ಗಂಗಾವತಿ: ಅಕ್ರಮ ಗಣಿಗಾರಿಕೆಗೆ ಸ್ಫೋಟಕ ಬಳಕೆ, ಪಾಪಯ್ಯ ಸುರಂಗ ಮಾರ್ಗಕ್ಕೆ ಧಕ್ಕೆ
ಕಲ್ಲು ಸಾಗಾಣಿಕೆಗೆ ಕಾಲುವೆ ಮೇಲೆ ಅಕ್ರಮ ಸೇತುವೆ ನಿರ್ಮಾಣ| ಗಣಿಗಾರಿಕೆ ತಡೆಯುವಂತೆ ನೀರಾವರಿ ನಿಗಮದಿಂದ ಸರ್ಕಾರಕ್ಕೆ ಪತ್ರ| ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪುರ, ರಾಂಪುರ ಗ್ರಾಮಗಳಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ|
ರಾಮಮೂರ್ತಿ ನವಲಿ
ಗಂಗಾವತಿ(ಸೆ.17): ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪುರ, ರಾಂಪುರ ಗ್ರಾಮಗಳಲ್ಲಿ ಕಲ್ಲು ಗಣಿಗಾರಿಕೆಗೆ ಸ್ಫೋಟಕಗಳನ್ನು ಬಳಕೆ ಮಾಡುತ್ತಿರುವುದರಿಂದ ಐತಿಹಾಸಿಕ ಪಾಪಯ್ಯ ಸುರಂಗ ಮಾರ್ಗಕ್ಕೆ ಧಕ್ಕೆ ಉಂಟಾಗುತ್ತಿದೆ. ಇದರಿಂದ ತುಂಗಭದ್ರಾ ಎಡದಂಡೆ ಕಾಲುವೆ ಶಿಥಿಲಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತು ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರು ಸರಕಾರಕ್ಕೆ ಪತ್ರ ಬರೆದಿರುವುದು ಸಾಕ್ಷಿಯಾಗಿದೆ.
ಕಳೆದ ಒಂದು ವರ್ಷದಿಂದ ಕಡೇಬಾಗಿಲು ಮಾರ್ಗದಿಂದ ಮಲ್ಲಾಪುರ ಗ್ರಾಮಕ್ಕೆ ತೆರಳುವ ದಾರಿಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇದಕ್ಕೆ ಭಾರಿ ಸ್ಫೋಟಕ ವಸ್ತುಗಳ ಬಳಕೆ ಮಾಡಲಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ತುಂಗಭದ್ರಾ ಎಡದಂಡೆ ಕಾಲುವೆಯ ಚೈನ್ ನಂ.916ರ ರಾಂಪೂರ ಗ್ರಾಮದ ಹತ್ತಿರ ಹಾಗೂ ಪಾಪಯ್ಯ ಸುರಂಗ ಮೇಲ್ಭಾಗ ಚೈನ್ 976ರ ಮಲ್ಲಾಪೂರ ಗ್ರಾಮದ ಕಾಲುವೆಯ ಎಡ ಭಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕಲ್ಲುಗಳನ್ನು ಟ್ರ್ಯಾಕ್ಟರ್‌ನಲ್ಲಿ ಅಕ್ವಡಕ್ಟ್ ಮೂಲಕ ಸಾಗಿಸುತ್ತಿದ್ದಾರೆ. ಇದರಿಂದ ರಸ್ತೆ ಸಂಪೂರ್ಣವಾಗಿ ಹದಗೆಡುತ್ತಿದೆ. ದಂಧೆಕೋರರು ರಾತ್ರೋರಾತ್ರಿ ವಿವಿಧ ರಾಜ್ಯಗಳಿಗೆ ಕಲ್ಲು ಸಾಗಾಣಿಕೆ ದಂಧೆಗೆ ಇಳಿದಿದ್ದಾರೆ. ಮಲ್ಲಾಪುರದಿದಂದ ಸುರಂಗ ಮಾರ್ಗದ ರಸ್ತೆ ಮೂಲಕ ದಾಸನಾಳ ಸೇತುವೆಯಿಂದ ಕೊಪ್ಪಳ, ಹೈದರಾಬಾದ್, ತೆಲಂಗಾಣಕ್ಕೆ ಸಾಗಾಣಿಕೆ ನಡೆದಿದೆ.
