Asianet Suvarna News Asianet Suvarna News

ತಂದೆ ತಾಯಿ ಮೇಲಿನ ಪ್ರೀತಿಗಾಗಿ ಜನರಿಗೆ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಿ ಕೊಟ್ಟ ಮಕ್ಕಳು

* ಹೆತ್ತವರ ಹೆಸರಲ್ಲಿ ಸಮಾಜಕ್ಕೆ ಮಕ್ಕಳಿಂದ ಅತ್ಯಮೂಲ್ಯ ಕೊಡುಗೆ
* ತಂದೆ ತಾಯಿಯ ಮೇಲಿನ ಪ್ರೀತಿಗಾಗಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಿ ಕೊಟ್ಟ ಮಕ್ಕಳು
* ಬರೋಬ್ಬರಿ 40 ಲಕ್ಷ ರೂ. ವೆಚ್ಚದ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ

parents Love Sons build high-tech Bus Stand For Publics In Udupi rbj
Author
Bengaluru, First Published Jun 7, 2022, 3:50 PM IST

ವರದಿ- ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ, (ಜೂನ್.07)
:ತಮ್ಮ ಹುಟ್ಟಿಗೆ ಕಾರಣರಾದ ತಂದೆ ತಾಯಿಯ ಬಗ್ಗೆ ಎಷ್ಟು ಪ್ರೀತಿ ಮಮತೆ ವ್ಯಕ್ತಪಡಿಸಿದರೂ ಕಡಿಮೆ. ನಮಗೆ ಸುಂದರ ಬಾಲ್ಯವನ್ನು ಕೊಟ್ಟ ಪೋಷಕರಿಗೆ ಹೆಮ್ಮೆ ತರುವಂತಹ ಕೆಲಸ ಮಾಡಬೇಕು. ಅಂತಹ ಮಾದರಿ ಕೆಲಸ ಮಾಡಿರುವ ಮಕ್ಕಳು ಹೆತ್ತವರ ಹೆಸರಲ್ಲಿ ಸಮಾಜಕ್ಕೆ ಅತ್ಯಮೂಲ್ಯ ಕೊಡುಗೆಯೊಂದನ್ನು ಕೊಟ್ಟಿದ್ದಾರೆ.

ಇದೊಂದು ಅಪರೂಪದ ವಿದ್ಯಮಾನ. ಉಡುಪಿಯ ಶಿರ್ವ ಗ್ರಾಮದ ಅಟ್ಟಿಂಜೆ ಶಂಭು ಶೆಟ್ಟಿ ಮತ್ತು ಹೇಮಲತಾ ಶೆಟ್ಟಿಯವರ ವಿವಾಹ ವಾರ್ಷಿಕೋತ್ಸವದ ಸ್ವರ್ಣ ಮಹೋತ್ಸವದ ಸವಿನೆನಪಿಗಾಗಿ ಅವರ ಮಕ್ಕಳು ಊರವರಿಗೆ ಅಪರೂಪದ ಕೊಡುಗೆ ನೀಡಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 40 ಲಕ್ಷ ರೂ. ವೆಚ್ಚದ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಿ ಸಮಾಜಕ್ಕೆ ಹಸ್ತಾಂತರಿಸಿದ್ದಾರೆ.

ಹೌದು ,ತಂದೆ ತಾಯಿ ಹೆಸರು ಅಜರಾಮರಗೊಳಿಸಲು ಈ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಿ ಶಿರ್ವ ಗ್ರಾ.ಪಂ. ಗೆ ಕೊಡುಗೆಯಾಗಿ ನೀಡಲಾಗಿದೆ.ನೂತನ ಬಸ್ ನಿಲ್ದಾಣವನ್ನು ಶಿರ್ವ ಅಟ್ಟಿಂಜೆ ಶಂಭು ಶೆಟ್ಟಿ ಮತ್ತು ಹೇಮಲತಾ ಶೆಟ್ಟಿ ದಂಪತಿಗಳೇ ಉದ್ಘಾಟಿಸಿದರು. 

