ಅಪಾಯದ ಮಟ್ಟ ತಲುಪುತ್ತಿರುವ ತುಂಗಭದ್ರಾ : ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ

ಭಾರೀ ಮಳೆ ಸುರಿದ ಪರಿಣಾಮ ನದಿಗಳು ಉಕ್ಕೇರುತ್ತಿದ್ದು, ತುಂಗಭದ್ರಾ ನದಿಯೂ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

over flow At Tungabhadra River Due To heavy Rain snr

ದಾವಣಗೆರೆ (ಸೆ.23): ಕ್ಷಣಕ್ಷಣಕ್ಕೂ ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರಾ ಹರಿವಿನ ಪ್ರಮಾಣ ಏರಿಕೆಯಾಗುತ್ತಿದ್ದು, ನ್ಯಾಮತಿ-ಹೊನ್ನಾಳಿ-ಹರಿಹರ ತಾಲೂಕಿನ ಅನೇಕ ಗ್ರಾಮಗಳು, ನದಿ ಪಾತ್ರ ನಗರ ವಾಸಿಗಳು ಇದೀಗ ಮುಳುಗಡೆ ಭೀತಿಗೆ ತುತ್ತಾಗಿದ್ದಾರೆ. ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರಾ ನದಿ ನೀರಿನ ಹರಿವಿನ ಮಟ್ಟಮಂಗಳವಾರ 10.75 ಮೀಟರ್‌ ಇದ್ದು, ಮಧ್ಯರಾತ್ರಿ ಅಥವಾ ಬುಧವಾರ ಬೆಳಿಗ್ಗೆ ಹೊತ್ತಿಗೆ ನೀರಿನ ಹರಿವಿನ ಪ್ರಮಾಣ ಮತ್ತಷ್ಟುಹೆಚ್ಚುವ ಭೀತಿ ಆವರಿಸಿದ್ದು, ನದಿಪಾತ್ರದ ಜನರು ಜೀವ ಕೈಯಲ್ಲಿ ಹಿಡಿದು ಕಾಲ ಕಳೆಯಬೇಕಾಗಿದೆ.

ಹೊನ್ನಾಳಿ ಪಟ್ಟಣದ ಬಾಲರಾಜ ಘಾಟ್‌ ಹಾಗೂ ಹರಿಹರದ ಗಂಗಾ ನಗರ ಪ್ರದೇಶವು ಪ್ರತಿ ಸಲದಂತೆ ಈಗಲೂ ತುಂಗಭದ್ರಾ ನೆರೆಯಿಂದಾಗಿ ಮುಳುಗಡೆಯಾಗುವ ಹಿನ್ನೆಲೆಯಲ್ಲಿ ಒಟ್ಟು 31 ಕುಟುಂಬಗಳ 155 ಜನರಿಗಾಗಿ ಕಾಳಜಿ ಕೇಂದ್ರಗಳನ್ನು ಆರಂಭಿಸುವ ಮೂಲಕ ತಾತ್ಕಾಲಿಕವಾಗಿ ಆಶ್ರಯ ಕಲ್ಪಿಸಲಾಗಿದೆ.

ತುಂಗಭದ್ರಾ ನದಿ ಮತ್ತೆ ಅಪಾಯದ ಮಟ್ಟತಲುಪುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿ ಬೀಳಗಿ ಸೋಮವಾರವಷ್ಟೇ ಹೊನ್ನಾಳಿ ತಾಲೂಕಿಗೆ ಭೇಟಿ ನೀಡಿ, ಪರಿಶೀಲಿಸಿದ್ದರು. ಪಟ್ಟಣದ ಬಾಲರಾಜ ಘಾಟ್‌ನ 13 ಕುಟುಂಬದ 71 ಜನರಿಗೆ, ಹರಿಹರದ ಗಂಗಾ ನಗರದ 18 ಕುಟುಂಬಗಳ 84 ಜನರಿಗೆ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಇದೇ ತಾಲೂಕಿನ ಚಿಕ್ಕ ಬಿದರಿ-ಸಾರಥಿ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಉಕ್ಕಡಗಾತ್ರಿ ಹಾಗೂ ತುಮ್ಮಿನಕಟ್ಟೆಮಾರ್ಗದ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯೂ ಸಂಪೂರ್ಣ ಜಲಾವೃತವಾಗಿದೆ. ವಾಹನಗಳು, ಜನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿನ್ನೆಗಿಂತಲೂ ಇಂದು ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ರಾತ್ರಿ ಹೊತ್ತಿಗೆ ಮತ್ತಷ್ಟುಹೆಚ್ಚುವ ಸಾಧ್ಯತೆ ಇದೆ.

38 ವರ್ಷಗಳ ದಾಖಲೆ ಮಳೆ, ಉಡುಪಿ ಸಂಪೂರ್ಣ ಜಲಾವೃತ! ...

ಭದ್ರಾ ಡ್ಯಾಂನಿಂದ ನೀರು ಬಿಡುತ್ತಿರುವುದು, ಘಟ್ಟಪ್ರದೇಶದಲ್ಲಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಆಗುತ್ತಿರುವ ಮಳೆಯಿಂದಾಗಿ ತುಂಗಭದ್ರಾ ನದಿಗೆ ನೀರಿನ ಹರಿವು ಹೆಚ್ಚುತ್ತಲೇ ಇದೆ. ಇದರಿಂದಾಗಿ ಜಿಲ್ಲೆಯ 23 ಗ್ರಾಮಗಳು ಪ್ರವಾಹ ಭೀತಿಗೆ ತುತ್ತಾಗಿದ್ದು, ನದಿ ಪಾತ್ರದ ಗ್ರಾಮಸ್ಥರು ಭಯದಿಂದಲೇ ಹಗಲು-ರಾತ್ರಿ ಎನ್ನದೇ ಕಾಲ ಕಳೆಯಬೇಕಾಗಿದೆ. ಸದ್ಯಕ್ಕೆ ಹೊನ್ನಾಳಿ, ಹರಿಹರ ತಾಲೂಕಿನ ನದಿ ಪಾತ್ರದ ಪಟ್ಟಣ, ನಗರ, ಗ್ರಾಮೀಣ ವಾಸಿಗಳಿಗೆ ನದಿ ಪಾತ್ರದಲ್ಲಿ ಸುಳಿಯದಂತೆ, ಜಾನುವಾರು ಮೇಯಿಸಲು ಹೋಗದಂತೆ ಎಚ್ಚರಿಸಲಾಗಿದೆ.

ಪ್ರತಿ ಸಲವೂ ನೆರೆ ಬಂದಾಗ ತುಂಗಭದ್ರಾ ನದಿ ಪಾತ್ರದಲ್ಲಿ ವಾಸಿಸುವ ಹೊನ್ನಾಳಿಯ ಬಾಲರಾಜ ಘಾಟ್‌ ನಿವಾಸಿಗಳು, ಹರಿಹರದ ಗಂಗಾ ನಗರ ನಿವಾಸಿಗಳ ಬದುಕು ಮೂರಾಬಟ್ಟೆಯಾಗುತ್ತದೆ. ಪ್ರತಿ ಮಳೆಗಾಲದಲ್ಲಿ ನೆರೆ ಬಂದಾಗಲೂ, ಡ್ಯಾಂನಿಂದ ನೀರು ಬಿಟ್ಟಾಗಲೂ ನದಿ ಪಾತ್ರ ಈ ಜನರು ಕುಟುಂಬ ಸಮೇತ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆಯಬೇಕಾದ ಅನಿವಾರ್ಯತೆ ಬಂದೊದಗುತ್ತದೆ. ಪ್ರತಿ ವರ್ಷವೂ ನೆರೆ ಬಂದ ಕಾಲಕ್ಕೆ ಈ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಬೇಕೆಂಬ ಕೂಗು ಮಾತ್ರ ಇಂದಿಗೂ ಅರಣ್ಯ ರೋದನವಾಗಿದೆ.

ದಾವಣಗೆರೆ ನಗರ, ಜಿಲ್ಲಾದ್ಯಂತ ಅಲ್ಲಲ್ಲಿ ಮಂಗಳವಾರ ಬೆಳಗಿನ ಜಾವ ಜೋರು ಮಳೆಯಾಗಿದೆ. ದಿನವಿಡೀ ದಟ್ಟಮೋಡಗಳು ಆವರಿಸಿದ್ದು, ಅಲ್ಲಲ್ಲಿ ಜೋರು ಮಳೆಯಾದರೆ, ಮತ್ತೆ ಬಹುತೇಕ ಕಡೆಗಳಲ್ಲಿ ತುಂತುರು ಮಳೆ ಮಾತ್ರ ಆಗಿದೆ. ಇಡೀ ಜಿಲ್ಲಾದ್ಯಂತ ಮೋಡ ಮುಸುಕಿದ ವಾತಾವರಣವಿದೆ. ಅಲ್ಲಲ್ಲಿ ಮನೆಗಳು, ಗೋಡೆಗಳು ಕುಸಿದು ಬಿದ್ದು ನಷ್ಟಸಂಭವಿಸಿದ್ದರೆ, ನದಿ, ಹಳ್ಳ, ಹಳ್ಳ-ಹೊಳೆಯ ಹಿನ್ನೀರು ನುಗ್ಗಿ ಬೆಳೆ ಹಾನಿ ಸಂಭವಿಸಿದ ಬಗ್ಗೆಯೂ ವರದಿಯಾಗುತ್ತಿದೆ. ಕಂದಾಯ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲಿಸುತ್ತಿದ್ದಾರೆ.

ನದಿ ಪಾತ್ರಕ್ಕೆ ಹೋಗದಂತೆ ಕಟ್ಟು ನಿಟ್ಟಿನ ಸೂಚನೆ

ಚಿಕ್ಕಮಗಳೂರು ಜಿಲ್ಲೆ ಲಕ್ಕವಳ್ಳಿಯ ಭದ್ರಾ ಡ್ಯಾಂ ಹಾಗೂ ಶಿವಮೊಗ್ಗ ಜಿಲ್ಲೆಯ ಗಾಜನೂರಿನ ತುಂಗಾ ಡ್ಯಾಂನ ಜಲಾನಯನ ಪ್ರದೇಶದಲ್ಲಿ ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಉಭಯ ಡ್ಯಾಂಗಳಿಗೆ ನೀರು ಹರಿದು ಬರುತ್ತಿರುವಂತೆಯೇ ಡ್ಯಾಂಗಳಿಂದಲೂ ತುಂಗಭದ್ರಾ ನದಿ, ಭದ್ರಾ ಬಲ ಮತ್ತು ಎಡ ದಂಡೆ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ.

ಕಾರವಾರ; ಸಿನಿಮೀಯ ಕಾರ್ಯಾಚರಣೆ, ಜನರಿಂದಲೇ ಮೀನುಗಾರರ ರಕ್ಷಣೆ

ಹೊನ್ನಾಳಿ, ಹರಿಹರ ತಾಲೂಕು ಹಾದು ಹೋಗಿರುವ ತುಂಗಭದ್ರಾ ನದಿ ಪಾತ್ರದಲ್ಲಿ, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನರ ನಾಡಿಗಳಂತೆ ಹಬ್ಬಿರುವ ಭದ್ರಾ ಕಾಲುವಗಳ ಬಳಿ ಯಾರೂ ಸಂಚರಿಸದಂತೆ, ನೀರಿಗೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಉಕ್ಕಿ ಹರಿಯುತ್ತಿರುವ ನದಿ ಪಾತ್ರಕ್ಕೆ ಹೋಗದಂತೆ, ಜಾನುವಾರು ಮೇಯಿಸಲು, ಅವುಗಳನ್ನು ತೊಳೆಯಲು ನದಿಗೆ ಇಳಿಯದಂತೆಯೂ ಸೂಚಿಸಲಾಗಿದೆ. ತುಂಗಾ ಮತ್ತು ಭದ್ರಾ ನದಿಗಳಿಗೆ 90 ಸಾವಿರ ಕ್ಯುಸೆಕ್‌ಗಿಂತಲೂ ಹೆಚ್ಚು ನೀರು ಬಿಟ್ಟಿರುವುದರಿಂದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚುತ್ತಿದೆ.

Latest Videos
Follow Us:
Download App:
  • android
  • ios