ಕಲ್ಲುಗಳನ್ನು ಒಡೆಯಲು ಭಾರೀ ಪ್ರಮಾಣದ ಸ್ಫೋಟಕಗಳನ್ನು ಸಿಡಿಸುತ್ತಿರುವುದರಿಂದ ಐತಿಹಾಸಿಕ ಪಾಪಯ್ಯ ಸುರಂಗ ಮಾರ್ಗಕ್ಕೆ ಧಕ್ಕೆಯಾಗಲಿದೆ. 60 ವರ್ಷಗಳ ಇತಿಹಾಸ ವಿರುವ ವಾಣಿಭದ್ರೇಶ್ವೇರ ದೇವಸ್ಥಾನ ಬಳಿ ಸುಮಾರು 5 ಕಿಮೀ ದೂರದಲ್ಲಿ ಗುಡ್ಡ ಕೊರೆದು ಸುರಂಗ ಮಾರ್ಗ ನಿರ್ಮಿಸಲಾಗಿದೆ. ಈ ಸುರಂಗ ಮಾರ್ಗವಾಗಿ ತುಂಗಭದ್ರಾ ಎಡದಂಡೆ ಕಾಲುವೆ ನೀರು ಹರಿಯುತ್ತಿದ್ದು, ಸಿಂಧನೂರು, ಮಾನ್ವಿ, ರಾಯಚೂರು ಸೇರಿದಂತೆ ಆಂಧ್ರಪ್ರದೇಶಕ್ಕೆ ನೀರು ತಲುಪುತ್ತದೆ. ಈಗ ಸ್ಫೋಟಕಗಳ ಬಳಕೆಯಿಂದ ಸುರಂಗ ಮಾರ್ಗ ಶಿಥಿಲಗೊಳ್ಳುವ ಸಾಧ್ಯತೆ ಇದೆ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳೇ ಸರಕಾರದ ಗಮನಕ್ಕೆ ತಂದಿದ್ದಾರೆ.
ಯುನೆಸ್ಕೋ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ, ವಿನಾಶದ ಅಂಚಿನಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಮಾರಕಗಳು
ಅಕ್ರಮ ಸೇತುವೆ ನಿರ್ಮಾಣ:
ನೀರಾವರಿ ಇಲಾಖೆಯ ಪರವಾನಗಿ ಇಲ್ಲದೆ ಕಲ್ಲು ಸಾಗಿಸಲು ಉಪ ಕಾಲುವೆ ಮೇಲೆ ಅಕ್ರಮವಾಗಿ ಸಣ್ಣ ಸೇತುವೆ(ಸಿಡಿ) ನಿರ್ಮಿಸಿಕೊಂಡಿದ್ದಾರೆ. ಇಲ್ಲಿ ತೆಂಬ ಹೆಸರಿನ ಬೃಹತ್ ಗುಡ್ಡ ಇದ್ದು, ಸ್ಫೋೕಟಕಗಳನ್ನು ಅವ್ಯಾಹತವಾಗಿ ಸಿಡಿಸುತ್ತಿರುವುದರಿಂದ ಕಾಲುವೆ ಧಕ್ಕೆಯಾಗುವ ಮತ್ತು ಇಲ್ಲಿನ ಗ್ರಾಮಸ್ಥರಿಗೂ ತೊಂದರೆ ಉಂಟಾಗಿದೆ.
