Asianet Suvarna News Asianet Suvarna News

ಮಂಗಳೂರು: ಗಡಿನಾಡಿನ ಭತ್ತ ತಳಿ ಸಂರಕ್ಷಕ ಸತ್ಯನಾರಾಯಣ ಬೆಳೇರಿ ಅರಸಿ ಬಂದ ಪದ್ಮಶ್ರೀ ಪ್ರಶಸ್ತಿ

ಸಕ್ಕರೆ ಕಾಯಿಲೆಯಿಂದ ಕ್ಯಾನ್ಸರ್‌ ತಡೆಯುವ ವರೆಗಿನ ಎಲ್ಲ ಔಷಧೀಯ ಗುಣಗಳುಳ್ಳ ಹಲವು ಭತ್ತದ ತಳಿಗಳು ಇವರ ಸಂಗ್ರಹದಲ್ಲಿದೆ. ಹಸಿರು, ನೇರಳೆ, ಕಪ್ಪು ಹೀಗೆ ವಿವಿಧ ಬಣ್ಣಗಳ ದೇಶೀಯ ಹಾಗೂ ವಿದೇಶಿ ತಳಿಯ ಭತ್ತದ ತಳಿಗಳು ಇವರಲ್ಲಿವೆ.

Paddy Variety Saver Sathyanarayan Beleri Got Padma Shri Award grg
Author
First Published Jan 27, 2024, 11:33 AM IST

ಮಂಗಳೂರು(ಜ.27):  ಗಡಿನಾಡು ಕಾಸರಗೋಡು ಜಿಲ್ಲೆ ಕಿನ್ನಿಂಗಾರು ಬೇಳೇರಿಯ ಸತ್ಯನಾರಾಯಣ ಅವರು ಭತ್ತ ಬೆಳೆಯುವಲ್ಲಿ ಮಾಡಿದ ಸಾಧನೆಗೆ ಈ ಬಾರಿಯ ಪ್ರದ್ಮಶ್ರೀ ಪ್ರಶಸ್ತಿ ದೊರಕಿದೆ. ದೇಶ ವಿದೇಶಗಳ ಸುಮಾರು 650 ತಳಿಗಳ ಭತ್ತವನ್ನು ಸಂಗ್ರಹಿಸಿ ಇವರು ಬೆಳೆಯುತ್ತಿದ್ದು, ತಳಿ ಸಂರಕ್ಷಣೆಗಾಗಿ ಭತ್ತವನ್ನು ಬೆಳೆಯುತ್ತಿದ್ದಾರೆ. ಸ್ವಲ್ಪ ಸ್ವಲ್ಪವೇ ಬೆಳೆದು ಸಂಗ್ರಹಿಸುತ್ತಿದ್ದಾರೆ. ಕೇಳಿ ಬರುವ ಆಸಕ್ತರಿಗೆ ನೀಡುತ್ತಿದ್ದಾರೆ.

ಮೂಲತಃ ಕೃಷಿಕರೇ ಆದ ಇವರು ಪತ್ರಿಕೆಯಲ್ಲಿ ಒಮ್ಮೆ ಕರ್ನಾಟಕದ ಪೂಕವೊಕ ಎಂದೇ ಪ್ರಸಿದ್ಧರಾದ ಚೇರ್ಕಾಡಿ ರಾಮಚಂದ್ರ ರಾಯರು ಬೆಳೆಯುವ ರಾಜಕಾಯಮೆ ಭತ್ತದ ತಳಿ ಬಗ್ಗೆ ಲೇಖನ ನೋಡುತ್ತಾರೆ. ಅವರಿಗೆ ಪತ್ರ ಬರೆದು ಒಂದು ಹಿಡಿ ಬೀಜ ಸಂಗ್ರಹಿಸಿ ತಾವೂ ಬೆಳೆಯಲು ಪ್ರಾರಂಭಿಸಿದರು. ಅಲ್ಲಿಂದ ಆರಂಭಗೊಂಡ ಭತ್ತದ ಮೇಲಿನ ಪ್ರೀತಿ ಇವರಲ್ಲಿ ಇನ್ನೂ ಬತ್ತಿಲ್ಲ. ಚಿಕ್ಕ ಚಿಕ್ಕ ಗ್ರೊಬ್ಯಾಗ್‌ ಗಳಲ್ಲಿ ಬೆಳೆದು ಕಾಪಿಡುತ್ತಿದ್ದಾರೆ. ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ, ಮೈಸೂರು, ಕೇರಳ, ತಮಿಳು ನಾಡಿಗೆ ತೆರಳಿ ಅಲ್ಲಿಯ ಭತ್ತದ ತಳಿ ಸಂಗ್ರಹಿಸಿ ನೆಟ್ಟಿದ್ದಾರೆ.

