ಅರಣ್ಯ ಸಿಬ್ಬಂದಿಗೆ ವನ್ಯಜೀವಿ ನಿರ್ವಹಣೆ ತರಬೇತಿಯೇ ಇಲ್ಲ
ರಾಜ್ಯ ಅರಣ್ಯ ಇಲಾಖೆಯಲ್ಲಿ ಕೆಳಹಂತದ ಅರಣ್ಯ ರಕ್ಷಕ, ವೀಕ್ಷಕರಿಂದ ಹಿಡಿದು ವಲಯ, ವಿಭಾಗೀಯ ಅಧಿಕಾರಿಗಳ ಹಂತದವರೆಗೂ ಬಹುತೇಕ ಸಿಬ್ಬಂದಿಗಳು ವನ್ಯಜೀವಿ ರಕ್ಷಣೆ ಮತ್ತು ವನ್ಯಜೀವಿ ಮಾನವ ಸಂಘರ್ಷ ನಿರ್ವಹಣೆ ಕುರಿತು ಯಾವುದೇ ಪ್ರಾಯೋಗಿಕ ತರಬೇತಿಯನ್ನೂ ಪಡೆದಿಲ್ಲ!
ಜಯಪ್ರಕಾಶ್ ಬಿರಾದಾರ್
ಬೆಂಗಳೂರು (ಡಿ.10): ರಾಜ್ಯ ಅರಣ್ಯ ಇಲಾಖೆಯಲ್ಲಿ ಕೆಳಹಂತದ ಅರಣ್ಯ ರಕ್ಷಕ, ವೀಕ್ಷಕರಿಂದ ಹಿಡಿದು ವಲಯ, ವಿಭಾಗೀಯ ಅಧಿಕಾರಿಗಳ ಹಂತದವರೆಗೂ ಬಹುತೇಕ ಸಿಬ್ಬಂದಿಗಳು ವನ್ಯಜೀವಿ ರಕ್ಷಣೆ ಮತ್ತು ವನ್ಯಜೀವಿ ಮಾನವ ಸಂಘರ್ಷ ನಿರ್ವಹಣೆ ಕುರಿತು ಯಾವುದೇ ಪ್ರಾಯೋಗಿಕ ತರಬೇತಿಯನ್ನೂ ಪಡೆದಿಲ್ಲ! ಇದರಿಂದಾಗಿ ಕಾಡಿನಿಂದ ನಾಡಿಗೆ ಬರುತ್ತಿರುವ ಆನೆ, ಚಿರತೆ ಸೇರಿದಂತೆ ವನ್ಯಜೀವಿಗಳ ರಕ್ಷಣೆ ಕಾರ್ಯಾಚರಣೆಗಳು ವಿಫಲವಾಗುತ್ತಿದ್ದು, ಮಾನವ ಪ್ರಾಣಿ ಸಂಘರ್ಷವು ಕೂಡಾ ಹೆಚ್ಚಳವಾಗುತ್ತಿದೆ. ಮಾತ್ರವಲ್ಲದೇ ಅರಣ್ಯ ಸಿಬ್ಬಂದಿ ತಮ್ಮ ಜೀವ ಕೈಯಲ್ಲಿ ಹಿಡಿದು ಕಾರ್ಯಾಚರಣೆ ಮಾಡುತ್ತಿದ್ದಾರೆ.
