ಬೆಂಗಳೂರು: ಬಿಬಿಎಂಪಿ ಮೀಸಲು ಕರಡು ಪಟ್ಟಿಯೇ ಫೈನಲ್..!
243 ವಾರ್ಡ್‌ಗಳಿಗೆ ಮೀಸಲಾತಿ ಪಟ್ಟಿಗೆ ಆಕ್ಷೇಪ ಆಹ್ವಾನಿಸಿದ್ದ ಸರ್ಕಾರ, 2 ಸಾವಿರ ಆಕ್ಷೇಪಣೆಗೆ ಕ್ಯಾರೇ ಎನ್ನದ ಸರ್ಕಾರ
ಬೆಂಗಳೂರು(ಆ.17): ಬಿಬಿಎಂಪಿಯ 243 ವಾರ್ಡ್‌ಗಳಿಗೆ ಮೀಸಲಾತಿ ಕರಡು ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದ ಆಕ್ಷೇಪಣೆಗಳನ್ನು ಪರಿಶೀಲಿಸಿದ ಸರ್ಕಾರವು ಅಂತಿಮ ಪಟ್ಟಿಯನ್ನು ಮಂಗಳವಾರ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಕಳೆದ ಆಗಸ್ಟ್ 3 ರಂದು ಸರ್ಕಾರವು ಬಿಡುಗಡೆ ಮಾಡಿದ ಕರಡು ಪಟ್ಟಿಗೆ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿದರೂ ಅಂತಿಮ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾವತ್ ಆಗಿ ಪ್ರಕಟಿಸಿದೆ.
2 ಸಾವಿರಕ್ಕೂ ಅಧಿಕ ಆಕ್ಷೇಪಣೆ ಸಲ್ಲಿಕೆ:
ಮೀಸಲಾತಿ ಕರಡು ಪಟ್ಟಿಗೆ 2 ಸಾವಿರಕ್ಕೂ ಅಧಿಕ ಆಕ್ಷೇಪಣೆ ಸಲ್ಲಿಕೆಯಾಗಿತ್ತು. ಮೀಸಲಾತಿ ಕರಡು ಪಟ್ಟಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿಲ್ಲ ಎಂದು ಕಾಂಗ್ರೆಸ್ ನಾಯಕರು ಈಗಾಗಲೆ ಪ್ರತಿಭಟನೆ ಮಾಡಿದ್ದರು. ಹಾಗೆಯೇ ನಗರಾಭಿವೃದ್ಧಿ ಇಲಾಖೆಗೆ ಮೀಸಲಾತಿಯಲ್ಲಾಗಿರುವ ಲೋಪಗಳನ್ನು ಮುಂದಿಟ್ಟುಕೊಂಡು ಆಕ್ಷೇಪಣೆಯನ್ನೂ ಸಲ್ಲಿಸಲಾಗಿತ್ತು. ಸಲ್ಲಿಕೆಯಾದ ಯಾವುದೂ ಆಕ್ಷೇಪಣೆಗಳನ್ನು ಪರಿಗಣಿಸದ ಹಿನ್ನೆಲೆಯಲ್ಲಿ ಈ ಕುರಿತು ಅತೃಪ್ತರು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಹೆಚ್ಚಾಗಿದೆ.
ಬೆಂಗಳೂರು: ಬಿಬಿಎಂಪಿ ವಾರ್ಡ್ ಮೀಸಲು ಪಟ್ಟಿಗೆ ಆ. 16ರವರೆಗೆ ಹೈಕೋರ್ಟ್ ತಡೆ
ನಿಯಮ ಉಲ್ಲಂಘನೆ
ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ವಾರ್ಡನ್ನು ಸಾಮಾನ್ಯ ವರ್ಗಕ್ಕೆ ನೀಡದೇ ಎಲ್ಲ ವಾರ್ಡ್‌ಗಳನ್ನೂ ಮೀಸಲಾತಿ ಹಂಚಿಕೆ ಮಾಡಿರುವುದು ಸಂವಿಧಾನದ 234ಟಿ ವಿಧಿಯ 1ರಿಂದ 3ನೇ ಉಪವಿಧಿವರೆಗೆ ಉಲ್ಲಂಘನೆಯಾಗಿದೆ. ಪದ್ಮನಾಭ ನಗರ 5, ಬೆಂಗಳೂರು ದಕ್ಷಿಣ-5, ಚಿಕ್ಕಪೇಟೆ-4, ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ-5 ಸಾಮಾನ್ಯ ವರ್ಗಕ್ಕೆ ಮೀಸಲಾತಿ ನೀಡಲಾಗಿದೆ. ಮೀಸಲಾತಿ ಮರು ಪರಿಷ್ಕರಿಸುವಂತೆ ಆಕ್ಷೇಪಣೆ ಸಲ್ಲಿಕೆಯಾಗಿತ್ತು.
