ಉಚಿತ ವಿದ್ಯುತ್‌ ಯೋಜನೆ ನಂಬಿಕೊಂಡು ಇಲ್ಲಿನ ಜನ ಮನೆಯಲ್ಲಿನ ಗ್ಯಾಸ್‌ ಸಿಲಿಂಡರ್‌ಗಳನ್ನು ಮೂಲೆಗೆ ಸರಿಸಿ, ವಿದ್ಯುತ್‌ ಒಲೆಗಳನ್ನು ಖರೀದಿಸುತ್ತಿದ್ದಾರೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ(ಮೇ.21): ಅಡುಗೆ ಅನಿಲದ ಸಿಲಿಂಡರ್‌ ಬೆಲೆ ಏರಿಕೆ, ಜೊತೆಗೆ ಕಾಂಗ್ರೆಸ್‌ನ ಗ್ಯಾರಂಟಿ ಭರವಸೆಗಳಲ್ಲಿ ಒಂದಾದ ಪ್ರತಿ ಮನೆಗೆ 200 ಯೂನಿಟ್‌ ಉಚಿತ ವಿದ್ಯುತ್‌ ಯೋಜನೆ ನಂಬಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಜನ ವಿದ್ಯುತ್‌ ಒಲೆಗಳ ಮೊರೆ ಹೋಗುತ್ತಿದ್ದಾರೆ!

ಗ್ಯಾಸ್‌ ಸಿಲಿಂಡರ್‌ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದೀಗ ಗ್ರಾಮೀಣ ಭಾಗದಲ್ಲಿ ಸಿಲಿಂಡರ್‌ವೊಂದರ ಬೆಲೆ 1,125ಕ್ಕೆ ಬಂದು ನಿಂತಿದೆ. ಇದು ಬಡವರು, ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ. ಇಂತಹ ಸಂಕಷ್ಟದ ಕಾಲದಲ್ಲಿ ಕಾಂಗ್ರೆಸ್‌ ಪಕ್ಷ ಪ್ರತಿ ಮನೆಗೆ 200 ಯೂನಿಟ್‌ ಉಚಿತ ವಿದ್ಯುತ್‌ನ ಗ್ಯಾರಂಟಿ ನೀಡಿದೆ. ನೂತನ ಸರ್ಕಾರದ ಮೊದಲ ಸಂಪುಟ ಸಭೆಯಲ್ಲೇ ಈ ಯೋಜನೆ ಜಾರಿಯಾಗಿದೆ. ಹೀಗಾಗಿ, ಉಚಿತ ವಿದ್ಯುತ್‌ ಯೋಜನೆ ನಂಬಿಕೊಂಡು ಇಲ್ಲಿನ ಜನ ಮನೆಯಲ್ಲಿನ ಗ್ಯಾಸ್‌ ಸಿಲಿಂಡರ್‌ಗಳನ್ನು ಮೂಲೆಗೆ ಸರಿಸಿ, ವಿದ್ಯುತ್‌ ಒಲೆಗಳನ್ನು ಖರೀದಿಸುತ್ತಿದ್ದಾರೆ.

ಮುಂದಿನ 5 ವರ್ಷದಲ್ಲಿ ಪ್ರಣಾಳಿಕೆ ಪೂರ್ಣ ಜಾರಿ ಮಾಡಿ ನುಡಿದಂತೆ ನಡೆಯುತ್ತೇವೆ: ಸಿದ್ದರಾಮಯ್ಯ

ಹೂವಿನಹಡಗಲಿ ಪಟ್ಟಣದ ವಿವಿಧ ಅಂಗಡಿಗಳಲ್ಲಿ ನಾನಾ ಮಾದರಿಯ ವಿದ್ಯುತ್‌ ಒಲೆಗಳು ಹೊಸದಾಗಿ ಮಾರಾಟಕ್ಕೆ ಬಂದಿವೆ. ಇದನ್ನು ಗಮನಿಸಿದ ಜನ ವಿದ್ಯುತ್‌ ಒಲೆ ಖರೀದಿಗೆ ಒಲವು ತೋರುತ್ತಿದ್ದಾರೆ. ನಿತ್ಯ ಇಲ್ಲಿನ ಅಂಗಡಿಗಳಲ್ಲಿ 30ರಿಂದ 40 ವಿದ್ಯುತ್‌ ಒಲೆಗಳು ಮಾರಾಟವಾಗುತ್ತಿವೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಸ್ಥರು.

