ಖಾನಾಪುರದಲ್ಲಿ ವರುಣನ ಅಬ್ಬರ: ತುಂಬಿ ಹರಿಯುತ್ತಿರುವ ಮಲಪ್ರಭೆ
ಮಳೆಗೆ ನಲುಗಿದ ಖಾನಾಪುರ ಸಂಕಷ್ಟ ತಂದಿಟ್ಟ ಮುಂಗಾರು, ಮಳೆಯಿಂದ ಹೆದ್ದಾರಿ, ದೇವಾಲಯ ಜಲಾವೃತ, ವಿದ್ಯುತ್ ಕಂಬಗಳು ಧರೆಗೆ, ಈ ವರ್ಷದ ಅತ್ಯಧಿಕ ಮಳೆ ದಾಖಲು.
ಖಾನಾಪುರ(ಜು.20): ತಾಲೂಕಿನ ಅರಣ್ಯ ಪ್ರದೇಶದಲ್ಲಿ ಈ ವರ್ಷದ ಅತ್ಯಧಿಕ ಮಳೆ ಬುಧವಾರ ಕಣಕುಂಬಿಯಲ್ಲಿ ದಾಖಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಕಣಕುಂಬಿ ಸುತ್ತ-ಮುತ್ತ 23.5 ಸೆಂಮೀ ಮಳೆಯಾಗಿದೆ. ಲೋಂಡಾದಲ್ಲಿ 15.3 ಸೆಂಮೀ, ಗುಂಜಿಯಲ್ಲಿ 13.3 ಸೆಂಮೀ, ಜಾಂಬೋಟಿಯಲ್ಲಿ 12.9 ಸೆಂಮೀ, ಅಸೋಗಾದಲ್ಲಿ 10.3 ಸೆಂಮೀ, ಖಾನಾಪುರ ಪಟ್ಟಣ 8 ಸೆಂಮೀ, ನಾಗರಗಾಳಿ 10.4 ಸೆಂಮೀ, ಬೀಡಿ 7 ಸೆಂಮೀ, ಕಕ್ಕೇರಿ 10.2 ಸೆಂಮೀ ಪ್ರಮಾಣದಲ್ಲಿ ಮಳೆಯಾಗಿದೆ. ಸತತ ಮಳೆಗೆ ತಾಲೂಕಿನ ಕಾನನದಂಚಿನ ಭಾಗದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ವಿದ್ಯುತ್ ಸಂಪರ್ಕ ಇಲ್ಲದ್ದರಿಂದ ಬಹುತೇಕ ಹಳ್ಳಿಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗುತ್ತಿಲ್ಲ. ಹೀಗಾಗಿ ಪಡಿತರ ವಿತರಣೆ, ಗ್ರಾಪಂ, ಬ್ಯಾಂಕ್ ಸೇರಿದಂತೆ ಆನ್‌ಲೈನ್ ಸೇವೆಗಳಿಗೆ ತೊಂದರೆಯಾಗಿದೆ.
ತಾಲೂಕಿನ ನಾಗರಗಾಳಿ, ಗುಂಜಿ, ಲೋಂಡಾ, ಹೆಮ್ಮಡಗಾ, ನೇರಸೆ, ನೀಲಾವಡೆ, ಜಾಂಬೋಟಿ, ಅಮಗಾಂವ, ಗವ್ವಾಳಿ ಮತ್ತು ಕಣಕುಂಬಿ ಅರಣ್ಯಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಮಳೆ-ಗಾಳಿಗೆ ಲೋಂಡಾ, ಕಾಟಗಾಳಿ, ಬೈಲೂರು, ಅಮಗಾಂವ ಗ್ರಾಮಗಳ ಬಳಿ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬಗಳು ಮತ್ತು ತಂತಿಗಳನ್ನು ಮರುಜೋಡಣೆ ಮಾಡಲು ಕಸರತ್ತು ನಡೆಸಿದ್ದಾರೆ. ಆದರೆ ಸತತಧಾರೆ ಕಾರ್ಯಾಚರಣೆಗೆ ಅಡ್ಡಿ ಉಂಟುಮಾಡಿದೆ. ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಕಣಕುಂಬಿ-ತಳಾವಡೆ, ಪಾರವಾಡ-ಚಿಕಲೆ, ಚಿಕಲೆ-ಅಮಗಾಂವ, ಗವ್ವಾಳಿ-ನೇರಸಾ, ಹೆಮ್ಮಡಗಾ-ದೇಗಾಂವ, ಮೋದೆಕೊಪ್ಪ-ಕೌಲಾಪುರ, ಉಚವಡೆ-ಓಲಮನಿ ಸೇರಿದಂತೆ ಹಲವು ಮಾರ್ಗಗಳ ರಸ್ತೆ ಮತ್ತು ಸೇತುವೆಗಳ ಮೇಲೆ ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿದೆ. ಹೀಗಾಗಿ ಈ ಗ್ರಾಮಗಳಿಗೆ ಮುಖ್ಯ ವಾಹಿನಿಯಿಂದ ಸಂಪರ್ಕ ಕಡಿತವಾಗಿದೆ. ಅರಣ್ಯ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ, ಪಾಂಡರಿ ಮತ್ತು ಮಹದಾಯಿ ನದಿಗಳು ಮತ್ತು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಜಾಂಬೋಟಿ ಅರಣ್ಯದ ಹಬ್ಬನಹಟ್ಟಿಆಂಜನೇಯ ದೇವಾಲಯದ ಕಟ್ಟಡ ಅರ್ಧದಷ್ಟುಮಲಪ್ರಭಾ ನದಿಯಲ್ಲಿ ಮುಳುಗಡೆಯಾಗಿದೆ.