ಕೋರ್ಟಲ್ಲಿ ವಾರ್ಡ್ ವಿಂಗಡಣೆ ಸಮರ್ಥಿಸಿಕೊಂಡ ಸರ್ಕಾರ
ಬಿಬಿಎಂಪಿ ವಾರ್ಡ್‌ಗಳ ಪುನರ್ ವಿಂಗಡಣೆಯನ್ನು ಕಾಯ್ದೆಗೆ ಅನುಗುಣವಾಗಿ ಸಮರ್ಪಕವಾಗಿ ಮಾಡಲಾಗಿದ್ದು, ಪುನರ್ ವಿಂಗಡಣೆ ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಬಾರದು ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗ ಮನವಿ ಮಾಡಿದೆ.
ಇದೇ ವೇಳೆ ಅರ್ಜಿಗಳಿಗೆ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ಆದೇಶ ಅಥವಾ ಮೌಖಿಕ ಸೂಚನೆ ನೀಡಲು ಹೈಕೋರ್ಟ್ ನಿರಾಕರಿಸಿದ್ದು, ವಿಚಾರಣೆಯನ್ನು ಬುಧವಾರ (ಆ.17) ಮುಂದೂಡಿದೆ.
‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ-2020’ರಂತೆ ಬಿಬಿಎಂಪಿ ವಾರ್ಡ್‌ಗಳ ಪುನರ್ ವಿಂಗಡಣೆ ಮಾಡಿರುವ ಸರ್ಕಾರದ ಕ್ರಮ ಪ್ರಶ್ನಿಸಿ ವಕೀಲ ಎಸ್. ಇಸ್ಮಾಯಿಲ್ ಜಬಿವುಲ್ಲಾ, ಶಾಂತಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ, ಮಾಜಿ ಕಾಪೋರೇಟರ್‌ಗಳಾದ ಬಿ.ಎನ್.ಮಂಜುನಾಥ್ ರೆಡ್ಡಿ, ಎನ್.ನಾಗರಾಜ್ ಹಾಗೂ ಇತರರು ಸೇರಿದಂತೆ ಒಟ್ಟು ಆರು ತಕರಾರು ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಬಿಬಿಎಂಪಿಯ ವಾರ್ಡ್ ಮೀಸಲಾತಿಗೆ 2 ಸಾವಿರಕ್ಕೂ ಹೆಚ್ಚು ಆಕ್ಷೇಪಣೆ ಸಲ್ಲಿಕೆ
ರಾಜ್ಯ ಚುನಾವಣಾ ಆಯೋಗದ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕೆ.ಎನ್.ಫಣೀಂದ್ರ, 2020ರ ಸೆ.14ರಂದು ಅಧಿಕಾರಾವಧಿ ಮುಗಿದಿರುವುದರಿಂದ ತುರ್ತಾಗಿ ಬಿಬಿಎಂಪಿಗೆ ಚುನಾವಣೆ ನಡೆಸಬೇಕಿದೆ. ಮೇಲಾಗಿ ಸುಪ್ರೀಂಕೋರ್ಟ್ ಆದೇಶ ಪಾಲನೆಗೆ ಕಾಲಮಿತಿ ಕಡಿಮೆ ಇರುವುದರಿಂದ ಆಯೋಗಕ್ಕೆ ಅನಿವಾರ್ಯವಾಗಿ ಚುನಾವಣೆ ನಡೆಸುವ ಸ್ಥಿತಿ ಎದುರಾಗಿದ್ದು, ಮತದಾರರ ಪಟ್ಟಿಸಿದ್ಧಪಡಿಸಲಾಗುತ್ತಿದೆ. ಕ್ಷೇತ್ರ ಪುನರ್ ವಿಂಗಡಣೆ ಸಮರ್ಪಕವಾಗಿ ಮಾಡಲಾಗಿದೆ. ವಾರ್ಡ್‌ಗಳ ಪುನರ್ ವಿಂಗಡಣೆಯಲ್ಲಿ ಕಾಯ್ದೆಯ ಸೆಕ್ಷನ್ 7 (1)(ಎ) ಮತ್ತು (ಬಿ) ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಒಂದು ವಾರ್ಡ್ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಹರಡಿಕೊಂಡಂತೆ ಮಾಡಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರಗಳ ವಾರ್ಡ್‌ಗಳಲ್ಲಿ ಜನಸಂಖ್ಯೆ ಸರಾಸರಿ 35 ಸಾವಿರ ಇರುವಂತೆ ಸರ್ಕಾರ ನೋಡಿಕೊಂಡಿದೆ. ಈ ಹಂತದಲ್ಲಿ ನ್ಯಾಯಾಲಯ ಯಾವುದೇ ಆದೇಶ ನೀಡಿದರೂ ಚುನಾವಣೆಗೆ ಅಡ್ಡಿಯಾಗಲಿದೆ ಮತ್ತು ಆಯೋಗದ ಸಿದ್ಧತೆಗಳನ್ನು ನಿಷ್ಪ್ರಯೋಜಕಗೊಳಿಸಲಿದೆ. ಅಲ್ಲದೇ ಮೀಸಲಾತಿ ಅಧಿಸೂಚನೆ ಮೇಲೆ ಮಧ್ಯಂತರ ಆದೇಶ ನೀಡಿದರೆ, ಸುಪ್ರೀಂ ಕೋರ್ಚ್‌ನ ಜುಲೈ 28ರ ಆದೇಶದ ಉಲ್ಲಂಘನೆ ಆಗಲಿದೆ. ಮುಖ್ಯವಾಗಿ ಕೆಲವು ಅರ್ಜಿಗಳು ವಿಚಾರಣಾ ಮಾನ್ಯತೆ ಮತ್ತು ಅರ್ಹತೆ ಹೊಂದಿಲ್ಲ ಎಂದು ವಾದಿಸಿದರು.
ವೈಜ್ಞಾನಿಕವಾಗಿ ವಾರ್ಡ್ ವಿಂಗಡಣೆ
ಈ ಮಧ್ಯೆ ರಾಜ್ಯ ಸರ್ಕಾರ ಲಿಖಿತ ಆಕ್ಷೇಪಣೆಯಲ್ಲಿ ಸಲ್ಲಿಸಿ ವೈಜ್ಞಾನಿಕವಾಗಿ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಲಾಗಿದೆ ಎಂದು ಪ್ರತಿಪಾದಿಸಿದೆ. 2011ರ ಜನಗಣತಿ ಆಧರಿಸಿ ವಾರ್ಡ್ ಜನಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ಬಿಬಿಎಂಪಿ ಕಾಯ್ದೆಯ ಸೆಕ್ಷನ್ 7 ಉಲ್ಲಂಘನೆ ಆಗಿಲ್ಲ. ವಾರ್ಡ್‌ಗಳ ಭೌಗೋಳಿಕ ಪ್ರದೇಶಗಳ ಬಗ್ಗೆ ವೈಜ್ಞಾನಿಕ ಮತ್ತು ತರ್ಕಬದ್ಧ ಸಮೀಕ್ಷೆ ನಡೆಸಲಾಗಿದೆ. ವಾರ್ಡ್ ಕಚೇರಿ ಮತ್ತಿತರ ಸಂಪರ್ಕಗಳಿಗೆ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ವಾರ್ಡ್‌ಗಳನ್ನು ರಚಿಸಲಾಗಿದೆ. ಅರ್ಜಿದಾರರ ಆಕ್ಷೇಪ, ವಿರೋಧಗಳೆಲ್ಲವೂ ಆಧಾರರಹಿತವಾಗಿವೆ. ಅರ್ಜಿದಾರರು ಸಲ್ಲಿಸಿರುವ ದಾಖಲೆ-ಪುರಾವೆಗಳು ಕಾನೂನು ಮಾನ್ಯತೆ ಹೊಂದಿಲ್ಲ. ಆದ್ದರಿಂದ ಅರ್ಜಿಗಳನ್ನು ಸಾರಾಸಗಟಾಗಿ ತಿರಸ್ಕರಿಸಬೇಕು ಎಂದು ಮನವಿ ಮಾಡಿದೆ.