲ್ಲಾಸ್ಪತ್ರೆಗೆ ಹೋಗಿ ಗಂಟಲು ದ್ರವ ನೀಡಿ ಬಂದಿದ್ದರು. ಅವರಿಗೆ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಅವರ ಕುಟುಂಬದ ಆರೂ ಜನ ಸದಸ್ಯರ ಗಂಟಲು ದ್ರವವನ್ನು ಜು.7ರಂದು ಒಯ್ಯಲಾಗಿತ್ತು. ಅವರಲ್ಲಿ ಲಕ್ಷಣಗಳು ಇರಲಿಲ್ಲ. ಐದು ದಿನಗಳು ಕಳೆದರೂ ವರದಿ ಬರದ ಹಿನ್ನೆಲೆಯಲ್ಲಿ, ನಮ್ಮದು ನೆಗೆಟಿವ್‌ ಬಂದಿರಬಹುದು ಎಂದು ಭಾವಿಸಿ ಕುಟುಂಬದ ಸದಸ್ಯರು ಇತರೆಡೆ ಸಂಪರ್ಕ ಹೊಂದಿದ್ದರು. ಆದರೆ, ನಂತರದಲ್ಲಿ ಆರು ಜನರ ಪೈಕಿ ನಾಲ್ವರಲ್ಲಿ ಕೊರೋನಾ ಪಾಸಿಟಿವ್‌ ಎಂಬ ಮಾಹಿತಿ ಬಂದಿದ್ದು ಇದೀಗ ಮನೆಯವರು ಸೇರಿದಂತೆ ಇಡೀ ಓಣಿಯಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಪರೀಕ್ಷೆ ಮಾಡಿ ಕಡಿಮೆ ಫಲಿತಾಂಶ ಕೊಡುತ್ತಿರುವ ಹಿನ್ನೆಲೆಯಲ್ಲಿ ಕ್ಲಸ್ಟರ್‌ ಮಟ್ಟದಲ್ಲಿ ಕೋವಿಡ್‌ ಏರುತ್ತಿದೆ ಎಂದು ಖಾಸಗಿ ವೈದ್ಯರು ಅಭಿಪ್ರಾಯ ಪಡುತ್ತಿದ್ದಾರೆ. ಜಿಲ್ಲಾಡಳಿತ ಹೆಚ್ಚಿನ ಪರೀಕ್ಷೆ ಮಾಡುವುದೇ ಸಾಧನೆ ಎನ್ನದೇ ಮಾಡಿರುವ ಪರೀಕ್ಷೆಗಳ ವರದಿಯನ್ನು 24 ಗಂಟೆಯಲ್ಲಿ ನೀಡಿದರೆ, ಕೋವಿಡ್‌ ಹಬ್ಬುವುದನ್ನು ತಡೆಯಬಹುದು ಎಂಬ ಸಲಹೆಯನ್ನು ಖಾಸಗಿ ವೈದ್ಯರು ನೀಡುತ್ತಾರೆ.

ಹು-ಧಾ ಅವಳಿ ನಗರದಲ್ಲಿ ಮೆಡಿಕಲ್‌ ಕಾಲೇಜು, ಕೃಷಿ ವಿಶ್ವವಿದ್ಯಾಲಯ, ಕರ್ನಾಟಕ ವಿವಿ ಸೇರಿದಂತೆ ಕೋವಿಡ್‌ ಪರೀಕ್ಷೆಗೆ ಸಾಕಷ್ಟುಅವಕಾಶಗಳಿವೆ. ಇಷ್ಟಾಗಿಯೂ ಜಿಲ್ಲಾಡಳಿತ ಫಲಿತಾಂಶ ನೀಡಲು ವಿಳಂಬ ಮಾಡುತ್ತಿದೆ. ಹೀಗಾಗಿಯೇ ಜಿಲ್ಲೆಯಲ್ಲಿ ನಿರೀಕ್ಷೆ ಮೀರಿ ಪ್ರಕರಣಗಳಾಗುತ್ತಿವೆ. ಮುಖ್ಯಮಂತ್ರಿಯಾಗಿ ಅನುಭವ ಇರುವ ಜಗದೀಶ ಶೆಟ್ಟರ್‌, ಕೇಂದ್ರ ಸಚಿವರಾಗಿರುವ ಪ್ರಹ್ಲಾದ ಜೋಶಿ ಅವರಿರುವ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಿಸಲು ವಿಫಲರಾಗಿದ್ದು, ಬೇಸರದ ಸಂಗತಿ ಎಂದು ಕಾಂಗ್ರೆಸ್ಸಿನ ಮಾಧ್ಯಮ ವಿಶ್ಲೇಷಕ ಪಿ.ಎಚ್‌. ನೀರಲಕೇರಿ ಅಭಿಪ್ರಾಯಿಸಿದ್ದಾರೆ.
 

Latest Videos
Follow Us:
Download App:
  • android
  • ios