Asianet Suvarna News Asianet Suvarna News

ಪಾಪು, ಕ್ಯಾಲಿಫೋರ್ನಿಯಾ ವಿವಿಯಲ್ಲಿ ಪತ್ರಿಕೋದ್ಯಮ ಓದಿದ ಮೊದಲ ಕನ್ನಡಿಗ!

ಕನ್ನಡದ ವಿಶ್ವಕೋಶ, ಮಾಹಿತಿ ಕಣಜ ಪಾಪು| ಓದಿದ್ದು ಕಾನೂನು ಪದವಿ, ಆದರೆ ಹೆಸರು ಮಾಡಿದ್ದು ಪತ್ರಕರ್ತ, ಕನ್ನಡದ ಹೋರಾಟಗಾರನಾಗಿ| ಕ್ಯಾಲಿಫೋರ್ನಿಯಾ ವಿವಿಯಲ್ಲಿ ಪತ್ರಿಕೋದ್ಯಮ ಓದಿದ ಮೊದಲ ಕನ್ನಡಿಗ

Patil Puttappa Is The First Kannadiga Who Studies Journalism At University of California
Author
Bangalore, First Published Mar 17, 2020, 8:44 AM IST

 

 

ಬೆಂಗಳೂರು[ಮಾ.17]: ಶತಾಯುಷಿ ಪಾಟೀಲ ಪುಟ್ಟಪ್ಪ ಅವರ ಬದುಕೇ ಒಂದು ಕುತೂಹಲದ ಕಣಜ. ಐದು ಪತ್ರಿಕೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ, ಕನ್ನಡಕ್ಕಾಗಿ ಅವಕಾಶ ಸಿಕ್ಕಾಗಲೆಲ್ಲ ಧ್ವನಿ ಎತ್ತಿದ್ದ, ಕನ್ನಡದ ಪ್ರತಿ ಹೋರಾಟದಲ್ಲಿ ಇಳಿವಯಸ್ಸಲ್ಲೂ ಮುಂಚೂಣಿಯಲ್ಲಿದ್ದ ಪಾಟೀಲ ಪುಟ್ಟಪ್ಪ ಅವರ ಬದುಕು, ಹೋರಾಟ, ಆಚಾರ-ವಿಚಾರಗಳು ಯಾವತ್ತಿಗೂ ಕನ್ನಡಿಗರಿಗೆ ಮಾದರಿ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕರ್ನಾಟಕದಲ್ಲಿ ಯಾರೂ ಏರಲಾಗದ ಎತ್ತರಕ್ಕೆ ಏರಿದ್ದ, ಕನ್ನಡದ ವಿಶ್ವಕೋಶವೆಂದೇ ಪರಿಗಣಿಸಲ್ಪಟ್ಟಿದ್ದ ಪಾಟೀಲ ಪುಟ್ಟಪ್ಪ ಅವರು ಕನ್ನಡಿಗರ ಪಾಲಿಗೆ ಯಾವತ್ತಿಗೂ ಪ್ರೀತಿಯ ಪಾಪು ಆಗಿಯೇ ಉಳಿದವರು.

ತಾಯಿಯ ತವರು ಇಂದಿನ ಹಾವೇರಿ ತಾಲೂಕು ಕುರಬಗೊಂಡ ಗ್ರಾಮದಲ್ಲಿ 14.01.1921 ರಂದು ಸಿದ್ಧಲಿಂಗಪ್ಪ-ಮಲ್ಲಮ್ಮ ದಂಪತಿಯ ಹಿರಿಯ ಪುತ್ರನಾಗಿ ಜನಿಸಿದ ಶಿವಕುಮಾರಗೌಡ ಪಾಟೀಲ, ಮುಂದೆ ಪಾಟೀಲ ಪುಟ್ಟಪ್ಪ ಮುಂದೆ ಪಾಪು ಆಗಿಯೇ ಖ್ಯಾತನಾಮರಾದರು. ತಂದೆಯ ಊರು ರಾಣೆಬೆನ್ನೂರು ತಾಲೂಕು ಹಲಗೇರಿ, ಬ್ಯಾಡಗಿ, ಹಾವೇರಿ ಹಾಗೂ ಧಾರವಾಡ, ಬೆಳಗಾವಿಯಲ್ಲಿ ವ್ಯಾಸಂಗ ಮಾಡಿದರು. ಮುಂದೆ ಅಮೆರಿಕದ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಪತ್ರಿಕೋದ್ಯಮ ಅಧ್ಯಯನ ಮಾಡಿದ ಮೊದಲ ಕನ್ನಡಿಗ ಇವರಾದರು. ವಕೀಲಿಕೆ ಓದಿಯೂ ಪತ್ರಿಕೋದ್ಯಮವನ್ನು ಆಸ್ಥೆಯಿಂದ ಆಯ್ಕೆ ಮಾಡಿಕೊಂಡು ಹೊಸ ಇತಿಹಾಸ ನಿರ್ಮಿಸಿದರು.

