Uttara Kannada: ಹೊನ್ನಾವರದಲ್ಲಿ ಚಿರತೆ ಕಾಟ: ಆತಂಕದಲ್ಲಿ ಜನರು
ಸಂಜೆಯಾದರೆ ಸಾಕು ಆ ಗ್ರಾಮಗಳ ಜನರು ಮನೆಗೆ ಬಾಗಿಲು ಹಾಕಿಕೊಳ್ಳುತ್ತಾರೆ. ದಿನದ ಹೊತ್ತಿನಲ್ಲೂ ಒಬ್ಬೊಬ್ಬರೇ ಓಡಾಡಲು ಸಾಕಷ್ಟು ಹೆದರಿಕೊಳ್ಳುತ್ತಿದ್ದಾರೆ. ಮಕ್ಕಳಂತೂ ಶಾಲೆಗೆ ಹೋಗಲು ಕೂಡಾ ಹಿಂಜರಿಯುತ್ತಿದ್ದಾರೆ.
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಹೊನ್ನಾವರ (ಡಿ.15): ಸಂಜೆಯಾದರೆ ಸಾಕು ಆ ಗ್ರಾಮಗಳ ಜನರು ಮನೆಗೆ ಬಾಗಿಲು ಹಾಕಿಕೊಳ್ಳುತ್ತಾರೆ. ದಿನದ ಹೊತ್ತಿನಲ್ಲೂ ಒಬ್ಬೊಬ್ಬರೇ ಓಡಾಡಲು ಸಾಕಷ್ಟು ಹೆದರಿಕೊಳ್ಳುತ್ತಿದ್ದಾರೆ. ಮಕ್ಕಳಂತೂ ಶಾಲೆಗೆ ಹೋಗಲು ಕೂಡಾ ಹಿಂಜರಿಯುತ್ತಿದ್ದಾರೆ. ಕತ್ತಲಾದ್ರಂತೂ ನಮ್ಮ ಜಾನುವಾರುಗಳು, ಸಾಕುಪ್ರಾಣಿಗಳು ಸುರಕ್ಷಿತವಾಗಿದ್ರೆ ಸಾಕಪ್ಪಾ ಎನ್ನುವ ಇಲ್ಲಿನ ಜನರು ದಿನರಾತ್ರಿ ಜೀವ ಕೈಯಲ್ಲಿ ಹಿಡಿದುಕೊಂಡೇ ದಿನದೂಡುತ್ತಿದ್ದಾರೆ. ಅಷ್ಟಕ್ಕೂ ಅಲ್ಲಿನ ಜನರು ಭಯ ಪಡ್ತಿರೋದಾದ್ರೂ ಏನಕ್ಕೆ..? ಜನರ ನೆಮ್ಮದಿ ಹಾಳು ಮಾಡಿರೋದಾದ್ರೂ ಯಾರು ಅಂತೀರಾ... ಈ ಸ್ಟೋರಿ ನೋಡಿ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಲವು ಗ್ರಾಮಗಳ ಜನರು ಚಿರತೆಗಳ ಕಾಟದಿಂದಾಗಿ ಜೀವಭಯದಿಂದಲೇ ದಿನದೂಡುವಂತಾಗಿದೆ. ಮೊನ್ನೆಯಷ್ಟೇ ಹೊನ್ನಾವರ ತಾಲೂಕಿನ ಹೊಸಕುಳಿ ಪಂಚಾಯತ್‌ನ ಗೋಳಿಬೈಲ್ ನಿವಾಸಿ ಗಣಪತಿ ಪರಮಯ್ಯ ಹೆಗಡೆ ಎಂಬವರ ಮನೆಯ ಅಂಗಣಕ್ಕೆ ಬೆಳ್ಳಂಬೆಳಗ್ಗೆ 4:50ರ ಅಂದಾಜಿಗೆ ಚಿರತೆ ಎಂಟ್ರಿ ಕೊಟ್ಟಿತ್ತು. ಕಟ್ಟಿ ಹಾಕಿದ್ದ ನಾಯಿಯನ್ನು ಎಳೆದೊಯ್ಯಲು ವಿಫಲ ಯತ್ನ ನಡೆಸಿ ಬಳಿಕ ಪರಾರಿಯಾಗಿತ್ತು. ಆ ಬಳಿಕ ಮತ್ತೆ ಸಾಲ್ಕೋಡ್ ಪಂಚಾಯತ್‌ನ ಕೆರೆಮನೆ ಬಸ್ತಿಹೊಂಡದ ನಿವಾಸಿಗಳಾದ ರಾಮ ನಾಯ್ಕ್ ಹಾಗೂ ನಾರಾಯಣ ನಾಯ್ಕ್ ಅವರಿಗೆ ಸೇರಿದ್ದ 2 ಕರುವನ್ನು ಆಹುತಿ ಪಡೆದ ಚಿರತೆ, ಕರುವಿನ ಹೊಟ್ಟೆ, ಕುತ್ತಿಗೆ ಹಾಗೂ ಕಿವಿಯ ಭಾಗವನ್ನು ತಿಂದಿತ್ತು.
