ಬೆಂಗಳೂರು: ದೇಶದ ಅತೀ ಉದ್ದದ ಮೆಟ್ರೋ ಸುರಂಗ 75% ಪೂರ್ಣ

ಭರದಿಂದ ಸಾಗಿದೆ 13.9 ಕಿ.ಮೀ. ಮೆಟ್ರೋ ಸುರಂಗ ಮಾರ್ಗ ಕೊರೆಯುವ ಕೆಲಸ, 2024ರ ಅಂತ್ಯಕ್ಕೆ ಭೂಗತ ಮಾರ್ಗ ಕೆಲಸ ಸಂಪೂರ್ಣ? 

Indias Longest Metro Tunnel 75 Percent Complete in Bengaluru grg

ಬೆಂಗಳೂರು(ಏ.11):  ನಮ್ಮ ಮೆಟ್ರೋದ ಮಹತ್ವದ ಸುರಂಗ ಮಾರ್ಗದ ಕಾಮಗಾರಿ ಮುಕ್ಕಾಲು ಭಾಗ ಮುಗಿದಿದೆ. ಮುಂದಿನ ವರ್ಷಾಂತ್ಯಕ್ಕೆ ಭೂಗತ ಮಾರ್ಗದ ಸಿವಿಲ್‌ ಕಾರ್ಯ ಪೂರ್ಣಗೊಳಿಸುವ ಗುರಿಯೊಂದಿಗೆ ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ಕೆಲಸ ಮುಂದುವರಿಸಿದೆ.

ಡೈರಿ ಸರ್ಕಲ್‌ನಿಂದ ನಾಗವಾರದವರೆಗಿನ 13.9 ಕಿಮೀ ಉದ್ದದ ಈ ಭೂಗತ ಮೆಟ್ರೋ ದೇಶದಲ್ಲೇ ಅತಿದೊಡ್ಡದಾದ ಸುರಂಗ ಮಾರ್ಗ ಎನ್ನಿಸಿದೆ. ಮೆಟ್ರೋದ ಗೊಟ್ಟಿಗೇರೆ-ನಾಗವಾರದವರೆಗಿನ 21.30 ಕಿ.ಮೀ. ಗುಲಾಬಿ ಮಾರ್ಗದ ಭಾಗವಾಗಿರುವ ಸುರಂಗ ಮಾರ್ಗದ ಕಾಮಗಾರಿ ಚುರುಕಿನಿಂದ ಸಾಗಿದೆ.

ಬೆಂಗಳೂರು: ಮೆಟ್ರೋದಲ್ಲಿ ಇಂದಿನಿಂದ ಮೊಬಿಲಿಟಿ ಕಾರ್ಡ್‌ ಲಭ್ಯ

ಸುರಂಗ ಕೊರೆಯುವಲ್ಲಿ ತೊಡಗಿಸಿಕೊಂಡಿದ್ದ ಒಂಬತ್ತರ ಪೈಕಿ ಐದು ಟಿಬಿಎಂ ತಮ್ಮ ಕಾರ್ಯವನ್ನು ಪೂರ್ಣಗೊಳಿಸಿವೆ. ಈವರೆಗೆ ಒಟ್ಟಾರೆ ಶೇ.74.90ರಷ್ಟು(ಸುಮಾರು 17,000 ಮೀ.) ಸುರಂಗ ಕೊರೆಯುವ ಕಾರ್ಯ ಮುಗಿದಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ. ಎಂಜಿನಿಯರ್‌ಗಳು, ಸಿವಿಲ್‌ ಸಿಬ್ಬಂದಿ ಸೇರಿ 625ಕ್ಕೂ ಹೆಚ್ಚಿನವರು ಪ್ರತಿನಿತ್ಯ ಈ ಭೂಗತ ಮಾರ್ಗ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ.

ಸದ್ಯದ ಕಾಮಗಾರಿ:

ರುದ್ರ ಹೆಸರಿನ ಸುರಂಗ ಕೊರೆಯುವ ಯಂತ್ರ (ಟಿಬಿಎಂ) ಡೈರಿ ಸರ್ಕಲ್‌ನಿಂದ ಲಕ್ಕಸಂದ್ರದ ಸ್ಟೇಷನ್‌ವರೆಗೆ ಉತ್ತರಾಭಿಮುಖವಾಗಿ ಸುರಂಗ ಕೊರೆಯುತ್ತಿದ್ದು, ಈವರೆಗೆ ಶೇ.62ರಷ್ಟುಕಾಮಗಾರಿ ಪೂರ್ಣಗೊಳಿಸಿ ಕೆಲಸ ಮುಂದುವರಿಸಿದೆ. ವಾಮಿಕಾ ಟಿಬಿಎಂ ಶೇ.67ರಷ್ಟುಸಾಧನೆಯೊಂದಿಗೆ ಲಕ್ಕಸಂದ್ರದಿಂದ ಲಾಂಗ್‌ಫೋರ್ಡ್‌ ಟೌನ್‌ ನಿಲ್ದಾಣದವರೆಗೆ ದಕ್ಷಿಣಕ್ಕೆ ಸುರಂಗದ ಕೆಲಸ ಮುಂದುವರಿಸಿದೆ. ಭದ್ರಾ ಟಿಬಿಎಂ ಉತ್ತರಾಭಿಮುಖವಾಗಿ ವೆಂಕಟೇಶಪುರದಿಂದ ಕಾಡುಗೊಂಡನಹಳ್ಳಿವರೆಗೆ ಶೇ.35 ಹಾಗೂ ತುಂಗಾ ಟಿಬಿಎಂ ವೆಂಕಟೇಶಪುರದಿಂದ ದಕ್ಷಿಣಾಭಿಮುಖವಾಗಿ ಕಾಡುಗೊಂಡನಹಳ್ಳಿ ಮಾರ್ಗವಾಗಿ ಸುರಂಗ ಕೊರೆಯುತ್ತ ಸಾಗಿದ್ದು, ಶೇ.44ರಷ್ಟುಕಾಮಗಾರಿ ಮುಗಿಸಿದೆ.

