ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಹಾಗೂ ಆಸ್ಪತ್ರೆ ಸಿಬ್ಬಂದಿ ಪೊಲೀಸರ  ಮುನ್ನೆಚ್ಚರಿಕೆ ಮತ್ತು ಕ್ಷಿಪ್ರ ಕಾರ್ಯಾಚರಣೆಯಿಂದ ಬಹುದೊಡ್ಡ ಅನಾಹುತ ಒಂದು ತಪ್ಪಿದೆ. ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ 200ಕ್ಕೂ ಅಧಿಕ ಮಂದಿ ಜೀವ ಉಳಿದಿದೆ. 

ಬೆಂಗಳೂರು (ಮೇ.06): ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ, ವೈದ್ಯರು ಹಾಗೂ ಇಡೀ ಆಸ್ಪತ್ರೆಯ ಸಿಬ್ಬಂದಿ ಮುನ್ನೆಚ್ಚರಿಕೆ ಮತ್ತು ಕ್ಷಿಪ್ರ ಕಾರ್ಯಾಚರಣೆಯಿಂದ ಬಹುದೊಡ್ಡ ಆಕ್ಸಿಜನ್‌ ದುರಂತವೊಂದು ಬೆಂಗಳೂರಿನಲ್ಲಿ ಸ್ವಲ್ಪದರಲ್ಲೇ ತಪ್ಪಿದೆ. 

ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಈ ದುರಂತ ತಪ್ಪಿದ್ದು, ಇಡೀ ರಾತ್ರಿ ಡಿಸಿಎಂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆಮ್ಲಜನಕದ ವ್ಯವಸ್ಥೆ ಮಾಡಲಾಗಿದ್ದು, ಈ ಮೂಲಕ ವೆಂಟಿಲೇಟರ್‌ ಹಾಗೂ ಆಕ್ಸಿಜನ್‌ ಬೆಡ್‌ಗಳ ಮೇಲೆ ಚಿಕಿತ್ಸೆ ಪಡೆಯುತ್ತಿದ್ದು ಒಟ್ಟು 200 (100 ಬೆಡ್ ಐಸಿಯು ವೆಂಟಿಲೇಟರ್, 100 ಆಮ್ಲಜನಕ ಸಹಿತ ಬೆಡ್) ಕೋವಿಡ್‌ ಸೋಂಕಿತರ ಅಮೂಲ್ಯ ಜೀವ ಉಳಿದಿದೆ. 

ಆಸ್ಪತ್ರೆಯಲ್ಲಿ ಏನಾಗಿತ್ತು?: 

ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ 200 ಸೋಂಕಿತರು ಆಕ್ಸಿಜನ್ ಬೆಡ್ʼಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರಿಗೆ ಒದಗಿಸಲಾಗುತ್ತಿದ್ದ ಆಮ್ಲಜನಕವು ರಾತ್ರಿಯ ವೇಳೆಗೆ ಖಾಲಿಯಾಗುತ್ತಾ ಬಂದಿತ್ತು. ಪ್ರಾಕ್ಸಿ ಏರ್‌ ಎನ್ನುವ ಕಂಪನಿ ಬುಧವಾರ ರಾತ್ರಿ 11 ಗಂಟೆಗೆ ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಮಾಡಬೇಕಾಗಿತ್ತು. ಆದರೆ, ಬಳ್ಳಾರಿಯಿಂದ ಬರಬೇಕಾಗಿದ್ದ ಆ ಕಂಪನಿಯ ಟ್ಯಾಂಕರ್‌ ರಾತ್ರಿ 11.30 ಆದರೂ ಬರಲೇ ಇಲ್ಲ. ಬದಲಿಗೆ ಆ ಟ್ಯಾಂಕರ್‌ ಕೆ.ಸಿ.ಜನರಲ್‌ಗೆ ಬರುವ ಬದಲು ಖಾಸಗಿ ಆಸ್ಪತ್ರೆಗೆ ಹೋಗಿದೆ ಎಂಬ ವಿಷಯ ತಿಳಿದುಬಂದಿದೆ. 

