ಯುನೆಸ್ಕೋ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ, ವಿನಾಶದ ಅಂಚಿನಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಮಾರಕಗಳು
ರಾಮಮೂರ್ತಿ ನವಲಿ
ಗಂಗಾವತಿ(ಸೆ.16): ತಾಲೂಕಿನ ಮಲ್ಲಾಪುರ ಗ್ರಾಮದ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಆಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇಲ್ಲಿಯ ಕಲ್ಲುಗಳು ಅಂತರಾಜ್ಯಗಳಿಗೆ ಸಾಗಾಣಿಕೆ ನಡೆದಿದೆ. ವಿಜಯನಗರ ಸಾಮ್ರಜ್ಯದ ರಾಜಾಧಾನಿ ಎನಿಸಿಕೊಂಡಿರುವ ಆನೆಗೊಂದಿ ಮಲ್ಲಾಪುರ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ವಿಜಯನಗರ ಸಾಮ್ರಜ್ಯದ ಸ್ಮಾರಕಗಳಿಗೆ ಧಕ್ಕೆಯಾಗಲು ಕಾರಣವಾಗಿದೆ. ಕಳೆದ ಒಂದು ವರ್ಷದಿಂದ ಮಲ್ಲಾಪುರದಿಂದ ಕಡೇ ಬಾಗಿಲು ಹೋಗುವ ಬೆಟ್ಟದ ಮಾರ್ಗದಲ್ಲಿ ಆಕ್ರಮ ಗಣಿಗಾರಿಕೆ ನಡೆದಿದ್ದು, ದಿನ ನಿತ್ಯ ವಿವಿಧ ರಾಜ್ಯಗಳಿಗೆ ನೂರಾರು ಟ್ರಕ್‌ಗಳಲ್ಲಿ ಕಲ್ಲು ಪೂರೆಕೆಯಾಗುತ್ತಿವೆ.
ಯುನೆಸ್ಕೋ ವ್ಯಾಪ್ತಿಗೆ 4 ಗ್ರಾಮ ಪಂಚಾಯಿತಿಗಳು ಸೇರಿದಂತೆ 14 ಗ್ರಾಮಗಳು ಬರುತ್ತಿದ್ದು, ಈ ಪ್ರದೇಶದಲ್ಲಿ ಯಾವುದೇ ರೀತಿಯ ಗಣಿಗಾರಿಕೆ ಮತ್ತು ಕಟ್ಟಡಗಳನ್ನು ನಿಮಿ೯ಸ ಬಾರದೆಂದು ಯುನೆಸ್ಕೋ ಕಟ್ಟು ನಿಟ್ಟಿನ ಆದೇಶ ನೀಡಿದೆ. ಆದರೆ ಮಲ್ಲಾಪುರ ಗ್ರಾಮದ ಕೆಲ ಸ್ಥಳೀಯರು ಆಕ್ರಮವಾಗಿ ಲಕ್ಷಾಂತರ ರುಪಾಯಿಗಳ ಕಲ್ಲುಗಣಿಗಾರಿಕೆ ಪ್ರಾರಂಭಿಸಿದ್ದರಿಂದ ಯುನೆಸ್ಕೋ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ. ಆಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿದ್ದ ವಿರಪಾಪುರ ಗಡ್ಡೆ ಸೇರಿದಂತೆ ಕೆಲ ಗ್ರಾಮಗಳಲ್ಲಿ ಹಂಪಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಕಟ್ಟಡಗಳನ್ನು ತೆರವುಗೊಳಿಸಿತ್ತು. ಈಗ ಮತ್ತೆ ಕೆಲವರು ಆಕ್ರಮ ಗಣಿಗಾರಿಕೆ ಪ್ರಾರಂಭಿಸಿದ್ದರಿಂದ ವಿಜಯನಗರದ ಕುರುಗಳಿಗೆ ಧಕ್ಕೆ ಉಂಟಾಗಿದೆ.
ಗಂಗಾವತಿ ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವ ಮಲ್ಲಾಪುರ ಗ್ರಾಮದ ಸರ್ವೆ ನಂ. 42 ರಲ್ಲಿ 386 ಎಕರೆ ಪ್ರದೇಶ, ಸರ್ವೆ ನಂ.28 ರಲ್ಲಿ 379 ಎಕರೆ ಪ್ರದೇಶ, ಸರ್ವೆ 38 ರಲ್ಲಿ 285 ಎಕರೆ, 75/1, 267 ಎಕರೆ, 75 /2 ರಲ್ಲಿ 32 ಎಕರೆ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ. ಅಲ್ಲದೇ ಬಸವನದುರ್ಗಾ, ರಾಂಪೂರ, ಮಲ್ಲಾಪುರ ಮತ್ತು ಕುರಿಹಟ್ಟಿ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಈ ಪ್ರದೇಶದಿಂದ ಆಂದ್ರಪ್ರದೇಶ, ತೆಲಂಗಾಣ, ಬಿಜಾಪುರ ಜಿಲ್ಲೆಗಳಿಗೆ ಕಲ್ಲುಗಳು ಪೂರೈಕೆಯಾಗುತ್ತಿವೆ. ದ್ರಾಕ್ಷಿ ಬೆಳೆಗಳಿಗೆ ಈ ಕಲ್ಲುಗಳು ಉಪಯೋಗವಾಗುತ್ತಿದ್ದರಿಂದ ದಿನ ನಿತ್ಯ ನೂರಾರರು ಲಾರಿಗಳಲ್ಲಿ ಸಾಗಾಣಿಕೆ ನಡೆದಿದೆ. ಬೆಟ್ಟಗಳಲ್ಲಿ ಕಲ್ಲು ಒಡೆದು ಮಲ್ಲಾಪುರ ಗ್ರಾಮದ ಸ್ಮಶಾನಕ್ಕೆ ಹೋಗುವ ವಿಶಾಲವಾದ ಪ್ರದೇಶದಲ್ಲಿ ಸಂಗ್ರಹ ಮಾಡಿ ರಾತ್ರೋ ರಾತ್ರಿ ಸಾಗಾಣಿಕೆ ಮಾಡುತ್ತಿದ್ದಾರೆ.
