ಪಂಚಮಸಾಲಿ ಸಮಾಜದ 2ಎ ಮೀಸಲಾತಿಗೆ ಸಂಬಂಧಿಸಿದಂತೆ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮಿಗಳು ನಡೆಸುತ್ತಿರುವ ಹೋರಾಟ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದು ಪಂಚಮಸಾಲಿ ಸಮಾಜದ ಮುಖಂಡ ಹೆಚ್.ಎಸ್. ನಾಗರಾಜ್ ಬೇಸರ ವ್ಯಕ್ತಪಡಿಸಿದರು.

ವರದಿ : ವರದರಾಜ್ 

ದಾವಣಗೆರೆ (ಡಿ.14): ಪಂಚಮಸಾಲಿ ಸಮಾಜದ 2ಎ ಮೀಸಲಾತಿಗೆ ಸಂಬಂಧಿಸಿದಂತೆ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮಿಗಳು ನಡೆಸುತ್ತಿರುವ ಹೋರಾಟ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದು ಪಂಚಮಸಾಲಿ ಸಮಾಜದ ಮುಖಂಡ ಹೆಚ್.ಎಸ್. ನಾಗರಾಜ್ ಬೇಸರ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವಾಮೀಜಿ ನಡೆಸುತ್ತಿರುವ 2ಎ ಮೀಸಲಾತಿ ಹೋರಾಟದ ಸಭೆಗಳು ಸಮಾಜದ ನಾಯಕರನ್ನು ಬೈಯುವಂತಹ ಸಭೆಗಳಾಗಿ ಪ್ರತಿಬಿಂಬಿಸುತ್ತಿವೆ. ಹೋರಾಟದ ಹೆಸರಿನಲ್ಲಿ ವೈಯಕ್ತಿಕ ಟೀಕೆ ಟಿಪ್ಪಣಿ, ಸರ್ಕಾರಕ್ಕೆ ಗಡುವು ನೀಡುವ ಮೂಲಕ ಮುಖ್ಯಮಂತ್ರಿಗಳಿಗೆ ಬ್ಲಾಕ್‌ಮೇಲ್ ಮಾಡಲಾಗುತ್ತಿದೆ. ಸರ್ಕಾರ ಯಾವುದೇ ಒಂದು ಸಮಾಜಕ್ಕೆ ಸೀಮಿತ ಅಲ್ಲ. ನಮ್ಮ ಹಕ್ಕನ್ನು ಪಡೆಯಲು ಸರ್ಕಾರಕ್ಕೆ ಮನವಿ ಮಾಡಬೇಕೇ ವಿನಹ ಗಡುವು ನೀಡುವುದು, ಬ್ಲಾಕ್‌ಮೇಲ್ ಮಾಡುವುದು ಎಷ್ಟರ ಮಟ್ಟಿ‌ಗೆ ಸರಿ ಎಂದು ಪ್ರಶ್ನಿಸಿದರು.

2ಎ ಮೀಸಲಾತಿ ಘೋಷಿಸದಿದ್ರೆ ಸುವರ್ಣಸೌಧಕ್ಕೆ ಮುತ್ತಿಗೆ: ಜಯಮೃತ್ಯುಂಜಯ ಶ್ರೀ

 2ಎ ಮೀಸಲಾತಿ ಪಡೆಯುವ ಸಂಬಂಧ ಸಂಘಟಿತ ಹೋರಾಟದ ಮೂಲಕ ಸರ್ಕಾರವನ್ನು ಓಲೈಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಸರ್ಕಾರವನ್ನು ಬೈಯುವುದು, ಸಚಿವರು, ಶಾಸಕರನ್ನು ಅವಹೇಳನ ಮಾಡುವುದು ಎಷ್ಟರಮಟ್ಟಿಗೆ ಸರಿ? ಸ್ವಾಮಿಗಳ ಈ ನಡೆ ಪಂಚಮಸಾಲಿ ಸಮಾಜದ ಬಾಂಧವರಿಗೆ ಬೇಸರ ತರಿಸಿದೆ. ಬೆರಳೆಣಿಕೆಯಷ್ಟು ವ್ಯಕ್ತಿಗಳ ಓಲೈಕೆಗೋಸ್ಕರ ಜಯಮೃತ್ಯುಂಜಯ ಸ್ವಾಮಿಗಳು ನಡೆಸುತ್ತಿರುವ ಹೋರಾಟ ಅರ್ಥ ಕಳೆದುಕೊಳ್ಳುತ್ತಿದೆ. ಅಲ್ಲದೆ ಅವರ ಈ ನಡೆವಳಿಕೆಯಿಂದ ಸಮಾಜದ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಹೇಳಿದರು.

ವಿಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸುಮ್ಮನೆ ಬೈಯುವಂತಹ ಸಭೆಗಳನ್ನು ನಡೆಸುವುದರಿಂದ ಸಮಾಜ ಬಾಂಧವರಿಗೆ ನೋವು ತರುತ್ತಿದೆ. ಇದಲ್ಲದೇ ಸಮಾಜದ ಹಿರಿಯ ಮುಖಂಡ ಬಸನಗೌಡ ಪಾಟೀಲ್‌ ಯತ್ನಾಳ ಬಗ್ಗೆ ಗೌರವವಿದೆ. ಆದರೆ ಅವರು ಹರಿಹರ ಪೀಠದ ಜಗದ್ಗುರುಗಳಿಗೆ ಮಾತನಾಡುವ ಪದಗಳಿಂದ ಸಮಾಜಕ್ಕೆ ನೋವಾಗಿದೆ. ಇಬ್ಬರು. ಗುರುಗಳು ಸಮಾಜದ ಆಸ್ತಿ, ಇಬ್ಬರು ಶ್ರೀಗಳಿಗೆ ಯಾರೇ ಹಗುರವಾಗಿ ಮಾತನಾಡಿದರೆ ಸಮಾಜಕ್ಕೆ ಒಳಿತಲ್ಲ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಪಡೆಯಲು ಹರಿಹರ ಹಾಗೂ ಕೂಡಲಸಂಗಮದ ಇಬ್ಬರು ಮಠಾಧೀಶರ ನೇತೃತ್ವದಲ್ಲಿ ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಮಾತ್ರ ಸರ್ಕಾರ ಮಣಿಯುತ್ತದೆ ಎಂದು ತಿಳಿಸಿದರು.

ಇದಲ್ಲದೇ ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ನನ್ನ ಬಗ್ಗೆ ಸುಳ್ಳು ಮಾಹಿತಿ ನೀಡಿರುವುದು ನನಗೆ ವೈಯಕ್ತಿಕವಾಗಿ ನೋವು ತಂದಿದೆ ಹಾಗೂ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗಿದೆ. ಸ್ವಾಮೀಜಿಯವರು ಕೆಲವೇ ವ್ಯಕ್ತಿಗಳ ಮಾತು ಕೇಳಿ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹಾಗೂ ಯಾವುದೇ ಸಭೆ ಸಮಾರಂಭಕ್ಕೆ ಆಹ್ವಾನಿಸಿಲ್ಲ. ಒಟ್ಟಾರೆ ನನ್ನ ಉದ್ದೇಶ ಸಮಾಜದ ಒಳಿತಿಗೆ ಕೆಲಸ ಮಾಡುವುದು, ಸಮಾಜದ ಎರಡೂ ಪೀಠಗಳು ಒಂದಾಗಿ ಹೋರಾಟ ಕೈಗೊಳ್ಳುವಂತೆ ಮಾಡಿ 2ಎ ಮೀಸಲಾತಿ ಹೋರಾಟಕ್ಕೆ ಜಯ ತರುವುದಾಗಿದೆ ಎಂದು ಹೇಳಿದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ ತೀವ್ರ ಗೊಂಡಿದೆ.ಸಮಾಜದ ಸಂಘಟನೆಯ ಒಳತಿಗಾಗಿ ನಮ್ಮ ಬೆಂಬಲ ಸದಾ ಇದೆ. ಹೋರಾಟದಲ್ಲಿ ನಾನು ಇರಲೇಬೇಕು ಎಂದೇನಿಲ್ಲಾ.ಸಮಾಜಕ್ಕೆ ತಪ್ಪು ಸಂದೇಶ ಹೋಗಬಾರದೆಂದು ಈ ದಿನ ಸೃಷ್ಟೀಕರಣ ನೀಡುತ್ತಿದ್ದೇನೆ. ಎರಡೂ ಪೀಠಗಳು ನಮ್ಮ ಸಮಾಜದ ಎರಡು ಕಣ್ಣುಗಳಿದ್ದಂತೆ. ಸಮಾಜದ ಮುಖಂಡರೊಂದಿಗೆ ಮಾತನಾಡಿ ಎರಡೂ ಪೀಠಗಳನ್ನು ಒಂದು ಮಾಡುವ ಉದ್ದೇಶ ನಮ್ಮದು. ಕೆಲ ವ್ಯಕ್ತಿಗಳ ಹಿತಾಸಕ್ತಿಗಾಗಿ ಹೋರಾಟದ ಹಾದಿ ತಪ್ಪಬಾರದು ಎಂದು ಹೆಚ್ ಎಸ್ ನಾಗರಾಜ್ ಅಭಿಪ್ರಾಯಪಟ್ಟರು.

ಪಂಚಮಸಾಲಿ 2ಎ ಮೀಸಲಾತಿ: ಡಿಕೆಶಿ, ಸಿದ್ದು ಭೇಟಿಯಾದ ವಚನಾನಂದ ಶ್ರೀ

ಸುದ್ದಿಗೋಷ್ಟಿಯಲ್ಲಿ ಕಾಯಿಪೇಟೆ ಹಾಲೇಶ್, ಕೊಟ್ರೇಶ್ ಮತ್ತಿ ಹಳ್ಳಿ, ಮಂಜುನಾಥ್ ಸುಗ್ಗಿ ಕತ್ತಲಗೆರೆ, ವೀರಪ್ಪ ಪುರವಂತರ, ಶರತ್ ಕಾರಿಗನೂರು, ರೇಣುಕಾ ಪ್ರಸಾದ್, ಎ.ಪಿ.ಚನ್ನಬಸಪ್ಪ ಹೊಸ ಹಳ್ಳಿ, ಬಲ್ಲೂರು ರೇವಣಸಿದ್ದಪ್ಪ ಜಯಪ್ರಕಾಶ್ ಸುತ್ತೂರು, ನಿರಂಜನ ದೀಟೂರು ಇತರರು ಇದ್ದರು.