ಭದ್ರಾವತಿಯಲ್ಲಿ ಆಕ್ಸಿಜನ್ ಘಟಕ ರೀ ಓಪನ್ : ನೀಗಲಿದೆ ಪ್ರಾಣವಾಯು ಹಾಹಾಕಾರ

ಒಂದೆಡೆ ಆಕ್ಸಿಜನ್‌ ಕಡಿಮೆಯಾಗುತ್ತಿರುವ ವಿಷಯ ಗೊತ್ತಾದ ಕೂಡಲೇ ಸಿಬ್ಬಂದಿ, ಆಕ್ಸಿಜನ್ ನಿರ್ವಹಣೆ ಹೊಣೆ ಹೊತ್ತಿದ್ದ ವೈದ್ಯಾಧಿಕಾರಿ ಡಾ.ರೇಣುಕಾ ಪ್ರಸಾದ್ ಗಮನಕ್ಕೆ ತಂದಿದ್ದಾರೆ. ಕೂಡಲೇ ಡಾ.ಪ್ರಸಾದ್‌ ಅವರು ಪ್ರಾಕ್ಸಿ ಏರ್‌ ಸಂಸ್ಥೆಯನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದಾರೆ. ಅವರ ಪ್ರಯತ್ನಗಳು ಸಫಲವಾಗಿಲ್ಲ. ತತ್‌ಕ್ಷಣವೇ ಅವರು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರಿಗೆ ಮಧ್ಯರಾತ್ರಿ 12.30ರ ಹೊತ್ತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. 

ಕೂಡಲೇ ಕಾರ್ಯ ಪ್ರವೃತ್ತರಾದ ಡಿಸಿಎಂ, ಎಲ್ಲೆಲ್ಲಿ ಆಮ್ಲಜನಕ ಲಭ್ಯವಿದೆ ಎಂದು ಕ್ಷಿಪ್ರಗತಿಯಲ್ಲಿ ಪತ್ತೆ ಹಚ್ಚಿದ್ದಾರೆ. ಕೊನೆಗೆ ಯುನಿವರ್ಸಲ್‌ ಎಂಬ ಕಂಪನಿ ಜತೆ ಮಾತನಾಡಿದರಲ್ಲದೆ ತುರ್ತಾಗಿ ಆಕ್ಸಿಜನ್‌ ವ್ಯವಸ್ಥೆ ಮಾಡಿದ್ದಾರೆ. 

ಆಪರೇಷನ್‌ ಆಕ್ಸಿಜನ್!!‌ 

ಯುನಿವರ್ಸಲ್‌ ಕಂಪನಿಯಿಂದ ಆಕ್ಸಿಜನ್‌ ವ್ಯವಸ್ಥೆ ಮಾಡಿದ ಡಿಸಿಎಂ ಅವರು ಮಲ್ಲೇಶ್ವರ ಪೊಲೀಸರ ಜತೆಯೂ ಮಾತನಾಡಿ ಆಮ್ಲಜನಕದ ನಿರಾತಂಕ ಸಾಗಣೆಗೆ ನೆರವಾಗುವಂತೆ ಸೂಚಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರೂ ಯುನಿವರ್ಸಲ್‌ ಕಂಪನಿ-ಕೆ.ಸಿ.ಜನರಲ್‌ ನಡುವಿನ ಮಾರ್ಗ ಮಧ್ಯೆ ಝೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಿ ಮೊದಲು 20 ಜಂಬೋ ಸಿಲಿಂಡರ್‌ಗಳನ್ನು ತರಿಸಲು ಸಹಕರಿಸಿದರು. ಅರೆಕ್ಷಣ ಸಮಯವನ್ನು ಪೋಲು ಮಾಡದೇ ಇಡೀ ಆಸ್ಪತ್ರೆಯ ಸಿಬ್ಬಂದಿಯೆಲ್ಲ ಒಟ್ಟಾಗಿ ಬೆಳಗಿನ ಜಾವ 4.45ರವರೆಗೆ ರೋಗಿಗಳಿಗೆ ಆ ಸಿಲಿಂಡರ್‌ಗಳ ಮೂಲಕ ಆಮ್ಲಜನಕ ಸಂಪರ್ಕ ಕಲ್ಪಿಸಿದ್ದಾರೆ. 