ಜೊತೆಗೆ, ವ್ಯಾಪಾರಸ್ಥರು ಟಂಟಂ ವಾಹನಗಳಲ್ಲಿ ವಿದ್ಯುತ್‌ ಒಲೆಗಳನ್ನು ತುಂಬಿಕೊಂಡು ಗ್ರಾಮೀಣ ಪ್ರದೇಶಗಳಿಗೆ ತೆರಳಿ, ಮಾರಾಟ ಮಾಡುತ್ತಿದ್ದಾರೆ. ಮಹಿಳೆಯರು ಮುಗಿಬಿದ್ದು ಈ ವಿದ್ಯುತ್‌ ಒಲೆಗಳನ್ನು ಖರೀದಿಸುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಸ್ಥರು. ಹೀಗಾಗಿ, ಈಗ ತಾಲೂಕಿನ ಬಹುತೇಕ ಮನೆಗಳಲ್ಲಿ ವಿದ್ಯುತ್‌ ಒಲೆಗಳು ಬಂದು ಕುಳಿತಿವೆ. ಕೆಲವರು ಈಗಾಗಲೇ ಬಳಸುತ್ತಿದ್ದರೆ, ಇನ್ನೂ ಕೆಲವರು ಉಚಿತ ವಿದ್ಯುತ್‌ ಗ್ಯಾರಂಟಿಯ ಅನುಷ್ಠಾನಕ್ಕಾಗಿ ಎದುರು ನೋಡುತ್ತಿದ್ದಾರೆ.

ಎಲ್ಲ ನಿರುದ್ಯೋಗಿಗಳಿಗೂ ಭತ್ಯೆ ಇಲ್ಲ, ಈ ವರ್ಷ ಡಿಗ್ರಿ ಪಾಸಾದವರಿಗೆ ಮಾತ್ರ ‘ಯುವನಿಧಿ’: ಸಿದ್ದು

ಸಾಧಾರಣವಾಗಿ ಹಳ್ಳಿಯ ಮನೆಗಳಲ್ಲಿ ತಿಂಗಳಿಗೆ ಸರಾಸರಿ 20ರಿಂದ 50 ಯೂನಿಟ್‌ ವಿದ್ಯುತ್‌ ಬಳಕೆಯಾಗುತ್ತದೆ. ಈಗ ಸರ್ಕಾರ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವುದಾಗಿ ಹೇಳಿದೆ. ನಿತ್ಯ ವಿದ್ಯುತ್‌ ಒಲೆ ಬಳಸಿದರೂ ತಿಂಗಳಿಗೆ 200 ಯೂನಿಟ್‌ ಗಡಿ ತಲುಪುವುದಿಲ್ಲ. ಹೀಗಾಗಿ, ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆಯಿಂದ ರೋಸಿಹೋಗಿರುವ ಇಲ್ಲಿಯ ಜನ ದುಬಾರಿ ಸಿಲಿಂಡರ್‌ನ ಸಹವಾಸವೇ ಬೇಡ ಎನ್ನುತ್ತಿದ್ದಾರೆ.

ಹಳ್ಳಿಗಳಲ್ಲೂ ಎಲೆಕ್ಟ್ರಿಕ್‌ ಸ್ಟವ್‌ಗಳ ಮಾರಾಟ

ವಿಜಯನಗರ ಜಿಲ್ಲೆ ಹೂವಿನಹಡಗಲಿ ಪಟ್ಟಣದಲ್ಲಿ ನಿತ್ಯ 30-40 ವಿದ್ಯುತ್‌ ಒಲೆಗಳು ಮಾರಾಟವಾಗುತ್ತಿವೆ. ಜೊತೆಗೆ ವ್ಯಾಪಾರಸ್ಥರು ಟಂಟಂ ವಾಹನಗಳಲ್ಲಿ ಹಳ್ಳಿಹಳ್ಳಿಗಳಿಗೂ ಹೋಗಿ ಎಲೆಕ್ಟ್ರಿಕ್‌ ಒಲೆಗಳನ್ನು ಮಾರುತ್ತಿದ್ದಾರೆ. ಮಹಿಳೆಯರು ಮುಗಿಬಿದ್ದು ಖರೀದಿಸುತ್ತಿದ್ದಾರೆ.