ಹೊಸಪೇಟೆ(ಜ.30): ದೀರ್ಘ ಕಾಲ​ದ ಕಾಯಿ​ಲೆ​ಯಿಂದ ಹಾಸಿಗೆ ಹಿಡಿ​ದಿ​ರುವ ನಗ​ರದ ಬಾಲ​ಕ ಕನ್ನಡ ಚಲನಚಿತ್ರ ಖ್ಯಾತ ನಟ, ಪವರ್‌ ಸ್ಟಾರ್‌ ಪುನೀತ್‌ ರಾಜ​ಕು​ಮಾರ್‌ ಅವ​ರನ್ನು ನೋಡುವ ಮತ್ತು ಅವರೊಂದಿಗೆ ಮಾತನಾಡುವ ಆಸೆ​ ವ್ಯಕ್ತಪಡಿಸಿದ್ದಾನೆ.

ನಗ​ರದ ತಳ​ವಾ​ರ​ಕೇರಿ ನಿವಾಸಿ ಆಟೋ ಚಾಲಕ ಜಿ. ಹನುಮಂತಪ್ಪ ಎಂಬು​ವ​ವರ ಪುತ್ರ ಆದರ್ಶ (16) ಪುನೀತ್‌ ಅಭಿಮಾನಿ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸುಮಾರು 16 ವರ್ಷಗಳಿಂದ ಪಾಲಕರು ಆದರ್ಶನನ್ನು ಪೋಷಿಸುತ್ತಿದ್ದಾರೆ. ಇಲ್ಲಿವರೆಗೂ ಕಾಯಿಲೆ ಬಗ್ಗೆ ವೈದ್ಯರು ಯಾವುದೇ ಖಚಿತತೆ ವ್ಯಕ್ತಪಡಿಸಿಲ್ಲ. ಕುಳಿತುಕೊಂಡು ಊಟ ಮಾಡಲು ಆಗುವುದಿಲ್ಲ. ಸದಾ ಮಲಗಿಕೊಂಡ ರೀತಿಯಲ್ಲಿ ಬಾಲಕ ಇರುತ್ತಾನೆ. ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಆದರ್ಶನಿಗೆ ದೇಹದ ಮಾಂಸ-ಖಂಡ ಬೆಳವಣಿಗೆ ಆಗಿಲ್ಲ. ಕುಳಿತ ಜಾಗ​ದಲ್ಲಿ ಕುಳಿ​ತಿ​ರು​ತ್ತಾನೆ. ಅಲ್ಲಿಯೇ ಎಲ್ಲ​ವನ್ನೂ ನಿರ್ವ​ಹಿ​ಸ​ಬೇ​ಕು. ಈ ಬಾಲಕನಿಗೆ ಬೆಂಗಳೂರು ಕೆಲ ಆಸ್ಪ​ತ್ರೆ, ದಾವಣಗೇರಿಯ ಬಾಪೂಜಿ ಆಸ್ಪತ್ರೆ, ತಿರುಪತಿ, ಬರೋಡ ಆಸ್ಪತ್ರೆ ಸೇರಿದಂತೆ ಹಲವು ಕಡೆ ಚಿಕಿತ್ಸೆ ಕೊಡಿ​ಸಿದರೂ ಪ್ರಯೋ​ಜ​ನ​ವಾ​ಗಿ​ಲ್ಲ.
ಮೂವರು ಮಕ್ಕಳಲ್ಲಿ ಆದರ್ಶನೇ ಹಿರಿಯ ಮಗ. ಇನ್ನು ಆದ​ರ್ಶ​ನಿ​ಗೆ ​ಒಬ್ಬ ತಂಗಿ ಮತ್ತು ತಮ್ಮ ಇದ್ದಾರೆ.

ಆದರ್ಶನಿಗೆ ಪುನೀತ್‌ ರಾಜ​ಕು​ಮಾರ್‌ ಎಂದರೆ ಎಲ್ಲಿ​ಲ್ಲದ ಪ್ರೀತಿ. ಅವರ ಸಿನಿಮಾಗಳನ್ನು ಟಿವಿಯಲ್ಲಿ ತಪ್ಪದೇ ನೋಡುತ್ತಾನೆ. ಅಷ್ಟೊಂದು ಪ್ರೀತಿ ಪುನೀತ್‌ ರಾಜಕುಮಾರ್‌ ಅವರ ಮೇಲೆ. ಜೀವ​ನ​ದಲ್ಲಿ ಒಮ್ಮೆ​ಯಾ​ದರೂ ಪುನೀತ್‌ ರಾಜಕುಮಾರ್‌ ಅವ​ರನ್ನು ಹತ್ತಿ​ರ​ದಿಂದ ನೋಡಿ ಮಾತ​ನಾಡುವ ಆಸೆ​ಯಂತೆ. ಈ ವಿಷಯವನ್ನು ತಕ್ಷಣವೇ ಪುನೀತ್‌ ರಾಜಕುಮಾರ್‌ಗೆ ತಿಳಿಸುತ್ತೇವೆ. ಖಂಡಿತವಾಗಿಯೂ ಹೊಸಪೇಟೆಗೆ ಪುನೀತ್‌ ರಾಜ​ಕು​ಮಾರ್‌ ಬಂದು ಬಾಲಕನನ್ನು ನೋಡಿಕೊಂಡು ಹೋಗುತ್ತಾರೆ ಎಂಬ ಭರ​ವ​ಸೆಯ ಮಾತು​ಗ​ಳನ್ನು ಪುನೀತ್‌ ರಾಜಕುಮಾರ್‌ ಅಭಿ​ಮಾ​ನಿ​ಗ​ಳು ಆ ಬಾಲಕನಿಗೆ ಹೇಳುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಬಾಲಕನ ತಂದೆ ಜಿ. ಹನುಮಂತ ಅವರು, ಹೊಸ​ಪೇ​ಟೆ​ಯಲ್ಲಿ ಇತ್ತೀಚಿಗೆ ಟಗರು ಸಿನಿಮಾ ಚಿತ್ರ​ಕ​ರ​ಣ ಸಂದ​ರ್ಭ​ದಲ್ಲಿ ಶಿವರಾಜ​ಕು​ಮಾರ್‌ ಅವ​ರನ್ನು ಮನೆಗೆ ಕರೆ​ದುಕೊಂಡು ಬಂದು ತಮ್ಮ ಮಗ ಆದ​ರ್ಶನ ಆಸೆಯನ್ನು ತಿಳಿಸಬೇಕು ಎಂದು ಅಂದು​ಕೊಂಡಿ​ದ್ದೆ. ಆದರೆ, ಚಿತ್ರೀಕರಣದ ಸಂದರ್ಭದಲ್ಲಿ ಬಾರೀ ಗಲಾಟೆ ಇರುವುದರಿಂದ ಶಿವರಾಜಕುಮಾರ್‌ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಸ್ಥಳೀಯ ಶಾಸಕ ಆನಂದ್‌ ಸಿಂಗ್‌ ಅವರು ಪುನೀತ್‌ ರಾಜ​ಕು​ಮಾರ್‌ನನ್ನು ಭೇಟಿ ಮಾಡಿ​ಸಲು ಸಹಾಯ ಮಾಡುವುದಾಗಿ ಬರ​ವಸೆ ನೀಡಿ​ದ್ದಾ​ರೆ. ಅದು ಯಾವಾಗ ಆಗುತ್ತೋ ನೋಡಣ ಎಂದು ತಿಳಿಸಿದ್ದಾರೆ. 

"