ಅರಣ್ಯ ಒತ್ತುವರಿ, ನಾಶದಿಂದ ವನ್ಯಜೀವಿ ಆವಾಸ ಸ್ಥಾನಕ್ಕೆ ದಕ್ಕೆಯಾಗಿ ಇತ್ತಿಚೆಗೆ ರಾಜ್ಯದ ಹಲವೆಡೆ ಚಿರತೆ, ಆನೆ ದಾಳಿಗಳು ಸಾಕಷ್ಟುಹೆಚ್ಚಾಗುತ್ತಿವೆ. ಬಹುತೇಕ ಸಂದರ್ಭದಲ್ಲಿ ವನ್ಯಜೀವಿ ಸೆರೆಹಿಡಿದು ಕಾಡಿಗೆ ಬಿಟ್ಟು ಬರುವುದಕ್ಕೆ ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ದಾಳಿ ಮಾಡಿದ ಪ್ರದೇಶಗಳಲ್ಲಿ ಪ್ರಾಣಿಗಳು ಪತ್ತೆಯಾಗುತ್ತಿಲ್ಲ. ಅವುಗಳ ನಿಖರ ಜಾಡು ಹಿಡಿಯಲಾಗುತ್ತಿಲ್ಲ. ಒಂದು ವೇಳೆ ಪತ್ತೆಯಾದರೂ ಸೆರೆ ಹಿಡಿಯಲಾಗುತ್ತಿಲ್ಲ. ಇದಕ್ಕೆ ಇತ್ತೀಚೆಗೆ ಬೆಳಗಾವಿ, ಹುಬ್ಬಳ್ಳಿಗಳಲ್ಲಿ ತಿಂಗಳುಗಟ್ಟಲೆ ನಡೆದ, ತುಮಕೂರು, ರಾಮನಗರ, ಬೆಂಗಳೂರಿನಲ್ಲಿ ಎರಡು ವಾರದಿಂದ ನಡೆಯುತ್ತಿರುವ ಚಿರತೆ ಸೆರೆ ಕಾರ್ಯಾಚರಣೆ ಉದಾಹರಣೆಗಳಾಗಿವೆ. ಈ ವೈಫಲ್ಯಗಳಿಗೆ ಅರಣ್ಯ ಸಿಬ್ಬಂದಿಗೆ ವನ್ಯಜೀವಿ ರಕ್ಷಣೆ ಕ್ರಮಗಳು, ಪಳಗಿಸುವ ವಿಧಾನ, ಸೆರೆ ಕಾರ್ಯಾಚರಣೆ ಕುರಿತು ತರಬೇತಿಯ ಕೊರತೆಯೇ ಕಾರಣ ಎಂದು ಸ್ವತಃ ಅರಣ್ಯ ಸಿಬ್ಬಂದಿಗಳೇ ಹೇಳುತ್ತಾರೆ.
ಚಿರತೆಗಳು ಊರಿಗೆ ನುಗ್ಗಲು ಕಲ್ಲು ಕ್ವಾರಿ, ಗಣಿ ಕಾರಣ: ಸಂಜಯ್ ಗುಬ್ಬಿ
ಪಠ್ಯದಲ್ಲಿ ಒಂದು ಚಾಪ್ಟರ್: ಅರಣ್ಯ ಇಲಾಖೆ ಮಾಹಿತಿಯಂತೆ, ಇಲಾಖೆಯ ಸೇವೆಗೆ ನೇಮಕವಾಗುವ ಎಲ್ಲಾ ಸಿಬ್ಬಂದಿಗೆ ಆರಂಭದಲ್ಲಿ ಆಯಾ ಹುದ್ದೆಗೆ ಅನುಗುಣವಾಗಿ ಎರಡು ವರ್ಷಗಳ ತರಬೇತಿ ನೀಡಲಾಗುತ್ತದೆ. ಬಳಿಕ ಲಿಖಿತ ಮತ್ತು ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಸೆಮಿಸ್ಟರ್ ಹಂತದಲ್ಲಿ 15 ವಿಷಯಗಳಿರುತ್ತವೆ. ಅದರಲ್ಲಿ ವನ್ಯಜೀವಿ ನಿರ್ವಹಣೆ ಎಂಬ ಒಂದು ವಿಷಯವಿದ್ದು, ಅದರಲ್ಲಿ ಒಂದು ಪಾಠವಾಗಿ ಮಾನವ ಪ್ರಾಣಿ ಸಂಘರ್ಷವಿದೆ. ಸಂದರ್ಭ ನಿರ್ವಹಣೆ, ಮುಂಜಾಗ್ರತಾ ಕ್ರಮ ಎಂಬ ಅಂಶಗಳನ್ನು ಬೋಧಿಸಲಾಗುತ್ತದೆ. ಬಳಿಕ ನಡೆಯುವ ಇಲಾಖೆಯ ಲಿಖಿತ ಪರೀಕ್ಷೆಯಲ್ಲಿ ಕೆಲ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದನ್ನು ಹೊರತು ಪಡಿಸಿ ಪ್ರಾಯೋಗಿಕ ತರಬೇತಿ ಅಥವಾ ಪರೀಕ್ಷೆಯಾಗಲಿ ಇಲ್ಲ.
