ಗದಗನಲ್ಲಿ ಸಂಪೂರ್ಣ ಲಾಕ್‌ಡೌನ್: ತಳ್ಳುವ ಗಾಡಿಯಲ್ಲಿ ಆಸ್ಪತ್ರೆಗೆ ಪತಿ ಕರೆತಂದ ಮಹಿಳೆ..!
* ಗದಗ ನಗರದಲ್ಲೊಂದು ಅಮಾನವೀಯ ಘಟನೆ
* ಬಾಡಿಗೆ ಬರಲು ದುಬಾರಿ ಮೊತ್ತ ಕೇಳಿದ ಖಾಸಗಿ ವಾಹನ ಮಾಲೀಕರು
* ಯಾವುದೇ ವಾಹನ ಸಿಗದೆ ಪರದಾಟ
ಗದಗ(ಮೇ.28): ಕೊರೋನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರದಿಂದ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಪ್ರಾರಂಭವಾಗಿದ್ದು, ಯಾವುದೇ ವಾಹನ ಸಿಗದೇ ಮಹಿಳೆಯೋರ್ವಳು ತನ್ನ ಪತಿಯನ್ನು ತಳ್ಳು ಗಾಡಿ (ನೀರಿನ ಬಂಡಿ)ಯಲ್ಲಿಯೇ 5 ಕಿಮೀ ದೂರದ ಜಿಮ್ಸ್ ಆಸ್ಪತ್ರೆಗೆ ಕರೆ ತಂದ ಅಮಾನವೀಯ ಘಟನೆ ನಡೆದಿದೆ.
ಇಲ್ಲಿಯ ಸಿದ್ದರಾಮೇಶ್ವರ ನಗರದ ನಿವಾಸಿ ಗೋವಿಂದಪ್ಪ ಅವರನ್ನು ಪತ್ನಿ ಚಿಕಿತ್ಸೆಗಾಗಿ ತಳ್ಳುವ ಗಾಡಿಯಲ್ಲಿ ಜಿಮ್ಸ್ ಆಸ್ಪತ್ರೆಗೆ ಕರೆತಂದಿದ್ದಾರೆ. ಸಿದ್ದರಾಮೇಶ್ವರ ನಗರದಿಂದ ಗದಗ ಜಿಮ್ಸ್ ಆಸ್ಪತ್ರೆ ಮಧ್ಯ ಐದು ಕಿಲೋಮೀಟರ್ ಅಂತರವಿದ್ದು, ಅಲ್ಲಿಯವರೆಗೆ ತಳ್ಳಿಕೊಂಡೇ ಸಾಗಿ ಬಂದಿದ್ದಾಳೆ!
ಘಟನೆ ವಿವರ
ಗೋವಿಂದಪ್ಪ ಅವರಿಗೆ ಇತ್ತೀಚಿಗೆ ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ ಮಾಡಿದ ವೇಳೆ ಸಕ್ಕರೆ ಕಾಯಿಲೆ ಗಂಭೀರವಾಗಿರುವುದು ಪತ್ತೆಯಾಗಿದೆ. ಕೂಲಿ ಕಾರ್ಮಿಕರಾಗಿರುವ ಗೋವಿಂದಪ್ಪನವರ ಕಾಲಿನ ಗಾಯ ಗ್ಯಾಂಗ್ರಿನ್ ಆಗಿರುವುದು ಗೊತ್ತಾಗಿದೆ. ವೈದ್ಯರ ಸಲಹೆ ಮೇರೆಗೆ ಕಾಲಿನ ಸ್ವಲ್ಪ ಭಾಗ ತೆಗೆದಿದ್ದಾರೆ. ಗುಣಮುಖರಾಗಿ ಮನೆಗೆ ಹೋಗಿದ್ದಾರೆ.
