Udupi; ಹಡಿಲು ಭೂಮಿಯಲ್ಲಿ ಭತ್ತ ಬೆಳೆಯುವ ವಿಶಿಷ್ಟ ಕಲ್ಪನೆಗೆ ಮರುಚಾಲನೆ
ಕೃಷಿ ನಡೆಸದೆ ಹಡಿಲು ಅಥವಾ ಪಾಳು ಬಿಟ್ಟ ಭೂಮಿಯನ್ನು ದತ್ತು ಪಡೆದು ಭತ್ತದ ಬೆಳೆ ಬೆಳೆಯುವ ಅಪರೂಪದ ಪರಿಕಲ್ಪನೆಗೆ ಉಡುಪಿಯಲ್ಲಿ ಇದೀಗ ಮರು ಜೀವ ಬಂದಿದೆ.
ವರದಿ; ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಜೂನ್ 30): ಮುಂಗಾರು ಆಗಮನದೊಂದಿಗೆ ಉಡುಪಿ ಜಿಲ್ಲೆಯಲ್ಲಿ ಕೃಷಿ ಅಭಿಯಾನಕ್ಕೆ ಚಾಲನೆ ದೊರೆತಿದೆ. ಕೋರೋನ ಕಾಲಘಟ್ಟದಲ್ಲಿ ಆರಂಭವಾದ ಕೇದಾರೋತ್ಥಾನ ಕೃಷಿ ಅಭಿಯಾನ ಈ ವರ್ಷವೂ ನಡೆಯಲಿದೆ. ಕೃಷಿ ನಡೆಸದೆ ಹಡಿಲು ಅಥವಾ ಪಾಳು ಬಿಟ್ಟ ಭೂಮಿಯನ್ನು ದತ್ತು ಪಡೆದು ಭತ್ತದ ಬೆಳೆ ಬೆಳೆಯುವ ಅಪರೂಪದ ಪರಿಕಲ್ಪನೆಗೆ ಇದೀಗ ಮರು ಜೀವ ಬಂದಿದೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ರಘುಪತಿ ಭಟ್ ಈ ವರ್ಷವೂ ಹಡಿಲುಭೂಮಿ ಕೃಷಿಗೆ ಒತ್ತು ನೀಡಿದ್ದಾರೆ. ಕಳೆದ ವರ್ಷ ಒಂದುವರೆ ಸಾವಿರ ಎಕರೆಗೂ ಅಧಿಕ ಪಾಳುಬಿದ್ದ ಕೃಷಿ ಭೂಮಿಯಲ್ಲಿ ಭತ್ತದ ಬೆಳೆ ತೆಗೆಯಲಾಗಿತ್ತು. ಅನೇಕ ವರ್ಷಗಳಿಂದ ಉಪಯೋಗಿಸದೆ ಖಾಲಿ ಬಿಟ್ಟಿದ್ದ ಭೂಮಿಯನ್ನು, ಕೇದಾರೋತ್ಥಾನ ಟ್ರಸ್ಟ್ ಮೂಲಕ ದತ್ತು ಪಡೆದು ಕೃಷಿ ನಡೆಸಲಾಗಿತ್ತು.
ಕೊರೊನ ಕಾಲಘಟ್ಟದಲ್ಲಿ ಜನರು ಮನೆಗಳಲ್ಲಿ ಬಾಕಿಯಾಗಿ ಕೃಷಿ ಚಟುವಟಿಕೆಯತ್ತ ಆಸಕ್ತಿ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಸಕರ ಭಟ್ ಆಸಕ್ತ ಜನರನ್ನು ಒಡಗೂಡಿಕೊಂಡು ಹಡಿಲು ಭೂಮಿ ಕೃಷಿ ಆಂದೋಲನ ನಡೆಸಿದ್ದರು. ಉಡುಪಿ ವಿಧಾನ ಸಭಾ ಕ್ಷೇತ್ರದ ಬಹುತೇಕ ಎಲ್ಲಾ ಕಡೆ ಈ ಅಭಿಯಾನ ಯಶಸ್ವಿಯಾಗಿತ್ತು. ಅಂದಾಜು 850 ಟನ್ ಭತ್ತದ ಫಸಲು ಬಂದಿತ್ತು.
ನಕಲಿ ಗೊಬ್ಬರ ಮಾರಾಟ ಕಂಡು ಬಂದರೆ ಕ್ರಿಮಿನಲ್ ಮೊಕದ್ದಮೆ: ಸಚಿವ ಗೋಪಾಲಯ್ಯ
ಹಡಿಲು ಭೂಮಿ ಕೃಷಿ ಆಂದೋಲನದ ಪ್ರಕಾರ, ಮೊದಲ ವರ್ಷ ಭೂಮಿಯನ್ನು ಫಲವತ್ತಾಗಿಸಿ , ಕೃಷಿ ನಡೆಸಿ ನಂತರ ಆ ಭೂಮಿಯನ್ನು ಗದ್ದೆಯ ಮಾಲಕರಿಗೆ ಬಿಟ್ಟುಕೊಡಲಾಗಿತ್ತು. ಇದೀಗ 2ನೇ ವರ್ಷ ಆಯಾಮಾಲಕರೇ ಕೃಷಿ ನಡೆಸಲು ಉತ್ತೇಜನ ನೀಡಲಾಗಿದೆ. ಬಹುತೇಕ ಕೃಷಿಕರು ಈ ಬಾರಿ ಗದ್ದೆಯನ್ನು ಪಾಳು ಬಿಡದೆ ತಾವೇ ಕೃಷಿ ಆರಂಭಿಸಿದ್ದಾರೆ.
