Raichur: ಪಿಕಾರ್ಡ್ ಬ್ಯಾಂಕ್‌ನಲ್ಲಿ ಅವ್ಯವಹಾರ: ಬ್ಯಾಂಕ್‌ನ ನಿರ್ದೇಶಕರಿಂದಲ್ಲೇ ಸಹಕಾರಿ ಇಲಾಖೆಗೆ ದೂರು!
ತಾಲೂಕಿನ ಪಿರ್ಕಾಡ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಸ್ವಾಮಿ ಆಲ್ಕೂರು ಅವರ ವಿರುದ್ಧ ಈಗ ಗಂಭೀರ ಆರೋಪ ಕೇಳಿಬಂದಿದೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ರಾಯಚೂರು (ಮೇ.29): ತಾಲೂಕಿನ ಪಿರ್ಕಾಡ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಸ್ವಾಮಿ ಆಲ್ಕೂರು ಅವರ ವಿರುದ್ಧ ಈಗ ಗಂಭೀರ ಆರೋಪ ಕೇಳಿಬಂದಿದೆ. ಕಳೆದ 1998ರಿಂದಲ್ಲೂ ನಿರಂತರವಾಗಿ ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷರಾಗುತ್ತಾ ಬಂದಿರುವ ಬಸವರಾಜ್ ಸ್ವಾಮಿ ಆಲ್ಕೂರು ಐಡಿಬಿಐ ಬ್ಯಾಂಕ್‌ನಲ್ಲಿ ತಮ್ಮ ಹೆಸರಿನಲ್ಲಿ ಅನಧಿಕೃತವಾಗಿ ವೈಯಕ್ತಿಕ ಖಾತೆ ತೆಗೆದು 2 ಕೋಟಿ 64 ಲಕ್ಷ ರೂ ಹಣವನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೇ ಆಲ್ಕೂರು ರಕ್ಷಣೆಗೆ ನಿಂತಿದ್ದಾರೆ ಎಂದು ಬ್ಯಾಂಕ್‌ನ ನಿರ್ದೇಶಕ ಉಗ್ರ ನರಸಿಂಹಪ್ಪ ಹೂಗಾರ ಆರೋಪಿಸಿದರು.
ರಾಯಚೂರು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಪಿಕಾರ್ಡ್ ಬ್ಯಾಂಕ್‌ನ ನಿರ್ದೇಶರು 2009 ನವೆಂಬರ್ 16ರಂದು ಪಿಎಲ್ ಡಿ ಬ್ಯಾಂಕ್ ನ ಅಧ್ಯಕ್ಷ ಬಸವರಾಜ್ ಸ್ವಾಮಿ ಐಡಿಬಿಐ ಬ್ಯಾಂಕಿನಲ್ಲಿ ಪಿಕಾರ್ಡ್ ಬ್ಯಾಂಕಿನ ಲೆಟರ್ ಹೆಡ್‌ನಲ್ಲಿ ಪತ್ರ ನೀಡಿ ಅನಧಿಕೃತವಾಗಿ ಬ್ಯಾಂಕ್ ಖಾತೆ ತೆಗೆದಿದ್ದು ಸುಮಾರು 2 ಕೋಟಿ 64 ಲಕ್ಷ ರೂಪಾಯಿ ರೈತರಿಗೆ ನೀಡಬೇಕಾದ ಬರ ಪರಿಹಾರ ಹಣದ ಚೆಕ್‌ಗಳನ್ನು ರೈತರಿಗೆ ನೀಡದೇ ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಂಡು ಸ್ವಂತಕ್ಕೆ ಬಳಕೆ ಮಾಡಿಕೊಂಡು ರೈತರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ಸಿಹಿ ಸುದ್ದಿ: ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಡ್ಲೆ ಮಿಠಾಯಿ ವಿತರಣೆಗೆ ಚಿಂತನೆ
ಐಡಿಬಿಐ ಬ್ಯಾಂಕ್‌ನಲ್ಲಿ ಖಾತೆ ಇಲ್ಲವೆಂದು ಅಧ್ಯಕ್ಷರ ವಾದ: 2009ರಲ್ಲಿ ಅವ್ಯವಹಾರ ನಡೆದ ಬಗ್ಗೆ ಪಿಕಾರ್ಡ್ ಬ್ಯಾಂಕ್‌ನ ನಿರ್ದೇಶಕರಿಗೆ ಮಾಹಿತಿ ಗೊತ್ತಾಗುತ್ತೆ. ಹೀಗಾಗಿ 16-07-2012ರಂದು ಬ್ಯಾಂಕ್‌ನ ಆಡಳಿತ ಮಂಡಳಿ ಸಭೆ ಮಾಡಿ ಅವ್ಯವಹಾರದ ಬಗ್ಗೆ ಸಭೆಯಲ್ಲಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರನ್ನು ವಿಚಾರಣೆ ನಡೆಸುತ್ತಾರೆ. ಆಗ ಬ್ಯಾಂಕ್‌ನ ಅಧ್ಯಕ್ಷ ಬಸವರಾಜ್ ಆಲ್ಕೂರು ಐಡಿಬಿಐ ಬ್ಯಾಂಕ್‌ನಲ್ಲಿ ಖಾತೆವಿಲ್ಲವೆಂದು ವಾದ ಮಾಡುತ್ತಾರೆ. ಮಾರನೇ ದಿನ ಅಂದ್ರೆ 17-07-2012ರಂದು ಬ್ಯಾಂಕ್ ನ ಅಧ್ಯಕ್ಷರು ಐಡಿಬಿಐ ಬ್ಯಾಂಕ್ ನ ವ್ಯವಸ್ಥಾಪಕರಿಗೆ ಐಡಿಬಿಐ ಬ್ಯಾಂಕ್ ನ ಖಾತೆ ರದ್ದುಗೊಳಿಸಲು ಪಿಕಾರ್ಡ್ ಬ್ಯಾಂಕ್‌ನ ಲೆಟರ್ ಹೆಡ್ ಬಳಕೆ ಮಾಡಿದ್ದು, ನಿರ್ದೇಶಕರಲ್ಲದ 10 ಜನರ ಹೆಸರನ್ನು ಬರೆದು ಕೇವಲ 5 ಜನರ ನಕಲಿ ಸಹಿ ಹೊಂದಿಗೆ ಖಾತೆ ರದ್ದು ಮಾಡಲು ಲೆಟರ್ ಬರೆಯುತ್ತಾರೆ.
ಇನ್ನೂ ಐಡಿಬಿಐ ಬ್ಯಾಂಕ್ ನಲ್ಲಿ ಖಾತೆ ತೆಗೆದು ಅವ್ಯವಹಾರ ನಡೆಸಿದ್ದಾರೆ. ಸಹಕಾರ ಸಂಘಗಳ ಉಪ ನಿಬಂಧಕರು ಸೇರಿದಂತೆ ಸಹಕಾರ ಇಲಾಖೆ ಸಚಿವರು, ಕಾರ್ಯದರ್ಶಿಗಳಿಗೆ ದೂರು ನೀಡಲಾಗಿದೆ. ಆದರೆ ಬ್ಯಾಂಕಿನ ಅಕ್ರಮ ಎಸಗಿರು ವದು ದೃಢಪಟ್ಟಿದ್ದು, ಸಹಕಾರ ಸಂಘಗಳ ಉಪನಿಬಂಧಕರು ಬಸವರಾಜ ಸ್ವಾಮಿ ಇವರನ್ನು ಅನರ್ಹಗೊಳಿಸುವಂತೆ ಶಿಫಾರಸ್ಸು ಮಾಡಿದ್ದರೂ ಅನರ್ಹಗೊಳಿಸಿಲ್ಲ. ಅಂತಹವರನ್ನೇ ಮರು ಆಯ್ಕೆ ಮಾಡಲಾಗಿದೆ ಎಂದು ಬ್ಯಾಂಕ್ ನಿರ್ದೇಶಕರು ಆರೋಪಿಸಿದರು. ರೈತರ ಹೆಸರಿನಲ್ಲಿರುವ ಚೆಕ್ ಗಳನ್ನು ಬ್ಯಾಂಕ್ ಖಾತೆಗೆ ಹಾಕಿ ಕೊಂಡಿರುವ ಹಣ ಎಲ್ಲಿದೆ. ಚೆಕ್ ಎಲ್ಲಿವೆ ಎಂದು ತನಿಖೆ ನಡೆಸಬೇಕಾದ ಸಹಕಾರ ಇಲಾಖೆ ರಜಿಸ್ಟಾರ್‌ರು ಕ್ರಮಕ್ಕೆ ಮುಂದಾಗದೇ ಇರುವದು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು.
