ಬೆಂಗಳೂರು(ನ.14): ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಗರದಿಂದ ಭಾರೀ ಸಂಖ್ಯೆಯಲ್ಲಿ ಜನರು ಊರುಗಳತ್ತ ಮುಖ ಮಾಡಿದ್ದರಿಂದ ಶುಕ್ರವಾರ ರಾತ್ರಿ ನಗರದ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಕೆಂಪೇಗೌಡ ಬಸ್‌ ನಿಲ್ದಾಣ ಹಾಗೂ ಮೈಸೂರು ಸ್ಯಾಟಲೆಟ್‌ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿತ್ತು. ಜನರು ಬಸ್‌ ಏರಲು ಮುಗಿಬಿದ್ದು, ಕೊರೋನಾ ನಿಯಂತ್ರಣದ ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿದರು.

ಶನಿವಾರ (ನ.14)ನರಕ ಚರ್ತುದರ್ಶಿ, ಭಾನುವಾರ (ನ.15) ಅಮವಾಸ್ಯೆ, ಸೋಮವಾರ (ನ.16) ಬಲಿ ಪಾಡ್ಯಮಿ ಇದೆ. ಈ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಊರುಗಳತ್ತ ಪ್ರಯಾಣ ಬೆಳೆಸಿದರು. ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣ, ಮೈಸೂರು ರಸ್ತೆಯ ಸ್ಯಾಟಲೆಟ್‌ ಬಸ್‌ ನಿಲ್ದಾಣ, ಶಾಂತಿನಗರ ಬಿಎಂಟಿಸಿ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. ಬೆಳಗ್ಗೆ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಮಧ್ಯಾಹ್ನದ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್‌ ನಿಲ್ದಾಣದತ್ತ ಧಾವಿಸಲು ಆರಂಭಿಸಿದರು. ಸಂಜೆ ವೇಳೆಗೆ ತುಂತುರು ಮಳೆಯ ನಡುವೆಯೂ ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್‌ ನಿಲ್ದಾಣಗಳತ್ತ ದಾಂಗುಡಿ ಇಟ್ಟರು.

ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ತುಮಕೂರು ಸೇರಿದಂತೆ ಉತ್ತರ ಕರ್ನಾಟಕದ ಬೀದರ್‌, ಕಲಬುರಗಿ, ಧಾರವಾಡ, ಹುಬ್ಬಳ್ಳಿ, ಬಳ್ಳಾರಿ, ಶಿವಮೊಗ್ಗ, ದಾವಣಗೆರೆ, ರಾಯಚೂರು, ಹಾವೇರಿ ಸೇರಿದಂತೆ ರಾಜ್ಯದ ವಿವಿಧೆಡೆಗೆ ತೆರಳಿದರು. ಅಂತೆಯೆ ಹೊರ ರಾಜ್ಯದ ಹೈದರಾಬಾದ್‌, ತಿರುಪತಿ, ವಿಜಯವಾಡ, ಹೊಸೂರು, ಕೊಯಮತ್ತೂರು, ಕೊಚ್ಚಿ, ಕಲ್ಲಿಕೋಟೆ ಮೊದಲಾದ ನಗರಗಳಿಗೂ ತೆರಳುವ ಬಸ್‌ಗಳು ಪ್ರಯಾಣಿಕರಿಂದ ಭರ್ತಿಯಾಗಿದ್ದವು.

ದೀಪಾವಳಿ ಪ್ರಯುಕ್ತ ಕೆಎಸ್ಸಾರ್‌ಟಿಸಿಯಿಂದ 1000 ಹೆಚ್ಚುವರಿ ಬಸ್‌

ಸೀಟು ಹಿಡಿಯಲು ಓಡಾಟ:

ಕುಟುಂಬದ ಸದಸ್ಯರು, ಹಿರಿಯ ನಾಗರಿಕರು, ಪುಟಾಣಿ ಮಕ್ಕಳೊಂದಿಗೆ ಬಸ್‌ ಏರಲು ಬಂದಿದ್ದವರು ಪ್ಲಾಟ್‌ ಫಾಮ್‌ರ್‍ಗಳಲ್ಲಿ ನಿಲುಗಡೆ ಮಾಡಿದ್ದ ಬಸ್‌ಗಳಲ್ಲಿ ಸೀಟು ಹಿಡಿಯಲು ಓಡಾಡುತ್ತಿದ್ದರು. ಕಿಟಕಿಗಳಲ್ಲಿ ಕರವಸ್ತ್ರ, ಟವೆಲ್‌, ಬ್ಯಾಗ್‌ ಇತ್ಯಾದಿ ವಸ್ತುಗಳನ್ನು ಹಾಕಿ ಸೀಟ್‌ ತಮ್ಮದಾಗಿಸಿಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂದಿತು. ಇನ್ನು ಊರುಗಳಿಗೆ ತೆರಳುವ ಸಂಭ್ರಮದಲ್ಲಿ ಸಾಮಾಜಿಕ ಅಂತರ ನಿಯಮವನ್ನು ಉಲ್ಲಂಘಿಸಿದರು. ಜನರು ಬಸ್‌ ಏರಲು ಮುಗಿಬೀಳುತ್ತಿದ್ದ ದೃಶ್ಯಗಳು ಕಾಣಸಿಕ್ಕವು. ಬಸ್‌ ಏರುವಾಗ ಹಾಗೂ ಇಳಿಯುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಧ್ವನಿವರ್ಧಕದಲ್ಲಿ ಹೇಳುತ್ತಿದ್ದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.

1 ಸಾವಿರ ಹೆಚ್ಚುವರಿ ಬಸ್‌:

ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಶುಕ್ರವಾರದಿಂದ ನಗರದಿಂದ ರಾಜ್ಯ ಹಾಗೂ ಹೊರರಾಜ್ಯದ ವಿವಿಧ ಸ್ಥಳಗಳಿಗೆ ಒಂದು ಸಾವಿರಕ್ಕೂ ಹೆಚ್ಚುವರಿ ಬಸ್‌ ಕಾರ್ಯಾಚರಣೆ ಮಾಡಲು ಮುಂದಾಗಿತ್ತು. ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಯಿತು. ಹೊರರಾಜ್ಯಗಳಿಗೆ ಶಾಂತಿನಗರ ಬಿಎಂಟಿಸಿ ಬಸ್‌ ನಿಲ್ದಾಣದಿಂದ ಹೆಚ್ಚಿನ ಸಂಖ್ಯೆ ಬಸ್‌ಗಳನ್ನು ಕಾರ್ಯಾಚರಿಸಲಾಯಿತು. ಶನಿವಾರವೂ ಹೆಚ್ಚುವರಿ ಕಾರ್ಯಾಚರಣೆ ಇರಲಿದ್ದು, ಭಾರೀ ಸಂಖ್ಯೆಯಲ್ಲಿ ಜನರು ಊರುಗಳತ್ತ ತೆರಳುವ ಸಾಧ್ಯತೆಯಿದೆ.

ಖಾಸಗಿ ಬಸ್‌ಗಳಿಗೂ ಪ್ರಯಾಣಿಕರು:

ಕೊರೋನಾ ಹಿನ್ನೆಲೆಯಲ್ಲಿ ಇಷ್ಟು ದಿನ ಪ್ರಯಾಣಿಕರ ಕೊರತೆ ಎದುರಿಸುತ್ತಿದ್ದ ಖಾಸಗಿ ಬಸ್‌ಗಳಿಗೂ ಶುಕ್ರವಾರ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮೌರ್ಯ ವೃತ್ತ, ಯಶವಂತಪುರ, ರಾಜಾಜಿನಗರ, ಗೊರಗುಂಟೆ ಪಾಳ್ಯ, ಕೆ.ಆರ್‌.ಪುರ ಮೊದಲಾದ ಸ್ಥಳಗಳ ಪ್ರಮುಖ ವೃತ್ತಗಳಲ್ಲಿ ಪ್ರಯಾಣಿಕರು ಖಾಸಗಿ ಬಸ್‌ಗಳಿಗಾಗಿ ಕಾಯುತ್ತಾ ನಿಂತಿದ್ದರು. ಆನಂದರಾವ್‌ ವೃತ್ತದಲ್ಲಿ ಖಾಸಗಿ ಬಸ್‌ಗಳಿಗೆ ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಕಾಯುತ್ತಿದ್ದರು.