ಬೆಂಗಳೂರು(ಜು.23): ಬಿಬಿಎಂಪಿ ವ್ಯಾಪ್ತಿಯ ಪೂರ್ವ ವಲಯದಲ್ಲಿ ಕೊಳಗೇರಿ ಹಾಗೂ ಕಿರಿದಾದ ಪ್ರದೇಶದಲ್ಲಿ ಪತ್ತೆಯಾದ ಕೊರೋನಾ ಸೋಂಕಿತರಿಗೆ ಹೋಂ ಐಸೋಲೇಷನ್‌ ರದ್ದುಪಡಿಸಿ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಪೂರ್ವ ವಲಯ ಜಂಟಿ ಆಯುಕ್ತೆ ಕೆ.ಆರ್‌.ಪಲ್ಲವಿ ಆದೇಶಿಸಿದ್ದಾರೆ.

ಈ ಪ್ರದೇಶಲ್ಲಿ ಜು.18 ರಿಂದ 20ರ ವರೆಗೆ ಹೋಂ ಐಸೋಲೇಷನ್‌ಗೆ ಒಳಗಾದ ಎಲ್ಲರನ್ನು ಕೊರೋನಾ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ಸ್ಥಳಾಂತರಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಮುಂದಿನ ಆದೇಶದವರೆಗೆ ಪೂರ್ವ ವಲಯದ ಕೆಲವು ನಿರ್ದಿಷ್ಟಪ್ರದೇಶದಲ್ಲಿ ಹೋಂ ಐಸೋಲೇಷನ್‌ಗೆ ಅವಕಾಶವಿರುವುದಿಲ್ಲ ಎಂದು ನಿರ್ದೇಶಿಸಿದ್ದಾರೆ.

ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಯೋಗ..!

ಈ ಕುರಿತು ಪ್ರತಿಕ್ರಿಯಿಸಿದ ಪಲ್ಲವಿ, ಪೂರ್ವ ವಲಯದಲ್ಲಿ ಒಟ್ಟು 1,967 ಜನ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಆದರೆ, ಕೊಳಗೇರಿ ಪ್ರದೇಶಗಳಲ್ಲಿ ಇರುವವರು ಹೋಂ ಐಸೋಲೇಷನ್‌ಗೆ ಅವಕಾಶ ನೀಡಿದರೆ ಸೋಂಕು ಮತ್ತಷ್ಟುಜನರನ್ನು ಹಬ್ಬುವ ಸಾಧ್ಯತೆ ಇದೆ. ಹೀಗಾಗಿ, ಕೆಲವು ವಾರ್ಡ್‌ಗಳ ನಿರ್ದಿಷ್ಟಪ್ರದೇಶದಲ್ಲಿ ಮುಂದಿನ ಆದೇಶದವರೆಗೆ ಹೋಂ ಐಸೋಲೇಷನ್‌ಗೆ ಅವಕಾಶ ನೀಡದಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಜು.18 ರಿಂದ 20ರವರೆಗೆ ಸುಮಾರು 420 ಮಂದಿ ಕೊಳಗೇರಿ ಪ್ರದೇಶದಲ್ಲಿ ಹೋಂ ಐಸೋಲೇಷನ್‌ ಮಾಡಲಾಗಿತ್ತು. ತದನಂತರ ಸೋಂಕು ದೃಢಪಟ್ಟವರನ್ನು ಸೇರಿದಂತೆ ಎಲ್ಲರನ್ನು ಆರೈಕೆ ಕೇಂದ್ರಕ್ಕೆ ಅಥವಾ ಆಸ್ಪತ್ರೆಗೆ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ.

ಇಲ್ಲಿ ರದ್ದು:

ಪೂರ್ವ ವಲಯದ ಬೆನ್ನಿಗಾನಹಳ್ಳಿ, ಸರ್ವಜ್ಞ ನಗರ, ಕೋನೇನ ಅಗ್ರಹಾರ, ಕುಶಾಲನಗರ, ಕಾವಲಬೈರಸಂದ್ರ, ಮುನೇಶ್ವರ ನಗರ, ಸಗಾಯಪುರ, ದೇವರಜೀವನಹಳ್ಳಿ, ಎಸ್‌.ಕೆ ಗಾರ್ಡನ್‌, ಪುಲಕೇಶಿ ನಗರ, ನಾಗವಾರ, ಕಾಡುಗೊಂಡನಹಳ್ಳಿ,ಲಿಂಗರಾಜಪುರ ಹಾಗೂ ಮಾರುತಿ ಸೇವಾನಗರ, ಎಂ.ಆರ್‌ ಪಾಳ್ಯ, ಹಲಸೂರು, ಭಾರತಿ ನಗರ, ಶಿವಾಜಿನಗರ, ವಿಶ್ವನಾಥ ನಾಗೇನಹಳ್ಳಿ, ಮಾನೋರಾಯನಪಾಳ್ಯ, ನೆಲಸಂದ್ರ, ಜೋಗುಪಾಳ್ಯ, ಅಗರಂ ಹಾಗೂ ವನ್ನಾರ್‌ಪೇಟೆ ಸೇರಿ ಒಟ್ಟು 25 ವಾರ್ಡ್‌ಗಳ ಕೊಳಗೇರಿಯಲ್ಲಿ ಹೋಂ ಐಸೋಲೇಷನ್‌ ಇರುವುದಿಲ್ಲ.