ನಕಲಿ ಗೊಬ್ಬರ ಮಾರಾಟ ಕಂಡು ಬಂದರೆ ಕ್ರಿಮಿನಲ್ ಮೊಕದ್ದಮೆ: ಸಚಿವ ಗೋಪಾಲಯ್ಯ
* ಬೇರೆ ಜಿಲ್ಲೆ, ರಾಜ್ಯಕ್ಕೆ ಅಕ್ರಮವಾಗಿ ರಸಗೊಬ್ಬರ ಸಾಗಾಣಿಕೆ: ಆರೋಪ
* ರಸಗೊಬ್ಬರ ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ಎಚ್ಚರ ವಹಿಸಿ
* ಮಂಡ್ಯ ಜಿಲ್ಲೆಯಲ್ಲಿ ನಡೆದಿರುವ ರಸಗೊಬ್ಬರ ಹಗರಣ ಬೇರೆಲ್ಲೂ ನಡೆದಿಲ್ಲ
ಮಂಡ್ಯ(ಜೂ.30): ಅಕ್ರಮವಾಗಿ ಬೇರೆ ಜಿಲ್ಲೆ, ರಾಜ್ಯಕ್ಕೆ ರಸಗೊಬ್ಬರ ಸಾಗಾಣಿಕೆ, ನಕಲಿ ರಸಗೊಬ್ಬರ ಮಾರಾಟ ಪ್ರಕರಣ ಕಂಡು ಬಂದರೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಎಚ್ಚರಿಸಿದರು. ಜಿಲ್ಲೆಯಲ್ಲಿ ಮುಂದಿನ ತಿಂಗಳಿನಿಂದ ಮುಂಗಾರು ಭಿತ್ತನೆ ಆರಂಭವಾಗಲಿದೆ. ರಸಗೊಬ್ಬರ ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ಎಚ್ಚರ ವಹಿಸುವಂತೆ ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ಗೆ ಸೂಚಿಸಿದರು.
ಶಾಸಕರಾದ ಅನ್ನದಾನಿ ಮತ್ತು ಡಿ.ಸಿ. ತಮ್ಮಣ್ಣ ಮಾತನಾಡಿ, ಜಿಲ್ಲೆಯಲ್ಲಿ ನಡೆದಿರುವ ರಸಗೊಬ್ಬರ ಹಗರಣ ಬೇರೆಲ್ಲೂ ನಡೆದಿಲ್ಲ. ಬೋಗಸ್ ದಾಖಲಾತಿ ಸೃಷ್ಟಿಸಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಕಳುಹಿಸಲಾಗಿದೆ. ಇಲ್ಲಿನ ರೈತರಿಗೆ ರಸಗೊಬ್ಬರಕ್ಕೆ ಮಣ್ಣನ್ನು ಮಿಶ್ರಣ ಮಾಡಿ ಮಾರಾಟ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಈ ಬಗ್ಗೆ ಯಾವ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ರಸಗೊಬ್ಬರ ಸೊಸೈಟಿಗಳಿಗೆ ಹೋಗುತ್ತಿಲ್ಲ. ಖಾಸಗಿ ಅಂಗಡಿಗಳಿಗೆ ಹೋಗುತ್ತಿವೆ ಎಂದು ಆರೋಪಿಸಿದರು.
Mandya Mysugar: ಮೈಶುಗರ್ ಆರಂಭಕ್ಕೆ ಸರ್ಕಾರ ಬದ್ಧ, ಬಜೆಟ್‌ನಲ್ಲಿ ಭರಪೂರ ಕೊಡುಗೆ
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ಗೋಪಾಲಯ್ಯ, ಇನ್ನು ಮುಂದೆ ಆ ರೀತಿ ಆಗದಂತೆ ನೋಡಿಕೊಳ್ಳಿ. ಜಿಲ್ಲೆಯಲ್ಲಿ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿ ತೊಂದರೆ ಉಂಟಾಗಬಾರದು. ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜ ಅಥವಾ ಕಲಬೆರೆಕೆ ರಸಗೊಬ್ಬರ ವಿತರಣೆ ಕಂಡುಬಂದಲ್ಲಿ ದಾಳಿ ನಡೆಸಿ ವಶ ಪಡಿಸಿಕೊಂಡು ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು ಎಂದರು.
ಈಗಿರುವ ಬಿತ್ತನೆ ಬೀಜ ಅಥವಾ ರಸಗೊಬ್ಬರದ ಅವಶ್ಯಕತೆಯನ್ನು ಪರಿಶೀಲಿಸಿ. ರಸಗೊಬ್ಬರದಲ್ಲಿ ಸಮಸ್ಯೆಯಾದಲ್ಲಿ ನನಗೆ ತಿಳಿಸಬೇಕು. ಕೃಷಿ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಬೇಡಿಕೆ ತಕ್ಕಂತೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಒದಗಿಸುವುದಾಗಿ ತಿಳಿಸಿದರು.