ಬಹ್ರೇನ್‌ನಿಂದ 40 MT ಆಕ್ಸಿಜನ್, ರಾಜ್ಯದ ಪ್ರತಿ ಜಿಲ್ಲೆಗೂ ಪ್ರಾಣವಾಯು ಪೂರೈಕೆ! .

ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಲಿಕ್ವಿಡ್‌ ಆಕ್ಸಿಜನ್‌ ಇರುವ ಟ್ಯಾಂಕರ್‌ ಕೂಡ ಯುನಿವರ್ಸಲ್‌ ಕಂಪನಿಯಿಂದ ಕೆ.ಸಿ.ಜನರಲ್‌ ಆಸ್ಪತ್ರೆಗೆ ಬಂದಿದೆ. ಅಲ್ಲಿಗೆ ಇಡೀ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು. 

ಸಿಬ್ಬಂದಿ ಹೈ ಆಲರ್ಟ್‌ 

ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಸಮಯ ಪ್ರಜ್ಞೆ, ಸಕಾಲಿಕ ಕ್ರಮಗಳಿಂದ ಸೋಂಕಿತರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಬುಧವಾರ ರಾತ್ರಿ 11.30ಯಿಂದ ಇಂದು ಬೆಳಗಿನ ಜಾವ 4.45ರ ವರೆಗೆಗೂ ಎಲ್ಲಾ 200 ಸೋಂಕಿತರ ಮೇಲೆ ತೀವ್ರ ನಿಗಾ ಇಟ್ಟ ಸಿಬ್ಬಂದಿ ಸಂಕಷ್ಟದ ಸಮಯದಲ್ಲಿ ಆಮ್ಲಜನಕದ ಉಳಿತಾಯಕ್ಕೂ ಶ್ರಮಿಸಿದರು. 

ಪರಿಸ್ಥಿತಿಯ ತೀವ್ರತೆಯನ್ನು ಅರಿತ ಅವರೆಲ್ಲರೂ ಎಲ್ಲ ಸೋಂಕಿತರ ಪರಿಸ್ಥಿತಿಯನ್ನು, ಆಕ್ಸಿಜನ್‌ ಸ್ಯಾಚುರೇಷನ್‌ ಸ್ಥಿತಿಯನ್ನು ಕ್ಷಿಪ್ರಗತಿಯಲ್ಲಿ ಪರಿಶೀಲನೆ ಮಾಡಿದರು. ಯಾರಿಗೆ ಹೆಚ್ಚು, ಯಾರಿಗೆ ಕಡಿಮೆ ಆಮ್ಲಜನಕದ ಅಗತ್ಯ ಇದೆ ಎಂಬುದನ್ನು ನೋಡಿಕೊಂಡು ಗಂಭೀರ ಸ್ಥಿತಿಯಲ್ಲಿದ್ದ ಸೋಂಕಿತರಿಗೆ ಆಕ್ಸಿಜನ್‌ ಕಡಿಮೆಯಾಗದಂತೆ ನೋಡಿಕೊಂಡಿದ್ದಾರೆ. ಹೀಗಾಗಿ ಆಮ್ಲಜಕದ ಕೊರತೆ ಉಂಟಾಗಲಿಲ್ಲ. 

ಇಡೀ ರಾತ್ರಿ ನಿದ್ದೆಗೆಟ್ಟ ಡಿಸಿಎಂ 

ಮಧ್ಯರಾತ್ರಿ 12.45ರಿಂದ ಬೆಳಗಿನ ಜಾವ 4 ಗಂಟೆ ವರೆಗೂ ಆಕ್ಸಿಜನ್‌ ಕಾರ್ಯಾಚರಣೆಯಲ್ಲಿ ಭಾಗಿಯಾದ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು ಕೊನೆಗೂ ದೊಡ್ಡ ದುರಂತವನ್ನು ತಪ್ಪಿಸುಲ್ಲಿ ಯಶಸ್ವಿಯಾದರು. ಎಲ್ಲ ಸೋಂಕಿತರಿಗೂ ಆಕ್ಸಿಜನ್‌ ಪೂರೈಕೆಯಾಗಿ ಪರಿಸ್ಥಿತಿ ಸರಿಹೋದ ನಂತರ ವೈದ್ಯರ ಜತೆಗೆ ಮಾತನಾಡಿದ ಅವರು ಸಮಾಧಾನದ ನಿಟ್ಟುಸಿರು ಬಿಟ್ಟರು. ಈ ಸಂದರ್ಭದಲ್ಲಿ ವೈದ್ಯ ಸಿಬ್ಬಂದಿಯ ಸಮಯ ಪ್ರಜ್ಞೆಯನ್ನು ಡಿಸಿಎಂ ಮನಸಾರೆ ಶ್ಲಾಘಿಸಿದರು. ಸಂಕಷ್ಟದ ಸಮಯದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಸೋಂಕಿತರ ಜೀವ ಉಳಿಸಿದ್ದಾಗಿ ಸಂತಸ ವ್ಯಕ್ತಪಡಿಸಿದರು. ಅಲ್ಲದೆ, ಪೊಲೀಸರಿಗೂ ಕೃತಜ್ಞತೆ ಸಲ್ಲಿಸಿದರು. ಬಳಿಕೆ ಬೆಳಗಿನ ಜಾವ 4.30 ಗಂಟೆಯ ಹೊತ್ತಿಗೆ ಇಡೀ ಆಸ್ಪತ್ರೆಯ ಪರಿಸ್ಥಿತಿಯನ್ನು ಮತ್ತೊಮ್ಮೆ ಅವಲೋಕನ ಮಾಡಿ ನಿದ್ದೆಗೆ ಜಾರಿದರು ಡಿಸಿಎಂ. 

ಡಿಸಿಎಂ ಹೇಳಿದ್ದೇನು? 

ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧೆಡೆ ಆಕ್ಸಿಜನ್‌ ವೈಫಲ್ಯದಿಂದ ಉಂಟಾಗಿದ್ದ ದುರಂತಗಳು ನಮ್ಮ ಕಣ್ಮುಂದೆ ಇವೆ. ಹೀಗಾಗಿ ವಿಷಯ ಗೊತ್ತಾದ ಕೂಡಲೇ ನಾನು ಕಾರ್ಯಪ್ರವೃತ್ತನಾದೆ. ಒಂದು ಆಕ್ಸಿಜನ್‌ ತರಿಸುವುದು, ಇನ್ನೊಂದೆಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಜೀವ ರಕ್ಷಣೆ ಮಾಡುವುದು.. ಈ ಎರಡೂ ಸವಾಲುಗಳನ್ನು ಏಕಕಾಲಕ್ಕೆ ಎದುರಿಸಬೇಕಾಯಿತು. ನಾನು ಆಕ್ಸಿಜನ್‌ ವ್ಯವಸ್ಥೆ ಮಾಡುವ ಕೆಲಸ ಮಾಡಿದೆ. ವೈದ್ಯರು & ಸಿಬ್ಬಂದಿ ಸೋಂಕಿತರನ್ನು ನೋಡಿಕೊಂಡರು. ಪೊಲೀಸರು ಸಕಾಲಕ್ಕೆ ನೆರವಾದರು. ಇಡೀ ರಾತ್ರಿ ನಡೆದ ಕಾರ್ಯಾಚರಣೆಯಿಂದ ಅಮೂಲ್ಯ ಜೀವಗಳು ಉಳಿದಿವೆ. 

 ಡಾ.ಸಿ.ಎನ್.‌ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona