Asianet Suvarna News Asianet Suvarna News

Panchamasali reservation ಪ್ರಾಣ ಕೊಟ್ಟೇವು, ಮೀಸಲು ಬಿಡಲ್ಲ: ವಚನಶ್ರೀ

ಪಂಚಮಸಾಲಿ ಸಮದಾಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿದೆ. ವಿದ್ಯಾಭ್ಯಾಸ ಮಾಡಿದರೂ ಉದ್ಯೋಗ ಸಿಗುತ್ತಿಲ್ಲ. ಪ್ರತಿಭೆಗಳಿಗೆ ಗೌರವವಿಲ್ಲದಾಗಿದೆ ಎಂದು ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮಿ ಹೇಳಿದರು. 

Panchmasali community should show solidarity to get reservation says vachanashri rav
Author
First Published Nov 13, 2022, 3:21 AM IST

ಹೊಸಪೇಟೆ (ನ.13) :ಪಂಚಮಸಾಲಿ ಸಮದಾಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿದೆ. ವಿದ್ಯಾಭ್ಯಾಸ ಮಾಡಿದರೂ ಉದ್ಯೋಗ ಸಿಗುತ್ತಿಲ್ಲ. ಪ್ರತಿಭೆಗಳಿಗೆ ಗೌರವವಿಲ್ಲದಾಗಿದೆ ಎಂದು ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮಿ ಹೇಳಿದರು.

ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಹಾಗೂ ವಿಜಯನಗರ ಜಿಲ್ಲಾ ಘಟಕದಿಂದ ನಗರದ ಸಹಕಾರಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ವೀರರಾಣಿ ಕಿತ್ತೂರು ಚೆನ್ನಮ್ಮ 199ನೇ ವಿಜಯೋತ್ಸವ ಹಾಗೂ ಪಂಚಮಸಾಲಿ 2ಎ ಮೀಸಲಾತಿ ಜನಜಾಗೃತಿ ಬೃಹತ್‌ ಸಮಾವೇಶದಲ್ಲಿ ಮಾತನಾಡಿ, ಹರಿಹರ ಪೀಠ ಪಂಚಮಸಾಲಿಗೆ 2ಎ ಮೀಸಲಾತಿ ಕೊಡಿಸುವ ಸಲುವಾಗಿಯೇ ಹುಟ್ಟಿದೆ. ಮೀಸಲಾತಿಗಾಗಿ ಇಡೀ ಪಂಚಮಸಾಲಿ ಸಮುದಾಯ ಒಗ್ಗೂಡಬೇಕು ಎಂದರು.

ಮೀಸಲಾತಿಗಾಗಿ ಜನಜಾಗೃತಿ ಅತ್ಯವಶ್ಯಕ; ವಚನಾನಂದ ಶ್ರೀ

ಎಸ್ಸಿ, ಎಸ್ಟಿಸಮುದಾಯಕ್ಕೆ ನಾಗಮೋಹನ ದಾಸ್‌ ವರದಿ ಕೊಟ್ಟಿದಕ್ಕೆ ಮೀಸಲಾತಿ ಸಿಕ್ಕಿದೆ. ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಪಂಚಮಸಾಲಿ ಸಮಾಜದ ಸಮೀಕ್ಷೆ ಮಾಡಲು ಹೇಳಿದ್ದಾರೆ. ಮೀಸಲಾತಿ ವಿಚಾರವಾಗಿ ಕೇಂದ್ರ ಮತ್ತು ರಾಜ್ಯದ ಹಲವು ಸಚಿವರು ಮೀಸಲಾತಿ ಕೊಡುವ ತೀರ್ಮಾನಕ್ಕೆ ಬಂದಿದ್ದಾರೆ. ಅದಕ್ಕೆ ನಾವೆಲ್ಲರೂ ಒಟ್ಟಾಗಬೇಕು ಎಂದರು.

ನಾವು ಸುಮ್ಮನೆ ಕೂರುವ ಜಾಯಮಾನದವರಲ್ಲ. ಮೀಸಲಾತಿ ಕಾನೂನಾತ್ಮಕವಾಗಿ ದೊರೆಯಬೇಕಾಗಿದೆ. ಜಯಪ್ರಕಾಶ್‌ ಹೆಗ್ಡೆ ಅವರು ಶೀಘ್ರವಾಗಿ ವರದಿ ನೀಡಬೇಕಿದೆ. ಹಲವರು ಮೀಸಲಾತಿ ಕೊಡಬಾರದು ಅಂತಿದ್ದಾರೆ. ರಾಜ್ಯದಲ್ಲಿ 2ಎ ಮೀಸಲಾತಿ, ಕೇಂದ್ರದಿಂದ ಶೇ. 27 ಮೀಸಲಾತಿ ದೊರೆಯಬೇಕಿದೆ. ಮೀಸಲಾತಿ ಪಡೆಯಲು ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳು ಒಗ್ಗಟ್ಟಾಗಿವೆ ಎಂದರು.

ಎಲ್ಲರೊಂದಿಗೆ ವಿಶ್ವಾಸದಿಂದ ಇರುವ ಸಮುದಾಯ ನಮ್ಮದು. ಮೀಸಲಾತಿ ಕೊಡಿಸುವವರ ಜತೆ ಸಮುದಾಯವಿರುತ್ತದೆ. ನಮ್ಮ ಸಮುದಾಯ ಬೆಂಬಲಿಸಿದ್ದಕ್ಕೆ ಸದನ ಸೇರಿದ್ದೀರಿ ಎಂದು ವೇದಿಕೆಯಲ್ಲಿದ್ದ ಸಚಿವರು, ಶಾಸಕರನ್ನು ಕುರಿತು ಮೀಸಲಾತಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರದಿ ಬಂದ ಆನಂತರ ನಮಗೆ ಮೀಸಲಾತಿ ಕೊಡುತ್ತಾರೆ. ಒಂದು ವೇಳೆ ಕೊಡದಿದ್ದರೆ ನಾವು ಬಿಡಲ್ಲ. ಮೀಸಲಾತಿ ನಮ್ಮ ಪ್ರಾಣ. ಪ್ರಾಣ ಕೊಟ್ಟೇವು ಆದರೆ ಮೀಸಲಾತಿ ಬಿಡಲ್ಲ ಎಂದರು.

ಹೋರಾಟಕ್ಕೆ ಸ್ಪಂದನೆ ಸಿಕ್ಕಿಲ್ಲ:

ಪೀಠ ಮತ್ತು ಸಂಘದಿಂದ ಸೌಮ್ಯವಾಗಿ 2ಎ ಮೀಸಲಾತಿ ಕೇಳುತ್ತಿದ್ದೇವೆ. ಆದರೆ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ. ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕೊಡಲಿ ಎಂದು ಸುಮ್ಮನಿದ್ದೆವು. ಇನ್ನೂ ಸುಮ್ಮನಿರಲ್ಲ. ಇದು ಧಮ್ಕಿ ಅಲ್ಲ. ನಮ್ಮ ಹಕ್ಕು ಕೊಡಲು ಸರ್ಕಾರದ ಗಂಟೇನು ಹೋಗುತ್ತದೆ. ನಮಗೆ ಮೀಸಲಾತಿ ಸಿಗಬಾರದೆಂದು ಯಾರೋ ಪಿತೂರಿ ನಡೆಸುತ್ತಿದ್ದಾರೆ. ಸರ್ಕಾರ ಇದಕ್ಕೆ ಕಿವಿಕೊಟ್ಟಲ್ಲಿ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಜಿ.ಪಿ. ಪಾಟೀಲ್‌ ಎಚ್ಚರಿಸಿದರು.

ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿ, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಡಿಸೆಂಬರ್‌ ತಿಂಗಳಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇವೆ. ಸಚಿವ ಆನಂದ ಸಿಂಗ್‌, ಶಾಸಕ ಗೋಪಾಲಕೃಷ್ಣ ಮೀಸಲಾತಿಗಾಗಿ ಸದನದ ಬಾವಿಗೆ ಇಳಿಯುತ್ತಾರಾ ಎಂದು ಪ್ರಶ್ನಿಸಿದ ಅವರು, ಎಲ್ಲರೂ ಸರ್ಕಾರಕ್ಕೆ ಒತ್ತಾಯ ಮಾಡಲಿ ಎಂದರು.

ಕೊಪ್ಪಳ ಸಂಸದ ಕರಡಿ ಸಂಗಣ್ಣ ಮಾತನಾಡಿ, ಮೀಸಲಾತಿಗಾಗಿ ಸಚಿವ ಆನಂದ ಸಿಂಗ್‌ ನೇತೃತ್ವ ವಹಿಸಬೇಕು. ಅಸಾಧ್ಯವಾದುದನ್ನು ಸಾಧಿಸುವ ಶಕ್ತಿ ಆನಂದ ಸಿಂಗ್‌ ಅವರಿಗಿದೆ. ಹಾಗಾಗಿ ನೇತೃತ್ವ ವಹಿಸಬೇಕು. ಪಂಚಮಸಾಲಿ ಸಮಾಜಕ್ಕೆ ಎರಡನೇ ತಾಯಿ ಭೂಮಿ. ಭೂಮಿ ನಂಬಿ ಬದುಕು ನಡೆಸುತ್ತಿರುವ ಸಮಾಜಕ್ಕೆ ಓದಿದರೂ ಉದ್ಯೋಗ ಸಿಗುತ್ತಿಲ್ಲ. ರೈತರ ಆತ್ಮಹತ್ಯೆ ನಿಲ್ಲಲು ಸರ್ಕಾರ ಮೀಸಲಾತಿ ನೀಡಬೇಕು ಎಂದರು.

ಶಾಸಕ ಭೀಮಾನಾಯ್ಕ ಮಾತನಾಡಿ, ನಾನು ಶಾಸಕನಾಗಲು ಪಂಚಮಸಾಲಿ ಸಮುದಾಯ ವಿಶೇಷ ಕೊಡುಗೆ ನೀಡಿದೆ. ಪಕ್ಷಾತೀತವಾಗಿ ಸದನದಲ್ಲಿ 2ಎ ಮೀಸಲಾತಿಗಾಗಿ ಧ್ವನಿ ಎತ್ತುವೆ ಎಂದರು. ಹೊಸಪೇಟೆ ನಗರದಲ್ಲಿ ಸಮುದಾಯಭವನ ಹಾಗೂ ಉಚಿತ ವಸತಿ ನಿಲಯ ನಿರ್ಮಾಣಕ್ಕೆ 5 ಎಕರೆ ಭೂಮಿ ಮತ್ತು ನಗರದ ಪ್ರಮುಖ ವೃತ್ತದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿ ಸ್ಥಾಪಿಸಬೇಕೆಂದು ಸಚಿವರಿಗೆ ಮನವಿ ಸಲ್ಲಿಸಿದರು.

ಸಂಸದ ವೈ. ದೇವೇಂದ್ರಪ್ಪ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್‌ ಪಾಟೀಲ…, ಗೌರವಾಧ್ಯಕ್ಷ ಬಾವಿಬೆಟ್ಟಪ್ಪ, ಮುಖಂಡರಾದ ಬಿ.ಸಿ. ಉಮಾಪತಿ, ಬಸವರಾಜ ದಿಂಡೂರು, ಬಿ. ನಾಗನಗೌಡ, ಸೋಮನಗೌಡ ಪಾಟೀಲ…, ಬಿ. ಲೋಕೇಶ್‌, ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ…, ಅಶ್ವಿನ್‌ ಕೊತ್ತಂಬರಿ, ಕೆ. ರವಿಶಂಕರ್‌, ಎಂ. ರಾಜಶೇಖರ, ಮಂಗಳಾ, ಮಂಜುನಾಥ ನವಲಗುಂಡ, ಹನಸಿ ಸಿದ್ದೇಶ, ಶಿವಚರಣ ದೇವರಮನಿ, ಕಿಚಡಿ ಕೊಟ್ರೇಶ್‌, ಬಸಾಪುರ ಬಸವರಾಜ, ನಗರಸಭೆ ಅಧ್ಯಕ್ಷ ಸುಂಕಮ್ಮ, ಉಪಾಧ್ಯಕ್ಷ ಆನಂದ, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ನಗರಸಭೆ ಸದಸ್ಯ ಕಿರಣ್‌ ಶಂಕ್ರಿ ಸೇರಿ ಮತ್ತಿತರರಿದ್ದರು.