ಉಳಿದಂತೆ ಕೃಷಿ ನಡೆಸದ ಇತರ ಗದ್ದೆಗಳನ್ನು ಟ್ರಸ್ಟನ ಮೂಲಕ ಮತ್ತೊಮ್ಮೆ ಪಡೆದು ಭತ್ತ ಬಿತ್ತನೆ ಮಾಡಲು ತೀರ್ಮಾನಿಸಲಾಗಿದೆ. ಜೊತೆಗೆ ಕೃಷಿ ನಡೆಸದ ಹಡಿಲು ಭೂಮಿಯನ್ನು ದತ್ತು ಪಡೆದು ಕೃಷಿ ನಡೆಸಲಾಗುತ್ತಿದೆ. ಅಂದಾಜು 500 ಎಕರೆಗೂ ಅಧಿಕ ಭೂಮಿಯಲ್ಲಿ ಅಭಿಯಾನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೆಳೆ ವಿಮಾ ಯೋಜನೆ ಹಿನ್ನಡೆ: ಸುಮಲತಾ ಅಸಮಾಧಾನ
ಕೋಟಿ ನಷ್ಟವಾದರೂ ಕುಂದದ ಉತ್ಸಾಹ: ವಾಸ್ತವದಲ್ಲಿ ಹಡಿಲು ಭೂಮಿ ಕೃಷಿ ಅಭಿಯಾನ ಸಾಕಷ್ಟು ನಷ್ಟ ಅನುಭವಿಸಿದೆ. ಆದರೆ ಈ ನಷ್ಟವನ್ನು ಹೊರೆಯೆಂದು ಭಾವಿಸಲು ಸಾಧ್ಯವಿಲ್ಲ. ಕೃಷಿ ನಡೆಸದೇ ದಶಕಗಳೇ ಕಳೆದಿತ್ತು, ಅಂತಹ ಭೂಮಿಗಳಲ್ಲಿ ಮತ್ತೆ ಫಸಲು ಕಾಣಲು ಕೋಟ್ಯಂತರ ರೂಪಾಯಿ ವ್ಯಯಿಸಬೇಕಾಗಿತ್ತು. ಕಳೆ ತೆಗೆದು ಸೂಕ್ತ ನೀರಾವರಿ ವ್ಯವಸ್ಥೆ ಮಾಡೋದು ಸುಲಭದ ಮಾತಾಗಿರಲಿಲ್ಲ. ಆದರೆ ಈಗ ಪಾಳು ಬಿದ್ದ ಭೂಮಿಗಳು ಮತ್ತೆ ಕೃಷಿಗದ್ದೆಗಳಾಗಿವೆ. ಮೊದಲ ವರ್ಷದ ಖರ್ಚು ವೆಚ್ಚವನ್ನು ನಷ್ಟ ಎಂದು ಭಾವಿಸದೆ, ಎರಡನೇ ವರ್ಷದ ಕೃಷಿ ಅಭಿಯಾನ ಮತ್ತೆ ಶುರುವಾಗಿದೆ. ಒಂದು ಕೋಟಿ ರೂಪಾಯಿಗೂ ಅಧಿಕ ನಷ್ಟ ಅನುಭವಿಸಿದ್ದರೂ ಕಾರ್ಯಕರ್ತರ ಉತ್ಸಾಹ ಕುಂದಿಲ್ಲ. ಕಳೆದ ಬಾರಿ ಬೆಳೆದ ನೂರಾರು ಟನ್ ಭತ್ತ ಸದ್ಯ ಸ್ಟಾಕ್ ಇದೆ. ಭತ್ತಕ್ಕೆ ಉತ್ತಮ ದರ ಇರುವುದರಿಂದ, ಒಂದಿಷ್ಟು ನಷ್ಟ ಕಡಿಮೆ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ ಕೇದಾರೋತ್ಥಾನ ತಂಡ.
ಈ ಬಾರಿ ಸರಳ ಕೃಷಿ, ಮೌನಕ್ರಾಂತಿ: ಕಳೆದ ವರ್ಷ ಹಡಿಲು ಗದ್ದೆ ಕೃಷಿ ಅಭಿಯಾನ ಭಾರಿ ಸದ್ದು ಮಾಡಿತ್ತು, ಮುಖ್ಯಮಂತ್ರಿಗಳು, ವಿವಿಧ ಇಲಾಖಾ ಸಚಿವರು, ಸಂಸದರು, ಸಿನಿಮಾನಟರು ಬಂದು ನಾಟಿ ಹಾಗೂ ಕಟಾವು ಕಾರ್ಯದಲ್ಲಿ ಭಾಗವಹಿಸಿದ್ದರು. ಈ ಮೂಲಕ ಅಭಿಯಾನವನ್ನು ಜನಪ್ರಿಯಗೊಳಿಸಿದ್ದರು. ಆದರೆ ಈ ಬಾರಿ ಅತ್ಯಂತ ಸರಳವಾಗಿ ಕೃಷಿಕೇಂದ್ರಿತವಾಗಿ ಭತ್ತಬಿತ್ತನೆ ಮಾಡಲು ತಂಡ ತೀರ್ಮಾನಿಸಿದೆ. ಈಗಾಗಲೇ ಹಡಿಲು ಭೂಮಿಯಲ್ಲಿ ಭಿತ್ತನೆ ಕಾರ್ಯ ಆರಂಭವಾಗಿದೆ. ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ರಘುಪತಿ ಭಟ್ ಅವರ ಮುತುವರ್ಜಿಯ ಈ ಕೃಷಿ ಅಭಿಯಾನಕ್ಕೆ ರಾಷ್ಟ್ರಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.