Karwar: ಮೀನುಗಾರರ ಜೀವನವನ್ನು ಅತಂತ್ರಗೊಳಿಸಿದ ಮ್ಯಾಂಡೌಸ್ ಚಂಡಮಾರುತ
ಹಮ್ಮುವಾಡಿಯಲ್ಲಿ 2 ನಾಯಿ, ಜನಸಾಲೆಯಲ್ಲಿ 3 ಆಕಳುಗಳನ್ನು ಬಲಿ ಪಡೆದಿರುವ ಚಿರತೆ ಈ ಹಿಂದೆ ಸಂತೆಗುಳಿಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರ ಮೇಲೆ ದಾಳಿ ಕೂಡಾ ನಡೆಸಿತ್ತು. ಪ್ರತೀ ಬಾರಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆಗಳಿಂದ ಜನರಂತೂ ಆತಂಕಿತರಾಗಿದ್ದು, ಓಡಾಡಲು ಕೂಡಾ ಹೆದರಿಕೊಳ್ಳುತ್ತಿದ್ದಾರೆ. ತಾಲೂಕಿನ ಜನರ ದೂರಿನ ಹಿನ್ನೆಲೆ ಚಿರತೆಯನ್ನು ಹಿಡಿಯಲು ಮುಂದಾಗಿರುವ ಅರಣ್ಯ ಇಲಾಖೆ ನವಿಲುಗೋಣ ಹಾಗೂ ಗೋಳಿಬೈಲ್‌ನಲ್ಲಿ ಬೋನುಗಳನ್ನು ಇರಿಸಿದೆ. 2 ವರ್ಷಗಳ ಹಿಂದೆಯೂ ಅರಣ್ಯಾಧಿಕಾರಿಗಳು ಚಿರತೆಗಳನ್ನು ಹಿಡಿಯಲು ಇದೇ ರೀತಿ ಬೋನುಗಳನ್ನಿರಿಸಿದ್ರು, ಆದ್ರೆ ಯಾವುದೇ ಪ್ರಯೋಜನವಾಗಿಲ್ಲ.
2 ತಿಂಗಳ ಹಿಂದೆ ಸ್ಥಳೀಯ ಬಾವಿಯೊಂದಕ್ಕೆ ಚಿರತೆ ಬಿದ್ದಿದ್ದಾಗಲೂ ಅದನ್ನು ಸೆರೆ ಹಿಡಿಯಲಾಗದೆ ಅರಣ್ಯ ಇಲಾಖೆ ವಿಫಲವಾಗಿತ್ತು. ಬಳಿಕ ಚಿರತೆ ಎದ್ದೆನೋ ಬಿದ್ದೆನೋ ಅಂತಾ ಅರಣ್ಯದತ್ತ ಓಡಿ ಹೋಗಿತ್ತು. ಈ ಬಾರಿ ಮತ್ತೆ ಬೋನನ್ನಿರಿಸಿದ್ದು, ಕೇವಲ ನಾಮ್ ಕೇ ವಾಸ್ತೆ ಚಿರತೆಗಳನ್ನು ಹಿಡಿಯುವ ಪ್ರಯತ್ನ ನಡೆಸುತ್ತಿದ್ದಾರೆ. ಮಾನವೀಯತೆ ಮರೆತಿರುವ ಅಧಿಕಾರಿಗಳು ಬೀದಿಬದಿಯ ದೊಡ್ಡ ನಾಯಿಯನ್ನು ಇರಿಸುವ ಬದಲು ಅದರೊಳಗೆ ಪುಟ್ಟ ನಾಯಿ ಮರಿಯನ್ನಿಟ್ಟಿದ್ದಾರೆ. ಅದಕ್ಕೆ ಸರಿಯಾಗಿ ಆಹಾರ, ನೀರು ಹಾಕದಿರುವ ಕಾರಣ ದಿನ ರಾತ್ರಿ ಪುಟ್ಟ ನಾಯಿ ಮರಿ ಗೊಬ್ಬೆ ಹಾಕುತ್ತಲೇ ಇದೆ. ಚಿರತೆಯನ್ನು ಹಿಡಿಯುವ ಯತ್ನದಲ್ಲಿ ಪುಟ್ಟ ನಾಯಿ ಮರಿಯನ್ನು ಬೋನಿನೊಳಗೆ ಹಾಕಿ ಅಮಾನವೀಯತೆ ತೋರುತ್ತಿರುವ ಅಧಿಕಾರಿಗಳಿಗೆ ಸ್ಥಳೀಯ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಇನ್ನು ಚಿರತೆ ಕಾಣಿಸಿಕೊಂಡ ಪ್ರದೇಶದ ಬಳಿ ಸುಮಾರು 20 ಮನೆಗಳಿದ್ದು ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸಹ ವಾಸವಾಗಿದ್ದಾರೆ. ಪ್ರತಿನಿತ್ಯ ಶಾಲೆ-ಕಾಲೇಜುಗಳಿಗೆ ಇಲ್ಲಿನ ಸಾಕಷ್ಟು ಮಂದಿ ವಿದ್ಯಾರ್ಥಿಗಳು ಬೆಳಿಗ್ಗೆ ಹಾಗೂ ಸಂಜೆ ಸಾಕಷ್ಟು ದೂರದವರೆಗೆ ನಡೆದುಕೊಂಡೇ ಸಾಗಬೇಕಿದೆ. ಆದರೆ, ಇದೀಗ ಜನರು ಓಡಾಡುವ, ನೆಲೆಸುವ ಸ್ಥಳಗಳಲ್ಲೇ ಚಿರತೆಗಳು ಪ್ರತ್ಯಕ್ಷವಾಗಿದ್ದು, ವಿದ್ಯಾರ್ಥಿಗಳಂತೂ ಶಾಲೆ-ಕಾಲೇಜಿಗೆ ತೆರಳಲು ಹಿಂಜರಿಯುತ್ತಿದ್ದಾರೆ. ಇದರೊಂದಿಗೆ ಪೋಷಕರು ಕೂಡಾ ಆತಂಕಿತರಾಗಿದ್ದು, ಯಾವ ಧೈರ್ಯದಲ್ಲಿ ಮಕ್ಕಳನ್ನು ಶಾಲೆ ಕಾಲೇಜುಗಳಿಗೆ ಕಳುಹಿಸುವುದು ಎಂಬುದು ಇವರ ಮುಂದಿರುವ ಪ್ರಶ್ನೆ. ಇಲ್ಲಿ ಮಕ್ಕಳು ಮಾತ್ರವಲ್ಲದೇ, ದಿನಗೂಲಿಗೆ ತೆರಳುವ ಯುವಕರು, ಹಿರಿಯರು ಕೂಡಾ ಒಬ್ಬೊಬ್ಬರೇ ಸಾಗಲು ಹೆದರುವಂತಾಗಿದೆ.
ಅರಣ್ಯ ಸಿಬ್ಬಂದಿಗೆ ವನ್ಯಜೀವಿ ನಿರ್ವಹಣೆ ತರಬೇತಿಯೇ ಇಲ್ಲ
ಈ ಕಾರಣದಿಂದ ಇಲ್ಲಿನ ಜನರು ಸಂಜೆಯಾದಂತೇ ಮನೆಗಳಿಗೆ ಬಾಗಿಲು ಹಾಕುತ್ತಿದ್ದು, ರಾತ್ರಿ ಕಳೆದು ಬೆಳಗಾಗುವವರೆಗೆ ಚಿರತೆಗಳ ದಾಳಿಯಿಂದ ತಮ್ಮ ಜಾನುವಾರುಗಳು, ಸಾಕುಪ್ರಾಣಿಗಳು ಸುರಕ್ಷಿತವಾಗಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಗುಡ್ಡ, ಅರಣ್ಯ ಪ್ರದೇಶದಲ್ಲಿ ಓಡಾಡಿಕೊಂಡಿದ್ದ ಚಿರತೆ ಇದೀಗ ಜನವಸತಿ ಪ್ರದೇಶದಲ್ಲೇ ಕಾಣಿಸಿಕೊಳ್ಳುತ್ತಿರುವುದು ಗ್ರಾಮಸ್ಥರಲ್ಲಿ ಸಾಕಷ್ಟು ಭಯವುಂಟು ಮಾಡಿದ್ದು, ಆದಷ್ಟು ಬೇಗ ಚಿರತೆಗಳನ್ಜು ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಕಳೆದ ಎರಡು ಮೂರು ತಿಂಗಳಿನಿಂದ ಹೊನ್ನಾವರ ತಾಲೂಕಿನ ಅಲ್ಲಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಸಾಕಷ್ಟು ಜಾನುವಾರುಗಳನ್ನು ಬೇಟೆಯಾಡಿವೆ. ಹೀಗಾಗಿ ಹೊನ್ನಾವರ ತಾಲ್ಲೂಕಿನ ಜನರಲ್ಲಿ ಆತಂಕ ಮನೆಮಾಡಿದ್ದು, ಜನರಿಗೆ ಭರವಸೆ ನೀಡುವ ಅರಣ್ಯ ಇಲಾಖೆ ಚಿರತೆಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗುತ್ತಾ..? ಅಥವಾ ನಾಮ್ ಕೇ ವಾಸ್ತೆಯ ಪ್ರಯತ್ನದೊಂದಿಗೆ ಮತ್ತೆ ವಿಫಲತೆ ಕಾಣುತ್ತಾ..? ಅನ್ನೋದನ್ನು ಕಾದುನೋಡಬೇಕಷ್ಟೇ.