ಬಿಡ​ದಿ​ಯಲ್ಲಿ ಟೌನ್‌ಶಿಪ್‌ ನಿರ್ಮಿಸಿ ಬಿಡದಿಗೆ ಮೆಟ್ರೋ ಬಗ್ಗೆ ಚಿಂತನೆ: ಸಿಎಂ ಬೊಮ್ಮಾಯಿ

ಕೆಲಸ ಮುಗಿಸಿದ 5 ಯಂತ್ರಗಳು

ರಾಷ್ಟ್ರೀಯ ಮಿಲಿಟರಿ ಶಾಲೆಯಿಂದ ಶಿವಾಜಿ ನಗರ ನಡುವೆ 2.7 ಕಿ.ಮೀ. ಉದ್ದದ ಸುರಂಗವನ್ನು ಟಿಬಿಎಂ ಅವನಿ ಮತ್ತು ಲಾವಿ ಕೊರೆದಿವೆ. ಇಲ್ಲಿ ಕಾರ್ಯನಿರ್ವಹಿಸಿದ್ದ ವರದಾ 594 ಮೀ. ಸುರಂಗ ಕೊರೆದು ತನ್ನ ಕೆಲಸ ಮುಗಿಸಿತ್ತು. ಉಳಿದಂತೆ ಟಿಬಿಎಂ ಲಾವಿ ಎಂ.ಜಿ.ರಸ್ತೆಯಿಂದ ವೆಲ್ಲಾರದವರೆಗೆ ಹಾಗೂ ಟಿಬಿಎಂ ಊರ್ಜಾ ಎರಡು ಡ್ರೈವ್‌ಗಳಲ್ಲಿ ಕೆಲಸ ನಿರ್ವಹಿಸಿ ದಂಡು ರೈಲ್ವೇ ನಿಲ್ದಾಣದಿಂದ ಪಾಟರಿ ಟೌನ್‌ ನಿಲ್ದಾಣದವರೆಗೆ ಭೂಗತ ದಾರಿ ಕೊರೆದಿದೆ. ಉಳಿದಂತೆ ವಿಂಧ್ಯಾ ಟಿಬಿಎಂ ಪಾಟರಿ ಟೌನ್‌ ಸ್ಟೇಷನ್‌ನಿಂದ ರಿಟ್ರಿವಲ್‌ ಶಾಫ್ಟ್‌ವರೆಗೆ ಸುರಂಗ ನಿರ್ಮಿಸಿದೆ.

ಒಟ್ಟಾರೆ ಈ ಮಾರ್ಗದ ಕಾಮಗಾರಿ 11,500 ಕೋಟಿ ಮೊತ್ತದಲ್ಲಿ ನಾಲ್ಕು ಪ್ಯಾಕೇಜ್‌ನಲ್ಲಿ ಸಾಗಿದೆ. ಸುರಂಗದಡಿಯ ಸಿವಿಲ್‌ ಕಾಮಗಾರಿ 2024ರ ಅಂತ್ಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. 12 ನಿಲ್ದಾಣ ಹಾಗೂ ಎತ್ತರಿಸಿದ ಮಾರ್ಗದಲ್ಲಿನ 6 ನಿಲ್ದಾಣಗಳ ಕೆಲಸ, ಆದರೆ ಟ್ರ್ಯಾಕ್‌ ಅಳವಡಿಕೆ, ಸಿಗ್ನಲಿಂಗ್‌, ವಿದ್ಯುತ್‌ ಸಂಪರ್ಕ, ಸುರಕ್ಷತಾ ಕ್ರಮದ ಕಾಮಗಾರಿ ಸೇರಿ ಸಂಪೂರ್ಣ ಕೆಲಸ ಮುಗಿದು ಜನಸಂಚಾರಕ್ಕೆ ಮುಕ್ತವಾಗಬೇಕಾದರೆ ಇನ್ನೆರಡು ವರ್ಷ ಕಾಯಬೇಕಿದೆ.

Latest Videos
Follow Us:
Download App:
  • android
  • ios