ಮಂಗಳೂರು(ಏ.09): ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಕೇರಳ ರಾಜ್ಯದಿಂದ ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ತಲಪಾಡಿ ಮೂಲಕ ಮಂಗಳೂರಿಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಆದರೆ ಈ ರೋಗಿಗಳಿಗೆ ದೇರಳಕಟ್ಟೆಯ ಕೆ.ಎಸ್‌. ಹೆಗ್ಡೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಈ ಹಿಂದೆ ಕೇರಳ ರೋಗಿಗಳ ಮಂಗಳೂರು ನಗರ ಪ್ರವೇಶಕ್ಕೆ ಅವಕಾಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರ ಆದೇಶ ಸಹಜವಾಗಿ ಅನೂರ್ಜಿತಗೊಂಡಿತ್ತು. ಇದೀಗ ಜಿಲ್ಲಾಡಳಿತ ಜಿಲ್ಲೆಯ ಹಿತದೃಷ್ಟಿಯಿಂದ ಮುತುವರ್ಜಿ ವಹಿಸಿ ಈ ತೀರ್ಮಾನ ಕೈಗೊಂಡಿದೆ.

ರಾಜ್ಯಾ​ದಂತ ಲಾಕ್‌ಡೌನ್‌ ಮುಂದುವರಿಸಿ: ದೇವಿ​ಶೆಟ್ಟಿ ನೇತೃ​ತ್ವದ ಸಮಿತಿ ಶಿಫಾ​ರಸು!

ಕಾಸರಗೋಡು ವೈದ್ಯರ ನಿಯೋಜನೆ: ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಕೇರಳದಿಂದ ಮಂಗಳೂರಿಗೆ ತುರ್ತು ಚಿಕಿತ್ಸೆಗೆ ಆಗಮಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಮಾರ್ಗಸೂಚಿ ಬಿಡುಗಡೆಗೊಳಿಸಿದ ಬೆನ್ನಲ್ಲೇ ಕಾಸರಗೋಡು ಜಿಲ್ಲಾಡಳಿತವು ಗಡಿ ರಸ್ತೆ ತಲಪಾಡಿಯಲ್ಲಿ ವೈದ್ಯರ ತಂಡವನ್ನು ಕರ್ತವ್ಯಕ್ಕೆ ನಿಯೋಜಿಸಿದೆ. ಕಳೆದ ಹಲವು ದಿನಗಳ ನಿರ್ಬಂಧದ ಬಳಿಕ ಬುಧವಾರ ಮೂವರು ರೋಗಿಗಳು ಆ್ಯಂಬುಲೆಸ್ಸ್‌ನಲ್ಲಿ ಮಂಗಳೂರಿಗೆ ಚಿಕಿತ್ಸೆಗಾಗಿ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾಸರಗೋಡಿನಿಂದ ಮಂಗಳೂರಿಗೆ ಚಿಕಿತ್ಸೆಗೆ ಆಗಮಿಸುವ ರೋಗಿಗೆ ಕೊರೋನಾ ಇಲ್ಲದಿರುವ ಕುರಿತು ಸೇರಿದಂತೆ ಸದರಿ ರೋಗಿಗೆ ಕಾಸರಗೋಡಿನಲ್ಲಿ ಚಿಕಿತ್ಸೆ ಲಭ್ಯ ಇಲ್ಲದಿರುವ ಬಗ್ಗೆ ದೃಢೀಕರಣ ಪತ್ರ ನೀಡಲು ಈ ವೈದ್ಯರನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.

ಕೊರೋನಾಗೆ ಇಂದಿಗೆ 1 ತಿಂಗಳು: ದೇಶದಲ್ಲೇ ನಂ.3 ಆಗಿದ್ದ ರಾಜ್ಯ ಈಗ ನಂ.11!

ಅದೇ ರೀತಿ ದ.ಕ. ಜಿಲ್ಲಾಡಳಿತ ವತಿಯಿಂದಲೂ ತಲಪಾಡಿಯ ಗಡಿಯಲ್ಲಿ ವೈದ್ಯಕೀಯ ತಂಡವನ್ನು ನಿಯೋಜನೆ ಮಾಡಲಾಗಿದೆ. ಕಾಸರಗೋಡಿನಿಂದ ಬರುವ ಆ್ಯಂಬುಲೆಸ್ಸ್‌ ಹಾಗೂ ರೋಗಿಯ ಪ್ರಥಮ ಹಂತದ ದಾಖಲೆಗಳನ್ನು ಅವರು ಪರಿಶೀಲನೆ ನಡೆಸಿದ ನಂತರ ಜಿಲ್ಲೆಯೊಳಗೆ ಪ್ರವೇಶ ನೀಡುತ್ತಾರೆ.