ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಿಗೆ ಕೆಲ ಷರತ್ತುಗಳನ್ನು ವಿಧಿಸಿದ್ದು, ‘ಯುವನಿಧಿ’ ಯೋಜನೆಯಡಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದ ಪದವೀಧರ ನಿರುದ್ಯೋಗಿಗಳಿಗೆ ಮಾತ್ರ ಎರಡು ವರ್ಷಗಳಿಗೆ ಸೀಮಿತವಾಗಿ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. 

ಬೆಂಗಳೂರು (ಮೇ.21): ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಿಗೆ ಕೆಲ ಷರತ್ತುಗಳನ್ನು ವಿಧಿಸಿದ್ದು, ‘ಯುವನಿಧಿ’ ಯೋಜನೆಯಡಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದ ಪದವೀಧರ ನಿರುದ್ಯೋಗಿಗಳಿಗೆ ಮಾತ್ರ ಎರಡು ವರ್ಷಗಳಿಗೆ ಸೀಮಿತವಾಗಿ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಹೀಗಾಗಿ ಈಗಾಗಲೇ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಹಾಲಿ ನಿರುದ್ಯೋಗಿಗಳಿಗೆ ಯೋಜನೆ ಅನ್ವಯವಾಗುವುದಿಲ್ಲ. 

ಪದವಿ ಮುಗಿಸಿ 180 ದಿನಗಳಾದರೂ ಉದ್ಯೋಗ ಲಭಿಸದ 18 ರಿಂದ 25 ವರ್ಷ ವರ್ಷದೊಳಗಿನ ಯುವಕರ ಮಾಹಿತಿ ಸಂಗ್ರಹಿಸುತ್ತೇವೆ. ಇವರಲ್ಲಿ ಪದವೀಧರರಿಗೆ ಮಾಸಿಕ 3 ಸಾವಿರ ರು. ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ ಮಾಸಿಕ 1,500 ರು. ನಿರುದ್ಯೋಗ ಭತ್ಯೆ ಪಾವತಿ ಮಾಡುತ್ತೇವೆ ಎಂದು ಕಾಂಗ್ರೆಸ್‌ ಪಕ್ಷ ಚುನಾವಣಾ ಘೋಷಣೆ ವೇಳೆ ಹೇಳಿತ್ತು.

5ನೇ ಬಾರಿಯೂ ಡಾ.ಜಿ.ಪರಮೇಶ್ವರ್‌ ಸಚಿವ: ಒಟ್ಟು 6 ಬಾರಿ ಶಾಸಕರಾಗಿ ಆಯ್ಕೆಯಾದ ಪರಂ

ಆದರೆ, ಶನಿವಾರದ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪದವಿ ಹಾಗೂ ಡಿಪ್ಲೊಮಾ ಮುಗಿಸಿರುವವರಿಗೆ ಮಾತ್ರ ಮುಂದಿನ 2 ವರ್ಷದವರೆಗೆ ನಿರುದ್ಯೋಗ ಭತ್ಯೆ ನೀಡುತ್ತೇವೆ. ಇದರ ನಡುವೆ ಸರ್ಕಾರಿ ಅಥವಾ ಖಾಸಗಿ ಯಾವುದೇ ಉದ್ಯೋಗ ದೊರೆತರೆ ನಿರುದ್ಯೋಗ ಭತ್ಯೆ ನಿಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಪದವಿ ಮುಗಿಸಿ ಕಳೆದ 2-3 ವರ್ಷಗಳಿಂದ ಉದ್ಯೋಗಕ್ಕಾಗಿ ಅಲೆಯುತ್ತಿರುವ ನಿರುದ್ಯೋಗಿಗಳಿಗೆ ಯೋಜನೆಯಿಂದ ಪ್ರಯೋಜನವಾಗುವುದಿಲ್ಲ ಎಂಬಂತಾಗಿದೆ.

ಸಾಮಾನ್ಯ ಬಸ್ಸಲ್ಲಿ ಮಾತ್ರ ಉಚಿತ ಪ್ರಯಾಣ: ಇನ್ನು ‘ಶಕ್ತಿ’ ಯೋಜನೆ ಅಡಿ ಸರ್ಕಾರಿ ಸಾರಿಗೆ ನಿಗಮಗಳ ಸಾಮಾನ್ಯ ಬಸ್ಸುಗಳಲ್ಲಿ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. ಐಷಾರಾಮಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ. ಹೊರ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಇರುವುದಿಲ್ಲ. ರಾಜ್ಯದ ಮಹಿಳೆಯರಿಗೆ ಬಸ್‌ ಪ್ರಯಾಣಕ್ಕಾಗಿಯೇ ಪ್ರತ್ಯೇಕ ಪಾಸು ನೀಡಲಾಗುತ್ತದೆ ಗೃಹ ಲಕ್ಷ್ಮೀ, ಗೃಹ ಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆಗಳಿಗೂ ರೂಪುರೇಷೆ ಸಿದ್ಧಪಡಿಸಿ ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ. ತನ್ಮೂಲಕ ಈ ಗ್ಯಾರಂಟಿ ಯೋಜನೆಗಳಿಗೂ ಷರತ್ತು ಅನ್ವಯಿಸುವ ಮುನ್ಸೂಚನೆ ನೀಡಲಾಗಿದೆ.

ದಾರಿಯಲ್ಲಿ ಹೋಗುವವರಿಗೆಲ್ಲಾ ಯೋಜನೆ ನೀಡಲಾಗದು: ಮೊದಲ ಸಚಿವ ಸಂಪುಟ ಸಭೆಯಲ್ಲೇ ಗ್ಯಾರಂಟಿ ಯೋಜನೆ ಜಾರಿ ಮಾಡುವುದಾಗಿ ಹೇಳಿದ್ದಿರಿ ಎಂಬ ಪ್ರಶ್ನೆಗೆ, ದಾರಿಯಲ್ಲಿ ಹೋಗುವವರಿಗೆಲ್ಲಾ ನೀಡಲಾಗುವುದಿಲ್ಲ. ಅರ್ಹರನ್ನು ಗುರುತಿಸಬೇಕು. ಇದಕ್ಕಾಗಿ ನಿಯಮಾವಳಿ ರೂಪಿಸಬೇಕು. ಬಳಿಕ ಹಣಕಾಸು ಲೆಕ್ಕಾಚಾರ ಮಾಡಿ ಬಳಿಕ ಅನುಷ್ಠಾನ ಮಾಡಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಮರ್ಥನೆ ನೀಡಿದರು.

ದೇಶ ಗೆಲ್ಲಿಸುವ ಲೋಕಸಭಾ ಚುನಾವಣೆಗೆ ಸಜ್ಜಾಗಿ: ಶಾಸಕ ಸಿ.ಸಿ.ಪಾಟೀಲ್‌

ಸಿದ್ದು,ಡಿಕೆಶಿಗೆ ಪ್ರಧಾನಿ ಮೋದಿ ಅಭಿನಂದನೆ: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ ‘ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿ.ಕೆ.ಶಿವಕುಮಾರ್‌ ಅವರಿಗೆ ಅಭಿನಂದನೆಗಳು. ಫಲಪ್ರದ ಅಧಿಕಾರವಧಿಗಾಗಿ ನನ್ನ ಶುಭ ಹಾರೈಕೆಗಳು’ ಎಂದು ಹಾರೈಸಿದ್ದಾರೆ.