ಅಕಾಲಿಕ ಮಳೆಯಿಂದ ಭತ್ತಕ್ಕೆ ಹಾನಿ; ಆತಂಕದಲ್ಲಿ ರೈತ
- ಅಕಾಲಿಕ ಮಳೆಯಿಂದ ಭತ್ತಕ್ಕೆ ಹಾನಿ ಸಾಧ್ಯತೆ
- ಉ.ಕ.ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ
- ತೆನೆಬಿಟ್ಟ ಭತ್ತದ ಗದ್ದೆಗೆ ನುಗ್ಗಿದ ಮಳೆನೀರು
- ಆತಂಕದಲ್ಲಿ ರೈತಾಪಿ ವರ್ಗ
ಕಾರವಾರ (ಅ.8) : ಅಕಾಲಿಕವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಜಿಲ್ಲೆಯ ವಿವಿಧೆಡೆ ಭತ್ತದ ಬೆಳೆ ಹಾನಿಗೊಳಗಾಗುವ ಸಾಧ್ಯತೆ ಇದ್ದು, ರೈತರು ಕಳವಳಗೊಂಡಿದ್ದಾರೆ. ಎರಡು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಕಾರವಾರ, ಅಂಕೋಲಾ, ಭಟ್ಕಳ, ಹೊನ್ನಾವರ ಮತ್ತಿತರ ಕಡೆ ಭಾರಿ ಮಳೆಯಾಗಿದೆ. ಗುರುವಾರ ದಿನವಿಡೀ ಸಾಧಾರಣ ಮಳೆಯಾಗಿದೆ. ನಡುವೆ 2 ಗಂಟೆಗೂ ಹೆಚ್ಚು ಕಾಲ ವ್ಯಾಪಕ ಮಳೆಯಾಗಿದೆ. ದಿನವಿಡೀ ಮೋಡ ಕವಿದ ವಾತಾವರಣ, ತೀವ್ರ ಮಳೆಯಿಂದ ಭತ್ತದ ಬೆಳೆ ಹಾನಿಯ ಬಗ್ಗೆ ರೈತರು ಚಿಂತಿತರಾಗಿದ್ದಾರೆ.
ಮಳೆಯಿಂದ ಬೆಳೆಗೆ ಕುತ್ತು, ರೈತರಿಗೆ ಆಪತ್ತು..!
ಜಿಲ್ಲೆಯ ಕರಾವಳಿಯಾದ್ಯಂತ ಭತ್ತದ ತೆನೆಗಳು ಬಿಟ್ಟಿವೆ. ಈ ಸಂದರ್ಭದಲ್ಲಿ ಭಾರಿ ಮಳೆ ಮುಂದುವರಿದರೆ ತೆನೆಗಳು ನೆಲಕ್ಕೊರಗಿ ನೀರಿನಲ್ಲಿ ಮುಳುಗುವ ಸಾಧ್ಯತೆ ಇದೆ. ಮಳೆ ಮುಂದುವರಿದರೆ ಭತ್ತದ ತೆನೆಗಳಷ್ಟೇ ಅಲ್ಲ ಹುಲ್ಲು ಕೂಡ ನಾಶವಾಗುವ ಸಾಧ್ಯತೆ ಇದೆ ಎಂದು ರೈತರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಕುಮಟಾ ತಾಲೂಕಿನ ಶಿರಗುಂಜಿ, ಮಲವಳ್ಳಿ, ಕುಡ್ಲೆ, ಕಣಕಲೆ, ಕೈಲೋಡಿ ಮತ್ತಿತರ ಕಡೆ ತೆನೆಬಿಟ್ಟಭತ್ತದ ಗದ್ದೆಗಳಲ್ಲಿ ಮಳೆ ನೀರು ನುಗ್ಗಿದೆ. ಇದರಿಂದ ಆ ಪ್ರದೇಶದ ಭತ್ತದ ಬೆಳೆಗಾರರು ಮಳೆ ನಿಂತರೆ ಸಾಕೆಂದು ಪ್ರಾರ್ಥಿಸುತ್ತಿದ್ದಾರೆ.
ಜಿಲ್ಲೆಯ ಎಲ್ಲೆಡೆ ಮೋಡ ಕವಿದ ವಾತಾವರಣ ಮುಂದುವರಿದಿದೆ. ಶುಕ್ರವಾರವೂ ಕರಾವಳಿಯ ಕೆಲವೆಡೆ ಮಳೆ ಸುರಿದಿದೆ. ಆದರೆ ಗುರುವಾರಕ್ಕಿಂತ ಮಳೆಯ ಪ್ರಮಾಣ ಕಡಿಮೆ ಇತ್ತು. 2-3 ವರ್ಷಗಳಿಂದ ಈ ರೀತಿ ಅಕಾಲಿಕವಾಗಿ ಮಳೆಯಾಗುತ್ತಲೇ ಇದೆ. ರೈತರು ತೊಂದರೆಗೊಳಗಾಗುತ್ತಲೇ ಇದ್ದಾರೆ. ಮಳೆಗಾಲದಲ್ಲಿ ಪ್ರವಾಹ, ನಂತರ ಅಕಾಲಿಕ ಮಳೆ, ಬೇಸಿಗೆಯಲ್ಲಿ ನೀರಿಲ್ಲದೆ ಬೆಳೆ ಒಣಗುತ್ತಿದೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಪ್ರತಿ ವರ್ಷವೂ ಇದು ಮರುಕಳಿಸುತ್ತಿರುವುದರಿಂದ ಜಿಲ್ಲೆಯ ರೈತರು ತೀವ್ರ ತೊಂದರೆಗೊಳಗಾಗಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಶಿವರಾಮ ಗಾಂವಕರ ಅಭಿಪ್ರಾಯಪಡುತ್ತಾರೆ.
ರೈತರು ನವರಾತ್ರಿ ಹಬ್ಬವನ್ನು ಸಂಭ್ರಮದಿಂದ ಮುಗಿಸಿದ ಸಂತಸದಲ್ಲಿರುವಾಗಲೇ ಅಕಾಲಿಕ ಮಳೆ ನೆಮ್ಮದಿ ಕೆಡಿಸಿದೆ. ಇನ್ನೆಷ್ಟುದಿನ ಮಳೆ ಸುರಿಯಲಿದೆಯೋ ಎನ್ನುವ ಚಿಂತೆ ಕಾಡುತ್ತಿದೆ.
ನಿರಂತರ ಮಳೆ; ನೀರಿನಲ್ಲಿ ಕೊಳೆಯುತ್ತಿದೆ ಸೋಯಾ
ಭತ್ತದ ತೆನೆಗಳು ಬಿಟ್ಟಿವೆ. ಈ ಅವಧಿಯಲ್ಲಿ ಮಳೆ ಬಂದರೆ ಬೆಳೆ ಹಾನಿ ಆಗಲಿದೆ. ಎರಡು ದಿನಗಳಿಂದ ಭಾರಿ ಮಳೆ ಸುರಿದಿದೆ. ಗದ್ದೆಗಳಲ್ಲಿ ನೀರು ತುಂಬಿದೆ. ಮಳೆ ಮತ್ತೆ ಮುಂದುವರಿದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಲಿದೆ.
ಮಂಜುನಾಥ ಗೌಡ- ರೈತ, ಕುಮಟಾ