ಸರಕಾರಕ್ಕೆ ಪತ್ರ:
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಚೈನ್ 916, ರಾಂಪೂರ ಗ್ರಾಮದ ಹತ್ತಿರವಿರುವ ಪಾಪಯ್ಯ ಸುರಂಗ ಮೇಲ್ಭಾಗ ರಸ್ತೆ ಚೈನ್ 976ರ ಮಲ್ಲಾಪುರ ಗ್ರಾಮದ ಕಾಲುವೆ ಬಳಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಕರ್ನಾಟಕ ನೀರಾವರಿ ನಿಗಮದ ಅಗಳಕೇರಾ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಹಸೀಲ್ದಾರ್ ಮೂಲಕ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಆ. 8, 2020ರಂದು ಪತ್ರ ಬರೆದಿದ್ದು, ಕಲ್ಲು ಗಣಿಗಾರಿಕೆಗೆ ಸ್ಫೋಟಕಗಳನ್ನು ಬಳಕೆ ಮಾಡುತ್ತಿದ್ದು, ಇದರಿಂದ ಸುರಂಗ ಮಾರ್ಗ ಸೇರಿದಂತೆ ಕಾಲುವೆಗೆ ಧಕ್ಕೆಯಾಗುತ್ತಿದೆ. ಕೂಡಲೆ ಗಣಿಗಾರಿಕೆ ಸ್ಥಗಿತಗೊಳಿಸಬೇಕು ಎಂದು ಪತ್ರದಲ್ಲಿ ಉಲ್ಲೀಖಿಸಿದ್ದಾರೆ. ಗಣಿಗಾರಿಕೆಯಿಂದ ಐತಿಹಾಸಿಕ ಸುರಂಗ ಮಾರ್ಗ ಸೇರಿದಂತೆ ಎಡದಂಡೆ ಕಾಲುವೆ ಉಳಿಸಿಕೊಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಈಗಾಗಲೇ ಮಲ್ಲಾಪುರ ಮತ್ತು ರಾಂಪೂರ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆಗೆ ಸ್ಫೋಟಕಗಳನ್ನು ಬಳಕೆ ಮಾಡುತ್ತಿದ್ದು, ಇದರಿಂದ ಪಾಪಯ್ಯ ಸುರಂಗ ಮಾರ್ಗಕ್ಕೆ ಧಕ್ಕೆ ಉಂಟಾಗಿಲಿದ್ದು, ಗಣಿಗಾರಿಕೆ ಸ್ಥಗಿತಗೊಳಿಸಲು ಸರಕಾರಕ್ಕೆ ಪತ್ರ ಬರೆಯಲಾಗಿದೆ. ಸಂಬಂಧಪಟ್ಟ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಕ್ರಮಕೈಗೊಳ್ಳ ಬೇಕಾಗಿದೆ. ಪೊಲೀಸ್ ಇಲಾಖೆಗೂ ದೂರು ನೀಡಲಾಗಿದೆ ಎಂದು ಎಇಇ ನೀರಾವರಿ ಇಲಾಖೆ ಅಗಳಕೇರಾ ಅಮರೇಶ ಕಂಪ್ಲಿ ಅವರು ತಿಳಿಸಿದ್ದಾರೆ.
ರೈತರ ಜೀವನಾಡಿಯಾಗಿರುವ ತುಂಗಭದ್ರಾ ಎಡದಂಡೆ ಕಾಲುವೆ ರೈತರಿಗೆ ಉಪಯೋಗವಾಗಿದೆ. ಆದರೆ, ಅಕ್ರಮ ಕಲ್ಲು ಗಣಿಗಾರಿಕೆಗೆ ಸ್ಫೋಟಕಗಳನ್ನು ಬಳಸುತ್ತಿದ್ದರಿಂದ ಕಾಲುವೆಗೆ ಧಕ್ಕೆಯಾಗುತ್ತಿದೆ. ಈಗಾಗಲೇ ಕಾಲುವೆ ನಿರ್ಮಾಣಗೊಂಡು 60 ವರ್ಷಗಳು ಗತಿಸಿವೆ. ಮೇಲಿಂದ ಮೇಲೆ ಬಿರಕು, ಶಿಥಿಲಗೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಸ್ಪೋಟಕಗಳಿಂದ ಕಾಲುವೆಗೆ ಧಕ್ಕೆಯಾದರೆ ಯಾರು ಹೊಣೆಯಾಗುತ್ತಾರೆ? ಎಂದು ಗಂಗಾವತಿಯ ರೈತ ಮುಖಂಡ ಚಂದ್ರಶೇಖರ ಅವರು ಹೇಳಿದ್ದಾರೆ.