Asianet Suvarna News Asianet Suvarna News

Karwar: ಮೀನುಗಾರರ ಜೀವನವನ್ನು ಅತಂತ್ರಗೊಳಿಸಿದ ಮ್ಯಾಂಡೌಸ್ ಚಂಡಮಾರುತ

ಮ್ಯಾಂಡೌಸ್ ಚಂಡಮಾರುತ ರಾಜ್ಯದ ಕರಾವಳಿ ಭಾಗವನ್ನೂ ಕಾಡಲಾರಂಭಿಸಿದ್ದು, ಮೀನುಗಾರರ ಜೀವನವನ್ನು ಅತಂತ್ರಗೊಳಿಸಿದೆ. ಚಂಡಮಾರುತದಿಂದಾಗಿ ಸಮುದ್ರ‌ ಪ್ತಕ್ಷುಬ್ಧಗೊಂಡಿರುವುದರಿಂದ ಆಳ‌ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ವಿವಿಧ ರಾಜ್ಯಗಳ‌ ಹಾಗೂ ಜಿಲ್ಲೆಗಳ ಬೋಟುಗಳು ಕೂಡಾ ಇದೀಗ ಹಿಂತಿರುಗಿ ಸ್ಥಳೀಯ ಬಂದರುಗಳಲ್ಲಿ ಆಶ್ರಯ ಪಡೆಯತೊಡಗಿವೆ.

Cyclone Mandous has disrupted the lives of fishermen ar Karwar gvd
Author
First Published Dec 15, 2022, 6:43 AM IST

ಭರತ್‌ರಾಜ್‌ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ (ಡಿ.15): ಮ್ಯಾಂಡೌಸ್ ಚಂಡಮಾರುತ ರಾಜ್ಯದ ಕರಾವಳಿ ಭಾಗವನ್ನೂ ಕಾಡಲಾರಂಭಿಸಿದ್ದು, ಮೀನುಗಾರರ ಜೀವನವನ್ನು ಅತಂತ್ರಗೊಳಿಸಿದೆ. ಚಂಡಮಾರುತದಿಂದಾಗಿ ಸಮುದ್ರ‌ ಪ್ತಕ್ಷುಬ್ಧಗೊಂಡಿರುವುದರಿಂದ ಆಳ‌ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ವಿವಿಧ ರಾಜ್ಯಗಳ‌ ಹಾಗೂ ಜಿಲ್ಲೆಗಳ ಬೋಟುಗಳು ಕೂಡಾ ಇದೀಗ ಹಿಂತಿರುಗಿ ಸ್ಥಳೀಯ ಬಂದರುಗಳಲ್ಲಿ ಆಶ್ರಯ ಪಡೆಯತೊಡಗಿವೆ. ಇದರಿಂದಾಗಿ ಮೀನುಗಾರರಿಗೆ ದಿನವೊಂದಕ್ಕೆ ಕೋಟಿಗಟ್ಟಲೆ ನಷ್ಟವಾಗತೊಡಗಿದೆ. ಈ ಕುರಿತ‌ ಒಂದು ಸ್ಟೋರಿ ಇಲ್ಲಿದೆ. 