ವಿಜಯ ನಿಶ್ಚಿತ:

ವಿಜಯನಗರದಲ್ಲಿ ಯಾವುದೇ ಕೆಲಸ ಪ್ರಾರಂಭಿಸಿದರೂ ವಿಜಯವಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಹೇಳಿದರು. ಹೊಸಪೇಟೆಯಲ್ಲಿ ನಡೆದ ಪಂಚಮಸಾಲಿ 2ಎ ಮೀಸಲಾತಿ ಸಮಾವೇಶದಲ್ಲಿ ಮಾತನಾಡಿದ ಅವರು, ವಿಜಯನಗರದಿಂದ ಆರಂಭಿಸಿರುವ ಪಂಚಮಸಾಲಿಗೆ 2ಎ ಮೀಸಲಾತಿ ಹೋರಾಟಕ್ಕೆ ವಿಜಯ ನಿಶ್ಚಿತ. ಈ ಹೋರಾಟಕ್ಕೆ ವಿಜಯ ಸಿಗುವ ವಿಶ್ವಾಸ ನನಗಿದೆ. ಶ್ರೀಗಳಿಗೆ ವಿಜಯನಗರ ನೆಲದ ಶಕ್ತಿ ಗೊತ್ತಿದೆ ಎಂದರು.

ಈ ಸಮಾವೇಶದಲ್ಲಿ ನನ್ನನ್ನು ಎಲ್ಲರೂ ಉತ್ಸವ ಮೂರ್ತಿಯಾಗಿ ಮಾಡಿದ್ದಾರೆ. ನಾನು ಖಂಡಿತವಾಗಿಯೂ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇನೆ. ಸರ್ಕಾರ ಹಾಗೂ ಸಮಾಜದ ಜತೆ ಸಮನ್ವಯ ಸಾಧಿಸಿ, ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅಭಯ ನೀಡಿದರು. ಪಂಚಮಸಾಲಿಗೆ 2 ಎ ಮೀಸಲಾತಿ ವಿಚಾರದಲ್ಲಿ ಶಾಸಕರು ಸದನದ ಬಾವಿಗೆ ಇಳಿದು ಹೋರಾಟ ಮಾಡುವ ಮಾತಾಡಿದರು. ಆದರೆ, ಅದಕ್ಕೂ ಮುನ್ನವೇ ಸಮಸ್ಯೆ ಬಗೆಹರಿಸುತ್ತೇವೆ ಎಂದರು.

 

ಪಂಚಮಸಾಲಿಗೆ ಶೀಘ್ರ 2ಎ ಮೀಸಲು: ವಚನಾನಂದ ಶ್ರೀ

ನನಗೆ ಈ ಒಳ ಪಂಗಡಗಳು ಜಾತಿಗಳ ಬಗ್ಗೆ ಗೊತ್ತಾಗುವುದಿಲ್ಲ. ನಾನು ಯಾವತ್ತು ಜಾತಿ ರಾಜಕಾರಣ ಮಾಡಿದವನಲ್ಲ. ಸರ್ಕಾರ ಈ ಮೀಸಲಾತಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ಅದು ಯಾವುದೇ ಸರ್ಕಾರವಿರಲಿ, ಪಕ್ಷಾತೀತವಾಗಿ ಮೀಸಲಾತಿ ನೀಡಬೇಕು ಎಂದರು.

Follow Us:
Download App:
  • android
  • ios