ಕಾಡಿಗೆ ಓಡಿಸುವುದಷ್ಟೇ ಕೆಲಸ: ವನ್ಯಜೀವಿ ದಾಳಿ ನಡೆಸಿದಾಗ ಸ್ಥಳದಲ್ಲಿ ಲಭ್ಯವಿರುವ ಅನುಭವಿ ಅರಣ್ಯ ವೀಕ್ಷಕ ಅಥವಾ ರಕ್ಷಕ, ಸ್ಥಳೀಯ ಅರಣ್ಯ ನಿವಾಸಿಗಳ ನೆರವಿನಿಂದ ಪ್ರಾಣದ ಹಂಗು ತೊರೆದು ಕಾರ್ಯಚರಣೆಗಿಳಿಯುತ್ತೇವೆ. ಬಹುತೇಕರಿಗೆ ಅನುಭವ ಕೊರತೆ ಇದೆ. ಅರಿವಳಿಕೆಯಂತಹ ವೈಜ್ಞಾನಿಕ ವಿಧಾನಗಳ ಬಳಕೆ ತಿಳಿದಿಲ್ಲ. ಬಲೆ, ಪಂಜರ, ಗೂಡು, ಅರಿವಳಿಕೆ ಬಳಸುವ ಗನ್ ಸೇರಿದಂತೆ ಸೆರೆ ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಸುವ ಸಾಮಗ್ರಿಗಳ ಸೂಕ್ತ ಬಳಕೆಯೂ ಗೊತ್ತಿಲ್ಲ. ಆನೆ, ಕರಡಿ ಹಾಗೂ ಚಿರತೆಯನ್ನು ಕೇವಲ ಕಾಡಿಗೆ ಓಡಿಸುವ ಕೆಲಸ ಮಾಡುತ್ತೀದ್ದೇವೆ. ಸ್ವಯಂ ರಕ್ಷಣೆಗೂ ಅಗತ್ಯ ಪರಿಕರಗಳಿಲ್ಲ. ಜೀವದ ಹಂಗು ತೊರೆದು ಅನಿವಾರ್ಯವಾಗಿ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಹೆಸರು ಹೇಳಲಿಚ್ಛಿಸದ ಇಲಾಖೆಯ ಬೆಳಗಾವಿ ವೃತ್ತದ ವಲಯ ಸಂರಕ್ಷಣಾಧಿಕಾರಿಯೊಬ್ಬರು ತಿಳಿಸಿದರು.
ಕಲಬುರಗಿಯಲ್ಲಿ ಇಂದು ಖರ್ಗೆ ಬೃಹತ್ ಶೋ: ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಸಲ ತವರಿಗೆ
ಅರಣ್ಯ ರಕ್ಷಕ, ಅರಣ್ಯ ವೀಕ್ಷಕ, ಉಪ ವಲಯ ಮತ್ತು ವಲಯ ಸಂರಕ್ಷಣಾಧಿಕಾರಿಗಳಿಗೆ ಮಾನವ ಪ್ರಾಣಿ ಸಂಘರ್ಷ ನಿಭಾಯಿಸುವ ನಿಟ್ಟಿನಲ್ಲಿ ಪ್ರಾಯೋಗಿಕ ತರಬೇತಿ ಕಡ್ಡಾಯವಾಗಿ ನೀಡಬೇಕು. ಎರಡು ಮೂರು ವರ್ಷಕ್ಕೊಮ್ಮೆ ಪುನಶ್ಚೇತನ ತರಬೇತಿ ನೀಡಬೇಕು.
-ಸಂಜಯ್ ಗುಬ್ಬಿ, ವನ್ಯಜೀವಿ ವಿಜ್ಞಾನಿ