ವಿದ್ಯಾರ್ಥಿ ದೆಸೆಯಲ್ಲೇ ಬರಹ, ಹೋರಾಟಗುಣ ರೂಢಿಸಿಕೊಂಡಿದ್ದ ಪಾಪು ಮುಂದೆ ತಮ್ಮಿಚ್ಛೆಯಂತೆ ಪತ್ರಕರ್ತರಾದರು. ಸ್ವಾತಂತ್ರ್ಯ ಚಳವಳಿ, ಕರ್ನಾಟಕ ಏಕೀಕರಣ ಹೋರಾಟ, ಗೋಕಾಕ್‌ ಚಳವಳಿ, ನೈಋುತ್ಯ ರೇಲ್ವೆ ವಲಯ, ಹೈಕೋರ್ಟ್‌ ಪೀಠ ಸ್ಥಾಪನೆ, ನಂಜುಂಡಪ್ಪ ವರದಿ ಜಾರಿ, ಮಹದಾಯಿ ನೀರು ಇತ್ಯಾದಿ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಪಾಪು ಬದುಕೇ ಹೋರಾಟಮಯ ಆಗಿತ್ತು. ಗಾಂಧೀಜಿ ಪ್ರೇರಣೆಯಿಂದ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿ ಕಾಲೇಜಿನಿಂದ ಅಮಾನತುಗೊಂಡರೆ, ವಲ್ಲಭಭಾಯಿ ಪಟೇಲರ ಪ್ರೇರಣೆಯಿಂದ ಪತ್ರಕರ್ತರಾಗಿ ಪ್ರಪಂಚ, ಸಂಗಮ ಡೈಜೆಸ್ಟ್‌, ವಿಶ್ವವಾಣಿ, ಮನೋರಮಾ ಸಿನಿಮಾ ಪಾಕ್ಷಿಕ, ಸ್ತ್ರೀ ಪಾಕ್ಷಿಕ ಹೀಗೆ ಐದು ಪತ್ರಿಕೆಗಳನ್ನು ಆರಂಭಿಸಿ ಅವುಗಳ ಸಂಪಾದಕರಾಗಿದ್ದರು. ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅವರ ಸಹವಾಸದಿಂದ ಎರಡು ಬಾರಿ ರಾಜ್ಯಸಭೆ ಸದಸ್ಯರಾಗಿದ್ದರು. ಮುಂದೆ ಇವರನ್ನು ರಾಮಕೃಷ್ಣ ಹೆಗಡೆ ಅವರು ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿ ಕರುನಾಡ ರಕ್ಷಣೆಯ ನೊಗ ಹೊರಿಸಿದ್ದರು.

ಇವರ ಸೇವೆ, ಸಾಧನೆ ಪರಿಗಣಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಟಿ.ಎಸ್‌.ಆರ್‌. ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ವಿವಿ ಡಿ.ಲಿಟ್‌ ಗೌರವ, ಹಂಪಿ ಶ್ವದ್ಯಾಲಯದ ‘ನಾಡೋಜ’ ಪ್ರಶಸ್ತಿ, ಟಿಳಕ ಮೊಹರೆ ಪ್ರಶಸ್ತಿ, ಮಾಳವಾಡ ಪ್ರಶಸ್ತಿ, ವಜ್ರಕುಮಾರ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಆದಿಚುಂಚನಗಿರಿ ಪ್ರಶಸ್ತಿ, ಭಾಲ್ಕಿ ಚೆನ್ನಬಸವೇಶ್ವರ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಕರ್ನಾಟಕ ಚೂಡಾಮಣಿ ಪ್ರಶಸ್ತಿ ಹಾಗೂ ನೃಪತುಂಗ ಪ್ರಶಸ್ತಿಗಳು ಇವರ ಮುಡಿಗೇರಿವೆ. ಪಾಪು ಅವರು ಸುಮಾರು 45 ಕೃತಿಗಳನ್ನು ರಚಿಸಿದ್ದಾರೆ.

Follow Us:
Download App:
  • android
  • ios