ಬೆಂಗಳೂರಿನ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ದುರಸ್ತಿ ಕಾಮಗಾರಿಯ ಅಂತಿಮ ಹಂತದ 'ಲೋಡ್ ಟೆಸ್ಟ್' ನಡೆಸಲು ಮೇ 5 ರಿಂದ ಮೇ 8 ರವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈ ಅವಧಿಯಲ್ಲಿ ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ಸಂಚಾರಿ ಪೊಲೀಸರು ಸೂಚಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಸಂಚಾರ ವ್ಯವಸ್ಥೆಗೆ ಮಹತ್ವವಾದ ಹೆಜ್ಜೆಯಾಗಿ ಗುರುತಿಸಿಕೊಂಡಿರುವ ಪೀಣ್ಯ ಎಲಿವೇಟೆಡ್ ಫ್ಲೈಓವರ್ (ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಮೇಲೆ ನಾಲ್ಕು ದಿನಗಳ ಕಾಲ ಸಂಪೂರ್ಣ ವಾಹನ ಸಂಚಾರವನ್ನು ನಿರ್ಬಂಧಿಸಲಾಗುತ್ತಿದೆ. ತುಮಕೂರು ರಸ್ತೆಯ ಈ ಪ್ರಮುಖ ಮೇಲ್ಸೇತುವೆಯಲ್ಲಿ ದುರಸ್ತಿ ಕಾಮಗಾರಿಗಳ ಅಂತಿಮ ಹಂತದ ‘ಲೋಡ್ ಟೆಸ್ಟ್’ (ಭಾರ ಪರೀಕ್ಷೆ) ಮತ್ತು ಸುರಕ್ಷತಾ ಪರಿಶೀಲನೆ ನಡೆಸುತ್ತಿರುವ ಹಿನ್ನೆಲೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹಾಗೂ ಬೆಂಗಳೂರು ಟ್ರಾಫಿಕ್ ಪೊಲೀಸರು ಈ ನಿರ್ಧಾರ ಕೈಗೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಫ್ಲೈಓವರ್ ಸಂಪೂರ್ಣ ಬಂದ್

ಮೇ 5ರ ಬೆಳಗ್ಗೆ 5 ಗಂಟೆಯಿಂದ ಮೇ 8ರ ಬೆಳಗ್ಗೆ 11 ಗಂಟೆಯವರೆಗೆ ಮೇಲ್ಸೇತುವೆಯಲ್ಲಿ ಯಾವುದೇ ವಾಹನಗಳಿಗೆ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಈ ಅವಧಿಯಲ್ಲಿ ಫ್ಲೈಓವರ್ ಸಂಪೂರ್ಣ ಬಂದ್ ಆಗಲಿದ್ದು, ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪೀಣ್ಯ ಎಲಿವೇಟೆಡ್ ಫ್ಲೈಓವರ್‌ನ ಕೆನ್ನಮೆಟಲ್ ವಿಡಿಯಾ ಅಪ್ ರ್ಯಾಂಪ್‌ನಿಂದ ಎಸ್‌ಆರ್‌ಎಸ್ ಡೌನ್ ರ್ಯಾಂಪ್‌ವರೆಗೆ ಎರಡೂ ದಿಕ್ಕುಗಳಲ್ಲಿ ಸಂಚಾರ ನಿರ್ಬಂಧ ಜಾರಿಯಲ್ಲಿರುತ್ತದೆ. ಇದರಿಂದಾಗಿ ತುಮಕೂರು ರಸ್ತೆಯ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಮುಂಚಿತವಾಗಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವುದು ಅಗತ್ಯವಾಗಿದೆ.

ಪರ್ಯಾಯ ಮಾರ್ಗಗಳ ವಿವರ:

ನೆಲಮಂಗಲದಿಂದ ಬೆಂಗಳೂರು ಕಡೆಗೆ ಬರುವ ವಾಹನಗಳು ಕೆನ್ನಮೆಟಲ್ ವಿಡಿಯಾ ಸಮೀಪದಿಂದ ಮೇಲ್ಸೇತುವೆಯ ಕೆಳಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ-4 ಹಾಗೂ ಅದಕ್ಕೆ ಹೊಂದಿಕೊಂಡಿರುವ ಸರ್ವಿಸ್ ರಸ್ತೆಯನ್ನು ಬಳಸಬೇಕು. ಈ ಮಾರ್ಗವು ಎಂಟನೇ ಮೈಲಿ, ಟಿ.ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್‌ಆರ್‌ಎಸ್ ಜಂಕ್ಷನ್ ಹಾಗೂ ಗೊರಗುಂಟೆಪಾಳ್ಯ ಮೂಲಕ ಮುಂದುವರಿಯುತ್ತದೆ.

ಅದೇ ರೀತಿ, ಸಿಎಂಟಿಐ ಭಾಗದಿಂದ ನೆಲಮಂಗಲದ ಕಡೆಗೆ ಸಾಗುವ ವಾಹನಗಳು ಮೇಲ್ಸೇತುವೆಯ ಕೆಳಭಾಗದ ರಾಷ್ಟ್ರೀಯ ಹೆದ್ದಾರಿ-4 ಹಾಗೂ ಸರ್ವಿಸ್ ರಸ್ತೆಯ ಮೂಲಕ ಎಸ್‌ಆರ್‌ಎಸ್ ಜಂಕ್ಷನ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ, ಎಂಟನೇ ಮೈಲಿ ಮತ್ತು ಪಾರ್ಲೆಜಿ ಟೋಲ್ ಮಾರ್ಗವನ್ನು ಬಳಸಬೇಕಾಗಿದೆ.

ಸಂಚಾರ ದಟ್ಟಣೆ ತಪ್ಪಿಸಲು ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಹೀಗಾಗಿ, ವಾಹನ ಸವಾರರು ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವ ಮೂಲಕ ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ.