ಖಾಝಿಗೆ ಗನ್‌ಮ್ಯಾನ್, ಪೊಲೀಸ್ ಭದ್ರತೆ
ಸಿಎಎ, ಎನ್‌ಆರ್‌ಸಿ ವಿರುದ್ಧ ನಡೆದ ಪ್ರತಿಭಟನೆ ವೇಳೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ ಕಾರಣಕ್ಕೆ ಮತೀಯ ಸಂಘಟನೆಗಳಿಂದ ಜೀವಬೆದರಿಕೆಗೆ ಒಳಗಾಗಿರುವ ಮಂಗಳೂರಿನ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್‌ಗೆ ಈಗ ಬಿಗು ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಮಂಗಳೂರು(ಫೆ.29): ಸಿಎಎ, ಎನ್‌ಆರ್‌ಸಿ ವಿರುದ್ಧ ನಡೆದ ಪ್ರತಿಭಟನೆ ವೇಳೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ ಕಾರಣಕ್ಕೆ ಮತೀಯ ಸಂಘಟನೆಗಳಿಂದ ಜೀವಬೆದರಿಕೆಗೆ ಒಳಗಾಗಿರುವ ಮಂಗಳೂರಿನ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್‌ಗೆ ಈಗ ಬಿಗು ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಜೀವ ಬೆದರಿಕೆ ಕುರಿತು ಮಂಗಳೂರು ಪೊಲೀಸರಿಗೆ ದೂರು ನೀಡಿದ ಬಳಿಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೂ ಪ್ರತ್ಯೇಕ ದೂರು ಸಲ್ಲಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಮಹಾನಿರ್ದೇಶಕರು, ಮಂಗಳೂರು ಖಾಝಿಗೆ ಬಿಗು ಪೊಲೀಸ್ ಭದ್ರತೆ ಕಲ್ಪಿಸುವಂತೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರದಿಂದಲೇ ಖಾಝಿ ಅವರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಹತ್ಯೆ ಸಂಚು: ಮಂಗಳೂರು ಖಾಝಿ ಬೆನ್ನಿಗೆ ನಿಂತ ಗೃಹಮಂತ್ರಿ ಬೊಮ್ಮಾಯಿ
ಪ್ರಸ್ತುತ ಖಾಝಿ ಅವರು ಕಾಸರಗೋಡು ಪ್ರವಾಸದಲ್ಲಿದ್ದಾರೆ. ಫೆ.29ರಂದು ದ.ಕ. ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಪೊಲೀಸ್ ಎಸ್ಕಾರ್ಟ್‌ನಲ್ಲಿ ಖಾಝಿ ಸಂಚರಿಸಲಿದ್ದಾರೆ. ಅಲ್ಲದೆ ಅವರಿಗೆ ಪ್ರತ್ಯೇಕ ಗನ್‌ಮ್ಯಾನ್ ಕೂಡ ನೀಡಲಾಗಿದೆ.
ಕೇರಳದಲ್ಲೂ ಭದ್ರತೆಗೆ ಮಾಹಿತಿ:
ಮಂಗಳೂರು ಖಾಝಿಗೆ ಜೀವಬೆದರಿಕೆ ಹಿನ್ನೆಲೆಯಲ್ಲಿ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಕೇರಳ ಸರ್ಕಾರಕ್ಕೆ ಮಾಹಿತಿ ನೀಡುವಂತೆ ಪೊಲೀಸ್ ಮಹಾನಿರ್ದೇಶಕರು ಸೂಚನೆ ನೀಡಿದ್ದಾರೆ. ಆದ್ದರಿಂದ ಈ ವಿಚಾರವನ್ನು ಕೇರಳ ಪೊಲೀಸ್ ಇಲಾಖೆಯ ಗಮನಕ್ಕೆ ತರಲಾಗುತ್ತಿದೆ. ಖಾಝಿಯವರ ಕೇರಳ ಪ್ರವಾಸ ವೇಳೆ ಪೊಲೀಸ್ ಎಸ್ಕಾರ್ಟ್ ಹಾಗೂ ಗನ್‌ಮ್ಯಾನ್ ಭದ್ರತೆ ಒದಗಿಸುವಂತೆ ಮಾಹಿತಿ ನೀಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಡಾ.ಹರ್ಷ ತಿಳಿಸಿದ್ದಾರೆ.