Yadgir: ತಾಯಿಗಾಗಿ ದೇವಸ್ಥಾನ ಕಟ್ಟಿದ ಶಾಸಕ ರಾಜೂಗೌಡ: ಅಮೃತ ಶಿಲೆಯಿಂದ ನಿರ್ಮಾಣ

ಬಳಿಕ ಶಿರ್ವ ಮಹಿಳಾ ಸೌಧದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಆಗಮ ವಿದ್ವಾಂಸ ಕುತ್ಯಾರು ಕೇಂಜ ಶ್ರೀಧರ ತಂತ್ರಿ, ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು ರೆ|ಫಾ| ಡೆನ್ನಿಸ್‌ ಡೇಸಾ ಮತ್ತು ಶಿರ್ವ ಸುನ್ನಿ ಜಾಮಿಯಾ ಮಸೀದಿಯ ಖತೀಬರಾದ ಸಿರಾಜುದ್ದೀನ್‌ ಝೈನಿ ದೀಪ ಬೆಳಗಿಸಿ ಉದ್ಘಾಟಿಸಿದರು. 

parents Love Sons build high-tech Bus Stand For Publics In Udupi rbj

ವಿವಾಹ ವಾರ್ಷಿಕೋತ್ಸವದ ಸ್ವರ್ಣ ಮಹೋತ್ಸವ ಆಚರಿಸುತ್ತಿರುವ ಅಟ್ಟಿಂಜೆ ಶಂಭು ಶೆಟ್ಟಿ ದಂಪತಿಯನ್ನು ಶಿರ್ವ ಗ್ರಾ.ಪಂ. ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು. ಮುಖ್ಯಅತಿಥಿ ಎಲ್ಲೂರು ಸೀಮೆಯ ಆಗಮ ವಿದ್ವಾಂಸ ಕುತ್ಯಾರು ಕೇಂಜ ಶ್ರೀಧರ ತಂತ್ರಿ ಮಾತನಾಡಿ, ಮನುಷ್ಯನ ಲೌಕಿಕ ಯಾತ್ರೆಯ ತಾಣ ಬಸ್ಸು ತಂಗುದಾಣವಾಗಿದ್ದು, ದೇವರು ಕೊಟ್ಟ ಸಂಪತ್ತನ್ನು ಸಮಾಜಕ್ಕಾಗಿ ವಿನಿಯೋಗಿಸಿದಾಗ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು. 

ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು ರೆ|ಫಾ| ಡೆನ್ನಿಸ್‌ ಡೇಸಾ ಮಾತನಾಡಿ ಬಸ್‌ ನಿಲ್ದಾಣ ಎಲ್ಲರನ್ನೂ ಒಗ್ಗೂಡಿಸುವ ಸಾಮರಸ್ಯದ ತಾಣವಾಗಿದ್ದು, ಸಮಾಜಕ್ಕೆ ಕೊಡುಗೆ ನೀಡಿದ ಶಂಭು ಶೆಟ್ಟಿ ದಂಪತಿ ಮತ್ತು ಮಕ್ಕಳನ್ನು ಅಭಿನಂದಿಸಿದರು. ಶಿರ್ವ ಸುನ್ನಿ ಜಾಮಿಯಾ ಮಸೀದಿಯ ಖತೀಬರಾದ ಸಿರಾಜುದ್ದೀನ್‌ ಝೈನಿ ಮಾತನಾಡಿ ಸ್ನೇಹ,ಸೌಹಾರ್ದತೆ ಮತ್ತು ಸಹಬಾಳ್ವೆಯೊಂದಿಗೆ ಜೀವನ ನಡೆಸುವ ಶಿರ್ವದಲ್ಲಿ ಜನಮಾನಸದಲ್ಲಿ ಶಾಶ್ವ‌ತವಾಗಿ ನೆನಪಿನಲ್ಲಿ ಉಳಿಯುವ ಕೆಲಸ ಶಂಭು ಶೆಟ್ಟಿ ದಂಪತಿ ಮತ್ತು ಮಕ್ಕಳಿಂದ ನಡೆದಿದೆ ಎಂದು ತಿಳಿಸಿದರು.

ಹಳ್ಳಿಯ ಜನರಿಗೆ ಹೈಟೆಕ್ ಬಸ್ ನಿಲ್ದಾಣದಿಂದ ತುಂಬಾ ಅನುಕೂಲವಾಗಲಿದೆ. ತಮ್ಮ ಬದುಕನ್ನು ತಂಪಾಗಿರಿಸಿದ ತಂದೆ-ತಾಯಿಯ ಪ್ರೀತಿಗೆ, ಊರವರಿಗೆಲ್ಲ ನೆರಳು ನೀಡುವ ಅಪೂರ್ವ ಯೋಜನೆ ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Follow Us:
Download App:
  • android
  • ios