ಹೌದು! ಮ್ಯಾಂಡೌಸ್ ಚಂಡಮಾರುತದಿಂದಾಗಿ ಮೀನುಗಾರರಿಗೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ. ಕಳೆದ ಮೂರು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಸಿಡಿಲು, ಗುಡುಗು ಸಹಿತ ಮಳೆ ಕಾಣಿಸಿಕೊಳ್ಳುತ್ತಿದ್ದು, ರೈತರಿಗೆ ಹಾಗೂ ಜನಸಾಮಾನ್ಯರಿಗಂತೂ ಭಾರೀ ಸಮಸ್ಯೆಯಾಗತೊಡಗಿದೆ. ಈ ನಡುವೆ ಆಳ ಸಮುದ್ರಕ್ಕೆ ಮೀನುಗಾರಿಕೆ ತೆರಳಿದ್ದ ಹೊರ ರಾಜ್ಯ ಹಾಗೂ ಮಂಗಳೂರು, ಉಡುಪಿ ಮೀನುಗಾರರು ಹವಾಮಾನ‌ ಇಲಾಖೆಯ ಸೂಚನೆಯ ಮೇರೆಗೆ ಹಿಂತಿರುಗಿದ್ದು, ಉತ್ತರಕನ್ನಡ ಜಿಲ್ಲೆಯ ವಿವಿಧ ಬಂದರುಗಳಲ್ಲಿ ಲಂಗರು ಹಾಕಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ ತೂಫಾನ್ ಹಾಗೂ ಕೋಲ್ಡ್ ಕರೆಂಟ್ ಕಾಣಿಸಿದ್ದರಿಂದ ಮೀನುಗಾರರಿಗೆ ಭಾರೀ ಸಮಸ್ಯೆಯಾಗಿತ್ತು. 

ಮ್ಯಾಂಡಸ್‌ ಅಬ್ಬರ: ರಾಜ್ಯಾದ್ಯಂತ ಮಳೆ, ಶೀತಗಾಳಿ, 2 ಬಲಿ

ಆ ಬಳಿಕ ಮೀನುಗಾರರಿಗೆ ಸಮುದ್ರದಲ್ಲಿ ಹೇರಳವಾಗಿ ಮೀನುಗಳು ಸಿಗುತ್ತಿದ್ದದ್ದರಿಂದ ಬಂಗುಡೆ, ಬೂತಾಯಿ ಮೀನುಗಳಂತೂ ಕಡಿಮೆ‌ ವೆಚ್ಚದಲ್ಲಿ ಜನರಿಗೆ ಲಭ್ಯವಾಗುತ್ತಿತ್ತು. ಇನ್ನೇನು ಮೀನುಗಾರರು ಈ ಬಾರಿ ಲಾಭ ಕಾಣಬೇಕು ಅನ್ನುವಷ್ಟರಲ್ಲೇ ಇದೀಗ ಮತ್ತೆ ಮ್ಯಾಂಡೌಸ್ ಕಾಣಿಸಿದ್ದರಿಂದ ವಾಪಾಸ್ ಕಾರವಾರದ ಬೈತ್‌ಕೋಲಾ, ಮುದುಗಾ, ಬೆಲೆಕೇರಿ, ಅಂಕೋಲಾ, ತದಡಿ, ಹೊನ್ನಾವರ ಬಂದರಿಗೆ ಮಹಾರಾಷ್ಟ್ರ, ಕೇರಳ, ಮಲ್ಪೆ, ಮಂಗಳೂರಿನ ಬೋಟುಗಳು ಲಂಗರು ಹಾಕಿವೆ. ಕಳೆದ ಎರಡು ಮೂರು‌ ದಿನಗಳಿಂದ ಬೋಟುಗಳು ಬಂದರಿನಲ್ಲೇ ನಿಂತಿರುವುದರಿಂದ ಮೀನುಗಾರರಿಗೆ ದಿನವೊಂದಕ್ಕೆ ಕೋಟಿಗಟ್ಟಲೆ ನಷ್ಟವಾಗತೊಡಗಿದೆ. 

