ಈಗಾಗಲೇ ಮೆಟ್ರೋ ನೇರಳೆ ಹಾಗೂ ಹಸಿರು ಮಾರ್ಗ ಸೇರಿ ಸುಮಾರು 47 ಕಿ.ಮೀ. ಉದ್ದಕ್ಕೆ ವಿಭಜಕ ಭಾಗದಲ್ಲಿ ಸಸಿಗಳನ್ನು ನೆಟ್ಟು ಪೋಷಿಸುತ್ತಿದೆ. ಪಿಲ್ಲರ್‌ಗಳ ಮೇಲೆಯೂ ವರ್ಟಿಕಲ್‌ ಗಾರ್ಡನಿಂಗ್‌ ಮಾಡಿದೆ. ಇವು ನಗರದ ಸೌಂದರ್ಯವನ್ನು ಹೆಚ್ಚಿಸಿದ್ದು, ರಸ್ತೆ ಪ್ರಯಾಣಿಕರನ್ನು ಆಕರ್ಷಿಸುತ್ತಿವೆ. 

ಬೆಂಗಳೂರು(ಏ.13):  ಏರ್‌ಪೋರ್ಟ್‌ ಕಾರಿಡಾರ್‌ ಸೇರಿ ನಮ್ಮ ಮೆಟ್ರೋದ ಮುಂಬರುವ ಐದು ಮಾರ್ಗಗಳಲ್ಲಿ ವಯಡಕ್ಟ್ ಕೆಳಭಾಗದ ರಸ್ತೆಯ ವಿಭಜಕ ಭಾಗ ಹಸಿರೀಕರಣಕ್ಕಾಗಿ ಬಿಎಂಆರ್‌ಸಿಎಲ್‌ 14ಕ್ಕೂ ಹೆಚ್ಚು ಕಾರ್ಪೋರೆಟ್‌ ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದೆ.

ಈಗಾಗಲೇ ಮೆಟ್ರೋ ನೇರಳೆ ಹಾಗೂ ಹಸಿರು ಮಾರ್ಗ ಸೇರಿ ಸುಮಾರು 47 ಕಿ.ಮೀ. ಉದ್ದಕ್ಕೆ ವಿಭಜಕ ಭಾಗದಲ್ಲಿ ಸಸಿಗಳನ್ನು ನೆಟ್ಟು ಪೋಷಿಸುತ್ತಿದೆ. ಪಿಲ್ಲರ್‌ಗಳ ಮೇಲೆಯೂ ವರ್ಟಿಕಲ್‌ ಗಾರ್ಡನಿಂಗ್‌ ಮಾಡಿದೆ. ಇವು ನಗರದ ಸೌಂದರ್ಯವನ್ನು ಹೆಚ್ಚಿಸಿದ್ದು, ರಸ್ತೆ ಪ್ರಯಾಣಿಕರನ್ನು ಆಕರ್ಷಿಸುತ್ತಿವೆ. ಈವರೆಗೆ ಟೆಂಡರ್‌ ಸ್ವರೂಪದಲ್ಲಿ ಈ ಉದ್ಯಾನವನ್ನು ಮೆಟ್ರೋ ನಿರ್ಮಾಣ ಮಾಡುತ್ತಿತ್ತು. ಆದರೆ, ಇದೀಗ ಕಾರ್ಪೋರೆಟ್‌ ಕಂಪನಿಗಳ ಸಹಯೋಗದಲ್ಲಿ ಹಸರೀಕರಣಕ್ಕೆ ಮೆಟ್ರೋ ಯೋಜಿಸಿದೆ.

ಬೆಂಗಳೂರು: ದೇಶದ ಅತೀ ಉದ್ದದ ಮೆಟ್ರೋ ಸುರಂಗ 75% ಪೂರ್ಣ

ಎಲ್ಲೆಲ್ಲಿ: 

ಮೆಟ್ರೋ ಹೊಸೂರು ಕಾರಿಡಾರ್‌ನ (ರೀಚ್‌-5) ಆರ್‌.ವಿ.ರಸ್ತೆ ಬೊಮ್ಮಸಂದ್ರ ಮಾರ್ಗದ ಜಯದೇವ ಹಾಸ್ಪಿಟಲ್‌ ಸ್ಟೇಷನ್‌-ಬಿಟಿಎಂ ಲೇಔಟ್‌ ಸ್ಟೇಷನ್‌ ಸೇರಿ ಹೆಬ್ಬಗೋಡಿಯಿಂದ ಬೊಮ್ಮಸಂದ್ರದವರೆಗಿನ ಮಾರ್ಗದಲ್ಲಿ ಗಾರ್ಡನಿಂಗ್‌ ಹಾಗೂ ಪಿಲ್ಲರ್‌ಗಳಿಗೆ ಬಣ್ಣ ಬಳಿದು ಸೌಂದರ್ಯ ಹೆಚ್ಚಿಸಲು ಸುಮಾರು ಹದಿನೈದು ಕಂಪನಿಗಳ ನೆರವು ಕೋರಿತ್ತು.

