ಹುಬ್ಬಳ್ಳಿ: ನಷ್ಟದ ವಾಯವ್ಯ ಸಾರಿಗೆ ಮೇಲೆತ್ತಲು ಹೊಸ ಪ್ಲ್ಯಾನ್!
ಎಲ್ಲ ಮಾರ್ಗಗಳ ಕಾರ್ಯಸೂಚಿಯಂತೆಯೇ ಬಸ್‌ಗಳ ಓಡಾಟ ನಡೆಯುತ್ತಿದೆ. ಆದರೂ ಡೀಸೆಲ್ ದರ ಏರಿಕೆಯಿಂದ ಆದಾಯದ ಪ್ರಮಾಣ ಹೆಚ್ಚಾಗುತ್ತಿಲ್ಲ
ಶಿವಾನಂದ ಗೊಂಬಿ
ಹುಬ್ಬಳ್ಳಿ(ಜು.31): ನಷ್ಟದಲ್ಲಿರುವ ‘ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ’ಯೂ ಲಾಭದತ್ತ ಕೊಂಡೋಯ್ಯಲು ಇದೀಗ ತನ್ನ ಆಸ್ತಿಗಳನ್ನೇ ಆದಾಯದ ಮೂಲಗಳನ್ನಾಗಿ ಪರಿವರ್ತಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ನಗರದ ಗೋಕುಲ ರಸ್ತೆಯ ಕಚೇರಿಗಳನ್ನು ಸದ್ದಿಲ್ಲದೇ ಸ್ಥಳಾಂತರಿಸಿ, ಆ ಕಟ್ಟಡಗಳನ್ನು ವಾಣಿಜ್ಯೋಪಯೋಗಕ್ಕೆ ನೀಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಎರಡು ಕಚೇರಿಗಳನ್ನು ಸ್ಥಳಾಂತರಿಸಿದ್ದು, ಇನ್ನುಳಿದ ಕೆಲ ಕಚೇರಿಗಳನ್ನು ಸ್ಥಳಾಂತರಿಸಲು ಸಿದ್ಧತೆ ನಡೆಸಿದೆ.
ಬೆಳಗಾವಿ, ಚಿಕ್ಕೋಡಿ, ಹಾವೇರಿ, ಗದಗ, ಬಾಗಲಕೋಟೆ, ಉತ್ತರ ಕನ್ನಡ, ಧಾರವಾಡ, ಹುಬ್ಬಳ್ಳಿ-ಧಾರವಾಡ ನಗರ, ಹುಬ್ಬಳ್ಳಿ ಗ್ರಾಮಾಂತರ ಹೀಗೆ 9 ವಿಭಾಗಗಳನ್ನು ಹೊಂದಿರುವ ದೊಡ್ಡ ನಿಗಮ. ಅಧಿಕಾರಿ ವರ್ಗ, ನೌಕರವರ್ಗ ಸೇರಿ ಬರೋಬ್ಬರಿ 23500ಕ್ಕೂ ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೋನಾ ವಕ್ಕರಿಸಿದ ಮೇಲೆ ನಿಗಮ ವಿಪರೀತ ನಷ್ಟ ಅನುಭವಿಸಿತು. ನೌಕರರಿಗೆ ಕೆಲ ತಿಂಗಳು ಮಟ್ಟಿಗೆ ಅರ್ಧ ಸಂಬಳ ಕೊಟ್ಟಿದ್ದುಂಟು.
ಎಲ್ಲ ಮಾರ್ಗಗಳ ಕಾರ್ಯಸೂಚಿಯಂತೆಯೇ ಬಸ್‌ಗಳ ಓಡಾಟ ನಡೆಯುತ್ತಿದೆ. ಆದರೂ ಡೀಸೆಲ್ ದರ ಏರಿಕೆಯಿಂದ ಆದಾಯದ ಪ್ರಮಾಣ ಹೆಚ್ಚಾಗುತ್ತಿಲ್ಲ. ಸಾರಿಗೆ ಸಂಸ್ಥೆ ಲಾಭದಲ್ಲಿ ನಡೆಯಬೇಕೆಂದರೆ ಕನಿಷ್ಠವೆಂದರೂ ಪ್ರತಿದಿನ . 5.5ರಿಂದ . 6 ಕೋಟಿ ವರೆಗೂ ಆದಾಯವಾಗಬೇಕು. ಆದರೆ ಈಗ . 4.5ರಿಂದ . 5 ಕೋಟಿ ಆಗುತ್ತಿದೆ. ಇದರಿಂದ ಸಂಸ್ಥೆ ನಷ್ಟಅನುಭವಿಸುತ್ತಿದೆ. ಅತ್ತ ಸರ್ಕಾರಕ್ಕೆ . 1100 ಕೋಟಿ ವಿಶೇಷ ಅನುದಾನ ನೀಡುವಂತೆ ಕೋರಿದ್ದರೂ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ತನ್ನ ಆಸ್ತಿಗಳನ್ನು ಆದಾಯದ ಮೂಲಗಳನ್ನಾಗಿ ಪರಿವರ್ತಿಸಲು ಮುಂದಾಗಿದೆ.
ವಾಯವ್ಯ ಸಾರಿಗೆಗೆ ಬರುವ ಗುಜರಿ ಬಸ್‌ನಿಂದಲೂ ಲಾಭ..!