ಈ ಕಾರಣದಿಂದ ಸರಕಾರ ಕೊಂಚವಾದ್ರೂ ಮೀನುಗಾರರಿಗೆ ಪರಿಹಾರ ಒದಗಿಸಬೇಕೆಂದು ಮೀನುಗಾರ ಮುಖಂಡರು ಕೋರಿಕೊಂಡಿದ್ದಾರೆ. ಸರಕಾರದಿಂದ ನಾಡದೋಣಿ ಮೀನುಗಾರರಿಗೆ ಇನ್ನೂ ಸೀಮೆಎಣ್ಣೆ ಪೂರೈಕೆಯಾಗಿಲ್ಲ. ಮತ್ತೊಂದೆಡೆ ಆಳ‌ ಸಮುದ್ರಕ್ಕೆ ತೆರಳುವ ಬೋಟುಗಳಿಗೆ ಡೀಸಿಲ್ ಸಬ್ಸಿಡಿ ಕೂಡಾ ಸಮಯಕ್ಕೆ ಸರಿಯಾಗಿ ನೀಡುತ್ತಿಲ್ಲ. ಈ ಕಾರಣದಿಂದ ಮೀನುಗಾರರು ಪೆಟ್ರೋಲ್ ಮೂಲಕ ಬೋಟುಗಳನ್ನು ಓಡಿಸುತ್ತಿದ್ದಾರೆ. ಮೊದಲೇ ಸಾಲಗಳನ್ನು ಮಾಡಿಕೊಂಡು ಸಾವಿರ ಲೀಟರ್‌ಗಟ್ಟಲೇ ಇಂಧನ ಹಾಕಿಕೊಂಡು ಮೀನುಗಾರಿಕೆಗೆ ತೆರಳುವ‌ ಮೀನುಗಾರರಿಗೆ ಇದೀಗ ಮಾಂಡೌಸ್ ಚಂಡ ಮಾರುತ ದೊಡ್ಡ ಏಟು ನೀಡಿದೆ. ಬೋಟುಗಳನ್ನು ಬಂದರಿನಲ್ಲೇ ನಿಲ್ಲಿಸಬೇಕಾದ್ದರಿಂದ ಆದಾಯವಿಲ್ಲದೇ ಕೆಲಸಗಾರರಿಗೂ ದಿನ ವೇತನ ನೀಡಲು ಸಮಸ್ಯೆಯಾಗುತ್ತಿದೆ. 

ಸೈಕ್ಲೋನ್‌ ಹೊಡೆತ: ಮಕ್ಕಳ, ಹಿರಿಯರ ಅನಾರೋಗ್ಯ ಉಲ್ಬಣ

ಮೊದಲೇ ಕಾರ್ಮಿಕರ ಕೊರತೆ ಕೂಡಾ ಮೀನುಗಾರಿಕಾ ಕ್ಷೇತ್ರಕ್ಕೆ ಕಾಡುವುದರಿಂದ ಸಾಲ ಮಾಡಿಯಾದ್ರೂ ದಿನ ವೇತನ ನೀಡಿ ಬೋಟು ಮಾಲೀಕರನ್ನು ಕೆಲಸಕ್ಕೆ ಉಳಿಸಿಕೊಳ್ಳಬೇಕಿದೆ. ಈ ಎಲ್ಲಾ ಕಾರಣಗಳಿಂದ ಬೋಟು ಮಾಲೀಕರಿಗೆ ಭಾರೀ ಹೊರೆಯಾಗುತ್ತಿದ್ದು, ರೈತರಿಗೆ ಕಷ್ಟದಲ್ಲಿ ಸ್ಪಂದನೆ ನೀಡಿದಂತೆ ಸರಕಾರ ಮೀನುಗಾರರಿಗೂ ಸಹಾಯ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಮ್ಯಾಂಡೌಸ್ ಚಂಡಮಾರುತ ಮೀನುಗಾರರಿಗೆ ಭಾರೀ ಏಟು ನೀಡಿದ್ದು, ದೇಶದ ಆರ್ಥಿಕತೆಗೆ ಕೊಡುಗೆ ನೀಡುವ ಮೀನುಗಾರರು ಮತ್ತೆ ಸಮುದ್ರಕ್ಕಿಳಿಯುವವರೆಗೆ ಭಾರೀ ನಷ್ಟದಲ್ಲಿ ದಿನದೂಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ಮೀನುಗಾರರಿಗೆ ಆರ್ಥಿಕ ಸಹಾಯ ಒದಗಿಸುವ ಮೂಲಕ ಅವರಿಗೆ ಸಹಾಯದ ಹಸ್ತ ಚಾಚಬೇಕಿದೆ.

Follow Us:
Download App:
  • android
  • ios