ಪುತ್ತೂರು(ಮಾ.10): ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದಲ್ಲಿರುವ ಪಡುಮಲೆ ಕೋಟಿ-ಚೆನ್ನಯರ ಜನ್ಮಭೂಮಿಯನ್ನು ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಸಂಸದರು, ಶಾಸಕರು, ಜಿಪಂ ಅಧ್ಯಕ್ಷರು, ತಾಪಂ ಅಧ್ಯಕ್ಷರ ಉಪಸ್ಥಿತಿಯಲ್ಲಿ ಶೀಘ್ರದಲ್ಲೇ ಸಭೆ ನಡೆಸಿ ಅವರ ಅಭಿಪ್ರಾಯಗಳನ್ನು ಪಡೆದುಕೊಂಡು ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಡಾ.ಯತೀಶ್‌ ಉಳ್ಳಾಲ್‌ ತಿಳಿಸಿದ್ದಾರೆ.

ಪುತ್ತೂರು ತಾಲೂಕಿನ ಪಡುಮಲೆಯಲ್ಲಿರುವ ಕೋಟಿ-ಚೆನ್ನಯರ ಜನ್ಮಭೂಮಿಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟಅಧಿಕಾರಿಗಳ ಮತ್ತು ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಳ ಅಭಿವೃದ್ಧಿ ಕ್ರಿಯಾ ಸಮಿತಿಯ ಸಭೆ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶುಕ್ರವಾರ ಉಪವಿಭಾಗಾಧಿಕಾರಿಗಳ ಸಭಾಂಗಣದಲ್ಲಿ ನಡೆಯಿತು.

ಕೋಟಿ-ಚೆನ್ನಯ ಬಿಂಬ ಸ್ಥಾಪ​ನೆ, ಗೆಜ್ಜೆಗಿರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಪಡುಮಲೆ ಅಭಿವೃದ್ಧಿಯ ಮೊದಲ ಹಂತದಲ್ಲಿ ಶಂಖಪಾಲ ಬೆಟ್ಟದಲ್ಲಿರುವ 2.24 ಎಕ್ರೆ ಸರ್ಕಾರಿ ಜಾಗದಲ್ಲಿ 90 ಲಕ್ಷ ರು.ಯಲ್ಲಿ ಸುಸಜ್ಜಿತ ಸಭಾಭವನ ನಿರ್ಮಾಣ, 40 ಲಕ್ಷ ರು. ವೆಚ್ಚದಲ್ಲಿ ಪ್ರಾಚ್ಯ ವಸ್ತುಸಂಗ್ರಹಾಲಯ ಮತ್ತು ಮಾಹಿತಿ ಕೇಂದ್ರ ನಿರ್ಮಾಣ, 8 ಲಕ್ಷ ರು. ವೆಚ್ಚದಲ್ಲಿ ಶೌಚಾಲಯ ನಿರ್ಮಾಣ, 40 ಲಕ್ಷ ರು. ವೆಚ್ಚದಲ್ಲಿ ಬೆಟ್ಟಕ್ಕೆ ಏರಲು ಎರಡು ಬದಿಗಳಿಂದ ನಡೆದಾಡುವ ಮೆಟ್ಟಿಲು ಹಾಗೂ ಹಸಿರು ಪಾರ್ಕ್ ವ್ಯವಸ್ಥೆ, 30 ಲಕ್ಷ ರು ವೆಚ್ಚದಲ್ಲಿ ನೆಲಸಮತಟ್ಟು ಹಾಗೂ ನೀರಿನ ವ್ಯವಸ್ಥೆ ಮೊದಲಾದ 8 ವ್ಯವಸ್ಥೆಗಳನ್ನು ರೂಪಿಸಲು ನಡೆಸಲು ಅಂದಾಜು 2.75 ಕೋಟಿ ರುಪಾಯಿಯ ಕ್ರಿಯಾಯೋಜನೆ ರೂಪಿಸಲಾಗಿತ್ತು. ಈ ಪೈಕಿ ಮೊದಲ ಕಂತಿನ 1ಲಕ್ಷ ರು. ಬಿಡುಗಡೆಯಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದ ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಳ ಅಭಿವೃದ್ಧಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಆದಷ್ಟುಶೀಘ್ರವಾಗಿ ಈ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಹರಿಶ್ಚಂದ್ರ ಅವರು, 3013-14ನೇ ಸಾಲಿನ ಬಜೆಟ್‌ನಲ್ಲಿ ಪಡುಮಲೆ ಅಭಿವೃದ್ಧಿಗಾಗಿ 5 ಕೋಟಿ ರು. ಅನುದಾನ ಮಂಜೂರಾಗಿದೆ. ಪುರಾತತ್ವ ಇಲಾಖೆಯಿಂದ ಪಡುಮಲೆಯಲ್ಲಿರುವ ಪ್ರವಾಸೋದ್ಯಮ ಕುರುಹುಗಳ ಅಭಿವೃದ್ಧಿಗಾಗಿ 50 ಲಕ್ಷ ರು. ಮಂಜೂರಾಗಿದೆ ಎಂದರು.

ಮಂಗಳೂರು: ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಕೊರೋನಾ ಶಂಕಿತ ವ್ಯಕ್ತಿ ಪತ್ತೆ

ಸಮಿತಿಯ ಅಕೌಂಟಿನಲ್ಲಿ 1.71 ಕೋಟಿ ರು. ಹಣ ಇದೆ. ಆರಂಭಿಕ ಅಭಿವೃದ್ಧಿ ಕೆಲಸಗಳನ್ನು ನಡೆಸಲು ಯಾವುದೇ ಸಮಸ್ಯೆ ಇಲ್ಲ ಎಂದು ಉಪವಿಭಾಗಾಧಿಕಾರಿ ಡಾ.ಯತೀಶ್‌ ಉಳ್ಳಾಲ್‌ ಅವರು ತಿಳಿಸಿದರು.

ತಹಸೀಲ್ದಾರ್‌ ರಾಹುಲ್‌ ಶಿಂಧೆ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಕೆ.ಸಿ. ಪಾಟಾಳಿ ಪಡುಮಲೆ, ಸ್ಥಳೀಯರಾದ ಬಾಲಕೃಷ್ಣ ರೈ ಕುಡ್ಕಾಡಿ, ಕೆ.ಪಿ. ಸಂಜೀವ ರೈ, ಶಶಿಧರ್‌ ರೈ ಕುತ್ಯಾಳ, ಗ್ರಾಮ ಪಂಚಾಯಿತಿ ಸದಸ್ಯ ಗುರುಪ್ರಸಾದ್‌ ರೈ ಕುದ್ಕಾಡಿ, ಲೋಕೋಪಯೋಗಿ ಇಲಾಖೆಯ ಜೂನಿಯರ್‌ ಎಂಜಿನಿಯರ್‌ ಬಾಲಕೃಷ್ಣ ಕೆ. ಅವರು ಸಲಹೆ ಸೂಚನೆ ನೀಡಿದರು.