ಇದೇ ರೀತಿ ಎತ್ತರಿಸಿದ ಮಾರ್ಗ (ರೀಚ್‌-6) ಡೇರಿ ಸರ್ಕಲ್‌ನಿಂದ ಜೆ.ಪಿ.ನಗರ-ಹುಳಿಮಾವು ಗೊಟ್ಟಿಗೆರೆವರೆಗೆ, ತುಮಕೂರು ರಸ್ತೆ ಕಾರಿಡಾರ್‌ (ರೀಚ್‌-2ಎ) ರೇಷ್ಮೇ ಕೇಂದ್ರದಿಂದ ಎಚ್‌ಎಸ್‌ಆರ್‌ ಲೇಔಟ್‌, ಡಿಆರ್‌ಡಿಒ, ಸರಸ್ವತಿಪುರ ಹಾಗೂ ಏರ್‌ಪೋರ್ಟ್‌ ಮೆಟ್ರೋ ಮಾರ್ಗ (ರೀಚ್‌ 2ಬಿ) ಇಲ್ಲೆಲ್ಲ ವಿಭಜಕ ಭಾಗದಲ್ಲಿ ಉದ್ಯಾನ ನಿರ್ಮಿಸಿಕೊಳ್ಳಲು ಯೋಜಿಸಿದೆ.

ಕಳೆದ ಫೆಬ್ರವರಿಯಲ್ಲೇ ಸುಮಾರು 55 ಕಂಪನಿಗಳನ್ನು ಸಂಪರ್ಕಿಸಿದ್ದ ನಮ್ಮ ಮೆಟ್ರೋ ಕಿರು ಉದ್ಯಾನಗಳ ನಿರ್ಮಾಣ, ನಿರ್ವಹಣೆಗೆ ಕೈಜೋಡಿಸುವಂತೆ ಒಪ್ಪಂದಕ್ಕೆ ಮನವಿ ಮಾಡಿತ್ತು. ಸುಸ್ಥಿರ ಪರಿಸರಕ್ಕಾಗಿ ಕಂಪನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕಾ ನಿಧಿಯಡಿ ಅಥವಾ ಇತರೆ ಅನುದಾನದಲ್ಲಿ ಉದ್ಯಾನಗಳನ್ನು ರೂಪಿಸಲು ಕೈಜೋಡಿಸುವಂತೆ ಕೋರಿತ್ತು.

ಬೆಂಗಳೂರು: ಮೆಟ್ರೋದಲ್ಲಿ ಇಂದಿನಿಂದ ಮೊಬಿಲಿಟಿ ಕಾರ್ಡ್‌ ಲಭ್ಯ

ಅದರಂತೆ ಹಲವು ಕಂಪನಿಗಳು ಮುಂದೆ ಬಂದಿದ್ದು, ಪ್ರಸ್ತುತ ಯುನೈಟೆಡ್‌ ವೇಸ್‌ ಆಫ್‌ ಬೆಂಗಳೂರು, ಸ್ಪರ್ಷ ಹಾಸ್ಪಿಟಲ್‌, ಡಿಸ್ಕವರಿ ವಿಲೇಜ್‌, ಹಿಟಾಚಿ ಎನರ್ಜಿ ಟೆಕ್ನಾಲಜಿ, ಸ್ಯಾಪ್‌ ಲ್ಯಾಬ್‌ ಇಂಡಿಯಾ ಪ್ರೈ.ಲಿ. ಸೇರಿ ಸುಮಾರು ಹದಿನಾಲ್ಕಕ್ಕೂ ಹೆಚ್ಚು ಕಂಪನಿಗಳ ಜೊತೆಗೆ ಬಿಎಂಆರ್‌ಸಿಎಲ್‌ ಒಡಂಬಡಿಕೆ ಮಾಡಿಕೊಂಡಿದೆ. ಮಿಡೈನ್‌ ಭಾಗದ ನಿರ್ಮಾಣ, ಅದರ ಇಕ್ಕೆಲದಲ್ಲಿ ಸಸಿಗಳ ರಕ್ಷಣೆಗೆ ಗ್ರಿಲ್‌ಗಳ ವ್ಯವಸ್ಥೆಯನ್ನು ಮೆಟ್ರೋ ಮಾಡಿಕೊಡಲಿದೆ. ಸಸಿಗಳನ್ನು ನೆಡುವುದು, ನೀರು ಹಾಕುವುದು ಸೇರಿ ಪೋಷಣೆ ಮಾಡುವುದನ್ನು ಕಂಪನಿಗಳು ನಿರ್ವಹಿಸಬೇಕಿದೆ.

ಎಲೆಕ್ಟ್ರಾನಿಕ್‌ ಸಿಟಿ ಮಾರ್ಗ, ಬನ್ನೇರುಘಟ್ಟಮಾರ್ಗ, ಏರ್‌ಪೋರ್ಟ್‌ ಹಾಗೂ ಔಟರ್‌ ರಿಂಗ್‌ರೋಡ್‌ ಮೆಟ್ರೋ ಮಾರ್ಗಗಳಲ್ಲೂ ವಯಡಕ್ಟ್ ಕೆಳಗೆ ಉದ್ಯಾನ ರೂಪಿಸಿಕೊಳ್ಳಲು ಮುಂದಾಗಿದೆ. ಹೊಸ ಮಾರ್ಗಗಳಲ್ಲಿ ಹಸಿರೀಕರಣ ಮಾಡಲು ಯೋಜಿಸಿದ್ದೇವೆ. ಇದಕ್ಕಾಗಿ ಕಾರ್ಪೋರೆಟ್‌ ಕಂಪನಿಗಳು ಕೈಜೋಡಿಸಲು ಮುಂದೆ ಬಂದಿವೆ. ಟೆಂಡರ್‌ ಮಾದರಿಯಲ್ಲೇ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಮತ್ತಷ್ಟುಕಂಪನಿಗಳು ಈ ಕಾರ್ಯಕ್ಕೆ ನೆರವಾಗುವ ವಿಶ್ವಾಸವಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.