ಚುನಾವಣೆ ಸಮಯದಲ್ಲಿ ಬಂದು ಬಣ್ಣಬಣ್ಣದ ಮಾತುಗಳನ್ನು ಆಡುತ್ತಿದ್ದಾರೆ. ನನ್ನ ಕ್ಷೇತ್ರದ ಜನತೆ ಇಂತಹ ಬಣ್ಣದ ಮಾತಿಗೆ ಮರುಳಾಗುವುದಿಲ್ಲ. ಚುನಾವಣೆಯಲ್ಲಿ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ರೈತಸಂಘದ ಅಭ್ಯರ್ಥಿ ದರ್ಶನ್‌ ಗುರಿಯಾಗಿಸಿಕೊಂಡು ಟೀಕಿಸಿದರು.

 ಪಾಂಡವಪುರ : ಚುನಾವಣೆ ಸಮಯದಲ್ಲಿ ಬಂದು ಬಣ್ಣಬಣ್ಣದ ಮಾತುಗಳನ್ನು ಆಡುತ್ತಿದ್ದಾರೆ. ನನ್ನ ಕ್ಷೇತ್ರದ ಜನತೆ ಇಂತಹ ಬಣ್ಣದ ಮಾತಿಗೆ ಮರುಳಾಗುವುದಿಲ್ಲ. ಚುನಾವಣೆಯಲ್ಲಿ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ರೈತಸಂಘದ ಅಭ್ಯರ್ಥಿ ದರ್ಶನ್‌ ಗುರಿಯಾಗಿಸಿಕೊಂಡು ಟೀಕಿಸಿದರು.

ತಾಲೂಕಿನ ಹಾರೋಹಳ್ಳಿ ಸಮೀಪವಿರುವ ಶ್ರೀಹೊಸಲು ಮಾರಮ್ಮ ದೇವಸ್ಥಾನದ ಆವರಣದಲ್ಲಿ ನಡೆದ ಕ್ಯಾತನಹಳ್ಳಿ ಜಿಪಂ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್‌ ಕಾರ‍್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

2023ರ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಲ್ಲಿ ರಾಜಕೀಯ ಧ್ರುವೀಕರಣ ಆರಂಭವಾಗಲಿದೆ. ದುದ್ದ ಹೋಬಳಿಗೆ ಏತನೀರಾವರಿ ಅನುಷ್ಠಾನಗೊಳಿಸಿದರ ಬಳಿಕ ದುದ್ದ ಹೋಬಳಿ ಜೆಡಿಎಸ್‌ ಪರವಾಗಿದ್ದು ಹೋಬಳಿಯಲ್ಲಿ 15 ಸಾವಿರ ಮತಗಳ ಅಂತರದಲ್ಲಿ ಲೀಡ್‌ ನೀಡಲಿದ್ದಾರೆ ಎಂದರು.

ನನ್ನ ಜೀವನದ ಕೊನೆಯ ಉಸಿರು ಇರುವ ತನಕ ಕ್ಷೇತ್ರದ ಜನರಿಗಾಗಿ ಕೆಲಸ ಮಾಡುತ್ತೇನೆ. ಕ್ಷೇತ್ರದ ಜನರ ಆಶೀರ್ವಾದದಿಂದ ಮೂರು ಬಾರಿ ಶಾಸಕನಾಗಿ ಮೇಲುಕೋಟೆ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸುವ ಕೆಲಸ ಮಾಡಿದ್ದೇನೆ. ಕ್ಯಾತನಹಳ್ಳಿ ಜಿಪಂ ಕ್ಷೇತ್ರದ ಜನತೆ ನನ್ನನ್ನು ಮನೆಮಗನೆಂತೆ ಪ್ರೀತಿಸಿ ಬೆಂಬಲಿಸಿದ್ದ ಈ ಭಾರಿಯೂ ಸಹ ಹೆಚ್ಚಿನ ಮಟ್ಟದಲ್ಲಿ ನನಗೆ ಬೆಂಬಲ ನೀಡುವ ವಿಶ್ವಾಸವಿದೆ ಎಂದರು.