ಸರ್ಕಾರದ ಆದೇಶಕ್ಕೆ ಕಿಮ್ಮತ್ತೇ ಇಲ್ಲ: ಈ ಊರಿನ ಮಂದಿಗೆ ಹೇಳೋರಿಲ್ಲ, ಕೇಳೋರಿಲ್ಲ..!
ಗುರುವಾರ ಗೋವಿಂದಪ್ಪನ ಆರೋಗ್ಯದಲ್ಲಿ ಅಲ್ಪ ತೊಂದರೆಯಾಗಿದ್ದು, ತಪಾಸಣೆಗಾಗಿ ಜಿಮ್ಸ್ ಆಸ್ಪತ್ರೆ ಕರೆದುಕೊಂಡು ಹೋಗಬೇಕಿತ್ತು. ಆದರೆ, ಸಂಪೂರ್ಣ ಲಾಕ್‌ಡೌನ್ ಜಾರಿಯಾಗಿದ್ದು, ಯಾವುದೇ ವಾಹನ ಸಂಚಾರ ಇಲ್ಲವಿಲ್ಲ. ಬಾಡಿಗೆ ವಾಹನ ಕೇಳಿದರೆ ನಾಲ್ಕರಿಂದ ಐದು ನೂರು ರುಪಾಯಿ ಕೇಳಿದ್ದಾರೆ. ಅಷ್ಟೊಂದು ಹಣ ಭರಿಸಲಾಗದೇ ಕಂಗಾಲಾದ ಮಹಿಳೆ ಮನೆಯಲ್ಲೇ ಇದ್ದ ನೀರಿನ ಬಂಡಿಯಲ್ಲೇ ಗಂಡನನ್ನು ಕೂಡ್ರಿಸಿಕೊಂಡು ಆಸ್ಪತ್ರೆಗೆ ಕರೆದುತಂದಿದ್ದಾಳೆ.
ಇವರಿಗೆ ಗಂಡು ಮಕ್ಕಳಿಲ್ಲ. ಹೆಣ್ಣು ಮಗಳಿದ್ದು ಅವಳ ಮದುವೆಯಾಗಿ ಗಂಡನ ಮನೆಯಲ್ಲಿದ್ದಾಳೆ. ಹೀಗಾಗಿ ಪಕ್ಕದ ಮನೆಯ ಹುಡುಗನೊಂದಿಗೆ ಆಸ್ಪತ್ರೆಗೆ ಬಂದಿದ್ದಾರೆ. ಹೀಗೆ ಪತಿಯನ್ನು ತಳ್ಳುಗಾಡಿಯಲ್ಲಿ ತರುತ್ತಿದ್ದ ಆ ಮಹಿಳೆಯ ಕರುಣಾಜನಕ ಚಿತ್ರಣವನ್ನು ಚಿತ್ರೀಕರಿಸಿ ಯಾರೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಅದೀಗ ಭಾರೀ ವೈರಲ್ ಆಗಿದೆ.
ಯಪ್ಪಾ ನಾನ ಬಡವ. ದವಾಖಾನಿಗೆ ಹೋಗಾಕ ನಮ್ಮತ್ರ ರೊಕ್ ಇಲ್ಲ. ಕಾಲು ಕಟ್ ಮಾಡ್ಯಾರ, ನಡಿಯಾಕ್ ಆಗಾಂಗಿಲ್ಲ. ತೋರ್ಸಾಕ ದವಾಖಾನಿಗೆ ಹೋಗ್ಬೇಕಿತ್ತು ನನ್ ಹೆಂಡತಿ, ಮಗ್ಗಲ ಮನಿ ಹುಡುಗನ್ ಕರೆದುಕೊಂಡು ತಳ್ಳು ಗಾಡ್ಯಾಗ ನನ್ ತಂದಾರ ಎಂದು ತಳ್ಳು ಗಾಡಿಯಲ್ಲಿ ಆಸ್ಪತ್ರೆಗೆ ಬಂದ ವ್ಯಕ್ತಿ ಗೋವಿಂದಪ್ಪ ಕೆ. ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona