ಬೀದರ್: ಮಳೆಯಲ್ಲೇ ರಸ್ತೆ ಗುಂಡಿ ಮುಚ್ಚಿದ ಬಾಲಕ, ಸಾರ್ವಜನಿಕರಿಂದ ಶ್ಲಾಘನೆ
7 ವರ್ಷದ ಬಾಲಕನ ಕಳಕಳಿಗೆ ಸಾರ್ವಜನಿಕರಿಂದ ಶ್ಲಾಘನೆ| ಚರಂಡಿ ಸ್ವಚ್ಛಗೊಳಿಸಿ ಗುಂಡಿ ಮುಚ್ಚಿದ ಬಾಲಕ|ಬಾಲಕ ಮಾಡಿದ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ| ಚರಂಡಿ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿದ ಬಾಲಕ|
ಬೀದರ್(ಆ.22): ಸುರಿಯುತ್ತಿರುವ ಮಳೆಗೆ ರಸ್ತೆಗಳು ತನ್ನ ನಿಜ ಬಣ್ಣ ಬಯಲು ಮಾಡಿ, ಜನರ ಸಂಚಾರಕ್ಕೆ ಸಂಚಕಾರವಾದರೂ ಇವುಗಳತ್ತ ಕ್ಯಾರೆ ಎನ್ನದ ನಗರಸಭೆಯ ನಿರ್ಲಕ್ಷ್ಯವನ್ನು ಬಯಲು ಮಾಡಿದೆ. ಇದರ ಬನ್ನಲ್ಲೆ 7 ವರ್ಷದ ಬಾಲಕನೊಬ್ಬ ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಸಾಮಾಜಿಕ ಕಳಕಳಿ ಮೆರೆದರೆ, ಇದು ಆಡಳಿತ ವರ್ಗಕ್ಕೆ ಪರೋಕ್ಷ ಛೀಮಾರಿ ಹಾಕುವಂತಿತ್ತು.
ಜಿಲ್ಲೆಯಾದ್ಯಂತ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳೆಲ್ಲವೂ ಜಲಾವೃತವಾಗಿ ರಸ್ತೆ ಮಧ್ಯ ಬಿದ್ದ ಗುಂಡಿಗಳಲ್ಲಿ ಬೈಕ್ ಸವಾರರು ಅಪಘಾತಕ್ಕೀಡಾಗುತ್ತಿದ್ದರು. ಈ ಸಮಸ್ಯೆ ಅರಿತ 7 ವರ್ಷದ ಬಾಲಕ ಕಂಕರ್ ಹಾಕಿ ಗುಂಡಿಗಳನ್ನು ಮುಚ್ಚಿದ ಸಾಮಾಜಿಕ ಕಳಕಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಸವಕಲ್ಯಾಣ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೇಲೆ ಪೋಸ್ಟ್ ಮ್ಯಾನ್ ಹಲ್ಲೆ
ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ:
ನಗರದ ಅಶೋಕಾ ಹೊಟೇಲ್‌ನಿಂದ ಮೈಲೂರು ಕ್ರಾಸ್‌ಗೆ ಹೋಗುವ ದಾರಿ ಮಧ್ಯ ರೈಲ್ವೆ ಸೇತುವೆ ಕೆಳ ಭಾಗದಲ್ಲಿ ಮಳೆ ನೀರು ನಿಂತು ಹೊಂಡದಂತೆ ನಿರ್ಮಾಣವಾಗಿತ್ತು. ಕಳೆದ ವರ್ಷವಷ್ಟೇ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಅರೆಬರೆ ರಿಪೇರಿ ಮಾಡಿದ್ದ ಚರಂಡಿ ಹಾಳಾಗಿದ್ದು, ಜನರ ಪ್ರಾಣ ಸಂಕಟಕ್ಕೆ ಕಾರಣವಾಗಿದೆ. ಇದೆಲ್ಲ ನಗರಸಭೆಯ ಗಮನಕ್ಕೆ ಇದ್ದರೂ, ಈ ರಸ್ತೆಯ ಹೊಣೆ ಲೋಕೋಪಯೋಗಿ ಇಲಾಖೆಯದ್ದು ಎಂದು ಕೈಚೆಲ್ಲುವ ಮೂಲಕ ನಿರ್ಲಕ್ಷ್ಯ ಧೋರಣೆಯನ್ನೇ ಮುಂದುವರಿಸಿದೆ.
ಚರಂಡಿ ಸ್ವಚ್ಛಗೊಳಿಸಿ, ಗುಂಡಿ ಮುಚ್ಚಿದ ಬಾಲಕ:
ಇಲ್ಲಿನ ಸಮಸ್ಯೆಯನ್ನು ಅರಿತ ಬಾಲಕ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದು ವಿಶೇಷ. ಇದೇ ರಸ್ತೆಯಿಂದ ಕಾಲ್ನಡಿಗೆಯಲ್ಲಿ ಮನೆಗೆ ಹೋಗುತ್ತಿದ್ದ ಬಾಲಕ, ಬೈಕ್ ಸವಾರರು ಈ ಮಾರ್ಗದಲ್ಲಿ ಸಂಚರಿಸಲು ಸಂಕಷ್ಟ ನೋಡಿ, ಚರಂಡಿ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾನೆ. ನಂತರ ಜಿಟಿ ಜಿಟಿ ಮಳೆಯಲ್ಲಿಯೇ ಗುಂಡಿ ಪಕ್ಕದಲ್ಲೇ ಇದ್ದ ಜಲ್ಲಿಕಲ್ಲು ಹಾಗೂ ಮರಳನ್ನು ಹಾಕಿ ಗುಂಡಿಯನ್ನು ಮುಚ್ಚಿ ಹಾಕಿ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಟ್ಟಿದ್ದಾನೆ.
ಈ ಬಾಲಕ ಮಾಡಿದ ಕಾರ್ಯ ನಿಧಾನವಾಗಿ ಜಿಲ್ಲೆಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ರಸ್ತೆ ಕಾಮಗಾರಿಯನ್ನು ಅಧಿಕಾರಿಗಳು ಮಾಡಿಸ್ತಾರೆ ನೀನ್ಯಾಕೆ ಮಾಡ್ತಿಯಾ ಅಂದ್ರೆ, ಬೈಕ್ ಸವಾರರು ಬೀಳುತ್ತಿದ್ದಾರೆ. ಅದಕ್ಕಾಗಿ ಹೀಗೆ ಮಾಡಿದೆ ಎನ್ನುವ ಮೂಲಕ ಬಾಲಕನ ಸಮಾಜಮುಖಿ ಚಿಂತನೆಗೆ ಭೇಷ್ ಹೇಳಿದ್ದಾರೆ.