ಮಂಗಳೂರು(ಫೆ.29): ಜಯನಗರ ಕೊಡೆಂಕೇರಿ ದಲಿತ ಕಾಲನಿಯಲ್ಲಿ ರಸ್ತೆ ಸಂಪರ್ಕವಿಲ್ಲದೆ ಮೃತದೇಹವನ್ನು ಅರ್ಧ ಕಿ.ಮೀ. ದೂರಕ್ಕೆ ಹೊತ್ತು ನಡೆದ ಘಟನೆ ಫೆ.25ರಂದು ನಡೆದಿದೆ. ಈ ಕಾಲನಿಯಲ್ಲಿ ಸುಮಾರು ಏಳು ಮನೆಗಳಿದ್ದು, ಮುಖ್ಯ ರಸ್ತೆಯಿಂದ ಈ ಪ್ರದೇಶಕ್ಕೆ ಸರಿಯಾದ ರಸ್ತೆ ಇಲ್ಲ. ಪರಿಣಾಮವಾಗಿ ಯಾವುದೇ ವಾಹನ ಈ ಕಾಲನಿಗೆ ಪ್ರವೇಶಿಸುತ್ತಿಲ್ಲ.

ಆದ್ದರಿಂದ ಇತ್ತೀಚೆಗೆ ಅಸೌಖ್ಯಕ್ಕೀಡಾದ ಕಾಲನಿ ನಿವಾಸಿ ದಿನೇಶ್‌ ಎಂಬುವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಾಗಲೂ ಹೊತ್ತುಕೊಂಡೇ ಸಾಗಿಸಲಾಗಿತ್ತು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಾಗಲೂ ಶವವನ್ನು ಸುಮಾರು ಅರ್ಧ ಕಿ.ಮೀ.ನಷ್ಟುಹೊತ್ತೇ ಕಾಲನಿಗೆ ತರಲಾಯಿತು.

ಖಾಝಿಗೆ ಗನ್‌ಮ್ಯಾನ್‌, ಪೊಲೀಸ್‌ ಭದ್ರತೆ

ಇದರಿಂದ ಕೋಪಗೊಂಡ ಸ್ಥಳೀಯರು ಆಕ್ರೊಶ ವ್ಯಕ್ತಪಡಿಸಿದರು. ಬಳಿಕ ಸ್ಥಳೀಯ ನ.ಪಂ. ಸದಸ್ಯ ಬಾಲಕೃಷ್ಣ ಭಟ್‌ ಕೊಡೆಂಕೆರಿ, ನ.ಪಂ. ಮುಖ್ಯ ಅಧಿಕಾರಿ ಅವರಲ್ಲಿ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಅಧಿಕಾರಿ, ಸರ್ವೇ ಇಲಾಖೆಯಿಂದ ಸ್ಥಳದ ಸರ್ವೇ ನಡೆಸಿ ಕೂಡಲೇ ಇದರ ಬಗ್ಗೆ ಗಮನಹರಿಸುವುದಾಗಿ ತಿಳಿಸಿದ್ದಾರೆ.

ಈ ಹಿಂದೆ ಕೂಡ ರಸ್ತೆಗಾಗಿ ಸ್ಥಳೀಯರು ಬೇಡಿಕೆ ಸಲ್ಲಿಸಿದ್ದರು. ಕಳೆದ ನ.ಪಂ. ಚುನಾವಣೆ ಸಂದರ್ಭದಲ್ಲಿ ಸ್ಥಳೀಯರಿಂದ ಚುನಾವಣಾ ಬಹಿಷ್ಕಾರ, ಪ್ರತಿಭಟನೆ ನಡೆದಿತ್ತು. ಆ ಸಂದರ್ಭ ಸುಳ್ಯ ತಹಸೀಲ್ದಾರ್‌ ಆಗಿದ್ದ ಕುಂಞಿ ಅಹಮ್ಮದ್‌, ಸ್ಥಳಕ್ಕೆ ಭೇಟಿ ನೀಡಿ ಸ್ಥಳ ವೀಕ್ಷಣೆ ನಡೆಸಿ, ಸಂಬಂಧ ಪಟ್ಟಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ಕೂಡಲೇ ರಸ್ತೆ ನಿರ್ಮಾಣಕ್ಕೆ ಸಂಬಂಧ ಪಟ್ಟದಾಖಲೆಗಳನ್ನು ಸಂಗ್ರಹಿಸುವಂತೆ ಹಾಗೂ ಕೂಡಲೇ ರಸ್ತೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು.