ಶಿವಾನಂದ ಗೊಂಬಿ

ಹುಬ್ಬಳ್ಳಿ(ಮಾ.18): ಕನ್ನಡ ನಾಡಿನ ಕಣ್ಮಣಿ, ಏಕೀಕರಣದ ರೂವಾರಿ, ನಾಡೋಜ ಪಾಟೀಲ ಪುಟ್ಟಪ್ಪ ಕೊನೆಗೂ ಬಸವ ರಾಷ್ಟ್ರೀಯ ಪುರಸ್ಕಾರ ಸ್ವೀಕರಿಸದೆ ಇಹಲೋಕ ತ್ಯಜಿಸಿದ್ದಾರೆ. ಈ ಮೂಲಕ ತಮ್ಮ ಹಠ ಸಾಧಿಸಿದ್ದಾರೆ!

ತವರಲ್ಲಿ ಮಣ್ಣಾದ ಪಾಪು: ಏಳು ದಶಕದ ಹುಬ್ಬಳ್ಳಿಯ ನಂಟು ಇನ್ನು ನೆನಪು ಮಾತ್ರ

ಬಸವ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲು ರಾಜ್ಯ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಸೋಮವಾರ ರಾತ್ರಿ ಕಳೆದು ಬೆಳಗಾಗಿದ್ದರೆ ಪುರಸ್ಕಾರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಸ್‌.ರಂಗಪ್ಪ ಪ್ರದಾನ ಮಾಡಿಯೇ ಬಿಡುತ್ತಿದ್ದರು. ಆದರೆ ಅಷ್ಟರೊಳಗೆ ಪಾಪು ಚಿರನಿದ್ರೆಗೆ ಜಾರಿದರು. ಪಾಟೀಲ ಪುಟ್ಟಪ್ಪ ಅವರನ್ನು 2017ನೇ ಸಾಲಿನ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿತ್ತು. 10 ಲಕ್ಷ ನಗದು, ಪ್ರಮಾಣಪತ್ರ, ಫಲಕಗಳನ್ನೊಳಗೊಂಡ ಈ ಪ್ರಶಸ್ತಿಯನ್ನು ಆಗ ಪಾಪು ಸ್ವೀಕರಿಸಿರಲಿಲ್ಲ. ಈ ಪುರಸ್ಕಾರ ಸ್ವೀಕಾರಕ್ಕೆ ಪಾಪು ಒಂದು ಷರತ್ತು ಹಾಕಿದ್ದರು. ಆ ಷರತ್ತನ್ನು ಈಡೇರಿಸಿದರೆ ಮಾತ್ರ ಪುರಸ್ಕಾರ ಸ್ವೀಕರಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದರು.

ಏನದು ಷರತ್ತು?:

ವಿಧಾನಸೌಧದಲ್ಲಿ ಇರುವ ಮುಖ್ಯಮಂತ್ರಿಗಳ ಪಟ್ಟಿ ಬದಲಿಸಬೇಕು ಎನ್ನುವುದು ಪಾಪು ಷರತ್ತಾಗಿತ್ತು. ಕರ್ನಾಟಕ ಏಕೀಕರಣಗೊಂಡಿದ್ದು 1956ರಲ್ಲಿ ಏಕೀಕೃತ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದು ಎಸ್‌.ನಿಜಲಿಂಗಪ್ಪ ಅವರು. ಆದರೆ ಶಕ್ತಿ ಸೌಧದಲ್ಲಿರುವ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಮೊದಲ ಹೆಸರು ಕೆ.ಸಿ.ರೆಡ್ಡಿ ಅವರದ್ದಿದೆ. ನಾಲ್ಕನೇ ಕ್ರಮಾಂಕದಲ್ಲಿ ಎಸ್‌.ನಿಜಲಿಂಗಪ್ಪ ಅವರ ಹೆಸರಿದೆ. ಮೊದಲ ಮೂವರು ಮುಖ್ಯಮಂತ್ರಿಗಳು ಮೈಸೂರು ಪ್ರಾಂತವಿದ್ದಾಗಿನ ಮುಖ್ಯಮಂತ್ರಿಗಳು. ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿಯೆಂದು ಎಸ್‌.ನಿಜಲಿಂಗಪ್ಪ ಅವರನ್ನೇ ಘೋಷಿಸಬೇಕು ಎಂಬ ಬೇಡಿಕೆ ಪಾಪು ಅವರದ್ದಾಗಿತ್ತು. ಈ ಬಗ್ಗೆ ಅನೇಕ ಬಾರಿ ಪತ್ರ ಬರೆದಿದ್ದರೂ ಸರ್ಕಾರ ಸ್ಪಂದಿಸಿರಲಿಲ್ಲ.

ಪಾಪು, ಕ್ಯಾಲಿಫೋರ್ನಿಯಾ ವಿವಿಯಲ್ಲಿ ಪತ್ರಿಕೋದ್ಯಮ ಓದಿದ ಮೊದಲ ಕನ್ನಡಿಗ!

2017ರಲ್ಲಿ ಕೊಡಬೇಕಿದ್ದ ಬಸವ ರಾಷ್ಟ್ರೀಯ ಪುರಸ್ಕಾರವನ್ನು ರಾಜ್ಯ ಸರ್ಕಾರ ಮಂಗಳವಾರ ಪ್ರದಾನ ಮಾಡಲು ಎಲ್ಲ ಸಿದ್ಧತೆಯನ್ನೂ ಸರ್ಕಾರ ಮಾಡಿಕೊಂಡಿತ್ತು. ಆದರೆ ಅಷ್ಟರೊಳಗೆ ಪಾಪು ಇಹಲೋಕ ತ್ಯಜಿಸಿದ್ದಾರೆ.