ಮುಂದುವರೆದ ಮಳೆ ಆರ್ಭಟ: ಬೆಳಗಾವಿಯಲ್ಲಿ ಸೇತುವೆ, ಮಂದಿರ ಜಲಾವೃತ
ಈ ಬಾರಿಯ ಮಳೆಗಾಲದ ಆರಂಭದ ದಿನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆ ಸುರಿಯಲಾರಂಭಿಸದ ಕಾರಣ ಜೂನ್ ಇಡೀ ತಿಂಗಳು ಮತ್ತು ಜುಲೈನ ಮೊದಲೆರಡು ವಾರ ಪ್ರತಿಯೊಬ್ಬರೂ ಮಳೆರಾಯನ ಆಗಮನವನ್ನು ಕುತೂಹಲದಿಂದ ನೋಡುವಂತಾಗಿತ್ತು. ಆದರೆ ಪಟ್ಟಣ ಸೇರಿದಂತೆ ಕಳೆದ ಭಾನುವಾರದಿಂದ ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆ ತಾಲೂಕಿನ ಪಾಲಿಗೆ ಒಂದೆಡೆ ಖುಷಿ, ಮತ್ತೊಂದೆಡೆ ಆತಂಕ, ದುಗುಡಗಳನ್ನು ತಂದಿಟ್ಟಿದೆ. ಇದುವರೆಗೂ ಬತ್ತಿದ್ದ ಜಲಮೂಲಗಳಿಗೆ ಕಳೆದೊಂದು ವಾರದಿಂದ ಸುರಿಯಲಾರಂಭಿಸಿರುವ ಮಳೆ ಖುಷಿಯನ್ನು ತಂದರೆ ಬುಧವಾರ ಸುರಿದ ಮಳೆಗೆ ಹೆದ್ದಾರಿ, ದೇವಾಲಯಗಳು ಜಲಾವೃತಗೊಂಡಿವೆ. ವಿವಿಧೆಡೆ ಮರಗಿಡಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ.
ತಾಲೂಕಿನ ಲೋಂಡಾ ಅರಣ್ಯದ ನೇರಸೆ ಹಾಗೂ ಶಿರೋಲಿ ಭಾಗದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಅಲಾತ್ರಿ ಹಳ್ಳದಲ್ಲಿ ಪ್ರವಾಹವೇರ್ಪಟ್ಟಿದೆ. ಪರಿಣಾಮ ಮಂಗಳವಾರ ರಾತ್ರಿಯಿಂದ ಸಿಂಧನೂರು-ಹೆಮ್ಮಡಗಾ ರಾಜ್ಯ ಹೆದ್ದಾರಿಯ ಮಂತುರ್ಗಾ ಗ್ರಾಮದ ಬಳಿ ಅಲಾತ್ರಿ ಹಳ್ಳದ ಸೇತುವೆಯ ಮೇಲೆ ಐದು ಅಡಿಗಳಷ್ಟುನೀರು ಹರಿಯಲಾರಂಭಿಸಿದೆ. ಹೆದ್ದಾರಿ ಮತ್ತು ಅಲಾತ್ರಿ ಹಳ್ಳದ ಸೇತುವೆಯ ಪ್ರದೇಶ ಅಲಾತ್ರಿ ಹಳ್ಳದಲ್ಲಿ ಮುಳುಗಡೆಯಾದ ಪರಿಣಾಮ ಖಾನಾಪುರ-ಹೆಮ್ಮಡಗಾ ಮಾರ್ಗದಲ್ಲಿ ಸಂಚಾರ ಸ್ಥಗಿತವಾಗಿದೆ. ಇದರಿಂದಾಗಿ ತಾಲೂಕಿನ ಭೀಮಗಡ ವನ್ಯಧಾಮಕ್ಕೆ ಸಂಪರ್ಕ ಕಲ್ಪಿಸುವ 40ಕ್ಕೂ ಹೆಚ್ಚು ಗ್ರಾಮಗಳಿಗೆ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.