Udupi: ಪಡುಹಿತ್ಲು ಜಾರಂದಾಯ ದೈವಸ್ಥಾನದಲ್ಲಿ ಮುಗಿಯದ ವಿವಾದ, ಮತ್ತೆ ಗೊಂದಲದಲ್ಲಿ ನೇಮೋತ್ಸವ
ಕಾಂತರಾ ಸಿನಿಮಾ ಜೊತೆಗಿನ ಹೋಲಿಕೆಯುಳ್ಳ ಘಟನೆಗಳು ನಡೆದ ನಂತರ ರಾಜ್ಯದ ಗಮನ ಸೆಳೆದಿದ್ದ ಉಡುಪಿಯ ಪಡುಹಿತ್ಲು ಜಾರಂದಾಯ ದೇವಸ್ಥಾನದಲ್ಲಿ, ಇಂದು ನೇಮೋತ್ಸವ ನಿಗದಿಯಾಗಿದೆ. ಎರಡು ಸಮಿತಿಗಳ ನಡುವಿನ ಘರ್ಷಣೆಯಿಂದ ಇಲ್ಲಿ ನಡೆಯುವ ಕೋಲ ಮಹೋತ್ಸವ ವಿವಾದದ ಕೇಂದ್ರಬಿಂದುವಾಗಿದೆ.
ಉಡುಪಿ (ಜ.13): ಕಾಂತರಾ ಸಿನಿಮಾ ಜೊತೆಗಿನ ಹೋಲಿಕೆಯುಳ್ಳ ಘಟನೆಗಳು ನಡೆದ ನಂತರ ರಾಜ್ಯದ ಗಮನ ಸೆಳೆದಿದ್ದ ಉಡುಪಿಯ ಪಡುಹಿತ್ಲು ಜಾರಂದಾಯ ದೇವಸ್ಥಾನದಲ್ಲಿ, ಇಂದು ನೇಮೋತ್ಸವ ನಿಗದಿಯಾಗಿದೆ. ಎರಡು ಸಮಿತಿಗಳ ನಡುವಿನ ಘರ್ಷಣೆಯಿಂದ ಇಲ್ಲಿ ನಡೆಯುವ ಕೋಲ ಮಹೋತ್ಸವ ವಿವಾದದ ಕೇಂದ್ರಬಿಂದುವಾಗಿದೆ. ಊರಿನ ಪ್ರಮುಖ ಕ್ಷೇತ್ರವಾದ ಬ್ರಹ್ಮ ಸ್ಥಾನಕ್ಕೆ ಅವಮಾನವಾಗಿದೆ ಎಂಬ ಕಾರಣಕ್ಕೆ ಹಲವು ಜಾತಿಗಳ ಪ್ರಮುಖರು ನೇಮೋತ್ಸವದಲ್ಲಿ ಭಾಗವಹಿಸದಿರಲು ತೀರ್ಮಾನಿಸಿದ್ದಾರೆ. ಈ ಮೂಲಕ ಜಾಾರಂದಾಯ ಕ್ಷೇತ್ರ ಮತ್ತೆ ವಿವಾದದಲ್ಲಿದೆ.
ಉಡುಪಿಯ ಪಡುಬಿದ್ರಿ ಸಮೀಪದ ಪಡುಹಿತ್ಲು ಜಾರಂದಾಯ ದೈವಸ್ಥಾನ ಇತ್ತೀಚೆಗೆ ಗಮನ ಸೆಳೆದಿತ್ತು. ಕಾಂತರಾ ಸಿನಿಮಾ ಮಾದರಿಯಲ್ಲೇ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಒಬ್ಬರು ಕುತೂಹಲಕಾರಿ ರೀತಿಯಲ್ಲಿ ಅಸುನೀಗಿದಾಗ, ಕ್ಷೇತ್ರದ ಕಾರಣಿಕದ ಬಗ್ಗೆ ಚರ್ಚೆ ಉಂಟಾಗಿತ್ತು. ಜಾರಂದಾಯ ಕ್ಷೇತ್ರದ ನೂತನ ಟ್ರಸ್ಟ್ ಸದಸ್ಯರು ಜನವರಿ 7ರಂದು ನೇಮೋತ್ಸವ ಮಾಡಲು ಹೊರಟಾಗ ಹಳೆಯ ಸಮತಿ ಸದಸ್ಯರು ತಡೆಯಾಜ್ಞೆ ತರುವ ಮೂಲಕ ಕೋಲ ರದ್ದಾಗಿತ್ತು.
ಅಂದು ಸ್ಥಗಿತಗೊಂಡಿದ್ದ ಮಹೋತ್ಸವ ಇದೀಗ ಶುಕ್ರವಾರ ನಿಗದಿಯಾಗಿದೆ. ಆದರೆ ಇದೀಗ ಎದುರು ಪಾರ್ಟಿಯವರು ನಾವು ಈ ಆಚರಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.ಯಾವುದೇ ಕ್ಷೇತ್ರದ ನೇಮೋತ್ಸವದಲ್ಲಿ 14 ಜಾತಿಗಳ ಪ್ರಮುಖರು ಭಾಗವಹಿಸಲೇಬೇಕು. ಎಲ್ಲರೂ ಸೇರಿ ಮಾಡುವುದನ್ನು ನೇಮಹೋತ್ಸವ ಎನ್ನುತ್ತಾರೆ. ಹಲವು ಜಾತಿಗಳ ಪ್ರಮುಖರ ಅನುಪಸ್ಥಿತಿಯಲ್ಲಿ ನೇಮೋತ್ಸವ ಹೇಗೆ ನಡೆಯುತ್ತೆ ಅನ್ನೋದೇ ಕುತೂಹಲ ವಿಚಾರವಾಗಿದೆ.