ರೈತರ ಹಣವನ್ನು ವಾಪಸ್ಸು ಕಳುಹಿಸಿದ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ: ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪಿಕಾರ್ಡ್ ಬ್ಯಾಂಕ್ ಆರಂಭಿಸಲಾಗಿದೆ. ಆದ್ರೆ ಈ ಪಿಕಾರ್ಡ್ ಬ್ಯಾಂಕ್ ಕೇವಲ ಅಧ್ಯಕ್ಷ ಬಸವರಾಜ್ ಸ್ವಾಮಿ ಆಲ್ಕೂರು ಅವರಿಗೆ ಮಾತ್ರ ಉಪಯೋಗವಾಗುತ್ತಿದೆ. ಈ ವರ್ಷ ರೈತರಿಗೆ ಸಾಲ ನೀಡಲು ಸರ್ಕಾರದ ಕಡೆಯಿಂದ 60 ಲಕ್ಷ ರೂಪಾಯಿ ಬಂದಿತ್ತು. ಆದ್ರೆ ಬ್ಯಾಂಕ್ ನ ಅಧ್ಯಕ್ಷ ಬಸವರಾಜ್ ಸ್ವಾಮಿ ಆಲ್ಕೂರು ಕೇವಲ 29 ಲಕ್ಷ ರೂಪಾಯಿ ಮಾತ್ರ ಸಾಲ ನೀಡಿ ಇನ್ನುಳಿದ 31 ಲಕ್ಷ ರೂಪಾಯಿ ವಾಪಸ್ಸು ಕಳುಹಿಸಿದ್ದಾರೆ. ವಿನಾಕಾರಣ ರೈತರ ದಾಖಲೆಗಳು ಸರಿ ಇಲ್ಲವೆಂದು ನೆಪ ಹೇಳಿ ರೈತರಿಗೆ ಅನುಕೂಲವಾಗಬೇಕಾದ ಹಣವನ್ನು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರು ವಾಪಸ್ಸು ಕಳುಹಿಸಿದ್ದಾರೆ ಎಂದು ಆರೋಪಿಸಿದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಸ್ವಾಮಿ ಆಲ್ಕೂರು ಹೇಳುವುದೇನು?: ರಾಯಚೂರಿನ ಪಿಕಾರ್ಡ್ ಬ್ಯಾಂಕ್‌ಗೆ ಸತತ 6 ಬಾರಿ ಬಸವರಾಜ್ ಸ್ವಾಮಿ ಆಲ್ಕೂರು ಅಧ್ಯಕ್ಷ ಆಗುತ್ತಾ ಬಂದಿದ್ದೇನೆ. ನಾನು ಯಾವುದೇ ಅವ್ಯವಹಾರ ಮಾಡಿಲ್ಲ. ಐಡಿಬಿಐ ಬ್ಯಾಂಕ್ ನಲ್ಲಿ ಖಾತೆ ತೆಗೆದಿದ್ದು ನಿಜ.ನಾನು ನನ್ನ ಶಾಲೆಯ ವ್ಯವಹಾರಕ್ಕಾಗಿ ಬ್ಯಾಂಕ್ ಖಾತೆ ತೆಗೆದಿದ್ದೇನೆ. ಐಡಿಬಿಐ ಬ್ಯಾಂಕ್‌ಗೂ ಪಿಕಾರ್ಡ್ ಬ್ಯಾಂಕ್ ನ ವ್ಯವಹಾರಕ್ಕೂ ಯಾವುದೇ ಸಂಬಂಧವಿಲ್ಲ. ವಿನಾಕಾರಣ ನನ್ನ ಹೆಸರು ಹಾಳು ಮಾಡಲು ನಿರ್ದೇಶಕರು ಮುಂದಾಗಿದ್ದಾರೆ. ಯಾರು ನನ್ನ ಮಾನಹಾನಿ ಮಾಡಲು ಮುಂದಾಗಿದ್ದಾರೋ ಅಂತವರ ವಿರುದ್ಧ ಕೇಸ್ ಹಾಕುವುದಾಗಿ ತಿಳಿಸಿದರು.
Karnataka Politics: ಬಿಜೆಪಿಯಲ್ಲಿ ಶ್ರೀರಾಮುಲು ಮೂಲೆಗುಂಪು: ಶಾಸಕ ನಾಗೇಂದ್ರ
ಒಟ್ಟಿನಲ್ಲಿ ರಾಯಚೂರಿನ ಪಿಕಾರ್ಡ್ ಬ್ಯಾಂಕ್ ನಕ್‌ನ ನಿರ್ದೇಶಕರು ಮತ್ತು ಅಧ್ಯಕ್ಷ ಬಸವರಾಜ್ ಸ್ವಾಮಿ ಆಲ್ಕೂರು ನಡುವಿನ ಮುಸುಕಿನ ಗುದ್ದಾಟ ಶುರುವಾಗಿದೆ. ಇದರಿಂದ ರೈತರಿಗೆ ಸಿಗಬೇಕಾದ ಸಾಲ ಸೌಲಭ್ಯಗಳು ಸಿಗದೇ ಸರ್ಕಾರ ಹಣ ನೀಡಿದ್ರೂ ರೈತರ ಕೈಗೆ ಸಿಗದಂತಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಪಿಕಾರ್ಡ್ ಬ್ಯಾಂಕ್‌ನ ವ್ಯವಹಾರದ ಬಗ್ಗೆ ನಿಗಾವಹಿಸಿ ಕ್ರಮ ಜರುಗಿಸಬೇಕಾಗಿದೆ.