ಬೆಂಗಳೂರು(ಏ.24): ಕೊರೋನಾ ಸೋಂಕು ಹಬ್ಬುವುದನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಲಾಕ್‌ಡೌನ್‌ ಅನ್ನು ರಾಜ್ಯ ಸರ್ಕಾರ ಸಡಿಲಿಸಿದ ಮೊದಲ ದಿನವಾದ ಗುರುವಾರವೇ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹೆಚ್ಚಿನ ನಗರ ಪ್ರದೇಶಗಳಲ್ಲಿ ಜನಸಂಚಾರ, ವಾಹನ ಸಂಚಾರಗಳಲ್ಲಿ ಹಠಾತ್‌ ಹೆಚ್ಚಳ ಕಂಡಿದೆ.

ಲಾಕ್‌ಡೌನ್‌ ಸಡಿಲಿಸಿರುವ 14 ಜಿಲ್ಲೆಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ತಲುಪಿತೋ ಎಂದು ಅನುಮಾನ ಬರುವಷ್ಟರ ಮಟ್ಟಿಗೆ ಜನರು ಸಾಮಾಜಿಕ ಅಂತರವನ್ನು ಮರೆತು ವ್ಯವಹರಿಸಿದ್ದಾರೆ. ಉಳಿದ 16 ಜಿಲ್ಲೆಗಳ ಜಿಲ್ಲಾಡಳಿತ ಲಾಕ್‌ಡೌನ್‌ ಸಡಿಲಗೊಳಿಸುವ ನಿರ್ಧಾರಕ್ಕೆ ಬರದಿದ್ದರೂ ಒಂದೆರಡು ಕಡೆ ಜನ ನಿರ್ಭೀತಿಯಿಂದ ಒಡಾಡಿರುವ ಘಟನೆಗಳೂ ವರದಿಯಾಗಿವೆ.

ಶುಲ್ಕ ಪಾವತಿಗೆ ಖಾಸಗಿ ಶಾಲೆಗಳಿಗೆ ಅನುಮತಿ

ಗುರುವಾರ ಸರಕು-ಸಾಗಣೆ, ಎಪಿಎಂಸಿಗೆ ತೆರಳುವ ವಾಹನಗಳು, ಡಾಟಾ ಮತ್ತು ಕಾಲ್‌ಸೆಂಟರ್‌, ಕೊರಿಯರ್‌ ಸೇವೆ, ಎಲೆಕ್ಟ್ರಿಷಿಯನ್‌, ಐಟಿ ರಿಪೇರಿ, ಪ್ಲಂಬರ್‌ಗಳು, ಮೋಟಾರ್‌ ಮೆಕ್ಯಾನಿಕ್‌ಗಳ ಕೆಲಸಕ್ಕೆ ಅವಕಾಶ ಮಾಡಿಕೊಟ್ಟಹಿನ್ನೆಲೆಯಲ್ಲಿ ಜನರು ತಮ್ಮ ವಾಹನಗಳೊಂದಿಗೆ ಬೇಕಾಬಿಟ್ಟಿರಸ್ತೆಗಿಳಿದಿದ್ದರು.

ಅಗತ್ಯ ವಸ್ತುಗಳು ಮತ್ತು ತುರ್ತು ಪಾಸ್‌ ಪಡೆದವರನ್ನು ಹೊರತುಪಡಿಸಿ ಇತರ ವಾಹನಗಳ ಸಂಖ್ಯೆಯೇ ಹೆಚ್ಚಿತ್ತು. ಬೆಂಗಳೂರಿನಲ್ಲೇ ಎರಡು ಲಕ್ಷಕ್ಕೂ ಅಧಿಕ ವಾಹನಗಳು ರಸ್ತೆಗಿಳಿದಿದ್ದು ಪರಿಸ್ಥಿತಿ ನಿಭಾಯಿಸಲಾಗದೆ ಪೊಲೀಸರು ಬಸವಳಿದರು. ಇದೇವೇಳೆ ಕೊಪ್ಪಳ, ಚಿತ್ರದುರ್ಗಗಳಲ್ಲಿ ಪೊಲೀಸರು ಜನರನ್ನು ಹಿಂದಕ್ಕೆ ಕಳುಹಿಸಿದ, ಅಂಗಡಿಗಳನ್ನು ಮುಚ್ಚಿಸಿದ ಘಟನೆಗಳು ನಡೆದಿವೆ.

ರಜೆಗೆ ಊರಿಗೆ ಬಂದಿದ್ದ ಯೋಧ ಉಸಿರಾಟದ ತೊಂದರೆಯಿಂದ ಸಾವು

16 ಜಿಲ್ಲೆಗಳಲ್ಲಿ ಸಡಿಲವಿಲ್ಲ: ಬುಧವಾರ ಮಧ್ಯರಾತ್ರಿಯಿಂದಲೇ ಲಾಕ್‌ಡೌನ್‌ ಸಡಿಲಿಕೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದರೂ ಅದರ ಅನುಷ್ಠಾನದ ಹೊಣೆಯನ್ನು ಜಿಲ್ಲಾಡಳಿತಕ್ಕೆ ವಹಿಸಿದ್ದರಿಂದ 15 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಸಡಿಲಿಸಿರಲಿಲ್ಲ.

ಬೀದರ್‌, ಮೈಸೂರು, ಕಲಬುರಗಿ, ಮೈಸೂರು, ಮಂಡ್ಯ, ಬೆಳಗಾವಿ, ಬಾಗಲಕೋಟೆ, ಉಡುಪಿ, ಚಿಕ್ಕಬಳ್ಳಾಪುರ, ಗದಗ, ಬಳ್ಳಾರಿ, ರಾಮನಗರ, ಬಳ್ಳಾರಿ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಲಾಕ್‌ಡೌನ್‌ ಅನ್ನು ಯಥಾಸ್ಥಿತಿಯಲ್ಲಿ ಮುಂದುವರಿದಿದ್ದರೆ ಧಾರವಾಡ ಜಿಲ್ಲೆಯಲ್ಲಿ ಮತ್ತಷ್ಟುಬಿಗಿಗೊಳಿಸಲಾಗಿತ್ತು. ಇದೇವೇಳೆ ರಾಯಚೂರು, ಕೊಪ್ಪಳ ಜಿಲ್ಲೆಯ ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಡಿಲಗೊಳ್ಳದಿದ್ದರೂ ಜನ ರಸ್ತೆಗಿಳಿದು ಸಂಚರಿಸಿರುವ ಘಟನೆಗಳು ನಡೆದಿವೆ.