ಪದ್ಮಶ್ರೀ ಪುರಸ್ಕೃತೆ: ರಾಜವಂಶದಲ್ಲಿ ಹುಟ್ಟಿ ಮಾವುತೆಯಾದ ಪರ್ಬತಿ ರೋಚಕ ಸ್ಟೋರಿ ಇದು

ಸಕ್ಕರೆ ಕಾಯಿಲೆಯಿಂದ ಕ್ಯಾನ್ಸರ್‌ ತಡೆಯುವ ವರೆಗಿನ ಎಲ್ಲ ಔಷಧೀಯ ಗುಣಗಳುಳ್ಳ ಹಲವು ಭತ್ತದ ತಳಿಗಳು ಇವರ ಸಂಗ್ರಹದಲ್ಲಿದೆ. ಹಸಿರು, ನೇರಳೆ, ಕಪ್ಪು ಹೀಗೆ ವಿವಿಧ ಬಣ್ಣಗಳ ದೇಶೀಯ ಹಾಗೂ ವಿದೇಶಿ ತಳಿಯ ಭತ್ತದ ತಳಿಗಳು ಇವರಲ್ಲಿವೆ.

ಹೇಗೆ ಬೆಳೆದರು? : 

ಸಣ್ಣ ಸಣ್ಣ ಕಾಗದದ ಲೋಟಗಳಲ್ಲಿ ಮಣ್ಣು, ಗೊಬ್ಬರವನ್ನು ತುಂಬಿ ಅದರಲ್ಲಿ ಭತ್ತ ಬಿತ್ತುತ್ತಾರೆ. ಮೊಳಕೆಯೊಡೆದ 10 ದಿನಗಳ ಬಳಿಕ ಅದನ್ನು ಗ್ರೋಬ್ಯಾಗ್‌ಗೆ ವರ್ಗಾಯಿಸಿ ಭತ್ತ ಬೆಳೆಯುತ್ತಿದ್ದಾರೆ. ಬಳಿಕ ಬಂದ ಭತ್ತದ ತೆನೆಯನ್ನು ಕಟಾವು ಮಾಡಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಸಂರಕ್ಷಿಸಿ ಇಡುತ್ತಾರೆ. ಬೇಕಾದವರಿಗೆ ಒಂದು ಹಿಡಿಯಟ್ಟು ಕೊಡುತ್ತಾರೆ. ಹೀಗೆ ಕಳೆದ 13 ವರ್ಷಗಳಿಂದ ಸಾಗಿದೆ ಸತ್ಯನಾರಾಯಣ ಕಾಯಕ. ಅವರ ಬರ ನಿರೋಧಕ, ನೆರೆ ನಿರೋಧಕ ತಳಿ ಸಹಿತ ಭತ್ತದ ಸಂರಕ್ಷಣೆ ಯಶೋಗಾಥೆ. ಸಾಹಿತ್ಯ ಕೃಷಿಯಲ್ಲೂ ತೊಡಗಿಸಿಕೊಂಡಿದ್ದು, ಹಲವು ಲೇಖನಗಳನ್ನು ಬರೆದಿದ್ದಾರೆ. ಜೇನು ಸಾಕಣೆ ಮತ್ತು ಗಿಡಗಳ ಕಸಿಯಲ್ಲೂ ಇವರು ಎತ್ತಿದ ಕೈ.

ಪ್ರಶಸ್ತಿಗಳು: 

ಇವರ ಸಾಧನೆಯನ್ನು ಗುರುತಿಸಿ ಸ್ಥಳೀಯವಾಗಿ ಹಲವು ಪ್ರಶಸ್ತಿ ಸಂದಿವೆ. ದೆಹಲಿಯ ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದಿಂದ ಪ್ಲಾಂಟ್‌ ಜಿನೋಮ್‌ ಸೇವಿಯರ್‌ ಫಾರ್ಮರ್‌ ಪ್ರಶಸ್ತಿಯನ್ನು ಸೇರಿದಂತೆ ಹತ್ತು ಹಲವು ಪ್ರಶಸ್ತಿ ಇವರ ಮುಡಿಗೇರಿದ್ದು, ಇದೀಗ ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Follow Us:
Download App:
  • android
  • ios