ಯುನೆಸ್ಕೋ ವ್ಯಾಪ್ತಿಯಲ್ಲಿ ಬರುವ ಮಲ್ಲಾಪುರ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಮಾರಕಗಳು ಇವೆ. ಕೋಟೆಗಳು ಇದ್ದು, ಸನಿಹದಲ್ಲಿ ಹನಮಪ್ಪನ ಮಟ್ಟಿ, ಖಾನ್ ಸಾಬಾರ ಗುಹೆಗಳು ಮತ್ತು ವಾಣಿಭದ್ರೇಶ್ವರ ದೇವಸ್ಥಾನ, ಅಂಜನಾದ್ರಿ ಪರ್ವತ, ಪಂಪಾಸರೋವರ, ವಾಲಿ ಕಿಲ್ಲಾ ಅಲ್ಲದೆ ಪಾಪಾಯ್ಯ ಸುರಂಗ ಮಾರ್ಗ ಈ ಪ್ರದೇಶದಲ್ಲಿವೆ. ಕಲ್ಲು ಗಣಿಗಾರಿಕೆಯಿಂದ ಈ ಪ್ರದೇಶಗಳಿಗೆ ಧಕ್ಕೆ ಉಂಟಾಗಿದ್ದು, ವಿನಾಶದ ಅಂಚಿನಲ್ಲಿವೆ.
ಅಲ್ಲದೆ ನಾಲ್ಕು ಸಾವಿರ ವರ್ಷಗಳ ಹಿಂದಿನ ಕಾಲದ ನವ ಶಿಲಾಯುಗದ ಗುಹಾಂತರ ಚಿತ್ರಗಳಿದ್ದು, ಮದ್ಯ ಪ್ರದೇಶದಲ್ಲಿರುವ 500 ಕ್ಕು ಹೆಚ್ಚು ಗುಹೆಗಳಿಗಿಂತ ಈ ಯುನೆಸ್ಕೋ ಪ್ರದೇಶದಲ್ಲಿವೆ ಎಂದು ಪುರಾತತ್ವ ಶಾಸ್ತ್ರಜ್ಞರು ಸಂಶೋಧನೆ ಮಾಡಿದ್ದಾರೆ.
ಪ್ರಸ್ತುತವಾಗಿ ಮಲ್ಲಾಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಆಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ಪರಿಸರ ಹಾನಿಯಾಗುವದರ ಜೊತೆಗೆ ವಿಜಯನಗರ ಕಾಲ ಮತ್ತು ನವ ಶಿಲಾಯುಗದ ಕುರುಹಗಳು ವಿನಾಶದ ಅಂಚಿನಲ್ಲಿವೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿದರೆ ಸ್ಮಾರಕಗಳನ್ನು ರಕ್ಷಿಸ ಬಹುದಾಗಿದೆ ಎಂಬದು ನಾಗರಿಕರ ಒತ್ತಾಯವಾಗಿದೆ.
ಮಲ್ಲಾಪುರ ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವದರ ಬಗ್ಗೆ ಮಗನಕ್ಕೆ ಬಂದಿದೆ. ಈಗಾಗಲೇ ಆಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದವರ ಮೇಲೆ ಎರಡು ಪ್ರಕರಣಗಳು ದಾಖಲಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಮತ್ತು ಭೂ ಮತ್ತು ಗಣಿ ವಿಜ್ಞಾನ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವದು. ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸುತ್ತಿದ್ದು, ಅಂತವ ವಿರುದ್ಧ ದೂರು ದಾಖಲಿಸಲಾಗುತ್ತದೆ ಎಂದು ತಹಸೀಲ್ದಾರ ಗಂಗಾವತಿ ಕವಿತಾ ಅವರು ಹೇಳಿದ್ದಾರೆ.
ಗಂಗಾವತಿ ತಾಲೂಕವು ವಿಜಯನಗರ ಸಾಮ್ರಾಜ್ಯದ ಪ್ರದೇಶವಾಗಿದೆ. ಈ ಭಾಗದಲ್ಲಿ ಪ್ರಸಿದ್ಧವಾಗಿರುವ ದೇವಸ್ತಾನಗಳು ಮತ್ತು ಸ್ಮಾರಕಗಳು ಇವೆ. ಅಲ್ಲದೆ ನಾಲ್ಕು ಸಾವಿರ ವಷ೯ದ ಹಿಂದಿನ ನವ ಶಿಲಾಯುಗದ ಗುಹಾಂತರ ಚಿತ್ರಗಳು ಇವೆ. ಮದ್ಯಪ್ರದೇಶದಲ್ಲಿರುವ ಗುಹಾಂತರ ಚಿತ್ರಗಳಿಗಿಂತ ಇಲ್ಲಿ ಅಧಿಕವಾಗಿವೆ. ಈ ಹಿಂದೆ ಇವುಗಳನ್ನು ರಕ್ಷಣೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಇವುಗಳ ರಕ್ಷಣೆ ಅವಶ್ಯವಾಗಿದೆ ಎಂದು ಸಂಶೋಧಕರು ಡಾ.ಶರಣಬಸಪ್ಪ ಕೋಲ್ಕಾರ್ ಅವರು ತಿಳಿಸಿದ್ದಾರೆ.