ಬೆಂಗಳೂರು(ಜು.23): ಚಿಕಿತ್ಸೆಗೆ ದಾಖಲಾದ ಮಹಿಳೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ರೋಗಿಯ ಸಂಬಂಧಿಕರು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿ, ಹಲ್ಲೆಗೆ ಯತ್ನಿಸಿದ ಘಟನೆ ನಗರದ ಮಲ್ಲೇಶ್ವರದ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಶ್ರೀರಾಂಪುರದ 43 ವರ್ಷದ ಮಹಿಳೆ ಭಾನುವಾರ (ಜು.19) ಕೆ.ಸಿ.ಜನರಲ್‌ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೋನಾ ಪರೀಕ್ಷೆ ಮಾಡಿಸಿ, ಐಸಿಯುವಿನಲ್ಲಿ ಬೆಡ್‌ ಖಾಲಿ ಇಲ್ಲದ ಕಾರಣ ಜನರಲ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಐಸಿಯುವಿನಲ್ಲಿ ಚಿಕಿತ್ಸೆ ನೀಡುವಂತೆ ಮಹಿಳೆಯ ಕುಟುಂಬಸ್ಥರು ಆಗ್ರಹಿಸಿದ್ದರು. ಕೊರೋನಾ ವರದಿ ಬರದ ಹಿನ್ನೆಲೆಯಲ್ಲಿ ಸಾಮಾನ್ಯ ವಾರ್ಡ್‌ನಲ್ಲೇ ಚಿಕಿತ್ಸೆ ಮುಂದುವರೆಸಲಾಗಿತ್ತು.

ಚಿಕ್ಕಪೇಟೆಯಲ್ಲಿ ವ್ಯಾಪಾರ ವಹಿವಾಟು ಪುನರಾರಂಭ..!

ಈ ನಡುವೆ ಮಹಿಳೆಗೆ ಮಂಗಳವಾರ ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಐಸಿಯು ವ್ಯವಸ್ಥೆ ಇಲ್ಲದ ಕಾರಣ ಬೇರೆಡೆ ಕರೆದುಕೊಂಡು ಹೋಗುವಂತೆ ಆಸ್ಪತ್ರೆ ಸಿಬ್ಬಂದಿ ಕುಟುಂಬಸ್ಥರಿಗೆ ಸೂಚಿಸಿದ್ದಾರೆ. ಕುಟುಂಬಸ್ಥರು ಬೇರೆ ಆಸ್ಪತ್ರೆ ಹುಡುಕಾಡುತ್ತಿದ್ದಾಗಲೇ ಮಹಿಳೆ ಮೃತಪಟ್ಟಿದ್ದು, ಸಂಬಂಧಿಕರು ಆಕ್ರೋಶಗೊಂಡು ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟಮೇಲೆ ಸೋಂಕು ದೃಢ

ಮಹಿಳೆ ಮೃತಪಟ್ಟಬಳಿಕ ನಡೆಸಿದ ಆಂಟಿಜನ್‌ ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್‌ ಇರುವುದು ದೃಢಪಟ್ಟಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಸಾಮಾನ್ಯ ವಾರ್ಡ್‌ನಲ್ಲಿದ್ದ ರೋಗಿಗಳಲ್ಲಿ ಆತಂಕ ಮನೆ ಮಾಡಿದ್ದು, ಕೊರೋನಾ ಸೋಂಕಿತರನ್ನು ನಾಲ್ಕು ದಿನಗಳ ಕಾಲ ನಮ್ಮ ವಾರ್ಡ್‌ನಲ್ಲಿಟ್ಟು ಪ್ರಾಣದ ಜತೆ ಆಟವಾಡುತ್ತಿದ್ದೀರಾ ಎಂದು ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೃತದೇಹ ನೀಡುವಂತೆ ಗಲಾಟೆ

ಸೋಂಕಿರುವುದು ದೃಢಪಟ್ಟಬಳಿಕೆ ಬಿಬಿಎಂಪಿಯ ಮೂಲಕ ಮೃತದೇಹವನ್ನು ವಿಲೇವಾರಿ ಮಾಡಬೇಕು ಎಂಬ ನಿಯಮವಿದೆ. ಆದ್ದರಿಂದ ಮೃತದೇಹವನ್ನು ನೀಡುವುದಕ್ಕೆ ಸಾಧ್ಯವಿಲ್ಲ ಎಂದು ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯು ಮೃತರ ಸಂಬಂಧಿಕರಿಗೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ರೋಗಿಯ ಸಂಬಂಧಿಗಳು ವೈದ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾದರು. ಬಳಿಕ ಮಲ್ಲೇಶ್ವರ ಪೊಲೀಸರ ಗಮನಕ್ಕೆ ತಂದು ಪರಿಸ್ಥಿತಿ ಶಾಂತಗೊಳಿಸಲಾಯಿತು ಎಂದು ಆಸ್ಪತ್ರೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಬೆಂಗ್ಳೂರಿನ ಈ ಏರಿಯಾಗಳಲ್ಲಿ ಹೋಂ ಐಸೋಲೇಷನ್‌ ಅವಕಾಶವಿಲ್ಲ..!

ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಟ್ಟಿಲ್ಲ, ಈಗ ಮೃತದೇಹವನ್ನೂ ಸಹ ಕೊಡುತ್ತಿಲ್ಲ ಎಂದು ಮೃತ ರೋಗಿಯ ಸಂಬಂಧಿಕರು ಗಲಾಟೆ ಮಾಡಿದ್ದಾರೆ. ಸದ್ಯ ವೈದ್ಯರಿಂದ ಮಾಹಿತಿ ಪಡೆದಿದ್ದೇವೆ. ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಉತ್ತರ ವಿಭಾಗದ ಡಿಸಿಪಿ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ.

ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವಿಷಮಶೀತ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ವೆಂಟಿಲೇಷನ್‌ ಮತ್ತು ಐಸಿಯು ಬೆಡ್‌ಗಳು ಇರದ ಕಾರಣ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಬೇರೊಂದು ಆಸ್ಪತ್ರೆಗೆ ಕರೆದೊಯ್ಯಲು ಸೂಚನೆ ನೀಡಲಾಗಿತ್ತು. ಚಿಕಿತ್ಸೆ ಮುಂದುವರೆಯುತ್ತಿದ್ದಂತೆ ರೋಗಿ ಮೃತ ಪಟ್ಟಿದ್ದರು. ಈ ವೇಳೆ ರೋಗಿಯ ಸಂಬಂಧಿಕರು ವೈದ್ಯರ ವಿರುದ್ಧ ಹಲ್ಲೆಗೆ ಮುಂದಾಗಿದ್ದರು ಎಂದು ಕೆ.ಸಿ.ಜನರಲ್‌ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ವೆಂಕಟೇಶಯ್ಯ ತಿಳಿಸಿದ್ದಾರೆ.