ಎಣ್ಣೆಹೊಳೆಕೊಪ್ಪಲು ಗ್ರಾಮದ ಜನತೆ ಪ್ರತಿ ಚುನಾವಣೆಯಲ್ಲೂ ರೈತಸಂಘಕ್ಕೆ ಅಧಿಕ ಬೆಂಬಲ ನೀಡುತ್ತಿದ್ದರು ಆದರೂ ಸಹ ನಾನು ಗ್ರಾಮಸ್ಥರ ಒತ್ತಾಯದ ಮೇರೆಗೆ ಎಣ್ಣೆಹೊಳೆಕೊಪ್ಪಲು ನುಗ್ಗುತ್ತಿದ್ದ ಕಾವೇರಿ ನದಿ ನೀರು ತಡೆಗಟ್ಟಲು ನಾನು ಸಚಿವನಾದ ಬಳಿಕ ಸಣ್ಣ ನೀರಾವರಿ ಇಲಾಖೆಯಿಂದ 10 ಕೋಟಿ ರು. ಹಣ ಬಿಡುಗಡೆ ಮಾಡಿ ತಡೆಗೋಡೆ ನಿರ್ಮಾಣಮಾಡಿಕೊಟ್ಟೆ. ಗ್ರಾಮದ ಶ್ರೀವಿರೂಪಾಕ್ಷ ದೇವಸ್ಥಾನವನ್ನು ಗ್ರಾಮಸ್ಥರ ಮನವಿಯ ಮೇರೆಗೆ ಕಲ್ಲಿನಲ್ಲಿ ನಿರ್ಮಾಣ ಮಾಡಲು ಕ್ರಮವಹಿಸಿದ್ದೇನೆ ಎಂದರು.

2006ರಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಪಟ್ಟಣಕ್ಕೆ ಯುಜಿಡಿ ಮಂಜೂರು ಮಾಡಿಸಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಮುಂದಾದಾಗ ರೈತರಿಗೆ ಅಧಿಕ ಪರಿಹಾರ ನೀಡುವಂತೆ ರೈತ ಸಂಘದ ಕೆ.ಎಸ್‌.ಪುಟ್ಟಣ್ಣಯ್ಯ ತಡೆಹಿಡಿದರು. ಆ ನಂತರ ಕೆ.ಎಸ್‌.ಪುಟ್ಟಣ್ಣಯ್ಯ ಅವರೇ ಶಾಸಕರಾದರು ಅಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಪುಟ್ಟಣ್ಣಯ್ಯ ಅವರ ಮಾತು ಚೆನ್ನಾಗಿ ನಡೆಯುತ್ತಿತ್ತು. ಆದರೂ ಸಹ ಪುಟ್ಟಣ್ಣಯ್ಯ ಅವರು ರೈತರಿಗೆ ಕನಿಷ್ಠ 50 ಲಕ್ಷ ರು. ಪರಿಹಾರ ಕೊಡಿಸಲು ಸಾಧ್ಯವಾಗಲಿಲ್ಲ. 2018ರಲ್ಲಿ ನಾನು ಸಚಿವನಾದ ಬಳಿಕ ಯುಜಿಡಿಗೆ ಜಮೀನು ನೀಡಿರುವ ರೈತರ 5 ಎಕರೆ 26 ಗುಂಟೆ ಜಮೀನಿಗೆ ಎಕರೆ 4 ಕೋಟಿ ರು. ಪರಿಹಾರ ಹಣ ಮಂಜೂರು ಮಾಡಿಸಿದ್ದೇನೆ. ಅಲ್ಲದೇ, ಯುಜಿಡಿ ಕೆಲಸವನ್ನು ಹೊಸ ಟೆಕ್ನಾಲಜಿಯ ಮೂಲಕ ನಡೆಸಲು 23.86 ಲಕ್ಷ ರು. ಅನುದಾನ ಮಂಜೂರು ಮಾಡಿಸಿದ್ದೇನೆ. ಕೋವಿಡ್‌ ಸಂದರ್ಭದಲ್ಲಿ ಜನರ ಮಧ್ಯೆ ನಿಂತು ಜನರ ಕೆಲಸ ಮಾಡಿ ಕಷ್ಟಕಾರ್ಪಣ್ಯಗಳನ್ನು ಆಲಿಸುವ ಕೆಲಸ ಮಾಡಿದ್ದೇನೆ ಎಂದರು.

ಸಭೆ-ಸಮಾರಂಭಗಳನ್ನು ಇಲ್ಲಿಗೆ ಸ್ಥಗಿತಗೊಳಿಸೋಣ, ಚುನಾವಣೆಗೆ ನಾಮಪತ್ರಸಲ್ಲಿಸುವ ದಿನದೊಂದ ಬಿಟ್ಟರೆ ಉಳಿದಂತೆ ಪಕ್ಷದ ಎಲ್ಲಾ ಕಾರ‍್ಯರ್ತರು ತಮ್ಮ ತಮ್ಮ ಗ್ರಾಮಗಳಲ್ಲಿ ಇದ್ದು ಕೊಂಡು ಪಕ್ಷವನ್ನು ಸಂಘಟನೆ ಮಾಡಿ ಚುನಾವಣೆಗೆ ಸಜ್ಜಾಗಿ. ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್‌ ಪಕ್ಷದ ಸಾಮರ್ಥ್ಯವನ್ನು ತೋರ್ಪಡಿಸೋಣ ಎಂದರು.

ಬೂಟಾಟಿಕೆ ರಾಜಕೀಯ ಮಾಡುತ್ತಿಲ್ಲ:

ನಾನು ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಲು ಚುನಾವಣಾ ಕ್ಷೇತ್ರಕ್ಕೆ ಬಂದಿದ್ದೇನೆ ಹೊರತು ಬೂಟಾಟಿಕೆ ರಾಜಕೀಯ ಮಾಡೋದಿಕಲ್ಲ. ರೈತಸಂಘದ ಕೆಂಪೂಗೌಡರು ಹಗುರವಾಗಿ ಮಾತನಾಡುತ್ತಿದ್ದಾರೆ. ಬರೀ ಮಾತಿನಿಂದ ದೊಡ್ಡ ಲೀಡರ್‌ ಆಗುತ್ತೇನೆ ಎಂಬುದಾಗಿ ಅಂದುಕೊಂಡಿದ್ದರೆ ಅದು ಭ್ರಮೆಯಷ್ಟೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಎಷ್ಟುಕ್ರಷರ್‌ಗಳಿದ್ದವು. ಪುಟ್ಟಣ್ಣಯ್ಯ ಅವರು ಶಾಸಕರಾದ ಬಳಿಕ ಎಷ್ಟುಕ್ರಷರ್‌ಗಳಾದವು ಎಂಬುದನ್ನು ದಾಖಲೆ ಸಹಿತ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಕ್ಯಾತನಹಳ್ಳಿ, ಅರಳಕುಪ್ಪೆ, ಹಾರೋಹಳ್ಳಿ ಗ್ರಾಮದ ವಿವಿಧ ಮುಖಂಡರು ರೈತಸಂಘವನ್ನು ತೊರೆದು ಜೆಡಿಎಸ್‌ ಸೇರ್ಪಡೆಗೊಂಡರು. ಇದಕ್ಕೂ ಮುನ್ನ ಶಾಸಕ ಸಿ.ಎಸ್‌.ಪುಟ್ಟರಾಜು ಅವರನ್ನು ಜೆಡಿಎಸ್‌ ಪಕ್ಷದ ಎಲ್ಲಾ ಮುಖಂಡರು ಬೃಹತ್‌ ಹಣ್ಣಿನ ಹಾರಹಾಕುವ ಅದ್ದೂರಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದರು.

ಸಭೆಯಲ್ಲಿ ಜೆಡಿಎಸ್‌ ತಾಲೂಕು ಅಧ್ಯಕ್ಷ ಎಸ್‌.ಎ.ಮಲ್ಲೇಶ್‌, ಜಿಪಂ ಮಾಜಿ ಸದಸ್ಯ ಸಿ.ಅಶೋಕ್‌, ಯುವ ನಾಯಕ ಸಿ.ಪಿ.ಶಿವರಾಜು, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಎಂ.ಸಿ.ಯಶವಂತ್‌ಕುಮಾರ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಗುರುಸ್ವಾಮಿ, ಚಲುವರಾಜು, ಟಿಎಪಿಸಿಎಂಎಸ್‌ ಅಧ್ಯಕ್ಷ ಡಿ.ಶ್ರೀನಿವಾಸ್‌, ಪುರಸಭೆ ಅಧ್ಯಕ್ಷೆ ಅರ್ಚನಾ ಚಂದ್ರು, ಸದಸ್ಯ ಕೃಷ್ಣ, ತಾಪಂ ಮಾಜಿ ಸದಸ್ಯ ವಿ.ಎಸ್‌.ನಿಂಗೇಗೌಡ, ಉದ್ಯಮಿ ಹುಲ್ಕೆರೆಕೊಪ್ಪಲು ಮಧುಸೂದನ್‌, ಅಕ್ಷಯ್‌, ಮನ್‌ಮುಲ್‌ ಮಾಜಿ ಅಧ್ಯಕ್ಷ ವೈರಮುಡಿಗೌಡ, ಗವೀಗೌಡ, ದ್ಯಾವಪ್ಪ ಲಿಂಗರಾಜು(ಗುಣ), ಚನ್ನೇಗೌಡ, ಮನು, ಮಹದೇವು, ಸಮಿಯುಲ್ಲಾ, ಗ್ರಾಪಂ ಅಧ್ಯಕ್ಷೆ ಶ್ವೇತ, ಸದಸ್ಯೆ ಸಿಂಧೂ ಸೇರಿದಂತೆ ಹಲವರು ಹಾಜರಿದ್ದರು.