ಊರಿನ ಪ್ರಮುಖ ಕ್ಷೇತ್ರವಾಗಿರುವ ಬ್ರಹ್ಮ ಸ್ಥಾನದ ನುಡಿಗೆ ಸ್ಥಾನದ ಮನೆಯವರು ಆಕ್ಷೇಪಿಸಿದ್ದರು. ಇದರಿಂದ ಅವಮಾನಿತರಾಗಿರುವ ಸ್ಥಳೀಯ ಬ್ರಾಹ್ಮಣ ಸಮುದಾಯ ನೇಮೋತ್ಸವದಲ್ಲಿ ಭಾಗವಹಿಸದಿರಲು ತೀರ್ಮಾನ ಮಾಡಿದೆ. ಬ್ರಹ್ಮ ಸ್ಥಾನಕ್ಕೆ ಬಂದು ಕ್ಷಮೆ ಕೇಳದ ಹೊರತು ನೇಮೋತ್ಸವದಲ್ಲಿ ಭಾಗವಹಿಸುವುದಿಲ್ಲ ಎಂದು ಶಿವಳ್ಳಿ ಬ್ರಾಹ್ಮಣ ಸಮುದಾಯ ಖಂಡ ತುಂಡವಾಗಿ ಹೇಳಿದೆ.
ಈ ನಿರ್ಧಾರದ ಬೆನ್ನಲ್ಲೇ ಸ್ಥಳೀಯ ಗುತ್ತಿನಾರು ನೇಮೋತ್ಸವದಿಂದ ದೂರ ಉಳಿಯಲು ತೀರ್ಮಾನಿಸಿದ್ದಾರೆ. ಧರ್ಮ ನಿಷ್ಠೆಯ ಮೊಗವೀರ ಸಮುದಾಯ ಕೂಡ ಭಾಗವಹಿಸುವುದಿಲ್ಲ ಎಂದು ಹೇಳಿದೆ. ಈ ಎಲ್ಲಾ ಬೆಳವಣಿಗೆಗಳು ಶುಕ್ರವಾರ ನಡೆಯಬೇಕಾಗಿರುವ ನೇಮೋತ್ಸವದ ಬಗ್ಗೆ ಕುತೂಹಲ ಹೆಚ್ಚಿಸಿದೆ.
Udupi: ಕಳೆದುಹೋದ ಚಿನ್ನ ತಂದುಕೊಟ್ಟ ಕುಟುಂಬ ದೈವ, ಜಾರಂದಾಯ ಪವಾಡ!
ಎರಡು ಕಮಿಟಿಗಳ ನಡುವಿನ ತ್ತಿಕ್ಕಾಟದಿಂದ, ದೈವದ ಆರಾಧನೆ ಬೀದಿ ಜಗಳವಾಗಿ ಮಾರ್ಪಟ್ಟಿದೆ. ಈ ನಡುವೆ ತಮ್ಮ ಮೇಲೆ ಬಂದಿರುವ ಆರೋಪಗಳಿಗೆ ಮತ್ತು ಕಾಂತರಾ ಸಿನಿಮಾದ ಹೋಲಿಕೆಗಳಿಗೆ ಎದುರು ಪಕ್ಷದವರು ಕಠಿಣ ಉತ್ತರ ನೀಡಿದ್ದಾರೆ. ದೈವಾರ್ಥಕರಿಗೆ ನಾವು ಬೆದರಿಕೆ ಹಾಕಿಲ್ಲ ಒಂದು ವೇಳೆ ಬೆದರಿಕೆ ಹಾಕಿದ್ದರೆ ಬ್ರಹ್ಮ ಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲೊಡ್ಡಿದ್ದಾರೆ.
ಉಡುಪಿಯಲ್ಲಿ ಕಾಂತರಾ ಸಿನಿಮಾ ಹೋಲುವ ದೈವಸ್ಥಾನದ ಕಥೆ, ಕೋರ್ಟ್‌ಗೆ ಹೋದ ವ್ಯಕ್ತಿ ತಂಬಿಲ ದಿನ ಸಾವು!
ಅಂತೆಯೇ ಜಯ ಪೂಜಾರಿ ಅವರ ಸಾವು ಒಂದು ಕಾಕತಾಳಿಯ ಘಟನೆ ಆಯಸ್ಸು ಪೂರ್ಣಗೊಂಡು ಅವರು ದೈವಸ್ಥಾನದಲ್ಲಿ ಮೋಕ್ಷ ಪ್ರಾಪ್ತಿ ಪಡೆದಿದ್ದಾರೆ ಎಂದು ಸಮಜಾಯಿಸಿ ನೀಡಿದ್ದಾರೆ.ಈಗಾಗಲೇ ನೇಮೋತ್ಸವಕ್ಕೆ ಎಲ್ಲಾ ತಯಾರಿಗಳು ನಡೆದಿದೆ. ಪ್ರಮುಖ ಜಾತಿಗಳ ಅನುಪಸ್ಥಿತಿಯಲ್ಲಿ ನೇಮೋತ್ಸವ ನಡೆಯಬಾರದು ಎಂದಿಲ್ಲ. ಹಾಗಂತ ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯದೆ ನಡೆಯುವ ಆರಾಧನೆ ದೈವ ಒಪ್ಪುತ್ತಾ ಕಾದು ನೋಡಬೇಕು.