ಯಾವ್ಯಾವ ಕಚೇರಿ:
ಸದ್ಯಕ್ಕೆ ಗೋಕುಲ ರಸ್ತೆಯಲ್ಲಿ ಸಂಸ್ಥೆಯ ಕಟ್ಟಡದಲ್ಲಿದ್ದ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗ ಹಾಗೂ ಹುಬ್ಬಳ್ಳಿ ಗ್ರಾಮಾಂತರ ವಿಭಾಗ ಈ ಎರಡು ಕಚೇರಿಗಳನ್ನು ಹುಬ್ಬಳ್ಳಿ ಸಿಬಿಟಿಯಲ್ಲಿನ ಕಾಂಪ್ಲೆಕ್ಸ್‌ಗೆ ಶಿಫ್‌್ಟಮಾಡಲಾಗಿದೆ. ಗೋಕುಲ ರಸ್ತೆಯೆಂದರೆ ಹುಬ್ಬಳ್ಳಿ ಮಟ್ಟಿಗೆ ಅತ್ಯಂತ ಪ್ರಮುಖ ಜಾಗ. ಇಲ್ಲಿನ ಕಟ್ಟಡಗಳನ್ನು ಬಾಡಿಗೆ ರೂಪದಲ್ಲಿ ಖಾಸಗಿ ಅವರಿಗೆ ನೀಡಿದರೆ ಹೆಚ್ಚಿನ ಆದಾಯ ಬರುತ್ತದೆ. ಜತೆಗೆ ಸಿಬಿಟಿಯಲ್ಲಿನ ಕಾಂಪ್ಲೆಕ್ಸ್ ನಿರ್ಮಾಣ ಮಾಡಿ ಮೂರ್ನಾಲ್ಕು ವರ್ಷ ಕಳೆದರೂ ಯಾವೊಂದು ಮಳಿಗೆಯೂ ಬಾಡಿಗೆ ಹೋಗಿಲ್ಲ. ಈ ಹಿನ್ನೆಲೆಯಲ್ಲಿ ಸಿಬಿಟಿಯಲ್ಲಿನ ಕಾಂಪ್ಲೆಕ್ಸ್‌ಗೆ ಕಚೇರಿ ಸ್ಥಳಾಂತರಿಸಿ, ಗೋಕುಲ ರಸ್ತೆಯಲ್ಲಿನ ಕಟ್ಟಡಗಳನ್ನು ಬಾಡಿಗೆ ನೀಡುವುದು ಸಂಸ್ಥೆಯ ಉದ್ದೇಶ.
ಸದ್ಯಕ್ಕೆ ಈ ಎರಡು ಕಚೇರಿಗಳನ್ನು ಸ್ಥಳಾಂತರಿಸಲಾಗಿದೆ. ಇದರೊಂದಿಗೆ ಮೆಕ್ಯಾನಿಕಲ್ ವಿಭಾಗವನ್ನು ಗೋಕುಲ ರಸ್ತೆಯಲ್ಲಿನ ಬಸ್ ನಿಲ್ದಾಣದೊಳಗೆ ಸ್ಥಳಾಂತರಿಸಿದೆ. ಆ ಕಟ್ಟಡ ಹಾಗೂ ಜಾಗೆಯೂ ಸಿಗುತ್ತದೆ. ಅದನ್ನು ಬಾಡಿಗೆ ರೂಪದಲ್ಲಿ ನೀಡಬಹುದು ಎಂಬ ಆಲೋಚನೆ ಸಂಸ್ಥೆ ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ಬಿಎಂಟಿಸಿ ಹಳೆ ಬಸ್ ಉತ್ತರ ಕರ್ನಾಟಕಕ್ಕೆ..!
ಹೀಗೆ ಪ್ರೈಮ್ ಲೋಕೇಶನ್ ಆಗಿರುವ ಗೋಕುಲ ರಸ್ತೆಯಲ್ಲಿನ ಕಚೇರಿಗಳನ್ನು ಅವಕಾಶವಿದ್ದರೆ ಬೇರೆಡೆ ಕಟ್ಟಡಗಳಿಗೆ ಸ್ಥಳಾಂತರಿಸುವುದು, ಇಲ್ಲವೇ ಅದೇ ಕಟ್ಟಡದ ಹಿಂಬದಿಗೆ ಸ್ಥಳಾಂತರಿಸುವುದು, ಮುಖ್ಯರಸ್ತೆಯಲ್ಲಿನ ಕಟ್ಟಡಗಳನ್ನೆಲ್ಲ ಬಾಡಿಗೆ ಅಥವಾ ಲೀಸ್ ಮೂಲಕ ನೀಡಿದರೆ ಸಂಸ್ಥೆಗೆ ಕಾಯಂ ಸಂಪನ್ಮೂಲ ಕ್ರೋಡೀಕರಣವಾದಂತಾಗುತ್ತದೆ. ಆಗ ಸಂಸ್ಥೆಯ ಆದಾಯ ಹೆಚ್ಚಾಗುತ್ತದೆ ಎಂಬ ಆಲೋಚನೆ ಸಂಸ್ಥೆಯದ್ದು.
ಒಟ್ಟಿನಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯೂ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಹರಸಾಹಸ ಪಡುತ್ತಿರುವುದಂತೂ ಸತ್ಯ. ಇನ್ನಾದರೂ ರಾಜ್ಯ ಸರ್ಕಾರ ಕೊಂಚ ಗಮನಹರಿಸಿ ಈ ಸಂಸ್ಥೆಯ ಪುನಶ್ಚೇತನಕ್ಕೆ ವಿಶೇಷ ಅನುದಾನ ನೀಡಲು ಕ್ರಮ ಕೈಗೊಳ್ಳಬೇಕೆನ್ನುವುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹ.