ಬಾಗಲಕೋಟೆ(ಜು.26): ಆರೋಗ್ಯ ಇಲಾಖೆ ಎಡವಟ್ಟಿಗೆ ಕೊರೋನಾ ವಾರಿಯರರ್ಸ್‌ಗಳಾದ ಆಶಾ ಕಾರ್ಯಕರ್ತೆಯರು ಹೈರಾಣಾದ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಹೌದು, ಮಹಾಮಾರಿ ಕೊರೋನಾ ವೈರಸ್‌ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಗ್ರಾಮಕ್ಕೆ ಬಂದ ಐವರು ಆಶಾ ಕಾರ್ಯಕರ್ತೆಯರು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. 

ಏನಿದು ಪ್ರಕರಣ..? 

ಮುಧೋಳ ತಾಲೂಕಿನ ಯಡಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸೋಂಕಿತನ ದ್ವಿತೀಯ ಸಂಪರ್ಕಿತರೆಂದು ಐವರು ಆಶಾ ಕಾರ್ಯಕರ್ತೆಯರನ್ನ ಹೋಂ ಕ್ವಾರಂಟೈನ್‌ನಲ್ಲಿಡಲಾಗಿತ್ತು.

ಬಾಗಲಕೋಟೆ: ಕೊರೋನಾ ರೋಗಿಗಳಿಗೆ ಹಳಸಿದ ಆಹಾರ ನೀಡಿದ್ರಾ..? 

ಜುಲೈ 19ರಂದು ಗಂಟಲು ದ್ರವ ಪರೀಕ್ಷೆಯಲ್ಲಿ ಆಶಾ ಕಾರ್ಯಕರ್ತೆಯರ ವರದಿ ನೆಗಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಹೇಳಿದ್ದರು. ಆದರೆ, ಜುಲೈ 22ರಂದು ಪಾಸಿಟಿವ್ ಬಂದಿದೆ ಎಂದು ಐವರು ಆಶಾ ಕಾರ್ಯಕರ್ತೆಯರನ್ನ ಕೋವಿಡ್ ಕೇರ್ ಸೆಂಟರ್‌ಗೆ ದಾಖಲ ಮಾಡಲಾಗಿತ್ತು. ‌ಮತ್ತೆ ಜುಲೈ 25ರಂದು ನೆಗಟಿವ್  ಎಂದು ಐವರೂ ಆಶಾ ಕಾರ್ಯಕರ್ತೆಯರನ್ನ ಡಿಸ್ಚಾರ್ಜ್ ಮಾಡಲಾಗಿದೆ. 

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಗ್ರಾಮಕ್ಕೆ ಬಂದ ವೇಳೆ ಐವರು ಕೊರೊನಾ ವಾರಿಯರ್ಸ್‌ಗೆ ಗ್ರಾಮಸ್ತರು ದಿಗ್ಬಂಧನ ಹೇರಿದ್ದಾರೆ. ಇಷ್ಟು ಬೇಗ ಹೇಗೆ ಗುಣಮುಖರಾದಿರಿ ಜೊತೆಗೆ ಒಮ್ಮೆ ರಿಪೋರ್ಟ್ ನೆಗಟಿವ್, ಮತ್ತೊಮ್ಮೆ ಪಾಸಿಟಿವ್, ಇದೀಗ ನೆಗಟಿವ್ ಬಂದಿದೆ ಎಂದು ಆಶಾ ಕಾರ್ಯಕರ್ತೆಯರಿಗೆ ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ.  ನೆಗಟಿವ್ ರಿಪೋರ್ಟ್ ತೆಗೆದುಕೊಂಡು ಊರೊಳಗೆ ಬನ್ನಿ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಇದರಿಂದ ಆಶಾ ಕಾರ್ಯಕರ್ತೆಯರು ಅಕ್ಷರಶಃ ಕಂಗಾಲಾಗಿ ಹೋಗಿದ್ದರು.  ಕೊನೆಗೆ ಗ್ರಾಮಸ್ಥರು ಆರೋಗ್ಯ ಇಲಾಖೆ ಅಧಿಕಾರಿಗಳ ಸಮಜಾಯಿಷಿಯಿಂದ ಆಶಾ ಕಾರ್ಯಕರ್ತೆಯರನ್ನ ನಿನ್ನೆ(ಶನಿವಾರ) ರಾತ್ರಿ ಊರೊಳಗೆ ಬಿಟ್ಟುಕೊಂಡಿದ್ದಾರೆ.